ಬಿಜೆಪಿಯ ಒಂದೆರಡು ಸಚಿವರು, 10ರಿಂದ 15 ಶಾಸಕರ ಟಿಕೆಟ್ ಕಡಿತ ಆಗಲಿದೆ: ಮಾಲೀಕಯ್ಯ ಗುತ್ತೇದಾರ್

Update: 2023-03-23 14:51 GMT

ಕಲಬುರಗಿ: ಮಾಜಿ ಸಚಿವ ಬಾಬುರಾವ ಚಿಂಚನಸೂರ ಅವರು ಬಿಜೆಪಿ ತೊರೆದು ಕಾಂಗ್ರೆಸ್ ಸೇರಿರುವುದರಿಂದ ಪಕ್ಷಕ್ಕೆ ಯಾವುದೇ ಹಾನಿ ಉಂಟಾಗುವುದಿಲ್ಲ ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷ ಮಾಲಿಕಯ್ಯ ಗುತ್ತೇದಾರ್ ತಿಳಿಸಿದ್ದಾರೆ. 

ಕೋಲಿ ಕಬ್ಬಲಿಗ ಸಮಾಜದ ಹೆಸರು ಹೇಳಿ ಮುಂದೆ ಬಂದಿರುವ ಚಿಂಚನಸೂರ ಎಂದಿಗೂ ಸಮಾಜಕ್ಕಾಗಿ ದುಡಿದಿಲ್ಲ. ಸಮಾಜವನ್ನು ತನ್ನ ಸ್ವಾರ್ಥಕ್ಕಾಗಿ ಬಳಸಿಕೊಂಡಿದ್ದಾರೆ ಎಂದು ಗುರುವಾರ ಪತ್ರಿಕಾಗೋಷ್ಠಿಯಲ್ಲಿ ದೂರಿದರು.

ಕಾಂಗ್ರೆಸ್ ಪಕ್ಷದಿಂದ ಬೇಸತ್ತು ಬಿಜೆಪಿ ಸೇರಿದ್ದ ಚಿಂಚನಸೂರ ಅವರು ಪಕ್ಷ ಕೊಟ್ಟ ಎಲ್ಲ ಅಧಿಕಾರವನ್ನು ಬಳಸಿಕೊಂಡು ಈಗ ಪಕ್ಷ ಬಿಟ್ಟಿರುವುದು ಪಕ್ಷಕ್ಕೆ ದ್ರೋಹ ಮಾಡಿದಂತಾಗಿದೆ. ಕಾಂಗ್ರೆಸ್ ನಲ್ಲಿ ಅವರು ಮೂಲೆಗುಂಪಾಗಲಿದ್ದಾರೆ ಎಂದು ಹೇಳಿದರು.

'ಜನರಿಂದ ದೂರವಾದ ಅದೆಷ್ಟೇ ಪ್ರಭಾವಿ ಶಾಸಕ, ಸಚಿವರಾಗಿರಲಿ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಮುಲಾಜಿಲ್ಲದೆ ಅವರ ಟಿಕೆಟ್ ಕಡಿತ ಮಾಡಲಾಗುತ್ತದೆ. ಒಂದೆರಡು ಸಚಿವರ, 10ರಿಂದ 15 ಶಾಸಕರ ಟಿಕೆಟ್ ಕಡಿತ ಆಗಲಿದೆ' ಎಂದು ಹೇಳಿದರು.

ಬಿಜೆಪಿ ಬಿಡುವುದಿಲ್ಲ; ಕಾಂಗ್ರೆಸ್ ಗೆ ಹೋಗುವುದಿಲ್ಲ: ಕಾಂಗ್ರೆಸ್ ನ ಭದ್ರಕೋಟೆಯಾಗಿದ್ದ ಕಲಬುರಗಿಯ ಕೋಟೆಯನ್ನು ಒಡೆಯುವುದಕ್ಕಾಗಿಯೇ ಬಿಜೆಪಿ ಸೇರಿರುವ ನಾನು, ಕಾಂಗ್ರೆಸ್ ಗೆ ಹೋಗುವ ಪ್ರಮೇಯವೇ ಬರುವುದಿಲ್ಲ. ಹೀಗಾಗಿ ಬಿಜೆಪಿ ಬಿಡುವುದಿಲ್ಲ. ಕಾಂಗ್ರೆಸ್ ಗೆ ಹೋಗುವುದಿಲ್ಲ ಎಂದು ಊಹಾಪೋಹಗಳಿಗೆ ತೆರೆ ಎಳೆದರು.

ಮುಖಂಡರಾದ ಶಿವಕಾಂತ ಮಹಾಜನ, ಶೋಭಾ ಬಾಣಿ, ವಿಜಯಕುಮಾರ ಹಲಕರ್ಟಿ ಇದ್ದರು.

ಇದನ್ನೂ ಓದಿ: ಕಲಬುರಗಿ: ಸಾಮಾಜಿಕ ಕಾರ್ಯಕರ್ತೆಯ ಭೀಕರ ಹತ್ಯೆ

Similar News