ನಾನು ಎಲ್ಲೂ ಹೋಗಲ್ಲ ಅಂತ ಮೊನ್ನೆ ಬಂದು ಕಾಲು ಹಿಡಿಕೊಂಡರು, ಇಂದು ಹೋಗಿದ್ದಾರೆ: ಬಿಎಸ್‍ವೈ

ಬಾಬುರಾವ್ ಚಿಂಚನಸೂರ್​ ಕಾಂಗ್ರೆಸ್​ ಸೇರ್ಪಡೆ ವಿಚಾರ

Update: 2023-03-21 11:50 GMT

ಬೆಂಗಳೂರು, ಮಾ. 21: ‘ಮೊನ್ನೆಯಷ್ಟೇ ಗಂಡ-ಹೆಂಡತಿ ಕಾಲು ಹಿಡಿದುಕೊಂಡು ನಾನು ಎಲ್ಲೂ ಹೋಗುವುದಿಲ್ಲ, ಪಕ್ಷದಲ್ಲಿ ಮುಂದುವರಿಯುತ್ತೇನೆ ಎಂದಿದ್ದರು. ಆದರೆ, ಇದೀಗ ಹೋಗಿದ್ದಾರೆ’ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಬಾಬುರಾವ್ ಚಿಂಚನಸೂರ್ ಪಕ್ಷ ತ್ಯಜಿಸಿರುವ ಸಂಬಂಧ ಪ್ರತಿಕ್ರಿಯೆ ನೀಡಿದರು.

ಮಂಗಳವಾರ ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ‘ಪಕ್ಷ ಅವರಿಗೆ ಟಿಕೆಟ್ ನೀಡುವುದೂ ಸೇರಿ ಎಲ್ಲದಕ್ಕೂ ನಾವು ಸಿದ್ಧವಿದ್ದರೂ ಚಿಂಚನಸೂರ್ ಬಿಜೆಪಿ ಬಿಟ್ಟು ಹೋಗಿದ್ದಾರೆ. ಅದಕ್ಕೆ ನಾವೇನು ಮಾಡಲು ಸಾಧ್ಯವಿಲ್ಲ. ಈ ಬಗ್ಗೆ ಚರ್ಚೆ ಅನಗತ್ಯ. ನಾವು ಏನೂ ಮಾಡಲು ಬರುವುದಿಲ್ಲ’ ಎಂದು ಹೇಳಿದರು.

‘ಬೇರೆ ಬೇರೆ ಒತ್ತಡಕ್ಕೆ ಮಣಿದು ಚಿಂಚನಸೂರ್ ಬೇರೆ ಪಕ್ಷಕ್ಕೆ ಹೋಗಿರಬಹುದು. ಟಿಕೆಟ್ ನೀಡುವುದು ಸೇರಿದಂತೆ ನಾವು ಎಲ್ಲದಕ್ಕೂ ಸಿದ್ಧವಿದ್ದೆವು. ಆದರೂ ಅವರು ಹೋದರು. ಆಗಿದ್ದು ಆಯ್ತು ಈಗ ಬಿಟ್ಟು ಹೋಗಿದ್ದಾರೆ. ಈಗೇಕೆ ಆ ಚರ್ಚೆ?, ಅವರಿಗೆ ಶುಭವಾಗಲಿ’ ಎಂದು ಯಡಿಯೂರಪ್ಪ ಕೋರಿದರು.

ಕಾಂಗ್ರೆಸ್ ಗ್ಯಾರಂಟಿ ಯೋಜನೆಗೆ ಎಲ್ಲಿ ಬೆಲೆ ಇದೆ? ಹಿಂದೆಲ್ಲ ಬೇರೆ ರಾಜ್ಯದಲ್ಲಿ ಯೋಜನೆ ಘೋಷಣೆ ಮಾಡಿದ್ದು ಕಾರ್ಯರೂಪಕ್ಕೆ ಬಂದಿಲ್ಲ. ಅಭಿವೃದ್ಧಿ ಕಾರ್ಯಕ್ಕೆ ಎಲ್ಲಿ ಹಣ ಉಳಿಯುತ್ತದೆ. ಅವರು ಘೋಷಣೆ ಮಾಡಿದ್ದು ನೋಡಿದರೆ ಉಚಿತ ಯೋಜನೆ ಮತ್ತು ಸಂಬಳ ಕೊಡಲು ಅಷ್ಟೇ ಬಜೆಟ್ ಸಾಲುತ್ತದೆ. ಇನ್ನೆಲ್ಲಿ ಅಭಿವೃದ್ಧಿ ಯೋಜನೆಗಳಿಗೆ ಹಣ ಉಳಿಯುತ್ತದೆ ಎಂದು ಬಿಎಸ್‍ವೈ ಪ್ರಶ್ನಿಸಿದರು.

ಆನಸಂಕಲ್ಪ ಯಾತ್ರೆಯಲ್ಲಿ ನಾವು ಹೋದ ಕಡೆಯಲ್ಲೆಲ್ಲ ದೊಡ್ಡ ಪ್ರಮಾಣದಲ್ಲಿ ಜನ ಬೆಂಬಲ ಸಿಗುತ್ತಿದೆ. ಇದರ ಪರಿಣಾಮ ಕರ್ನಾಟಕದಲ್ಲಿ ನಿಶ್ಚಿತವಾಗಿ 140 ಸ್ಥಾನ ಗೆದ್ದು ಮತ್ತೆ ಸರಕಾರ ರಚನೆ ಮಾಡುತ್ತೇವೆ. ಪ್ರಧಾನಿ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ ನಾಯಕತ್ವ ನಮಗಿದೆ. ರಾಹುಲ್ ಗಾಂಧಿ ಇವರಿಗೆ ಸಮ ಆಗಲು ಸಾಧ್ಯವಿಲ್ಲ. ಹಾಗಾಗಿ ಈ ಬಾರಿ ರಾಜ್ಯದಲ್ಲಿ ಬಿಜೆಪಿ ಸ್ವಂತ ಶಕ್ತಿ ಮೇಲೆ ಸ್ವತಂತ್ರವಾಗಿ ಸರಕಾರ ರಚನೆ ಮಾಡಲಿದೆ ಎಂದು ಯಡಿಯೂರಪ್ಪ ಭರವಸೆ ವ್ಯಕ್ತಪಡಿಸಿದರು.

Similar News