SSLC ಪರೀಕ್ಷೆಗೆ ತೆರಳುವ ವಿದ್ಯಾರ್ಥಿಗಳಿಗೆ ಕೆಎಸ್ಸಾರ್ಟಿಸಿ ಬಸ್‍ಗಳಲ್ಲಿ ಉಚಿತ ಪ್ರಯಾಣಕ್ಕೆ ವ್ಯವಸ್ಥೆ

Update: 2023-03-21 15:20 GMT

ಬೆಂಗಳೂರು, ಮಾ. 21: ರಾಜ್ಯಾದ್ಯಂತ ಇದೇ ತಿಂಗಳ 31ರಿಂದ ಎಪ್ರಿಲ್ 15ರ ವರೆಗೆ ಎಸೆಸೆಲ್ಸಿ ಪರೀಕ್ಷೆ ನಡೆಯಲಿದ್ದು, ವಿದ್ಯಾರ್ಥಿಗಳಿಗೆ ಅನುಕೂಲವಾಗಲೆಂದು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (ಕೆಎಸ್ಸಾರ್ಟಿಸಿ) ಪರೀಕ್ಷೆಗೆ ತೆರಳುವ ವಿದ್ಯಾರ್ಥಿಗಳಿಗೆ ಸಂಸ್ಥೆಯ ಬಸ್‍ಗಳಲ್ಲಿ ಉಚಿತವಾಗಿ ಪ್ರಯಾಣ ಮಾಡಲು ಅವಕಾಶ ಕಲ್ಪಿಸಿದೆ.

ಪರೀಕ್ಷಾ ಕೇಂದ್ರಗಳಿಗೆ ತಲುಪಲು ವಿದ್ಯಾರ್ಥಿಗಳು ಪರದಾಟ ನಡೆಸಬಾರದೆಂಬ ಉದ್ದೇಶದಿಂದ ಸಾರಿಗೆ ಸಂಸ್ಥೆ ಉಚಿತ ವ್ಯವಸ್ಥೆಯನ್ನು ಕಲ್ಪಿಸಿದ್ದು, ವಿದ್ಯಾರ್ಥಿಗಳು ಪ್ರವೇಶ ಪತ್ರ ತೋರಿಸಿ ಬಸ್‍ನಲ್ಲಿ ಉಚಿತವಾಗಿ ಪರೀಕ್ಷಾ ಕೇಂದ್ರಗಳಿಗೆ ತೆರಳಿ ಪರೀಕ್ಷೆ ಬರೆದು ನಂತರ ಬಸ್ಸಿನಿಂದ ವಾಪಸ್ ಆಗಬಹುದು ಎಂದು ಸಂಸ್ಥೆ ಸುತ್ತೋಲೆ ಹೊರಡಿಸಿದೆ. 

ರಾಜ್ಯದಲ್ಲಿ ಹಲವು ಕಡೆ ಮಕ್ಕಳು ದೂರದ ಹಳ್ಳಿಗಳಿಂದ ಪಟ್ಟಣ ಪ್ರದೇಶಕ್ಕೆ ಬಂದು ವಿದ್ಯಾಭ್ಯಾಸ ಮಾಡುತ್ತಾರೆ. ಪರೀಕ್ಷೆ ಬರೆಯಲು ಈಗಲೂ ಕಿಲೋ ಮೀಟರ್ ಗಟ್ಟಲೆ ನಡೆದುಕೊಂಡು ಬರುವ ಪರಿಸ್ಥಿತಿ ಇದೆ. ಇನ್ನು ಪರೀಕ್ಷಾ ಕೇಂದ್ರಗಳನ್ನು ತಲುಪುವುದು ಕಷ್ಟಕರವಾಗುತ್ತದೆ. ಅಂತಹ ವಿದ್ಯಾರ್ಥಿಗಳಿಗೆ ಸಾರಿಗೆ ಇಲಾಖೆಯ ಈ ಆದೇಶದಿಂದ ಅನುಕೂಲವಾಗಲಿದೆ. 

ಎಸೆಸೆಲ್ಸಿ ವಿದ್ಯಾರ್ಥಿಗಳು ಬಸ್‍ನಲ್ಲಿ ಪರೀಕ್ಷೆಗೆಂದು ಬಸ್‍ನಲ್ಲಿ ಪ್ರಯಾಣಿಸುವಾಗ ಕೆಲವೆಡೆ ಪರೀಕ್ಷಾ ಕೇಂದ್ರಗಳು ಬಸ್ ನಿಲ್ದಾಣಗಳಿಂದ ದೂರವಿರುತ್ತವೆ. ಆದುದರಿಂದ ಪರೀಕ್ಷಾ ಕೇಂದ್ರಗಳ ಬಳಿ ನಿಲುಗಡೆ ಕೇಳಿದರೆ ನಿರ್ವಾಹಕರು ಬಸ್ ನಿಲ್ಲಿಸಿ ಪರೀಕ್ಷೆಗೆ ಅನುಕೂಲ ಮಾಡಿಕೊಂಡಬೇಕೆಂದು ಸುತ್ತೋಲೆಯಲ್ಲಿ ತಿಳಿಸಲಾಗಿದೆ. 

Similar News