ನಿರ್ಮಲಾನಂದನಾಥ ಸ್ವಾಮೀಜಿ ವಿರುದ್ಧ ಹೇಳಿಕೆ: ರಂಗಾಯಣ ಕಚೇರಿಗೆ ಮುತ್ತಿಗೆ ಯತ್ನ, ಅಡ್ಡಂಡ ಕಾರ್ಯಪ್ಪ ವಿರುದ್ಧ ಆಕ್ರೋಶ

Update: 2023-03-24 08:37 GMT

ಮೈಸೂರು: 'ಆದಿಚುಂಚನಗಿರಿ ನಿರ್ಮಲಾನಂದನಾಥ ಸ್ವಾಮೀಜಿ ಒಕ್ಕಲಿಗರಿಗೆ ಮಾತ್ರ ಸ್ವಾಮೀಜಿ' ಎಂಬ ಹೇಳಿಕೆ ನೀಡಿದ್ದ ರಂಗಾಯಣದ ನಿರ್ದೇಶಕ ಅಡ್ಡಂಡ ಸಿ.ಕಾರ್ಯಪ್ಪ ವಿರುದ್ಧ ಒಕ್ಕಕಲಿಗರ ಸಮುದಾಯದ ಮುಖಂಡರುಗಳು ಪ್ರತಿಭಟನೆ ನಡಸಿ ಆಕ್ರೋಶ ವ್ಯಕ್ತಪಡಿಸಿದರು. 

ನಗರದ ಹುಣಸೂರು ರಸ್ತೆಯಲ್ಲಿರುವ ರಂಗಾಯಣದ ಗೇಟ್ ಮುಂಭಾಗ ಶುಕ್ರವಾರ ಜಮಾಯಿಸಿದ ಪ್ರತಿಭಟನಾಕಾರರು ರಂಗಾಯಣ ನಿರ್ದೇಶಕ ಅಡ್ಡಂಡ ಸಿ.ಕಾರ್ಯಪ್ಪ ವಿರುದ್ಧ ಧಿಕ್ಕಾರ ಕೂಗಿ, ಕೂಡಲೇ ನಿರ್ಮಲಾನಂದನಾಥ ಸ್ವಾಮೀಜಿ ಹಾಗೂ ಒಕ್ಕಲಿಗ ಸಮುದಾಯದ ಕ್ಷಮೆಯಾಚಿಸಬೇಕು ಎಂದು ಒತ್ತಾಯಿಸಿದರು.

ನಂತರ ರಂಗಾಯಣದ ಒಳಪ್ರವೇಶಿಸಲು ಯತ್ನಿಸಿದ ಪ್ರತಿಭಟನಾಕಾರರನ್ನು ಪೊಲೀಸರು ತಡೆದರು. ಈ ವೇಳೆ ಪ್ರತಿಭನಾಕಾರರು ಮತ್ತು ಪೊಲೀಸರ ನಡುವೆ ಮಾತಿನ ಚಕಮಕಿ ನಡೆಯಿತು. ಆದರೂ ಪಟ್ಟುಬಿಡದ ಪ್ರತಿಭನಾಕಾರರು ಅಡ್ಡಂಡ ಸಿ.ಕಾರ್ಯಪ್ಪ ಅವರನ್ನು ಸ್ಥಳಕ್ಕೆ ಕರೆಯಿಸಿ, ಇಲ್ಲದಿದ್ದರೆ ನಮಗೆ ಅಲ್ಲಿಗೆ ಹೋಗಲು ಅವಕಾಶ ನೀಡಿ ಎಂದು ಆಗ್ರಹಿಸಿದರು. ಇದೇ ವೇಳೆ  ಪೊಲೀಸರು ಮತ್ತು ಪ್ರತಿಭನಾಕಾರರ ನಡುವೆ ಗೊಂದಲ ಉಂಟಾಯಿತು. ಆಗ ಪೊಲೀಸರು ಪ್ರತಿಭಟನಾಕರರನ್ನು ಬಂಧಿಸಿದರು.

ಪ್ರತಿಭಟನೆಯಲ್ಲಿ ಒಕ್ಕಲಿಗರ ಸಂಘದ ಪ್ರಧಾನ ಕಾರ್ಯದರ್ಶಿ ಚೇತನ್,  ನಿರ್ದೇಶಕರುಗಳಾದ ಗಿರೀಶ್, ಪ್ರಶಾಂತ್ ಗೌಡ, ರವಿ, ರವಿ ರಾಜಕೀಯ, ಮುಖಂಡರುಗಳಾದ ಬೀಡನಹಳ್ಳಿ ಸತೀಶ್ ಗೌಡ, ಕುಮಾರ್ ಸೇರಿದಂತೆ ಹಲವರು ಭಾಗವಹಿಸಿದ್ದರು.

ಗುರುವಾರ ಕನ್ನಡ ಸುದ್ದಿವಾಹಿನಿಯೊಂದರ ಜೊತೆ ಮಾತನಾಡಿದ ರಂಗಾಯಣ ನಿರ್ದೇಶಕ ಅಡ್ಡಂಡ ಸಿ.ಕಾರ್ಯಪ್ಪ,   ''ನಿರ್ಮಲಾನಂದನಾಥರು ಒಕ್ಕಲಿಗ ಸಮುದಾಯಕ್ಕೆ ಮಾತ್ರ ಸ್ವಾಮೀಜಿ, ಬೇರೆ ಜಾತಿಗಳಿಗೆ ಅಲ್ಲ, ಒಕ್ಕಲಿಗ ಸಮುದಾಯದ ಒಂದಾಗಿಟ್ಟುಕೊಳ್ಳುವುದೇ ಅವರ ಕೆಲಸ. ಹಾಗಂತ ಉರಿಗೌಡ, ನಂಜೇಗೌಡರ ಕುರಿತು ಚರ್ಚೆ ನಡೆಯಲೇಬಾರದು ಎಂದು ಹೇಳಿದ್ದು ಸರಿಯಲ್ಲ'' ಎಂದು ಹೇಳಿಕೆ ನೀಡಿದ್ದರು.

Similar News