ನೈಸ್ ಸಂಸ್ಥೆಯ ಮುಖ್ಯಸ್ಥ ಅಶೋಕ್ ಖೇಣಿಗೆ ಕಾಂಗ್ರೆಸ್ ಟಿಕೆಟ್

Update: 2023-03-25 10:15 GMT

ಬೀದರ್, ಮಾ.25: ಮಾಜಿ ಶಾಸಕ ಹಾಗೂ ನೈಸ್ ಸಂಸ್ಥೆಯ ಮುಖ್ಯಸ್ಥ ಅಶೋಕ್ ಖೇಣಿಗೆ ಕಾಂಗ್ರೆಸ್ ಟಿಕೆಟ್ ಘೋಷಿಸಿದೆ. 

ಇಂದು (ಶನಿವಾರ) ಬೆಳಗ್ಗೆ ಕಾಂಗ್ರೆಸ್ ನ 124 ಮಂದಿ ಅಭ್ಯರ್ಥಿಗಳ ಮೊದಲ ಹಂತದ ಪಟ್ಟಿಯನ್ನು ಕೇಂದ್ರ ಚುನಾವಣಾ ಸಮಿತಿ ಉಸ್ತುವಾರಿ ಮುಕುಲ್ ವಾಸ್ನಿಕ್ ಶನಿವಾರ ಪ್ರಕಟಿಸಿದ್ದು, ಅಶೋಕ್ ಖೇಣಿ  ಅವರು ಬೀದರ್ ದಕ್ಷಿಣ ಕ್ಷೇತ್ರದಿಂದ ಕಣಕ್ಕಿಳಿಯಲಿದ್ದಾರೆ.  

ನೈಸ್ ಹಗರಣದ ಆರೋಪಿಯಾಗಿದ್ದ ಅಶೋಕ್ ಖೇಣಿ 2013ರ ಚುನಾವಣೆಯಲ್ಲಿ  'ಕರ್ನಾಟಕ ಮಕ್ಕಳ ಪಕ್ಷ'ದಿಂದ ಸ್ಪರ್ಧಿಸಿ ವಿಧಾನಸಭೆಗೆ ಆಯ್ಕೆಯಾಗಿದ್ದರು.

ವಿರೋಧದ ನಡುವೆ ಕಾಂಗ್ರೆಸ್ ಸೇರಿದ್ದ ಖೇಣಿ;

2018ರಲ್ಲಿ ಭಾರೀ ವಿರೋಧದ ನಡುವೆ ಅಶೋಕ್ ಖೇಣಿ ಕಾಂಗ್ರೆಸ್ ಸೇರ್ಪಡೆಗೊಂಡರು.ಆ ಸಂದರ್ಭದಲ್ಲಿ ಅಶೋಕ್ ಖೇಣಿಯನ್ನು ಪಕ್ಷಕ್ಕೆ ಸೇರಿಸಿಕೊಳ್ಳುವ ಬಗ್ಗೆ ಕಾಂಗ್ರೆಸ್ ನ ಹಲವು ಮುಖಂಡರಿಂದಲೇ ವಿರೋಧ ವ್ಯಕ್ತವಾಗಿತ್ತು. 

ಅಲ್ಲದೇ, ಬಿಜೆಪಿಯ ರಾಷ್ಟ್ರ ಮಟ್ಟದ ನಾಯಕರೂ ಕೂಡ ಭಾರೀ ವಿರೋಧ ವ್ಯಕ್ತಪಡಿಸಿದ್ದರು. 

"ನೈಸ್ ಹಗರಣದ ರೂವಾರಿ ಅಶೋಕ್ ಖೇಣಿಯ ವಿರುದ್ಧ ತನಿಖೆ ನಡೆಸಿ ಜೈಲಿಗೆ ಅಟ್ಟಬೇಕಿದ್ದ ಸಿದ್ದರಾಮಯ್ಯನವರು ಇಂದು ಖೇಣಿಯನ್ನು ಅಪ್ಪಿ ಕಾಂಗ್ರೆಸ್ ಪಾರ್ಟಿಗೆ ಸೇರಿಸಿಕೊಂಡಿರುವುದು ಸಿದ್ದರಾಮಯ್ಯನವರ ಸರ್ಕಾರವು ಪ್ರಧಾನಿಗಳು ಹೇಳಿದಂತೆ 'ಸೀದಾ ರೂಪೈಯ್ಯ' ಸರ್ಕಾರ ಎಂಬುದನ್ನು ಸಾಬೀತು ಮಾಡಿದೆ" ಎಂದು ಅಂದು ಕೇಂದ್ರ ಮಾನವ ಸಂಪನ್ಮೂಲ ಸಚಿವರಾಗಿದ್ದ ಪ್ರಕಾಶ್ ಜಾವ್ಡೇಕರ್ ಅವರು ಟ್ವೀಟ್ ಮೂಲಕ ವಿರೋಧ ವ್ಯಕ್ತಪಡಿಸಿದ್ದರು.

Similar News