ಪಕ್ಷದಲ್ಲಿ ನನಗೆ ಟಿಕೆಟ್ ಕೇಳುವ ಹಕ್ಕಿಲ್ಲವೇ?: ಬಿಜೆಪಿ MLC ಆಯನೂರು ಮಂಜುನಾಥ್

ಟಿಕೆಟ್ ನೀಡದಿದ್ದರೆ...

Update: 2023-03-23 16:42 GMT

ಶಿವಮ್ಗೊ, ಮಾ.23: 'ಬರೀ ಸುರಕ್ಷಿತ ಕ್ಷೇತ್ರ ಹಿಡಿದುಕೊಂಡು ಒಂದೇ ಕಡೇ ಗೂಟ ಹೊಡೆದುಕೊಂಡು ಕೂತಿಲ್ಲ ಎಂದು ವಿಧಾನ ಪರಿಷತ್ ಬಿಜೆಪಿ ಸದಸ್ಯ ಆಯನೂರು ಮಂಜುನಾಥ್ ಪರೋಕ್ಷವಾಗಿ ಶಾಸಕ ಕೆ.ಎಸ್ ಈಶ್ವರಪ್ಪಗೆ ತಿರುಗೇಟು ನೀಡಿದ್ದಾರೆ. 

ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, 'ಪಕ್ಷ ನನಗೆ ಎಲ್ಲಾ ಅವಕಾಶವನ್ನು ಮಾಡಿ ಕೊಟ್ಟಿದೆ. ಎಲ್ಲಾ ಸದನಕ್ಕೂ ಹೋಗಿ ಬಂದಿದ್ದೇನೆ. ನನಗೆ ಟಿಕೆಟ್ ಕೇಳುವ ಹಕ್ಕಿಲ್ಲವೇ. ಈ ಹಿಂದೆ ಹೊಸನಗರ ಕ್ಷೇತ್ರದಲ್ಲೂ ಸ್ಪರ್ಧಿಸಿ, ಶಾಸಕನಾಗಿ ಕೆಲಸ ಮಾಡಿದ್ದೆ. ಪಕ್ಷ ಹೇಳಿದ್ದಕ್ಕೆ ಶಾಸಕ ಸ್ಥಾನಕ್ಕೆ ರಾಜೀನಾಮೆಯನ್ನು ನೀಡಿದ್ದೆ. ಬಂಗಾರಪ್ಪನವರ ವಿರುದ್ಧ ಪಕ್ಷದಿಂದ ಸ್ಫರ್ಧಿಸಿ, ಲೋಕಸಭೆಗೆ ಹೋಗಿದ್ದೆ. ಪಕ್ಷ ಹೇಳಿದಂತೆ ಮಾಡಿದ್ದೇನೆ. ಬರೀ ಸುರಕ್ಷಿತ ಕ್ಷೇತ್ರ ಹಿಡಿದುಕೊಂಡು ಒಂದೇ ಕಡೇ ಗೂಟ ಹೊಡೆದುಕೊಂಡು ಕೂತಿಲ್ಲ' ಎಂದು ತಿರುಗೇಟು ನೀಡಿದರು. 

'ಶಿವಮೊಗ್ಗ ನನಗೆ ಕಾರ್ಯಕ್ಷೇತ್ರ. ಇಲ್ಲೊಂದು ಅವಕಾಶ ಕೊಡಿ ಎಂದು ಕೇಳಿದರೆ ಎಷ್ಟೊಂದು ಅಸಹಿಷ್ಣುತೆ? ನನ್ನ ರೀತಿಯಲ್ಲಿ ಈಶ್ವರಪ್ಪನವರಿಗೂ ಪಕ್ಷ ಅವಕಾಶ ನೀಡಿದೆ. ಸೋತಾಗಲೂ ಪರಿಷತ್ ಸದಸ್ಯರಾಗಿದ್ದಾರೆ. ಪರಿಷತ್ ವಿಪಕ್ಷ ನಾಯಕರು ಕೂಡ ಅಗಿದ್ದರು. ಸಿದ್ದರಾಮಣ್ಣ, ಭಾನುಪ್ರಕಾಶ್, ಗಿರೀಶ್ ಪಟೇಲ್ ರಂತಹ ಹಲವು ನಾಯಕರು ಇದ್ದಾರೆ. 32 ವರ್ಷಗಳ ಬಳಿಕ ತಮ್ಮ ಮಗನಿಗೆ ಕೇಳಿದರೆ ಯಾರಿಗೂ ಕೋಪ ಇಲ್ಲ, ನಾನು ಕೇಳಿದ್ದಕ್ಕೆ ಟೀಕೆ ಹೊರಬರುತ್ತಿದೆ' ಎಂದು ಅಸಮಾಧಾನ ವ್ಯಕ್ತಪಡಿಸಿದರು.

'ಶಾಸಕನಾದಾಗ ಸದನದಲ್ಲಿ ಬಂಗಾರಪ್ಪ,ರಮೇಶ್ ಕುಮಾರ್ ಸೇರಿದಂತೆ ಘಟಾನುಘಟಿಗಳ ನಡುವೆ ಅತ್ಯುತ್ತಮ ಸಂಸದೀಯ ಪಟು ಎಂದು ಪ್ರಶಸ್ತಿ ಪಡೆದಿದ್ದೆ. ಬಾಯಿ ಬಿಡದವರ ನಡುವೆ, ಬಿಟ್ಟರೇ ಅನಾಹುತ ಸೃಷ್ಟಿಸವವರ ನಡುವೆ ಉತ್ತಮ ಕೆಲಸ ಮಾಡಿದ್ದೇನೆ. ನನ್ನ ಹೋರಾಟ ಅರ್ಥ ಮಾಡಿಕೊಳ್ಳದ, ಬಿಸ್ಕೆಟ್ ಗಾಗಿ ಬದುಕುವವರಿಗೆ ನಾನು ಉತ್ತರ ಕೊಡಬೇಕಿಲ್ಲ. ಅತ್ಯಂತ ಅಶ್ಲೀಲವಾಗಿ ಮಾತನಾಡೋ ಕೆಲಸ ಬಿಡಿ. ಮೋದಿಯವರ ಆಶಯದಂತೆ ಮಾತನಾಡೋ ಕೆಲಸ ನಾನು ಮಾಡಿದ್ದೇನೆ. ಮೋದಿ ಗೆ ಜೈ ಅಂದು, ಅವರ ಆಶಯಕ್ಕೆ ವಿರುದ್ಧವಾಗಿ ಕೆಲಸ ಮಾಡಿದರೆ, ಅವರೇ ಪಕ್ಷ ಹಾಗೂ ಮೋದಿ ವಿರೋಧಿಯಾಗುತ್ತಾರೆ. ಆರೆಸ್ಸೆಸ್ ಹಿರಿಯ ನಾಯಕರ ಆಶಯವು ಇದೆಯಾಗಿದೆ. ನನಗೆ ಈ ಬಾರಿ ಪಕ್ಷ ಅವಕಾಶ ಕೊಡುತ್ತದೆ' ಎಂದರು.

''ಪಕ್ಷ ಟಿಕೆಟ್ ಕೊಟ್ಟೇ ಕೊಡುತ್ತದೆ''

'ಬಿಜೆಪಿ ಟಿಕೆಟ್ ನೀಡದಿದ್ದರೆ ನಿಮ್ಮ ಮುಂದಿನ ನಡೆ ಏನು ಎಂಬ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಅವರು, 'ಟಿಕೆಟ್ ನೀಡದಿದ್ದರೆ ಎಂಬ ಮಾತೇ ಬರುವುದಿಲ್ಲ. ಪಕ್ಷ ಕೊಟ್ಟೇ ಕೊಡುತ್ತದೆ. ಅಷ್ಟಕ್ಕೂ ಕೊಡದಿದ್ದರೆ ನಿಮ್ಮಂತಹವರ ಸಲಹೆ ಪಡೆದು ತೀರ್ಮಾನ ತೆಗೆದುಕೊಳ್ಳುವೆ' ಎಂದು ಉತ್ತರಿಸಿದರು.

Similar News