ಸಿದ್ದರಾಮಯ್ಯ ಕ್ಷೇತ್ರ ಹುಡುಕಾಟದ ಬಗ್ಗೆ ನನಗೆ ಅನುಕಂಪ ಇದೆ: ಎಚ್.ಡಿ ಕುಮಾರಸ್ವಾಮಿ

Update: 2023-03-21 13:19 GMT

ಮೈಸೂರು, ಮಾ.21: 'ಪೂರ್ಣಾವಧಿ ಮುಖ್ಯಮಂತ್ರಿ ಆಗಿದ್ದವರು, ಉಪ ಮುಖ್ಯಮಂತ್ರಿ ಆಗಿದ್ದವರು, 13 ಬಜೆಟ್ ಮಂಡಿಸಿದವರು ಅವರು. ಅಂತಹವರಿಗೆ ಒಂದು ಸುರಕ್ಷಿತ ಕ್ಷೇತ್ರ ಹುಡುಕಿಕೊಳ್ಳಲು ಆಗುತ್ತಿಲ್ಲ. ಇದರ ಬಗ್ಗೆ ನಾನು ವ್ಯಂಗ್ಯ ಮಾಡಲ್ಲ, ಬದಲಿಗೆ ಅನುಕಂಪ ಬರುತ್ತಿದೆ' ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ಅವರು ಹೇಳಿದರು.

ಮೈಸೂರಿನಲ್ಲಿ ಇಂದು ಮಾಧ್ಯಮಗಳ ಜತೆ ಮಾತನಾಡಿದ ಅವರು, ಕೋಲಾರ ಕ್ಷೇತ್ರವೂ ಸೇರಿ ಜಿಲ್ಲೆಯಲ್ಲಿ 6 ಸ್ಥಾನಗಳ ಪೈಕಿ ಕಡೆ ನಾವು ಮುಂದೆ ಇದ್ದೇವೆ. ಅಲ್ಲೆಲ್ಲಾ ನಮ್ಮ ಅಭ್ಯರ್ಥಿಗಳು ಗೆದ್ದೆ ಗೆಲ್ಲುತ್ತಾರೆ. ಹೈ ಕಮಾಂಡ್ ಹೆಸರೇಳಿ ಸ್ಪರ್ಧೆಯಿಂದ ಸಿದ್ದರಾಮಯ್ಯ ಹಿಂದೆ ಸರಿದಿರಬಹುದು. ಆದರೆ 5 ವರ್ಷದ ಸಂಪೂರ್ಣ ಅವಧಿ ಮುಗಿಸಿರುವ ಸಿಎಂ ಕಳೆದ ಒಂದು ವರ್ಷದಿಂದ ಸ್ಪರ್ಧೆಯ ಬಗ್ಗೆ ಕ್ಷೇತ್ರ ಹುಡುಕಾಡುತ್ತಿದ್ದಾರೆ. ಇದನ್ನು ನೋಡಿ ನನಗೆ ಅನುಕಂಪ ಬರುತ್ತಿದೆ. ಅನುಭವಿ ರಾಜಕಾರಣಿ, ನಾಯಕನಿಗೆ ಆತಂಕವನ್ನು ಅವರೇ ಸೃಷ್ಟಿ ಮಾಡಿಕೊಂಡಿದ್ದಾರೆ. ಇಂತಹ ಪರಿಸ್ಥಿತಿ ಬೇಕಿತ್ತಾ? ಎಂದು ಅವರು ಪ್ರಶ್ನಿಸಿದರು.

''ದೇವೇಗೌಡರು ಚೆನ್ನಾಗಿದ್ದಾರೆ''

ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡರ ಆರೋಗ್ಯ ಚೆನ್ನಾಗಿದೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದ ಕುಮಾರಸ್ವಾಮಿ; ನಮ್ಮ ತಂದೆ ಅವರ ಆರೋಗ್ಯದ ಬಗ್ಗೆ, ಜನರ ಸಂಕಷ್ಟದ ಬಗ್ಗೆ ನಾನು ಕಣ್ಣೀರು ಹಾಕಿರುವುದು ಹೌದು. ಮನುಷ್ಯತ್ವ ಇರುವವರಿಗೆ ಕಣ್ಣೀರು ಬರುತ್ತದೆ. ಕಟುಕರಿಗೆ ಕಣ್ಣೀರು ಬರುವುದಿಲ್ಲ. ಕಣ್ಣೀರು ದೌರ್ಬಲ್ಯ ಅಲ್ಲ, ಅದು ನನ್ನ ಕಣ್ಣೀರು ಮನದಾಳದಿಂದ ಬಂದಿದೆ ಎಂದರು.

Similar News