ಬಾಬುರಾವ್ ಚಿಂಚನಸೂರು ಸೇರಿ ಇನ್ನೂ ಹಲವರು ಟಿಕೆಟ್ ಗೆ ಅರ್ಜಿ ಹಾಕುವವರು ಇದ್ದಾರೆ: ಡಿ.ಕೆ.ಶಿವಕುಮಾರ್

'ಪಕ್ಷದಲ್ಲಿ ಕೆಲಸ ಮಾಡಿದ ಎಲ್ಲರಿಗೂ ಅಧಿಕಾರವನ್ನು ಹಂಚುತ್ತೇವೆ'

Update: 2023-03-22 17:26 GMT

ಬೆಂಗಳೂರು, ಮಾ.22: ರಾಜ್ಯ ವಿಧಾನ ಸಭಾ ಚುನಾವಣೆ ಹಿನ್ನೆಲೆ  ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿಯನ್ನುಇಂದು ಪ್ರಕಟಿಸುವ  ಉದ್ದೇಶವಿತ್ತು. ಆದರೆ ಹಬ್ಬದ ಆಚರಣೆ ಹಿನ್ನೆಲೆಯಿಂದ ನಾಳೆ ಅಥವಾ ನಾಡಿದ್ದು ಪ್ರಕಟಿಸುತ್ತೇವೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ.

ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಅಧಿಕಾರಕ್ಕೆ ಬರಲಿದೆ ಎಂಬ ಭಾವನೆ ಎಲ್ಲರಿಗೂ ಬಂದಿದೆ. ಕಾಂಗ್ರೆಸ್ ಅಧಿಕಾರಕ್ಕೆ ಬರಲಿದೆ ಎಂದು ಕಾಂಗ್ರೆಸ್ ಹಾಗೂ ದಳದವರಿಗೂ ಗೊತ್ತಿದೆ. ಹೀಗಾಗಿ ಟಿಕೆಟ್ ಆಕಾಂಕ್ಷಿಗಳು ಹೆಚ್ಚಾಗಿದ್ದಾರೆ. 

ಇನ್ನು ಅರ್ಜಿ ಹಾಕುವವರು ಇದ್ದಾರೆ. ಬಾಬುರಾವ್ ಚಿಂಚನಸೂರು ಅವರು ಕೂಡ ಅರ್ಜಿ ಹಾಕಬೇಕಿದೆ. ಯಾರು ಕ್ಷೇತ್ರದಲ್ಲಿ ಸಮರ್ಪಕವಾಗಿ ಕೆಲಸ ಮಾಡುತ್ತಾರೆ ಅವರಿಗೆ ಅನೇಕ ಅವಕಾಶಗಳಿವೆ.  75 ಪರಿಷತ್, 12 ರಾಜ್ಯಸಭಾ, ಲೋಕಸಭಾ ಹಾಗೂ ನಿಗಮ ಮಂಡಳಿಗಳಿವೆ. ಎಲ್ಲರಿಗೂ ಅಧಿಕಾರವನ್ನು ಹಂಚುತ್ತೇವೆ ಎಂದರು.

ಕಾಂಗ್ರೆಸ್ ಗ್ಯಾರಂಟಿ ಯೋಜನೆ ರಾಜ್ಯವನ್ನು ಸಾಲದ ಕೂಪಕ್ಕೆ ಕೊಂಡೊಯ್ಯುತ್ತಿದೆ ಎಂಬ ಬಿಜೆಪಿ ಟೀಕೆ ಬಗ್ಗೆ ಪ್ರತಿಕ್ರಿಯಿಸಿ, 'ನೀವು ಬಿಜೆಪಿಯ ಪ್ರಣಾಳಿಕೆ ತೆಗೆದು ನೋಡಿ. ಜ.16ರಂದು ಅವರು ಸರ್ಕಾರದ ವತಿಯಿಂದ ಜಾಹೀರಾತು ನೀಡಿ ಏನು ಹೇಳಿದ್ದಾರೆ. ಪ್ರಣಾಳಿಕೆಯಲ್ಲಿ ರೈತರಿಗೆ 10 ಗಂಟೆ ವಿದ್ಯುತ್ ನೀಡುವುದಾಗಿ ಯಾಕೆ ಹೇಳಿದ್ದಾರೆ? ಇನ್ನು ಸಾಲ ಮನ್ನಾ ವಿಚಾರವಾಗಿ ಹೇಗೆ ಭರವಸೆ ನೀಡಿದ್ದರು? ಈ ಬಗ್ಗೆ ಅವರು ಮೊದಲು ಉತ್ತರ ನೀಡಲಿ’ ಎಂದು ತಿಳಿಸಿದರು.

Similar News