ಕಾಂಗ್ರೆಸ್ ಅಭ್ಯರ್ಥಿಗಳ ಮೊದಲ ಹಂತದ ಪಟ್ಟಿಯಲ್ಲೇ ಟಿಕೆಟ್ ಪಡೆದ ತಂದೆ-ಮಕ್ಕಳು: ವಿವರ ಇಲ್ಲಿದೆ...

Update: 2023-03-25 16:49 GMT

ಬೆಂಗಳೂರು, ಮಾ.24: ರಾಜ್ಯ ವಿಧಾನಸಭಾ ಚುನಾವಣೆಗೆ ಇನ್ನು ಕೆಲವೇ ದಿನಗಳು ಬಾಕಿ ಉಳಿದಿದ್ದು, ಈ ಹಿನ್ನೆಲೆಯಲ್ಲಿ ಚುನಾವಣೆಗೆ ಸಿದ್ಧತೆ ನಡೆಸಿರುವ ಕಾಂಗ್ರೆಸ್ ನ 124 ಮಂದಿ ಅಭ್ಯರ್ಥಿಗಳ ಮೊದಲ ಹಂತದ ಪಟ್ಟಿ ಶನಿವಾರ ಬಿಡುಗಡೆಯಾಗಿದೆ. ಈ ಪಟ್ಟಿಯಲ್ಲಿ ತಂದೆ-ಮಕ್ಕಳು ಕೂಡ ಟಿಕೆಟ್ ಗಿಟ್ಟಿಸಿಕೊಂಡಿದ್ದಾರೆ. 

ಒಂದೇ ಕುಟುಂಬಕ್ಕೆ ಎರಡೆರಡು ಟಿಕೆಟ್ ಇಲ್ಲ ಎಂದು ಕಾಂಗ್ರೆಸ್ ನಾಯಕರು ಹೇಳುತ್ತಾ ಬಂದಿದ್ದಾರೆಯಾದರೂ ಇದೀಗ ಮೊದಲ ಹಂತದ ಪಟ್ಟಿಯಲ್ಲೇ ಇಂತಹ ಮೂರು ಜೋಡಿಗಳಿಗೆ ಟಿಕೆಟ್ ಸಿಕ್ಕಿದೆ. 

ಯಾರ್ಯಾರಿಗೆ ಟಿಕೆಟ್?

ದಾವಣಗೆರೆ ದಕ್ಷಿಣ ಕ್ಷೇತ್ರದಿಂದ ಹಿರಿಯ ಶಾಸಕ ಶಾಮನೂರು ಶಿವಶಂಕರಪ್ಪ ಅವರು ಕಣಕ್ಕಿಳಿದರೆ,  ಅವರ ಪುತ್ರ ಎಸ್‌.ಎಸ್‌. ಮಲ್ಲಿಕಾರ್ಜುನ್ ಅವರಿಗೆ ದಾವಣಗೆರೆ ಉತ್ತರ ಕ್ಷೇತ್ರದಿಂದ ಟಿಕೆಟ್ ಸಿಕ್ಕಿದೆ. 

ಇನ್ನು ಹಿರಿಯ ರಾಜಕಾರಣಿ ಎಂ.ಕೃಷ್ಣಪ್ಪ ಅವರು ಬೆಂಗಳೂರಿನ ವಿಜಯನಗರ ಕ್ಷೇತ್ರದಿಂದ ಕಣಕ್ಕಿಳಿದರೆ ಮತ್ತವರ ಪುತ್ರ ಪ್ರಿಯಾಕೃಷ್ಣ ಗೋವಿಂದರಾಜ ನಗರ ಕ್ಷೇತ್ರದಿಂದ ಸ್ಪರ್ಧಿಸಲಿದ್ದಾರೆ.

ಹಿರಿಯ ರಾಜಕಾರಣಿ, ಮಾಜಿ ಸಚಿವ ರಾಮಲಿಂಗಾರೆಡ್ಡಿ ಮತ್ತವರ ಪುತ್ರಿ ಶಾಸಕಿ ಸೌಮ್ಯರೆಡ್ಡಿಯವರ ಹೆಸರೂ ಪಟ್ಟಿಯಲ್ಲಿದೆ.

ರಾಮಲಿಂಗಾರೆಡ್ಡಿ ಬಿಟಿಎಂ ಲೇ ಔಟ್ ಕ್ಷೇತ್ರದಿಂದ ಕಣಕ್ಕಿಳಿದರೆ, ಜಯನಗರ ಕ್ಷೇತ್ರದಿಂದ ಸೌಮ್ಯಾ ರೆಡ್ಡಿ ಸ್ಪರ್ಧಿಸಲಿದ್ದಾರೆ. 

ಕೆಜಿಎಫ್ ವಿಧಾನಸಭಾ ಕ್ಷೇತ್ರದಿಂದ (ಎಸ್ ಸಿ ಮೀಸಲು) ಕಾಂಗ್ರೆಸ್‌ ಶಾಸಕಿ ರೂಪಕಲಾ ಎಂ.ಅವರಿಗೆ ಟಿಕೆಟ್ ಸಿಕ್ಕಿದ್ದರೆ, ಅವರ ತಂದೆ ಕೋಲಾರದ  ಮಾಜಿ ಸಂಸದ ಕೆ.ಎಚ್‌.ಮುನಿಯಪ್ಪ ಅವರಿಗೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ವಿಧಾನಸಭಾ ಕ್ಷೇತ್ರದಿಂದ (ಎಸ್ ಸಿ ಮೀಸಲು) ಸ್ಪರ್ಧಿಸಲು ಅವಕಾಶ ಸಿಕ್ಕಿದೆ.ಈ ಮೂಲಕ ಕೆ.ಎಚ್‌.ಮುನಿಯಪ್ಪ ಅವರು ರಾಜ್ಯ ರಾಜಕಾರಣಕ್ಕೆ ಪ್ರವೇಶ ಮಾಡಿದ್ದಾರೆ. 

Similar News