×
Ad

ಎಪ್ರಿಲ್ ಮೊದಲ ವಾರದಲ್ಲಿ ಕರ್ನಾಟಕಕ್ಕೆ ಮತ್ತೆ ಬರುತ್ತೇನೆ: ದಾವಣಗೆರೆಯಲ್ಲಿ ಪ್ರಧಾನಿ ಮೋದಿ

Update: 2023-03-25 22:07 IST

ದಾವಣಗೆರೆ: 'ಅಮೇರಿಕ, ಜರ್ಮನಿ, ಫ್ರಾನ್ಸ್, ಆಫ್ರಿಕಾ, ಸಿಂಗಾಪೂರ್, ಇಂಡೋನೇಷ್ಯಾ, ಜಪಾನ್ ಸೇರಿದಂತೆ ಜಗತ್ತಿನ ನಾಲ್ಕೂ ಕಡೆ ಭಾರತದ ಗುಣಗಾನವಾಗುತ್ತಿದೆ. ಇದು ಮೋದಿ ಕಾರಣದಿಂದ ಅಲ್ಲ. ನೀವು ನೀಡಿದ ಒಂದು ಮತದ ಕಾರಣದಿಂದ. ನಿಮ್ಮ ಒಂದು ಮತದ ಶಕ್ತಿಯಿಂದ ಭಾರತದ ಗುಣಗಾನವಾಗುತ್ತಿದೆ. ಅದೇ ರೀತಿ ಕರ್ನಾಟಕದ ಗುಣಗಾನವೂ ಆಗಬೇಕಿದೆ' ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. 

ನಗರದ ಜಿಎಂಐಟಿ ಬಳಿ ಬಿಜೆಪಿಯಿಂದ ಏರ್ಪಡಿಸಿದ್ದ ವಿಜಯಸಂಕಲ್ಪ ಯಾತ್ರೆ ಮಹಾಸಂಗಮದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.

''ನಿಮ್ಮ ಮತದ ಶಕ್ತಿಯು ಕರ್ನಾಟಕದ ಶಕ್ತಿಯನ್ನು ಜಗತ್ತಿನಲ್ಲಿ ಹೆಚ್ಚಿಸುತ್ತದೆ. ಎಪ್ರಿಲ್ ಮೊದಲ ವಾರದಲ್ಲಿ ಕರ್ನಾಟಕಕ್ಕೆ ಮತ್ತೆ ಬರುತ್ತೇನೆ. ವಿಶ್ವ ಹುಲಿ ದಿನಾಚರಣೆಗೆ ಕರ್ನಾಟಕದ ಹುಲಿಗಳ ಮಧ್ಯೆ ಬರುತ್ತೇನೆ. ಹುಲಿಯ ಮೂಲಕ ಕರ್ನಾಟಕ ಪ್ರವಾಸೋದ್ಯಮ ಅಭಿವೃದ್ಧಿಗೆ ಮಹತ್ವದ ಯೋಜನೆ ಘೋಷಣೆಯಾಗಲಿದೆ. ಕರ್ನಾಟಕದ ಪ್ರತಿ ಕಡೆ ಹೋಗುತ್ತಿದ್ದೇನೆ. ಜನ ನೀಡಿರುವ ಪ್ರೀತಿ, ಆಶೀರ್ವಾದ ಹೊಸ ಶಕ್ತಿ, ವಿಶ್ವಾಸ, ಹುಮ್ಮಸ್ಸು ನೀಡಿದೆ. ಈ ನೆಲದಿಂದ ಕರ್ನಾಟಕದ ಜನರಿಗೆ ತಲೆಬಾಗಿ ನಮಿಸುತ್ತೇನೆ. ನಿಮ್ಮೆಲ್ಲರ ಶ್ರಮ, ದೇಶಕ್ಕಾಗಿ ಬದುಕುವ ನಿಮ್ಮ ಸಂಕಲ್ಪ ಎಲ್ಲರಿಗೂ ಮಾದರಿ'' ಎಂದು ಹೇಳಿದರು.

''ಎಐಸಿಸಿ ಅಧ್ಯಕ್ಷರ ಕರ್ಮಭೂಮಿಯಲ್ಲಿ ಕಮಲಕ್ಕೆ ಗೆಲವು''

ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷರ ಕರ್ಮಭೂಮಿಯಾದ ಕಲಬುರ್ಗಿ ಮೇಯರ್-ಉಪಮೇಯರ್ ಚುನಾವಣೆಯನ್ನು ಬಿಜೆಪಿಯವರು ಗೆದ್ದಿದ್ದಾರೆ. ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷರ ಮನೆಯಲ್ಲೇ ಬಿಜೆಪಿ ವಿಜಯ ದುಂಧುಬಿ ಮೊಳಗಿದೆ. ಇದು ವಿಜಯ ಸಂಕಲ್ಪ ಯಾತ್ರೆಯ ಶುಭ ಸಂಕೇತ. ಇಂದಿನಿಂದ ನಮ್ಮ ವಿಜಯಯಾತ್ರೆ ಆರಂಭವಾಗಿದೆ. ಡಬಲ್ ಇಂಜಿನ್ ಸರ್ಕಾರದ ಮರುಸ್ಥಾಪನೆಗೆ ರಾಜ್ಯ ನಿರ್ಧರಿಸಿರುವುದರ ಸಂಕೇತವಿದು ಎಂದು ಹೇಳಿದರು.

ನನಗೆ ದಾವಣಗೆರೆಗೆ ಬಂದ ಪ್ರತಿ ಬಾರಿಯೂ ನಿಮ್ಮ ಆಶೀರ್ವಾದ, ಪ್ರೀತಿ ಹೆಚ್ಚುತ್ತಲೇ ಇದೆ. ನಿಮ್ಮೆಲ್ಲರ ದರ್ಶನ ಪಡೆದು ವೇದಿಕೆಗೆ ಬರಲು ಅನುವು ಮಾಡಿಕೊಟ್ಟ ರಾಜ್ಯ ಬಿಜೆಪಿಗೆ ಧನ್ಯವಾದ ಸಲ್ಲಿಸುತ್ತೇನೆ. ನಿಮ್ಮೆಲ್ಲರ ದರ್ಶನ ಸಿಕ್ಕಿದ್ದು ನನ್ನ ಸೌಭಾಗ್ಯ. ಈ ವಿಜಯ ಸಂಕಲ್ಪ ಯಾತ್ರೆಯು ವಿಜಯ ಮಹೋತ್ಸವ ಆಚರಿಸುವ ಯಾತ್ರೆಯಂತಿದೆ ಎಂದು ಹೇಳಿದರು. 

ಕಾರ್ಯಕ್ರಮದಲ್ಲಿ ಸಿಎಂ ಬಸವರಾಜ್ ಬೊಮ್ಮಾಯಿ, ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ, ಬಿಜೆಪಿ ರಾಜ್ಯಾಧ್ಯಕ್ಷ ನಳೀನಕುಮಾರ ಕಟೀಲ್, ಕೇಂದ್ರ ಸಚಿವರಾದ ಎ.ನಾರಾಯಣಸ್ವಾಮಿ, ಪ್ರಹ್ಲಾದ ಜೋಷಿ, ರಾಜೀವ ಚಂದ್ರಶೇಖರ, ಶೋಭಾ ಕರಂದ್ಲಾಜೆ, ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ, ಸಚಿವರಾದ ಶ್ರೀರಾಮುಲು, ಗೋವಿಂದಕಾರಜೋಳ, ಬೈರತಿ ಬಸವರಾಜ್, ಲಕ್ಷ್ಮಣ್ ಸವದಿ, ಸಿ.ಸಿ.ಪಾಟೀಲ್, ಸಂಸದ ಜಿ.ಎಂ.ಸಿದ್ದೇಶ್ವರ, ಬಿಜೆಪಿ ರಾಜ್ಯ ಉಪಾಧ್ಯಕ್ಷ ವಿಜಯೇಂದ್ರ, ಶಾಸಕ ಕೆ.ಎಸ್.ಈಶ್ವರಪ್ಪ ಸೇರಿದಂತೆ ಹಲವರು ಇದ್ದರು.  

Similar News