'ರೋಗಪೀಡಿತ' ಆರೋಗ್ಯ ವ್ಯವಸ್ಥೆ

Update: 2023-03-23 19:30 GMT

ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆ(ಎನ್‌ಎಫ್‌ಎಚ್‌ಎಸ್) ಪ್ರಕಾರ, ಸರಕಾರಿ ಆಸ್ಪತ್ರೆಗಳಲ್ಲಿ ಸೇವೆ ಪಡೆಯುವವರ ಪ್ರಮಾಣ ಶೇ.50ಕ್ಕೆ ಕುಸಿದಿದೆ. ಆದರೆ, ಬಡವರಿಗೆ ಈ ಆಸ್ಪತ್ರೆಗಳೇ ಜೀವಾಧಾರ. ದೇಶದ ಅರ್ಧಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಹಾಗೂ ರಾಜ್ಯದ 8 ಜಿಲ್ಲೆಗಳಲ್ಲಿ ಜಿಲ್ಲಾಸ್ಪತ್ರೆ ಇಲ್ಲ. ರಾಜ್ಯದಲ್ಲಿ ಮಕ್ಕಳ ಸಾವಿನ ಪ್ರಮಾಣ ಶೇ.25.4 ಇದೆ(ದೇಶ 35.2). ತಜ್ಞ ವೈದ್ಯರ ಕೊರತೆ ಶೇ.38; ಮಿಡ್‌ವೈಫ್ ಮತ್ತು ಸಹಾಯಕ ನರ್ಸ್ ಶೇ.14, ಸ್ಟಾಫ್ ನರ್ಸ್ ಶೇ.11, ಪ್ರಯೋಗಾಲಯ ತಂತ್ರಜ್ಞರು ಶೇ.13, ಎಂಬಿಬಿಎಸ್ ವೈದ್ಯರು ಶೇ.5 ಹಾಗೂ ದಂತವೈದ್ಯರ ಕೊರತೆ ಶೇ.22 ಇದೆ. ಶೇ.44ರಷ್ಟು ಸರಕಾರಿ ಆಸ್ಪತ್ರೆಗಳಲ್ಲಿ ಮಾತ್ರ ಎಲ್ಲ ತಜ್ಞ ವೈದ್ಯರು ಇದ್ದಾರೆ. 4ರಲ್ಲಿ 3 ಆಸ್ಪತ್ರೆಗಳಲ್ಲಿ ಸಿಬ್ಬಂದಿ ಕೊರತೆ ಇದೆ.


ಜಗತ್ತಿನ ಒಟ್ಟು ಜನಸಂಖ್ಯೆಯಲ್ಲಿ ಅರ್ಧದಷ್ಟು ಮಂದಿ ಹಳ್ಳಿಗಳಲ್ಲಿ ನೆಲೆಸಿದ್ದಾರೆ. ಆದರೆ, ಗ್ರಾಮೀಣ ಪ್ರದೇಶದಲ್ಲಿ ಆರೋಗ್ಯ ಸೇವೆಗಳು ಅಲಭ್ಯ, ಅಸಮರ್ಪಕವಾಗಿವೆ; ಸಾರ್ವಜನಿಕ ಆಸ್ಪತ್ರೆಗಳು ಹಲವು ಕೊರತೆಗಳು-ಇಲ್ಲಗಳಿಂದ ರೋಗಪೀಡಿತವಾಗಿವೆ.
ದೇಶದ ಗ್ರಾಮೀಣ ಪ್ರದೇಶದಲ್ಲಿ ಮೂರು ಹಂತದ ಆರೋಗ್ಯ ಸೇವಾ ವ್ಯವಸ್ಥೆ ಇದೆ-ಉಪ ಕೇಂದ್ರ, ಪ್ರಾಥಮಿಕ ಆರೋಗ್ಯ ಕೇಂದ್ರ(ಪಿಎಚ್‌ಸಿ) ಹಾಗೂ ಸಮುದಾಯ ಆರೋಗ್ಯ ಕೇಂದ್ರ(ಸಿಎಚ್‌ಸಿ). ಉಪಕೇಂದ್ರದಲ್ಲಿ ಒಬ್ಬರು ಎಎನ್‌ಎಂ(ಸಹಾಯಕ ನರ್ಸ್ ಮತ್ತು ಮಿಡ್‌ವೈಫ್) ಹಾಗೂ ಪುರುಷ ಸಿಬ್ಬಂದಿ ಇರಬೇಕಿದ್ದು, 5,000 ಮಂದಿಗೆ ಸೇವೆ ಸಲ್ಲಿಕೆ; ಒಂದು ಪಿಎಚ್‌ಸಿಯಲ್ಲಿ 6 ಉಪಕೇಂದ್ರಗಳು ಇರುತ್ತವೆ. ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ 4ರಿಂದ 6 ಹಾಸಿಗೆ, ಒಬ್ಬರು ವೈದ್ಯಾಧಿಕಾರಿ ಮತ್ತು ಅಗತ್ಯವಿರುವಷ್ಟು ಸಿಬ್ಬಂದಿ ಇರಬೇಕಿದ್ದು, 30,000 ಮಂದಿಗೆ ಸೇವೆ ಸಲ್ಲಿಸಬೇಕಾಗುತ್ತದೆ ಹಾಗೂ ಸಿಎಚ್‌ಸಿಗಳು 30 ಹಾಸಿಗೆ, ಪ್ರಸೂತಿಗೃಹ ಮತ್ತು ಶಸ್ತ್ರಕ್ರಿಯೆ ಕೊಠಡಿ, ನಾಲ್ವರು ತಜ್ಞ ವೈದ್ಯರು(ಚಿಕಿತ್ಸೆ, ಶಸ್ತ್ರಚಿಕಿತ್ಸೆ, ಮಕ್ಕಳ ತಜ್ಞ ಹಾಗೂ ಪ್ರಸೂತಿ-ಸ್ತ್ರೀರೋಗ), 21 ಪ್ಯಾರಾಮೆಡಿಕಲ್/ಇತರ ಸಿಬ್ಬಂದಿ ಇರಬೇಕು. ಆದರೆ, ಈ ಎಲ್ಲ ಹಂತದಲ್ಲೂ ಸಿಬ್ಬಂದಿ ಕೊರತೆ ಇದ್ದು, ಗ್ರಾಮೀಣ ಜನರಿಗೆ ಸಮರ್ಪಕ ಆರೋಗ್ಯ ಸೇವೆ ಲಭ್ಯವಾಗುತ್ತಿಲ್ಲ.

ಜಿಡಿಪಿಯಲ್ಲಿ ಆರೋಗ್ಯ ಕ್ಷೇತ್ರಕ್ಕೆ ನೀಡುತ್ತಿರುವುದು ಹೆಚ್ಚೆಂದರೆ ಶೇ.5. 2023-24ರ ಕೇಂದ್ರ ಆಯವ್ಯಯದಲ್ಲಿ ಆರೋಗ್ಯ ಕ್ಷೇತ್ರದ ನಿರೀಕ್ಷಿತ ವೆಚ್ಚ 86,175 ಕೋಟಿ ರೂ. ಇದು ಒಟ್ಟು ಕೇಂದ್ರ ವೆಚ್ಚದ ಶೇ.2; ರಾಜ್ಯ ಆಯವ್ಯಯದಲ್ಲಿ ನಿಗದಿಪಡಿಸಿದ ಅನುದಾನ 15,151 ಕೋಟಿ. 'ದೇಶದಲ್ಲಿ ವೈದ್ಯ-ಜನರ ಅನುಪಾತ ವಿಶ್ವ ಆರೋಗ್ಯ ಸಂಸ್ಥೆ ನಿಗದಿಪಡಿಸಿದ್ದಕ್ಕಿಂತ ಹೆಚ್ಚು ಇದೆ' ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವೆ ಭಾರತಿ ಪ್ರವೀಣ್ ಪವಾರ್ ಹೇಳಿದ್ದರು (ರಾಜ್ಯಸಭೆ, ಜುಲೈ 26,2022). ''ದೇಶದಲ್ಲಿ 13 ಲಕ್ಷ ಅಲೋಪಥಿ ವೈದ್ಯರು(ರಾಜ್ಯ/ರಾಷ್ಟ್ರೀಯ ವೈದ್ಯಕೀಯ ಪರಿಷತ್‌ನಲ್ಲಿ ನೋಂದಣಿ ಮಾಡಿಸಿಕೊಂಡಿರುವವರು) ಹಾಗೂ 5.65 ಲಕ್ಷ ಆಯುಷ್(ಆಯುರ್ವೇದ, ಯೋಗ ಮತ್ತು ನ್ಯಾಚುರೋಪಥಿ) ವೈದ್ಯರಿದ್ದಾರೆ. ಶೇ.80ರಷ್ಟು ಅಲೋಪಥಿ ವೈದ್ಯರು ಸೇವೆ ಸಲ್ಲಿಸುತ್ತಿದ್ದಾರೆ ಎಂದು ಪರಿಗಣಿಸಿದರೆ, ವೈದ್ಯ-ಜನ ಅನುಪಾತ 1:834 ಆಗಲಿದ್ದು, ಇದು ಡಬ್ಲ್ಯುಎಚ್‌ಒ ನಿಗದಿಪಡಿಸಿದ 1:1000ಕ್ಕಿಂತ ಇದು ಉತ್ತಮ'' ಎಂದು ಹೇಳಿದ್ದರು. ಆದರೆ, ಜಾಗತಿಕ ಸೂತ್ರಗಳು ಆಯುಷ್ ವೈದ್ಯರನ್ನು ಪರಿಗಣಿಸುವುದಿಲ್ಲ. ಅಮೆರಿಕದ ಸೆಂಟರ್ ಫಾರ್ ಡಿಸೀಸ್ ಡೈನಮಿಕ್ಸ್, ಇಕನಾಮಿಕ್ಸ್ ಆ್ಯಂಡ್ ಪಾಲಿಸಿ(ಸಿಡಿಡಿಇಪಿ) ಪ್ರಕಾರ, ಭಾರತದಲ್ಲಿ ಆರು ಲಕ್ಷ ವೈದ್ಯರು ಹಾಗೂ 20 ಲಕ್ಷ ನರ್ಸ್‌ಗಳ ಕೊರತೆ ಇದೆ. 10,189 ಮಂದಿಗೆ ಒಬ್ಬರು ಸರಕಾರಿ ವೈದ್ಯರು ಇದ್ದಾರೆ. ಶೇ.65ರಷ್ಟು ಮಂದಿ ಆರೋಗ್ಯ ವೆಚ್ಚವನ್ನು ಸ್ವಂತ ಹಣದಿಂದ ಭರಿಸುತ್ತಿದ್ದು, ಇದರಿಂದ ಪ್ರತೀ ವರ್ಷ 57 ದಶಲಕ್ಷ ಮಂದಿ ಬಡತನಕ್ಕೆ ಸಿಲುಕುತ್ತಿದ್ದಾರೆ.

ಗ್ರಾಮೀಣ ಆರೋಗ್ಯ ಅಂಕಿಅಂಶ:

ಮಕ್ಕಳ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ಗ್ರಾಮೀಣ ಆರೋಗ್ಯ ಅಂಕಿಅಂಶ 2021-22ರ ಪ್ರಕಾರ, ಗ್ರಾಮೀಣ ಆಸ್ಪತ್ರೆಗಳಲ್ಲಿ ತಜ್ಞ ವೈದ್ಯರು, ವೈದ್ಯರು, ಪ್ರಯೋಗಾಲಯ ತಂತ್ರಜ್ಞರು, ಸಿಬ್ಬಂದಿ ಕೊರತೆ ಹೆಚ್ಚುತ್ತ ನಡೆದಿದೆ. 2012ರಲ್ಲಿ ಶೇ.69.7ರಷ್ಟಿದ್ದ ಕೊರತೆಯು 2022ರಲ್ಲಿ ಶೇ.79.5ಕ್ಕೆ ಅಧಿಕಗೊಂಡಿದೆ. 21,920 ತಜ್ಞ ವೈದ್ಯರು ಅಗತ್ಯವಿರುವಲ್ಲಿ ಇರುವುದು 4,485 ಮಂದಿ ಮಾತ್ರ. ಪ್ರಸೂತಿ-ಸ್ತ್ರೀರೋಗ ತಜ್ಞರ ಕೊರತೆ ಶೇ.74.2, ಮಕ್ಕಳ ತಜ್ಞರು ಶೇ.82, ಚಿಕಿತ್ಸೆ ತಜ್ಞರು ಶೇ.79 ಹಾಗೂ ಶಸ್ತ್ರಚಿಕಿತ್ಸಕರ ಕೊರತೆ ಶೇ.83.2 ಇದೆ. ಪಿಎಚ್‌ಸಿಗಳಿಗೆ ಮಂಜೂರಾದ ಹುದ್ದೆಗಳಲ್ಲಿ ಮಹಿಳಾ ಸಹಾಯಕಿ/ಮಹಿಳಾ ಆರೋಗ್ಯ ಕಾರ್ಯಕರ್ತೆಯರ ಕೊರತೆ ಶೇ.41.9, ಪುರುಷ ಸಹಾಯಕರ ಕೊರತೆ ಶೇ.46, ಎಂಬಿಬಿಎಸ್ ವೈದ್ಯರ ಕೊರತೆ ಶೇ.5. ಆದರೆ, ಸಿಎಚ್‌ಸಿಗಳಲ್ಲಿ ವೈದ್ಯರ ಕೊರತೆ ಶೇ.80. ಅಂದರೆ, ಗ್ರಾಮೀಣ ಆಸ್ಪತ್ರೆಗಳಿಗೆ ಎಂಬಿಬಿಎಸ್ ವೈದ್ಯರು ನೇಮಕಗೊಳ್ಳುತ್ತಿದ್ದಾರೆ; ತಜ್ಞ ವೈದ್ಯರು ನೇಮಕಗೊಳ್ಳುತ್ತಿಲ್ಲ; ನೇಮಕಗೊಂಡರೂ ಹೋಗುತ್ತಿಲ್ಲ. ನಗರ ಪ್ರದೇಶದ ಸಿಎಚ್‌ಸಿಗಳಲ್ಲೂ ತಜ್ಞರ ಕೊರತೆ ಇದೆ(ಶೇ.46.91). ಉನ್ನತ ಶಿಕ್ಷಣ ಪಡೆದ ವೈದ್ಯರು ಖಾಸಗಿ ಆಸ್ಪತ್ರೆಗಳ ತೆಕ್ಕೆಗೆ ಬೀಳುತ್ತಿದ್ದಾರೆ ಇಲ್ಲವೇ ವಿದೇಶಗಳ ಪಾಲಾಗುತ್ತಿದ್ದಾರೆ. ಇದು ಸಾರ್ವಜನಿಕ ಆರೋಗ್ಯ ಸೇವೆ ವ್ಯವಸ್ಥೆಗೆ ಧಕ್ಕೆ ತರುತ್ತಿದೆ. 2019ರ ಇಂಟರ್‌ನ್ಯಾಷನಲ್ ಜರ್ನಲ್ ಫಾರ್ ಹೆಲ್ತ್‌ಕೇರ್ ಮ್ಯಾನೇಜ್‌ಮೆಂಟ್‌ನ ಅಧ್ಯಯನ ವರದಿ ಪ್ರಕಾರ, ಸಾರ್ವಜನಿಕ ಆಸ್ಪತ್ರೆಗಳಲ್ಲಿ ವೈದ್ಯರು-ಸಿಬ್ಬಂದಿ ಕೊರತೆ ಹಾಗೂ ಕಳಪೆ ಗುಣಮಟ್ಟದಿಂದ ಜನ ಖಾಸಗಿ ಆಸ್ಪತ್ರೆಗಳ ಮೊರೆ ಹೋಗುತ್ತಿದ್ದಾರೆ. ಇದರಿಂದಾಗಿ, 1950ರಲ್ಲಿ ಶೇ.5ರಷ್ಟಿದ್ದ ಖಾಸಗಿ ಕ್ಷೇತ್ರದ ಪಾಲು ಈಗ ಶೇ.70ಕ್ಕೆ ಹೆಚ್ಚಳಗೊಂಡಿದೆ. ಶೇ.30ರಷ್ಟು ಮಂದಿ ಸರಕಾರಿ ಆಸ್ಪತ್ರೆ, ಶೇ.43 ಖಾಸಗಿ ವೈದ್ಯ/ಕ್ಲಿನಿಕ್, ಶೇ.23 ಖಾಸಗಿ ಆಸ್ಪತ್ರೆ ಹಾಗೂ ಶೇ.4ರಷ್ಟು ಮಂದಿ ದತ್ತಿ ಆಸ್ಪತ್ರೆಗಳಲ್ಲಿ ಒಳರೋಗಿಗಳಾಗಿ ಚಿಕಿತ್ಸೆ ಪಡೆಯುತ್ತಾರೆ.

ಸಿಎಚ್‌ಸಿಗಳ ಕೊರತೆ ದೇಶವ್ಯಾಪಿಯಾಗಿದೆ. ಕೇರಳದಲ್ಲಿ ಅತಿ ಹೆಚ್ಚು 211 ಸಿಎಚ್‌ಸಿ(ನಿಗದಿಪಡಿಸಿದ್ದಕ್ಕಿಂತ ಶೇ.171 ಅಧಿಕ)ಗಳಿದ್ದು, ನಂತರದ ಸ್ಥಾನ ಹಿಮಾಚಲ ಪ್ರದೇಶ(ಶೇ.63) ಹಾಗೂ ತಮಿಳುನಾಡು(ಶೇ.28). ಕರ್ನಾಟಕ(ಶೇ.45 ಕೊರತೆ) ಸೇರಿದಂತೆ ಉಳಿದ ಎಲ್ಲ ರಾಜ್ಯಗಳಲ್ಲಿ ಕಡಿಮೆ ಸಿಎಚ್‌ಸಿಗಳಿವೆ. ಅಧಮ ಸ್ಥಿತಿಯಲ್ಲಿರುವುದು ಬಿಹಾರ, ಆಂಧ್ರಪ್ರದೇಶ, ಮಹಾರಾಷ್ಟ್ರ ಮತ್ತು ಉತ್ತರಪ್ರದೇಶ. ತ್ರಿಪುರ, ಮೇಘಾಲಯ ಮತ್ತು ಸಿಕ್ಕಿಂನಲ್ಲಿ ಸಿಎಚ್‌ಸಿಗಳು ಇಲ್ಲ. ದೇಶಾದ್ಯಂತದ 5,480 ಸಿಎಚ್‌ಸಿಗಳಲ್ಲಿ 541ರಲ್ಲಿ ಮಾತ್ರ ಅಗತ್ಯವಿರುವಷ್ಟು ತಜ್ಞರು ಇದ್ದಾರೆ. ಉಪಕೇಂದ್ರ, ಪಿಎಚ್‌ಸಿ ಹಾಗೂ ಸಿಎಚ್‌ಸಿ ಎಲ್ಲದರಲ್ಲೂ ವೈದ್ಯ, ತರಬೇತಿ ಪಡೆದ ಸಿಬ್ಬಂದಿ ಹಾಗೂ ಉಪಕರಣಗಳ ಕೊರತೆಯಿದ್ದು, ಒತ್ತಡದಿಂದಾಗಿ ರೋಗಿಗಳಿಗೆ ಅಗತ್ಯ ಸೇವೆ ಲಭ್ಯವಾಗುತ್ತಿಲ್ಲ. ಇವರು ಒಂದೋ ಖಾಸಗಿ ಆಸ್ಪತ್ರೆಗಳ ಮೊರೆ ಹೋಗುತ್ತಾರೆ ಇಲ್ಲವೇ ಲಂಚ-ವಶೀಲಿ ಬಳಸಿ ಸೇವೆ ಪಡೆದುಕೊಳ್ಳುತ್ತಾರೆ. ಜಾಗತಿಕ ಅಧ್ಯಯನವೊಂದರ ಪ್ರಕಾರ, ಶೇ.24ರಷ್ಟು ಭಾರತೀಯರು ವೈದ್ಯ ಸೇವೆಗೆ ಲಂಚ ಕೊಡುತ್ತಾರೆ ಮತ್ತು ಶೇ.35 ಮಂದಿ ವಶೀಲಿಬಾಜಿ ಬಳಸಿ ಚಿಕಿತ್ಸೆ ಪಡೆಯುತ್ತಾರೆ.

ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆ(ಎನ್‌ಎಫ್‌ಎಚ್‌ಎಸ್) ಪ್ರಕಾರ, ಸರಕಾರಿ ಆಸ್ಪತ್ರೆಗಳಲ್ಲಿ ಸೇವೆ ಪಡೆಯುವವರ ಪ್ರಮಾಣ ಶೇ.50ಕ್ಕೆ ಕುಸಿದಿದೆ. ಆದರೆ, ಬಡವರಿಗೆ ಈ ಆಸ್ಪತ್ರೆಗಳೇ ಜೀವಾಧಾರ. ದೇಶದ ಅರ್ಧಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಹಾಗೂ ರಾಜ್ಯದ 8 ಜಿಲ್ಲೆಗಳಲ್ಲಿ ಜಿಲ್ಲಾಸ್ಪತ್ರೆ ಇಲ್ಲ. ರಾಜ್ಯದಲ್ಲಿ ಮಕ್ಕಳ ಸಾವಿನ ಪ್ರಮಾಣ ಶೇ.25.4 ಇದೆ(ದೇಶ 35.2). ತಜ್ಞ ವೈದ್ಯರ ಕೊರತೆ ಶೇ.38; ಮಿಡ್‌ವೈಫ್ ಮತ್ತು ಸಹಾಯಕ ನರ್ಸ್ ಶೇ.14, ಸ್ಟಾಫ್ ನರ್ಸ್ ಶೇ.11, ಪ್ರಯೋಗಾಲಯ ತಂತ್ರಜ್ಞರು ಶೇ.13, ಎಂಬಿಬಿಎಸ್ ವೈದ್ಯರು ಶೇ.5 ಹಾಗೂ ದಂತವೈದ್ಯರ ಕೊರತೆ ಶೇ.22 ಇದೆ. ಶೇ.44ರಷ್ಟು ಸರಕಾರಿ ಆಸ್ಪತ್ರೆಗಳಲ್ಲಿ ಮಾತ್ರ ಎಲ್ಲ ತಜ್ಞ ವೈದ್ಯರು ಇದ್ದಾರೆ.

4ರಲ್ಲಿ 3 ಆಸ್ಪತ್ರೆಗಳಲ್ಲಿ ಸಿಬ್ಬಂದಿ ಕೊರತೆ ಇದೆ.
ಆದರೆ, ದೇಶದಲ್ಲಿ ಅತ್ಯಧಿಕ ವೈದ್ಯರನ್ನು ಸೃಷ್ಟಿಸುವ ರಾಜ್ಯ ನಮ್ಮದು. 56 ವೈದ್ಯಕೀಯ ಕಾಲೇಜುಗಳಲ್ಲಿ ಪ್ರತಿವರ್ಷ 10,995(ಸರಕಾರಿ 3,200, ಖಾಸಗಿ 7,745) ಮಂದಿ ದಾಖಲಾಗುತ್ತಾರೆ. ಸಮಸ್ಯೆ ಆರಂಭವಾಗುವುದೇ ಇಲ್ಲಿ. ಒಂದು ಸರಕಾರಿ ಸೀಟ್‌ಗೆ ಪ್ರತಿಯಾಗಿ 3 ಖಾಸಗಿ ಸೀಟ್ ಇದೆ! ಖಾಸಗೀಕರಣದ ಬೀಜ ಬಿತ್ತನೆಯಾಗುತ್ತದೆ. ಸ್ನಾತಕೋತ್ತರ ಸೀಟ್‌ಗಳು ಅಂದಾಜು 5,000(ಪಿಜಿ ಡಿಪ್ಲೊಮಾ, ದಂತವೈದ್ಯ ಸೇರಿದಂತೆ). ಸರಿಸಮಾನ ಸ್ನಾತಕೋತ್ತರ ಸೀಟ್‌ಗಳು ಬೇಕೆಂಬ ಕೂಗು ಹಿಂದಿನಿಂದಲೂ ಇದೆ. ಕಳೆದ ತಿಂಗಳು ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವೀಯ, 4 ವರ್ಷಗಳೊಳಗೆ ಪದವಿ ಹಾಗೂ ಸ್ನಾತಕೋತ್ತರ ಸೀಟ್‌ಗಳ ಸಂಖ್ಯೆಯನ್ನು ಸಮಗೊಳಿಸಲಾಗುವುದು ಎಂದರು. 8 ವರ್ಷದಿಂದ ಏನು ಮಾಡಿದಿರಿ ಎಂದು ಯಾರೂ ಕೇಳಲಿಲ್ಲ!

ಕರ್ನಾಟಕ ಹೆಲ್ತ್ ವಿಷನ್ ಗ್ರೂಪ್ ಪ್ರಕಾರ, ಜಿಲ್ಲಾಸ್ಪತ್ರೆಗಳಲ್ಲಿ ಒಂದು ಲಕ್ಷ ಜನಸಂಖ್ಯೆಗೆ 33 ಹಾಸಿಗೆಗಳಿವೆ(ಇರಬೇಕಾದ್ದು 300). ಔಷಧ ಕೊರತೆ ಸಾಮಾನ್ಯ. ಶೇ.11ರಷ್ಟು ಪಿಎಚ್‌ಸಿ ಹಾಗೂ ಶೇ.34ರಷ್ಟು ಉಪಕೇಂದ್ರಗಳಲ್ಲಿ ನೀರಿನ ಪೂರೈಕೆ ಸಮರ್ಪಕವಾಗಿಲ್ಲ. ಉಪಕೇಂದ್ರ, ಪಿಎಚ್‌ಸಿ ಹಾಗೂ ಸಿಎಚ್‌ಸಿ ಎಲ್ಲದರ ಮೇಲೆ ಒತ್ತಡ ಇದೆ. ಇಂಡಿಯನ್ ಪಬ್ಲಿಕ್ ಹೆಲ್ತ್ ಸ್ಟ್ಯಾಂಡರ್ಡ್(ಐಪಿಎಚ್‌ಎಸ್)ಅನ್ವಯ, ಪ್ರತೀ ಸಿಎಚ್‌ಸಿಯಲ್ಲಿ ಕನಿಷ್ಠ 1-4 ಪ್ರಯೋಗಾಲಯ ತಂತ್ರಜ್ಞ/ಕ್ಷಕಿರಣ ತಂತ್ರಜ್ಞರು ಇರಬೇಕು. ಪಿಎಚ್‌ಸಿಯಲ್ಲಿ 24 ಗಂಟೆಯೂ ಕಾರ್ಯನಿರ್ವಹಿಸುವ ಲಘು ಶಸ್ತ್ರಕ್ರಿಯೆ ಕೊಠಡಿ ಇರಬೇಕು. ರಾಜ್ಯದಲ್ಲಿರುವ 2,562 ಪಿಎಚ್‌ಸಿ(ಗ್ರಾಮಾಂತರ 2,127, ನಗರ 435)ಗಳಲ್ಲಿ 904ರಲ್ಲಿ ಮಾತ್ರ ಲಘು ಒಟಿ ಇದೆ.

ಪರಿಹಾರವೇನು?:
ಕೊರತೆಗಳ ಸರಮಾಲೆಯೇ ಇರುವಾಗ ಪರಿಹಾರವೇನು? ಇದಕ್ಕೆ ಖಾಸಗೀಕರಣ ಖಂಡಿತವಾಗಿಯೂ ಮದ್ದಲ್ಲ. 3 ವರ್ಷಗಳ ಹಿಂದೆ ನೀತಿ ಆಯೋಗ, ಜಿಲ್ಲಾಸ್ಪತ್ರೆಗಳನ್ನು ಖಾಸಗಿಯವರಿಗೆ ವಹಿಸಿ ಪಿಪಿಪಿ(ಸಾರ್ವಜನಿಕ ಖಾಸಗಿ ಸಹಭಾಗಿತ್ವ) ಮಾದರಿಯಡಿ ನಡೆಸಬೇಕೆಂದು ಸಲಹೆ ನೀಡಿತು. ಕೋಲಾರ, ಉಡುಪಿ, ವಿಜಯಪುರ ಹಾಗೂ ದಾವಣಗೆರೆ ಜಿಲ್ಲಾಸ್ಪತ್ರೆಗಳಲ್ಲಿ ಈ ಮಾದರಿಯನ್ನು ಅಳವಡಿಸಿಕೊಳ್ಳಲಾಗುವುದು ಎಂದು ಸಚಿವ ಕೆ.ಸುಧಾಕರ್ ವಿಧಾನಪರಿಷತ್‌ನಲ್ಲಿ ಹೇಳಿದರು. ಈ ಪ್ರಸ್ತಾವಕ್ಕೆ ತೀವ್ರ ಪ್ರತಿರೋಧ ವ್ಯಕ್ತವಾಯಿತು. ರಾಯಚೂರಿನ ರಾಜೀವ್‌ಗಾಂಧಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ 2002ರಿಂದ ಖಾಸಗಿ ಆಡಳಿತದ ನಿರ್ವಹಣೆಯಲ್ಲಿತ್ತು. ಬಡತನ ರೇಖೆಯಿಂದ ಕೆಳಗಿನವರಿಗೆ ಆರೋಗ್ಯ ಸೇವೆ ನೀಡುವ ಉದ್ದೇಶದ ಈ ಆಸ್ಪತ್ರೆಯಲ್ಲಿ ಹಣದ ದುರುಪಯೋಗ ಹಾಗೂ ರೋಗಿಗಳಿಗೆ ದುಪ್ಪಟ್ಟು ಶುಲ್ಕ ವಿಧಿಸಿದ್ದ ಹಿನ್ನೆಲೆಯಲ್ಲಿ ಗುತ್ತಿಗೆ ನವೀಕರಣ ನಿರಾಕರಿಸಲಾಯಿತು. ಬಿಪಿಎಲ್ ಕಾರ್ಡ್ ದಾರರಿಗೆ ಸಮರ್ಪಕ ಚಿಕಿತ್ಸೆ ನೀಡುತ್ತಿಲ್ಲ ಎಂದು ಆಸ್ಪತ್ರೆ ವಿರುದ್ಧ ವರ್ಷಗಳ ಕಾಲ ಪ್ರತಿಭಟನೆ ನಡೆದಿತ್ತು.

ಇತ್ತೀಚೆಗೆ ಮಾಜಿ ಮುಖ್ಯ ಕಾರ್ಯದರ್ಶಿ ಟಿ.ಎಂ. ವಿಜಯಭಾಸ್ಕರ್ ನೇತೃತ್ವದ ಕರ್ನಾಟಕ ಆಡಳಿತಾತ್ಮಕ ಸುಧಾರಣೆ ಸಮಿತಿಯು ತನ್ನ ವರದಿಯಲ್ಲಿ 9,088 ಉಪಕೇಂದ್ರಗಳಲ್ಲಿ 1,346(ಶೇ.15)ನ್ನು ಮುಚ್ಚಬೇಕೆಂದು ಶಿಫಾರಸು ಮಾಡಿತು. ಉಪಕೇಂದ್ರಗಳಲ್ಲಿ 1/3ರಷ್ಟು 1,346 ಗುಚ್ಛಗಳಲ್ಲಿವೆ. ಬಹುತೇಕ ಗುಚ್ಛಗಳಲ್ಲಿ 2,150 ಗುಚ್ಛಗಳಲ್ಲಿ ತಲಾ 3 ಹಾಗೂ 24 ಗುಚ್ಛಗಳಲ್ಲಿ ತಲಾ 4 ಉಪ ಕೇಂದ್ರಗಳಿವೆ. ಮುಚ್ಚಿದ ಉಪ ಕೇಂದ್ರಗಳ ಸಿಬ್ಬಂದಿಯನ್ನು ಸಮೀಪದ ಉಪಕೇಂದ್ರ ಇಲ್ಲವೇ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ವರ್ಗಾಯಿಸಬೇಕು. 126 ಗುಚ್ಛಗಳಲ್ಲಿನ ಪಿಎಚ್‌ಸಿಯನ್ನು ವಿಸ್ತರಣೆ ಕ್ಲಿನಿಕ್ ಆಗಿ ಬದಲಿಸಬೇಕು ಎನ್ನುವುದು ಸಮಿತಿ ಅಭಿಪ್ರಾಯ. ಆದರೆ, ಹಲವು ಉಪಕೇಂದ್ರಗಳು ಕಾಗದದ ಮೇಲಷ್ಟೇ ಇವೆ. ಕಟ್ಟಡಗಳಿಲ್ಲ ಮತ್ತು ಉಪಕೇಂದ್ರ-ಪಿಎಚ್‌ಸಿ ಎರಡರಲ್ಲೂ ಸಿಬ್ಬಂದಿ ಕೊರತೆ ಇದೆ. ವ್ಯಂಗ್ಯವೆಂದರೆ, ಈ ಶಿಫಾರಸು ಕೇಂದ್ರ ಸರಕಾರದ ಆಯುಷ್ಮಾನ್ ಭಾರತ ಮಿಷನ್‌ನ ಆಶಯಗಳಿಗೆ ತದ್ವಿರುದ್ಧವಾಗಿದೆ. ಈ ಮಿಷನ್‌ಅಡಿ ಇತ್ತೀಚೆಗೆ ಹೊಸ ಉಪಕೇಂದ್ರಗಳನ್ನು ಸೇರ್ಪಡೆಗೊಳಿಸಲಾಗಿದೆ ಮತ್ತು ಆರೋಗ್ಯ ಹಾಗೂ ಸುಕ್ಷೇಮ ಕೇಂದ್ರ ಗಳೆಂದು ನಾಮಕರಣ ಮಾಡಲಾಗಿದೆ. ಸುಧಾರಣೆ ಎಂದರೆ ಅಧಿಕಾರಶಾಹಿಗೆ ಹೊಳೆಯುವುದು ಎರಡೇ ಮಾರ್ಗ-ಒಂದು ಮುಚ್ಚುವುದು; ಇನ್ನೊಂದು ಖಾಸಗೀಕರಣ. ಇವೆರಡು ಮಾರ್ಗಗಳೂ ದಯನೀಯವಾಗಿ ವಿಫಲವಾಗಿವೆ.

ದಾರಿ ಯಾವುದು?:
ಗ್ರಾಮೀಣ-ನಗರ ಪ್ರದೇಶದ ಬಡಜನರು ಸಾರ್ವಜನಿಕ ಆಸ್ಪತ್ರೆಗಳನ್ನು ಆಶ್ರಯಿಸಿದ್ದಾರೆ. ಈ ಆಸ್ಪತ್ರೆಗಳು ರೋಗತಡೆ ಮತ್ತು ರೋಗ ಉಪಶಮನ- ಎರಡೂ ಕಾರ್ಯ ನಿರ್ವಹಿಸುತ್ತವೆ. ಮಲೇರಿಯಾ, ಕುಷ್ಠ ಇತ್ಯಾದಿ ರೋಗಗಳ ವಿರುದ್ಧ ಹೋರಾಟ ಖಾಸಗಿ ಆಸ್ಪತ್ರೆಗಳಿಂದ ಸಾಧ್ಯವಿಲ್ಲ. ಅವು ಚಿಕಿತ್ಸೆ ನೀಡಬಲ್ಲವು ಅಷ್ಟೆ. ಹೀಗಾಗಿ, ಸಾರ್ವಜನಿಕ ಕ್ಷೇತ್ರದ ಆಸ್ಪತ್ರೆಗಳ ಉನ್ನತೀಕರಣ, ಸಕಾಲಕ್ಕೆ ಅಗತ್ಯವಿರುವಷ್ಟು ಔಷಧ/ಸಾಧನ/ಸಲಕರಣೆ ಪೂರೈಕೆ, ಅತ್ಯಗತ್ಯ ಮೂಲಸೌಕರ್ಯ ನಿರ್ಮಾಣ ಹಾಗೂ ಖಾಲಿ ಹುದ್ದೆಗಳನ್ನು ಭರ್ತಿ ಮಾಡಬೇಕು. ಸರಕಾರಿ ಆಸ್ಪತ್ರೆಗಳ ನಿರ್ವಹಣೆ ಕುರಿತ ಸಿಎಜಿ ಲೆಕ್ಕಪರಿಶೋಧನೆ ವರದಿ, 'ಆಸ್ಪತ್ರೆಯ ವಾರ್ಡ್‌ಗಳಲ್ಲಿ ಸ್ಥಳಾವಕಾಶದ ಕೊರತೆಯಿಂದ ನೆಲದ ಮೇಲೆ/ಕಾರಿಡಾರ್‌ಗಳಲ್ಲಿ ಹಾಸಿಗೆ ಹಾಸಲಾಗಿದೆ; ನೀರು ಸೋರಿಕೆಯಿಂದ ವಾರ್ಡ್‌ಗಳು ಕೊಳಕಾಗಿವೆ; ಐಸಿಯು/ಶಸ್ತ್ರಚಿಕಿತ್ಸೆ ಕೊಠಡಿಯಲ್ಲಿ ಉಪಕರಣಗಳ ಕೊರತೆಯಿದೆ; ಯಂತ್ರಗಳು ಸಿಬ್ಬಂದಿ ಕೊರತೆಯಿಂದ/ಬಿಡಿಭಾಗ ಬದಲಿಸದೆ ಬಳಕೆಯಾಗದೆ ಉಳಿದಿವೆ; ಕ್ಷಕಿರಣ/ಸಿಟಿ ಸ್ಕ್ಯಾನ್ ಘಟಕಗಳಿಗೆ ಅಗ್ನಿಶಾಮಕ ಇಲಾಖೆ, ಅಣು ಇಂಧನ ನಿಯಂತ್ರಣ ಮಂಡಳಿಯಿಂದ ಹಾಗೂ ಜೈವಿಕ ವೈದ್ಯಕೀಯ ತ್ಯಾಜ್ಯ ನಿರ್ವಹಣೆಗೆ ಮಾಲಿನ್ಯ ನಿಯಂತ್ರಣ ಮಂಡಳಿಯಿಂದ ಶಾಸನಾತ್ಮಕ ಅನುಮತಿ ಪಡೆದುಕೊಂಡಿಲ್ಲ' ಎಂದು ಹೇಳಿದೆ. ಇವೆಲ್ಲವೂ ಪರಿಹರಿಸಬಹುದಾದ ಸಮಸ್ಯೆಗಳು. ವೈದ್ಯರ ನೇಮಕ, ಮೂಲಸೌಲಭ್ಯ ನಿರ್ಮಾಣ ಒಂದು ದಿನದಲ್ಲಿ ಆಗುವಂಥದ್ದಲ್ಲ ಎನ್ನುವುದು ನಿಜ. ಆದರೆ, ಈ ಕೊರತೆಗಳ ನಿವಾರಣೆಗೆ ಪ್ರಾಮಾಣಿಕ ಪ್ರಯತ್ನಗಳೇ ನಡೆದಿಲ್ಲ. ಗ್ರಾಮೀಣ ಪ್ರದೇಶದಲ್ಲಿ ಕಾರ್ಯ ನಿರ್ವಹಿಸುತ್ತಿರುವ/ ನೇಮಕಗೊಳ್ಳುವ ವೈದ್ಯರು-ಸಿಬ್ಬಂದಿಗೆ ಹೆಚ್ಚುವರಿ ಪ್ರೋತ್ಸಾಹಕಗಳನ್ನು ನೀಡಬೇಕು. ಖಾಸಗಿ ಆಸ್ಪತ್ರೆಗಳು ಇಲ್ಲದೆ ಇರುವಲ್ಲಿ ಮತ್ತು ಅವುಗಳು ಎಟುಕದೆ ಇರುವವರಿಗೆ, ಆರೋಗ್ಯ ಸೇವೆ ಕಲ್ಪಿಸುವುದು ಸರಕಾರದ ಜವಾಬ್ದಾರಿ.

ಆಗಲೇಬೇಕಾದ ಇನ್ನೊಂದು ಕೆಲಸವಿದೆ; ಆರೋಗ್ಯ ಸೇವೆಯನ್ನು ಚುನಾವಣೆ ವಿಷಯ ಆಗಿಸುವುದು. ಇತ್ತೀಚೆಗೆ ಲೋಕನೀತಿ-ಸಿಎಸ್‌ಡಿಎಸ್(ಸೆಂಟರ್ ಫಾರ್ ಸ್ಟಡಿ ಫಾರ್ ಡೆವಲಪಿಂಗ್ ಸೊಸೈಟೀಸ್) ಆರೋಗ್ಯ ಸಮೀಕ್ಷೆಯೊಂದನ್ನು ನಡೆಸಿತ್ತು. ಅದರನ್ವಯ, ಪ್ರಧಾನಮಂತ್ರಿ ಆರೋಗ್ಯ ಯೋಜನೆ/ಆಯುಷ್ಮಾನ್ ಭಾರತ, ರಾಜ್ಯ ಆರೋಗ್ಯ ವಿಮೆ ಯೋಜನೆಗಳು, ಜನನಿ ಸುರಕ್ಷಾ ಯೋಜನೆ, ಜನನಿ ಶಿಶು ಸುರಕ್ಷಾ ಕಾರ್ಯಕ್ರಮ, ಮಿಷನ್ ಇಂದ್ರಧನುಷ್(ಮಕ್ಕಳಿಗೆ ಲಸಿಕೆ) ಕಾರ್ಯಕ್ರಮಗಳ ಪ್ರಯೋಜನ ಪಡೆದುಕೊಳ್ಳದೆ ಇರುವವರ ಪ್ರಮಾಣ ಶೇ.48. ಮಹಿಳೆಯರು/ಮಕ್ಕಳಿಗೆ ಆರೋಗ್ಯ ಸೇವೆ ಯೋಜನೆಗಳ ಪ್ರಯೋಜನ ಕಡಿಮೆ ಇದೆ. ಆರೋಗ್ಯ ಚುನಾವಣೆ ವಿಷಯವೇ ಎಂಬ ಪ್ರಶ್ನೆಗೆ ಬಂದ ಪ್ರತಿಕ್ರಿಯೆ ಆಶಾದಾಯಕವಾಗಿಲ್ಲ. ಸ್ಥಳೀಯ ಚುನಾವಣೆ(ಶೇ.27), ವಿಧಾನಸಭೆ(ಶೇ.22) ಮತ್ತು ರಾಷ್ಟ್ರೀಯ ಚುನಾವಣೆ(ಶೇ.25)ಯಲ್ಲಿ ಆರೋಗ್ಯ ಸೇವೆಗಳು ಮತ ನೀಡಿಕೆಯನ್ನು ನಿರ್ಧರಿಸುವ ಅಂಶವಾಗುತ್ತವೆ. ಆದರೆ, ಆರೋಗ್ಯ ಸೇವೆ ಪೂರೈಕೆ ರಾಜ್ಯದ ಹೊಣೆ ಎಂಬ ಪ್ರತಿಕ್ರಿಯೆ ಬಂದಿದೆ.
ಆರೋಗ್ಯ ಸೇವೆ ಚುನಾವಣೆ ವಿಷಯವಾದಾಗ ಮಾತ್ರ ಸಾರ್ವಜನಿಕ ಆಸ್ಪತ್ರೆ/ಆರೋಗ್ಯ ಸೇವೆ ವ್ಯವಸ್ಥೆಯಲ್ಲಿ ನಿರ್ಣಾಯಕ ಬದಲಾವಣೆಗಳನ್ನು ಕಾಣಬಹುದು. ಸದ್ಯದ ಪರಿಸ್ಥಿತಿಯಲ್ಲಿ ಅದು ಮರೀಚಿಕೆ.