ಟಿಪ್ಪು ಕೊಂದಿದ್ದ 'ಉರಿಗೌಡ ನಂಜೇಗೌಡ'ರ ದಾಖಲೆ ಸಂಗ್ರಹ ಮಾಡುತ್ತಿದ್ದೇವೆ: ಸಿ.ಟಿ.ರವಿ

ಆದಿಚುಂಚನಗಿರಿ ಶ್ರೀಗಳ ಎಚ್ಚರಿಕೆಗೂ ಮಣಿಯದ ಬಿಜೆಪಿ ನಾಯಕ

Update: 2023-03-22 08:17 GMT

ಚಿಕ್ಕಮಗಳೂರು: 'ಟಿಪ್ಪು ಕೊಂದಿದ್ದ ಉರಿಗೌಡ ನಂಜೇಗೌಡರ ದಾಖಲೆ ಸಂಗ್ರಹ ಮಾಡುತ್ತಿದ್ದೇವೆ. ಶೀಘ್ರದಲ್ಲೇ ಆದಿಚುಂಚನಗಿರಿ ಶ್ರೀಗಳ ಮುಂದೆ ದಾಖಲೆ ಇಟ್ಟು ಅವರಿಗೆ ಸತ್ಯ ಮನವರಿಕೆ ಮಾಡುತ್ತೇವೆ' ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಹೇಳಿದ್ದಾರೆ.  

ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 'ಉರಿಗೌಡ ಮತ್ತು ನಂಜೇಗೌಡ ಅವರು ಕಾಲ್ಪನಿಕ ಪಾತ್ರಗಳಲ್ಲ, ಸತ್ಯದ ಪಾತ್ರಗಳು ಎಂದು ದೇ. ಜವರೇಗೌಡರು 'ಸುವರ್ಣ ಮಂಡ್ಯ' ಪುಸ್ತಕದಲ್ಲಿ ದಾಖಲಿಸಿದ್ದಾರೆ.  ಆದಿಚುಂಚನಗಿರಿ ನಿರ್ಮಲಾನಂದ ನಾಥ ಸ್ವಾಮೀಜಿ ನನ್ನ ಜೊತೆ ಮಾತಾಡಿದ್ದಾರೆ. ಸ್ವಾಮೀಜಿಗಳ ಮಾತಿಗೆ ನಾವು ಗೌರವ ಕೊಡುತ್ತೇವೆ. ಸ್ವಾಮೀಜಿ ಅವರಿಗೆ ವಾಸ್ತವಿಕ ಸತ್ಯವನ್ನ ಮನವರಿಕೆ ಮಾಡಿಕೊಡುತ್ತೇವೆ. ಖಂಡಿತ ದಾಖಲೆ ತಗೊಂಡು ಹೋಗುತ್ತೇವೆ' ಎಂದು ಹೇಳಿದರು. 

'ನಮಗೆ ಸದ್ಯ ಸಿಕ್ಕಿರೋ ಮಾಹಿತಿಯಂತೆ ಟಿಪ್ಪು ಶ್ರೀರಂಗಪಟ್ಟಣದಲ್ಲಿ ದಸರಾ ನಿಲ್ಲಿಸಿದ್ದು, ಗ್ರಾಮ ಗ್ರಾಮಗಳ ಹೆಸರನ್ನು ಬದಲಿಸಿದ್ದಕ್ಕೆ ಸಂಬಂಧಪಟ್ಟಂತೆ ಅಧಿಕೃತ ದಾಖಲೆಗಳು ಸಿಕ್ಕಿವೆ. ಇನ್ನು ಟಿಪ್ಪುವನ್ನು ಅಪರಿಚಿತರು ಕೊಂದಿದ್ದಾರೆ ಅಂತ ಇದೆ. ಈ ಬಗ್ಗೆ ಸ್ಥಳೀಯವಾಗಿ ಮಾಹಿತಿ ಕಲೆ ಹಾಕುವ ಕೆಲಸ ನಡೆಯುತ್ತಿದೆ' ಎಂದು ತಿಳಿಸಿದರು. 

ಇದನ್ನೂ ಓದಿ: ಉರಿಗೌಡ, ನಂಜೇಗೌಡ | ಕಲ್ಪನೆ ಮಾಡಿಕೊಂಡು ಬರೆಯೋದು ಕಾದಂಬರಿ ಆಗುತ್ತದೆ: ನಿರ್ಮಲಾನಂದ ಸ್ವಾಮೀಜಿ 

Similar News