ಭಟ್ಕಳದಲ್ಲಿ 'ಮುಸ್ಲಿಮ್ ಅಭ್ಯರ್ಥಿ' ನಿರ್ಣಯಕ್ಕೆ ಸೋಲು: ಸ್ಪಷ್ಟೀಕರಣ ನೀಡಿದ ತಂಝೀಮ್

Update: 2023-03-24 17:52 GMT

 ಭಟ್ಕಳ, ಮಾ.24: ತಂಝೀಮ್ ನೇತೃತ್ವದಲ್ಲಿ ಮಾ.20ರಂದು ನಡೆದ ಸರ್ವ ಜಮಾಅತ್ ಪ್ರತಿನಿಧಿಗಳ ಸಭೆಯಲ್ಲಿ ಭಟ್ಕಳದಲ್ಲಿ ತಂಝೀಮ್ ಸಂಸ್ಥೆಯು ಮುಸ್ಲಿಮ್ ಅಭ್ಯರ್ಥಿಯನ್ನು ಚುನಾವಣಾ ಕಣಕ್ಕಿಳಿಸುವುದರ ವಿರುದ್ಧ ನಿರ್ಣಯವೇ ಹೊರತು ಮುಸ್ಲಿಮ್ ಅಭ್ಯರ್ಥಿಯನ್ನು ಬೆಂಬಲಿಸುವುದರ ವಿರುದ್ಧ ಅಲ್ಲ ಎಂದು ತಂಝೀಮ್ ರಾಜಕೀಯ ವ್ಯವಹಾರಗಳ ಸಮಿತಿ ಸಂಚಾಲಕ ನ್ಯಾಯವಾದಿ ಇಮ್ರಾನ್ ಲಂಕಾ ಸ್ಪಷ್ಟಪಡಿಸಿದ್ದಾರೆ.

ಶುಕ್ರವಾರ ತಂಝೀಮ್ ಕಾರ್ಯಾಲಯದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ತಂಝೀಮ್ ಸಂಸ್ಥೆಯ ರಾಜಕೀಯ ವ್ಯವಹಾರಗಳ ಸಮಿತಿ ಈ ಬಾರಿಯ ಚುನಾವಣೆಯಲ್ಲಿ ಮುಸ್ಲಿಮ್ ಅಭ್ಯರ್ಥಿಯನ್ನು ತಂಝೀಮ್ ವತಿಯಿಂದಲೇ ಕಣಕ್ಕಿಳಿಸಬಹುದೇ ಎಂದು ಸರ್ವ ಜಮಾಅತ್ ಸಮಿತಿಗೆ ಪ್ರಸ್ತಾವನೆಯನ್ನು ಸಲ್ಲಿಸಿತ್ತು. ಆ ಪ್ರಸ್ತಾವನೆಯ ಕುರಿತು ಚರ್ಚಿಸಲು ಕರೆದ ಸಭೆಯಲ್ಲಿ ತಂಝೀಮ್ ಸಂಸ್ಥೆಯಿಂದ ಯಾವುದೇ ಮುಸ್ಲಿಮ್ ಅಭ್ಯರ್ಥಿಯನ್ನು ನಿಲ್ಲಿಸಕೂಡದು ಎಂದು ನಿರ್ಣಯಿಸಲಾಗಿದೆ ಎಂದು ಮಾಹಿತಿ ನೀಡಿದರು. ಇದನ್ನು ತಪ್ಪಾಗಿ ಅರ್ಥೈಸಿಕೊಂಡು ಮುಸ್ಲಿಮ್ ಅಭ್ಯರ್ಥಿಗೆ ಬೆಂಬಲ ನೀಡುವಲ್ಲಿ ತಂಝೀಮ್ ವಿರೋಧ ವ್ಯಕ್ತಪಡಿಸುತ್ತಿದೆ ಎಂಬಂತೆ ಬಿಂಬಿಸಲಾಗುತ್ತಿದೆ. ಇದು ಸರಿಯಲ್ಲ ಎಂದ ಲಂಕಾ, ಚುನಾವಣೆ ಘೋಷಣೆಯಾಗಿ ಕೊನೆಯ ದಿನದವರೆಗೂ ನಾವು ಯಾರನ್ನು ಬೆಂಬಲಿಸಬೇಕು, ಬಿಡಬೇಕು ಎಂಬ ನಿರ್ಣಯ ತೆಗೆದುಕೊಳ್ಳುತ್ತೇವೆ. ಜಾತ್ಯತೀತ ಅಭ್ಯರ್ಥಿ ಮುಸ್ಲಿಮ್ ಅಥವಾ ಹಿಂದೂ ಆಗಿರಬಹುದು, ಯಾರನ್ನೂ ಬೇಕಾದರೂ ನಾವು ಬೆಂಬಲಿಸಬಹುದು ಎಂದರು.

ಈ ಸಂದರ್ಭದಲ್ಲಿ ರಾಜಕೀಯ ವ್ಯವಹಾರಗಳ ಸಮಿತಿ ಉಪಸಂಚಾಲಕ ಅಝೀಝುರ್ರಹ್ಮಾನ್ ರುಕ್ನುದ್ದೀನ್ ಇದ್ದರು.

ಇನಾಯತುಲ್ಲಾ ಶಾಬಂದ್ರಿಗೆ ಅವಕಾಶ: ಮುಸ್ಲಿಮ್ ಅಭ್ಯರ್ಥಿಯನ್ನು ಕಣಕ್ಕಿಳಿಸದಿರುವ ತಂಝೀಮ್ ನಿರ್ಣಯದಿಂದ ಜೆಡಿಎಸ್‌ನ ಪ್ರಬಲ ಆಕಾಂಕ್ಷಿ ಇನಾಯತುಲ್ಲಾ ಶಾಬಂದ್ರಿಗೆ ಹಿನ್ನೆಡೆಯುಂಟಾಗಿತ್ತು. ಆದರೆ ತಂಝೀಮ್ ರಾಜಕೀಯ ವ್ಯವಹಾರಗಳ ಸಮಿತಿ ನೀಡಿದ ಸ್ಪಷ್ಟೀಕರಣದಿಂದಾಗಿ ಶಾಬಂದ್ರಿ ಅವರು ಚುನಾವಣೆಗೆ ಸ್ಪರ್ಧಿಸುವ ಅವಕಾಶಗಳು ಮತ್ತೇ ತೆರೆದುಕೊಂಡಿದೆ. ಅವರು ಜೆಡಿಎಸ್‌ನಿಂದ ಟಿಕೆಟ್ ಪಡೆದು ತಮಗೆ ಬೆಂಬಲ ನೀಡುವಂತೆ ತಂಝೀಮ್ ಸಂಸ್ಥೆಗೆ ಮನವಿ ಮಾಡಿಕೊಳ್ಳುವ ಎಲ್ಲ ಲಕ್ಷಣಗಳು ಕಂಡು ಬರುತ್ತಿವೆ.

Similar News