ಲಿಂಗಾಯತ ಪಂಚಮಸಾಲಿಗೆ 2 ಸಿ, 2 ಡಿ ಮೀಸಲಾತಿ: ಮಧ್ಯಂತರ ಆದೇಶ ತೆರವುಗೊಳಿಸಿದ ಹೈಕೋರ್ಟ್

Update: 2023-03-23 16:19 GMT

ಬೆಂಗಳೂರು, ಮಾ.23: ಲಿಂಗಾಯತ ಪಂಚಮಸಾಲಿಗೆ 2ಸಿ, 2ಡಿ ಮೀಸಲಾತಿ ಸಂಬಂಧ ಯಥಾಸ್ಥಿತಿ ಕಾಯ್ದುಕೊಳ್ಳುವಂತೆ ನೀಡಿದ್ದ ಮಧ್ಯಂತರ ಆದೇಶವನ್ನು ಹೈಕೋರ್ಟ್ ಗುರುವಾರ ತೆರವುಗೊಳಿಸಿದೆ. ಇದರಿಂದ, ರಾಜ್ಯ ಸರಕಾರಕ್ಕೆ ಬಿಗ್ ರಿಲೀಫ್ ಸಿಕ್ಕಂತಾಗಿದೆ. 

ಲಿಂಗಾಯತ ಪಂಚಮಸಾಲಿಗೆ 2-ಎ ಮೀಸಲಾತಿ ನೀಡದಂತೆ ಡಿ.ಜಿ.ರಾಘವೇಂದ್ರ ಎಂಬುವರು ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು. ಅರ್ಜಿ ವಿಚಾರಣೆ ನಡೆಸಿದ್ದ ಹೈಕೋರ್ಟ್ ಮುಖ್ಯ ನ್ಯಾಯಪೀಠ ಮಧ್ಯಂತರ ತಡೆ ನೀಡಿತ್ತು. ಈ ಸಂಬಂಧ ಗುರುವಾರ ವಿಚಾರಣೆ ನಡೆಸಿದಾಗ, 2ಎ ಮೀಸಲಾತಿಯಲ್ಲಿ ಪರಿವರ್ತನೆ ಮಾಡುವುದಿಲ್ಲ ಎಂದು ಕೇಂದ್ರ ಸರಕಾರದ ಸಾಲಿಸಿಟರ್ ಜನರಲ್ ಭರವಸೆ ನೀಡಿದರು. ಕೇಂದ್ರ ಸರಕಾರದ ಭರವಸೆ ಹಿನ್ನೆಲೆಯಲ್ಲಿ ಮಧ್ಯಂತರ ಆದೇಶ ತೆರವು ಮಾಡಿದೆ. 

ಹೀಗಾಗಿ ಪಂಚಮಸಾಲಿ ಸಮುದಾಯಕ್ಕೆ 2 ಸಿ, 2ಡಿ ಮೀಸಲಾತಿ ನೀಡಲು ಯಾವುದೇ ಅಡ್ಡಿ ಇಲ್ಲದಂತಾಗಿದೆ. ವಿಚಾರಣೆ ವೇಳೆ ಸರಕಾರದ ಪರ ವಕೀಲರು, ರಾಜ್ಯ ಸರಕಾರವು 2ಎ ಪ್ರವರ್ಗಕ್ಕೆ ಯಾವುದೇ ತೊಂದರೆ ಆಗದಂತೆ ನಡೆದುಕೊಳ್ಳಲಾಗುವುದು. ಹೀಗಾಗಿ ಪ್ರಕರಣದಲ್ಲಿ ಯಥಾಸ್ಥಿತಿ ಕಾಯ್ದುಕೊಳ್ಳುವಂತೆ ಈ ಹಿಂದೆ ನೀಡಿರುವ ಆದೇಶ ತೆರವು ಮಾಡಬೇಕು ಎಂದು ಕೋರಿದರು.

ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಪೀಠ, ಪ್ರಕರಣದಲ್ಲಿ ಸರಕಾರ ಮುಂದೆ ಕೈಗೊಳ್ಳುವ ಎಲ್ಲ ಕ್ರಮಗಳು ಈ ಅರ್ಜಿ ಕುರಿತಂತೆ ನ್ಯಾಯಾಲಯ ಹೊರಡಿಸುವ ಅಂತಿಮ ತೀರ್ಪಿಗೆ ಒಳಪಟ್ಟಿರುತ್ತದೆ ಎಂದು ಸ್ಪಷ್ಟಪಡಿಸಿತು.

ಹೈಕೋರ್ಟ್‍ಗೆ ಪ್ರಮಾಣ ಪತ್ರ ಸಲ್ಲಿಕೆ: ಸರಕಾರದ ನಿರ್ಧಾರದಿಂದ 2ಎ ಮೀಸಲಾತಿ ಪ್ರಮಾಣದಲ್ಲಿ ಬದಲಾವಣೆ ಆಗಲ್ಲ, 2ಎ ನಲ್ಲಿ ಯಾವುದೇ ಜಾತಿ ಸೇರಿಸುವುದಿಲ್ಲ ಮತ್ತು ತೆಗೆಯುವುದಿಲ್ಲ. ಮಾ.30, 2002ರ ಸರಕಾರಿ ಆದೇಶದಲ್ಲಿ ಮಾರ್ಪಾಡು ಮಾಡುವುದಿಲ್ಲ. ಹೈಕೋರ್ಟ್ ಅನುಮತಿ ಇಲ್ಲದೆ ಯಾವುದೇ ಬದಲಾವಣೆ ಮಾಡುವುದಿಲ್ಲ ಎಂದು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಕಾರ್ಯದರ್ಶಿ ತುಳಸಿ ಮದ್ದಿನೇನಿ ಸಹಿ ಹಾಕಿದ ಪ್ರಮಾಣಪತ್ರವನ್ನು ಅಡ್ವೊಕೇಟ್ ಜನರಲ್ ಪ್ರಭುಲಿಂಗ್ ನಾವದಗಿ ಅವರು ಹೈಕೋರ್ಟ್‍ಗೆ ಸಲ್ಲಿಸಿದ್ದಾರೆ.

Similar News