ಹಜ್ ಯಾತ್ರೆ ಕರ್ತವ್ಯ ನಿರ್ವಹಿಸಲು ಕೇಂದ್ರ ಪೊಲೀಸ್ ಪಡೆಗಳ ಅಧಿಕಾರಿಗಳಿಗೆ ಮಾತ್ರ ಅವಕಾಶ

Update: 2023-03-25 13:29 GMT

ಹೊಸದಿಲ್ಲಿ, ಮಾ.25: ಭಾರತದಿಂದ ಹಜ್ ಯಾತ್ರೆಗೆ ತೆರಳುವ ಯಾತ್ರಿಕರ ನೆರವಿಗೆ ಮತ್ತು  ಕ್ಷೇಮಪಾಲನೆಗೆ   ಸೌದಿ ಅರೇಬಿಯಾದಲ್ಲಿ ಕರ್ತವ್ಯಕ್ಕೆ  ಅಧಿಕಾರಿಗಳು ಮತ್ತು ಸಿಬ್ಬಂದಿಗಳ ನಿಯೋಜಿಸುವ ಸಂಬಂಧ ಕೇಂದ್ರ ಹಜ್ ಸಮಿತಿ  ಸುತ್ತೋಲೆ ಹೊರಡಿಸಿದೆ. ಅದರಂತೆ, ಪ್ರಸಕ್ತ ವರ್ಷ ಹಜ್ ಯಾತ್ರೆಯ ಕರ್ತವ್ಯ ಕ್ಕೆ ಕೇಂದ್ರ ಸಶಸ್ತ್ರ  ಪೊಲೀಸ್ ಪಡೆಯ ಮುಸ್ಲಿಮ್ ಅಧಿಕಾರಿಗಳು ಮಾತ್ರ ಅರ್ಜಿ ಸಲ್ಲಿಸಲು ಅರ್ಹರಾಗಿದ್ದು, ಕೇಂದ್ರ ಮತ್ತು ರಾಜ್ಯ ಸರ್ಕಾರಗಳಲ್ಲಿ ಸೇವೆಯಲ್ಲಿರುವ  ಮುಸ್ಲಿಮ್ ಅಧಿಕಾರಿಗಳು  ಹಜ್ ಯಾತ್ರೆಯ ನಿಯೋಜನೆಗೆ ಅರ್ಹರಲ್ಲ ಎಂದು ತಿಳಿಸಲಾಗಿದೆ.

ಪ್ರತೀ ವರ್ಷ ಹಜ್ ಯಾತ್ರೆಗೆ ಭಾರತದಿಂದ ತೆರಳುವ ಹಜ್ ಯಾತ್ರಿಕರಿಗೆ ನೆರವಾಗಲು ಕೇಂದ್ರ ಮತ್ತು ರಾಜ್ಯ ಸರಕಾರಗಳ ಅಧಿಕಾರಿಗಳು ಮತ್ತು ಸಿಬ್ಬಂಧಿಗಳನ್ನು ಆಯ್ಕೆ ಮಾಡಿ‌‌ ಕಳುಹಿಸಲಾಗುತ್ತದೆ.   ಪ್ರತಿ ರಾಜ್ಯದಿಂದ  ಸಹಾಯಕ ಹಜ್ ಅಧಿಕಾರಿ ಹಾಗೂ ಹಜ್ ಸಹಾಯಕರನ್ನು  ಆಯ್ಕೆ ಮಾಡಿ ಕಳುಹಿಸಲಾಗುತ್ತದೆ.  ಸೌದಿ ಅರೇಬಿಯಾ ಜಿದ್ದಾದಲ್ಲಿರುವ ಭಾರತೀಯ ಕಾನ್ಸುಲೆಟ್ ಕಚೇರಿ ಅಧೀನದಲ್ಲಿ ಇವರು ಸುಮಾರು 4 ತಿಂಗಳ ಕಾಲ ಕರ್ತವ್ಯ ನಿರ್ವಹಿಸುವರು. 
 
ಸಹಾಯಕ‌ ಹಜ್ ಅಧಿಕಾರಿ ಹುದ್ದೆಗೆ ಗ್ರೂಪ್ 'ಎ' ದರ್ಜೆ ಅಧಿಕಾರಿ ಹಾಗೂ ಹಜ್ ಸಹಾಯಕರ ಹುದ್ದೆಗಳಿಗೆ ಗ್ರೂಪ್‌ 'ಬಿ' ಅಧಿಕಾರಿ ಮತ್ತು 'ಸಿ' ದರ್ಜೆಯ ಸಿಬ್ಬಂದಿಯನ್ನು ನಿಯೋಜಿಸಲಾಗುತ್ತಿತ್ತು. ಇದಕ್ಕಾಗಿ ಕೇಂದ್ರ ಹಜ್ ಸಮಿತಿಯು ಅಧಿಕಾರಿಗಳಿಂದ ಅರ್ಜಿ ಆಹ್ವಾನಿಸಿ, ಸಂದರ್ಶನ ಮೂಲಕ ಆಯ್ಕೆ ಮಾಡಿ, ಹಜ್ ಕರ್ತವ್ಯಕ್ಕೆ ನಿಯೋಜಿಸುತ್ತಿತ್ತು. ಇವರನ್ನು ಮಕ್ಕಾ, ಮದೀನಾ, ಅರಫಾ, ಮೀನಾ,ಜಿದ್ದಾ ಮತ್ತಿತರ ಕಡೆಗೆ ಹಜ್ ಯಾತ್ರಿಕರ ಕರ್ತವ್ಯಕ್ಕೆ ನೇಮಿಸಲಾಗುತ್ತಿತ್ತು. ದಿನದ 24 ಗಂಟೆಗಳ ಕಾಲವೂ ಇವರು ಹಜ್ ಯಾತ್ರಿಕರ ಸೇವೆಗೆ ಲಭ್ಯರಾಗಬೇಕು.

ಈ ಅಧಿಕಾರಿಗಳಿಗೆ ತಮ್ಮ ನಿಗದಿತ ವೇತನದ ಜತೆಗೆ ವಿದೇಶಿ ಭತ್ಯೆ ಪಾವತಿಸಲಾಗುತ್ತಿತ್ತು. ಹಜ್ ಯಾತ್ರೆ ಕೊನೆಗೊಂಡು, ಯಾತ್ರಿಕರು ಸಂಪೂರ್ಣವಾಗಿ ಸ್ವದೇಶಕ್ಕೆ ವಾಪಾಸು ತೆರಳಿದ ಬಳಿಕ, ಈ ಅಧಿಕಾರಿಗಳನ್ನು ಜಿದ್ದಾ ಕಾನ್ಸುಲೇಟ್ ಕಚೇರಿಯಿಂದ ಬಿಡುಗಡೆ ಮಾಡಿದ ಬಳಿಕ ಅವರು ಭಾರತಕ್ಕೆ ಮರಳಿ ಬಂದು ತಮ್ಮ ಮೂಲ ಸರಕಾರಿ ಹುದ್ದೆಗಳಿಗೆ ಸೇರ್ಪಡೆಯಾಗುತ್ತಿದ್ದರು.

ಪ್ರತಿ ವರ್ಷ ಮುಸ್ಲಿಂ ಸರಕಾರಿ ನೌಕರರು ಇದಕ್ಕೆ ಪ್ರಯತ್ನಿಸುತ್ತಿದ್ದರು. ಆದರೆ,  ಕೇಂದ್ರ ಹಜ್ ಸಮಿತಿ ಮಾಚ್೯ 20 ರಂದು ಹೊರಡಿಸಿರುವ ಸುತ್ತೋಲೆ ಪ್ರಕಾರ, ಐಪಿಎಸ್ ಅಧಿಕಾರಿಗಳು ಹಾಗೂ ಕೇಂದ್ರೀಯ ಅರೆಸೇನಾ ಪೊಲೀಸ್ ಪಡೆಗಳಲ್ಲಿರುವ ಮುಸ್ಲಿಂ ಅಧಿಕಾರಿಗಳು ಮಾತ್ರ ಹಜ್ ಯಾತ್ರೆ ಕರ್ತವ್ಯ ನಿಯೋಜನೆಗೆ  ಅರ್ಹರು ಎಂದು ಪ್ರಕಟಿಸಿದೆ. ಅಲ್ಲದೇ, ಕೇಂದ್ರ-ರಾಜ್ಯ ಸರಕಾರಗಳ ಅಧಿಕಾರಿ ಮತ್ತು ಸಿಬ್ಬಂದಿ ಅರ್ಹರಲ್ಲ ಎಂದು ತಿಳಿಸಿದೆ.

ನೂತನ ನಿಯಮದ ಪ್ರಕಾರ ಮುಸ್ಲಿಮ್ ಸಮುದಾಯಕ್ಕೆ ಸೇರಿದ ಐಪಿಎಸ್ ಪೊಲೀಸ್ ಅಧಿಕಾರಿಗಳು, ಕೇಂದ್ರೀಯ ಸಶಸ್ತ್ರ ಪೊಲೀಸ್ ಪಡೆಗಳಾದ ಕೇಂದ್ರ ಮೀಸಲು ಪೊಲೀಸ್ ಪಡೆ( ಸಿ.ಆರ್.ಪಿ.ಎಫ್), ಕೇಂದ್ರ ಕೈಗಾರಿಕಾ ಭದ್ರತಾ ಪಡೆ(ಸಿ.ಐ.ಎಸ್.ಎಫ್), ಸೀಮಾ ಸುರಕ್ಷತಾ ಬಲ(ಎಸ್.ಎಸ್.ಬಿ), ಇಂಡೋ ಟಿಬೆಟಿಯನ್ ಬಾರ್ಡರ್ ಪೊಲೀಸ್(ಐಟಿಬಿಪಿ),  ಗಡಿ ಭದ್ರತಾ ಪಡೆ(ಬಿಎಸ್ಎಫ್), ರಾಷ್ಟ್ರೀಯ ಭದ್ರತಾ ಪಡೆ(ಎನ್.ಎಸ್.ಜಿ), ಅಸ್ಸಾಂ ರೈಫಲ್ಸ್ ಮತ್ತಿತರ ಕೇಂದ್ರೀಯ ಪಡೆಗಳಲ್ಲಿರುವ ಮುಸ್ಲಿಂ ಅಧಿಕಾರಿಗಳು ಮಾತ್ರ ಹಜ್ ಕರ್ತವ್ಯಕ್ಕೆ ಅರ್ಹರಾಗಿದ್ದಾರೆ ಎಂದು ಕೇಂದ್ರ ಹಜ್ ಸಮಿತಿಯ ಪ್ರಕಟನೆ ತಿಳಿಸಿದೆ.

Similar News