ಕೃತಕ ಹಿಮನದಿಗಳ ಜನಕ, ಆಧುನಿಕ ಭಗೀರಥ ಚೆವಾಂಗ್ ನಾರ್ಫೆಲ್

Update: 2023-03-25 18:31 GMT

ಅವಶ್ಯಕತೆ ಮಾನವನಿಗೆ ಬಹುಮುಖ್ಯವಾದ ಸಾಧನೆಗೆ ಕಾರಣವಾಗುತ್ತದೆ ಎಂಬುದಕ್ಕೆ ಹಲವಾರು ಸಂಶೋಧನೆಗಳು ಮತ್ತು ವಿಜ್ಞಾನದ ಅನ್ವಯಿಕೆಗಳು ಸಾಕ್ಷಿಯಾಗಿವೆ. ಇಂತಹ ಅವಶ್ಯಕತೆಗಳ ಪೂರೈಕೆಯ ಹಿಂದೆ ಬಿದ್ದ ಭಾರತದ ಇಂಜಿನಿಯರ್ ಚೆವಾಂಗ್ ನಾರ್ಫೆಲ್ ಲಡಾಖ್‌ನಲ್ಲಿ ಹದಿನೇಳು ಕೃತಕ ಹಿಮನದಿಗಳನ್ನು ನಿರ್ಮಿಸುವ ಮೂಲಕ ‘ಐಸ್ ಮ್ಯಾನ್’ ಎಂಬ ಅಭಿದಾನಕ್ಕೆ ಕಾರಣವಾಗಿದ್ದಾರೆ.



ಹಿಮನದಿಗಳು ಭೂಮಿಯ ಮೇಲಿನ ಜೀವನದ ಪ್ರಮುಖ ಜೀವನಾಡಿಗಳು. ದೈತ್ಯ ಸಿಹಿನೀರಿನ ಜಲಾಶಯಗಳಂತೆ ಅವು ಗ್ರಹದ ಜೀವನ ವ್ಯವಸ್ಥೆಗಳನ್ನು ಬೆಂಬಲಿಸುತ್ತವೆ. ಹಿಮನದಿಗಳು ಜನರಿಗೆ ಮತ್ತು ವನ್ಯಜೀವಿಗಳಿಗೆ ಜೀವ-ಪೋಷಕ ನೀರನ್ನು ಒದಗಿಸುತ್ತವೆ. ಹಿಮನದಿಗಳು ಕರಗಿದರೆ ಸಮುದ್ರದ ಮಟ್ಟ ಹೆಚ್ಚಾಗುತ್ತದೆ ಎಂಬ ಆತಂಕ ಒಂದೆಡೆಯಾದರೆ, ಅದೇ ಹಿಮನದಿಗಳಿಂದ ಪ್ರಪಂಚದ ಕೆಲವು ಭಾಗಗಳ ಕೃಷಿ ಚಟುವಟಿಕೆಗಳು ಪೂರೈಕೆಯಾಗುತ್ತವೆ ಎಂಬುದೂ ಸಹ ಅಷ್ಟೆ ವಾಸ್ತವ. ಇದಕ್ಕೆ ಸ್ವಿಟ್ಸರ್‌ಲ್ಯಾಂಡ್‌ನ ರೋನ್ ವ್ಯಾಲಿಯಲ್ಲಿನ ರೈತರೇ ಸಾಕ್ಷಿ. ಅಲ್ಲಿನ ರೈತರು ನೂರಾರು ವರ್ಷಗಳಿಂದ ಹಿಮನದಿಗಳಿಂದ ಕರಗಿದ ನೀರನ್ನು ತಮ್ಮ ಹೊಲದ ಬೆಳೆಗಳಿಗೆ ಹರಿಸುವ ಮೂಲಕ ನೀರಾವರಿ ವ್ಯವಸ್ಥೆ ಮಾಡಿಕೊಂಡಿದ್ದಾರೆ. ಅಲ್ಲದೆ ಉತ್ತರ ಪಾಕಿಸ್ತಾನದ ಹಳ್ಳಿಗರು ಚೆೆಂಘಿಸ್‌ಖಾನ್‌ನ ಆಕ್ರಮಣವನ್ನು ತಡೆಯಲು ಹಿಮನದಿಗಳನ್ನು ನಿರ್ಮಿಸಿದ್ದರು ಎಂಬುದೊಂದು ದಂತಕಥೆ ಇದೆ. ಇದರ ಹೊರತಾಗಿಯೂ ಹಿಂದೂಖುಶ್, ಹಿಮಾಲಯ ಮತ್ತು ಕಾರಕೋರಂ ಪರ್ವತ ಶ್ರೇಣಿಗಳ ಜನರು ವಸಂತಕಾಲದ ಆರಂಭದಲ್ಲಿ ಚಳಿಗಾಲದಲ್ಲಿ ಸಂಗ್ರಹಿಸಿದ ಹಿಮನದಿಗಳ ನೀರನ್ನು ಕೃಷಿಗೆ ಬಳಸಿಕೊಳ್ಳುತ್ತಾರೆ.

ಅವಶ್ಯಕತೆ ಮಾನವನಿಗೆ ಬಹುಮುಖ್ಯವಾದ ಸಾಧನೆಗೆ ಕಾರಣವಾಗುತ್ತದೆ ಎಂಬುದಕ್ಕೆ ಹಲವಾರು ಸಂಶೋಧನೆಗಳು ಮತ್ತು ವಿಜ್ಞಾನದ ಅನ್ವಯಿಕೆಗಳು ಸಾಕ್ಷಿಯಾಗಿವೆ. ಇಂತಹ ಅವಶ್ಯಕತೆಗಳ ಪೂರೈಕೆಯ ಹಿಂದೆ ಬಿದ್ದ ಭಾರತದ ಇಂಜಿನಿಯರ್ ಚೆವಾಂಗ್ ನಾರ್ಫೆಲ್ ಲಡಾಖ್‌ನಲ್ಲಿ ಹದಿನೇಳು ಕೃತಕ ಹಿಮನದಿಗಳನ್ನು ನಿರ್ಮಿಸುವ ಮೂಲಕ ‘ಐಸ್ ಮ್ಯಾನ್’ ಎಂಬ ಅಭಿದಾನಕ್ಕೆ ಕಾರಣವಾಗಿದ್ದಾರೆ. ವಾಯವ್ಯ ಭಾರತದಲ್ಲಿನ ಲಡಾಖ್ ಎತ್ತರದ ಶೀತ ಮರುಭೂಮಿಯಾಗಿದ್ದು, ವರ್ಷಕ್ಕೆ ಕೇವಲ 50ರಿಂದ 70 ಮಿಲಿಮೀಟರ್ (2ರಿಂದ 2.8 ಇಂಚು) ಮಳೆಯಾಗುತ್ತದೆ. ಲಡಾಖ್‌ನ ಹೆಚ್ಚಿನ ನೀರು ಹಿಮ ಕರಗುವಿಕೆಯಿಂದ ಬರುತ್ತದೆ. ಇಲ್ಲಿನ ಶೇ.80ರಷ್ಟು ಜನಸಂಖ್ಯೆಯು ಕೃಷಿ ಅವಲಂಬಿತವಾಗಿದೆ. 1980ರ ದಶಕದಿಂದಲೂ ಸ್ಥಳೀಯ ರೈತರಿಗೆ ನೀರಿನ ಕೊರತೆಯು ಬಹುದೊಡ್ಡ ಕಳವಳವಾಗಿದೆ.

ನೈಸರ್ಗಿಕ ಹಿಮನದಿಗಳು ಗ್ರಾಮದಿಂದ ಸುಮಾರು 20 ಕಿ.ಮೀ. ದೂರದಲ್ಲಿವೆ. ಅವು 5,000 ಮೀಟರ್ (16,000 ಅಡಿ)ಗಿಂತ ಹೆಚ್ಚು ದಪ್ಪಇರುವ ಕಾರಣ ಜೂನ್‌ನಲ್ಲಿ ಕರಗಲು ಪ್ರಾರಂಭಿಸುತ್ತವೆ. ನೀರಿನ ಅಗತ್ಯವಿರುವಾಗ ಅಂದರೆ ಎಪ್ರಿಲ್-ಮೇ ತಿಂಗಳ ಬಿತ್ತನೆ ಸಮಯದಲ್ಲಿ ನೀರು ದೊರೆಯುವುದೇ ಇಲ್ಲ. ಕಡಿಮೆ ಎತ್ತರದಲ್ಲಿ ಹಿಮನದಿಗಳಿದ್ದರೆ ಅದು ವಸಂತಕಾಲದ ಆರಂಭದಲ್ಲಿ ನೀರನ್ನು ಒದಗಿಸಲು ಬೇಗನೆ ಕರಗುತ್ತದೆ ಮತ್ತು ಕೃಷಿ ಚಟುವಟಿಕೆಗಳಿಗೆ ಅನುಕೂಲವಾಗುತ್ತದೆ ಎಂಬುದನ್ನು ಮನಗಂಡ ನಾರ್ಫೆಲ್ 1987ರಲ್ಲಿ ಸ್ವಂತ ವೆಚ್ಚದಲ್ಲಿ ಹಿಮನದಿಯನ್ನು ನಿರ್ಮಿಸಿದರು. ಇದಕ್ಕಾಗಿ ಕಣಿವೆಯ ಇಳಿಜಾರಿನಲ್ಲಿ ಚಿಕ್ಕ ಅಣೆಕಟ್ಟೊಂದನ್ನು ನಿರ್ಮಿಸಿದರು. ನವೆಂಬರ್ ಮತ್ತು ಡಿಸೆಂಬರ್ ತಿಂಗಳಲ್ಲಿ ಕಣಿವೆಯ ಇಳಿಜಾರಿನ ಉದ್ದಕ್ಕೂ ಹರಿಯುವ ನೀರನ್ನು ಕಾಲುವೆ ಮೂಲಕ ಮಿನಿ ಅಣೆಕಟ್ಟಿಗೆ ತಿರುಗಿಸಿದರು. ವ್ಯರ್ಥವಾಗಿ ಹರಿದುಹೋಗುತ್ತಿದ್ದ ನೀರನ್ನು ನಿಲ್ಲಿಸಿದರು. ಹೀಗೆ ಅಣೆಕಟ್ಟಿನಲ್ಲಿ ಜಮಾವಣೆ ಆದ ನೀರು ಚಳಿಗೆ ಹೆಪ್ಪುಗಟ್ಟಿತು. ಸುಮಾರು ಆರರಿಂದ ಏಳು ಅಡಿ ಎತ್ತರದಲ್ಲಿ ಹೆಪ್ಪು ಗಟ್ಟಿದ ನೀರು ಬೇಸಿಗೆಯಲ್ಲಿ ತಾಪಮಾನವು ಹೆಚ್ಚುತ್ತಿರುವಂತೆ ಕರಗಲು ಪ್ರಾರಂಭವಾಯಿತು. ಹೀಗೆ ಬೇಸಿಗೆಯ ಪ್ರಾರಂಭದಲ್ಲೇ ದೊರೆತ ನೀರನ್ನು ಬಳಸಿಕೊಂಡು ನಾರ್ಫೆಲ್ ಉತ್ತಮ ಇಳುವರಿಯನ್ನು ಪಡೆದರು. ಇದರಿಂದ ಸ್ಫೂರ್ತಿ ಪಡೆದ ನಾರ್ಫೆಲ್ ಒಟ್ಟು 17 ಕೃತಕ ಹಿಮನದಿಗಳನ್ನು ನಿರ್ಮಿಸುವ ಮೂಲಕ ‘ಐಸ್ ಮ್ಯಾನ್’ ಎಂದೇ ಪ್ರಸಿದ್ಧ್ದರಾದರು.

ನಾರ್ಫೆಲ್ ‘ಐಸ್ ಮ್ಯಾನ್’ ಆಗಿ ಬದಲಾದ ಜೀವನ ಪ್ರಯಾಣ ಸುಖಕರವಾಗಿರಲಿಲ್ಲ. 34 ವರ್ಷಗಳ ಇಂಜಿನಿಯರಿಂಗ್ ವೃತ್ತಿಗೆ ವಿದಾಯ ಹೇಳಿ ಕೃಷಿಯನ್ನು ಅಪ್ಪಿಕೊಳ್ಳಲು ಹೊರಟಾಗ ಬಹುತೇಕರು ಅವರನ್ನು ಹುಚ್ಚ ಎಂದು ಕರೆದರು. ಪ್ರಾರಂಭದಲ್ಲಿ ಒಂದು ಸಣ್ಣ ಅಣೆಕಟ್ಟನ್ನು ನಿರ್ಮಿಸಿ, ನೀರು ನಿಲ್ಲಿಸಿದರು. ಅಂದಿನ ಕಾಲದಲ್ಲಿ ಅದಕ್ಕೆ ತಗಲಿದ ವೆಚ್ಚ 90 ಸಾವಿರ ರೂ. ಮಾತ್ರ. ಇವರು ನಿರ್ಮಿಸಿದ ಹಿಮನದಿಯ ಅಗಲವು 50ರಿಂದ 200 ಅಡಿಗಳವರೆಗೆ ಮತ್ತು ಆಳವು 2 ರಿಂದ 7 ಅಡಿಗಳವರೆಗೆ ಇದೆ. ಈ ಕಡಿಮೆ ವೆಚ್ಚದ ಮಾದರಿಯ ಹಿಮನದಿಯನ್ನು ಸ್ಥಳೀಯವಾಗಿ ದೊರೆಯುವ ಮೂಲದ ವಸ್ತು ಮತ್ತು ಸ್ಥಳೀಯ ಸಮುದಾಯದ ಸಹಾಯದಿಂದ ನಿರ್ಮಿಸಿದರು. ಇವರು ಹಿಮನದಿ ನಿರ್ಮಿಸಿ ಯಶಸ್ಸನ್ನು ಪಡೆದ ನಂತರ ಅನೇಕರು ಇವರ ಪ್ರಯತ್ನಕ್ಕೆ ಬೆಂಬಲ ಸೂಚಿಸಿದರು. ಅವರೂ ಹಿಮನದಿ ನಿರ್ಮಿಸಲು ನಾರ್ಫೆಲ್ ಮಾದರಿಯಾದರು.

ನಾರ್ಫೆಲ್ ಇದುವರೆಗೆ ನಿರ್ಮಿಸಿದ ಹಿಮನದಿಗಳಲ್ಲಿ ಚಿಕ್ಕದು ಉಮ್ಲಾದಲ್ಲಿ 500 ಅಡಿ ಉದ್ದ ಮತ್ತು ದೊಡ್ಡದು ಫುಟ್ಸೆಯಲ್ಲಿ 2 ಕಿ.ಮೀ. ಹೊಂದಿದೆ. ಬಹುತೇಕ ಎಲ್ಲಾ ಹಿಮನದಿಗಳ ಎತ್ತರ 2 ರಿಂದ 7 ಅಡಿ ಇವೆ. ನಾರ್ಫೆಲ್ ಅವರ ಪ್ರಯತ್ನಗಳು ಕೃಷಿ ಉತ್ಪಾದನೆಯನ್ನು ಹೆಚ್ಚಿಸಿವೆ. ಆ ಮೂಲಕ ಸ್ಥಳೀಯರ ಆದಾಯವನ್ನು ಸಹ ಹೆಚ್ಚಿಸಿವೆ. ಇದರಿಂದ ನಗರಗಳಿಗೆ ಜನರ ವಲಸೆ ಕೂಡ ಕಡಿಮೆಯಾಗಿದೆ. ಅವರ ಸರಳ ತಂತ್ರವು ಹಳ್ಳಿಗಳಿಂದ ದೂರ ಇದ್ದ ನೀರನ್ನು ಹತ್ತಿರಕ್ಕೆ ತಂದಿದೆ. ಮುಖ್ಯವಾಗಿ ಗ್ರಾಮಸ್ಥರಿಗೆ ಹೆಚ್ಚು ಅಗತ್ಯವಿರುವಾಗ ಲಭ್ಯವಾಗುವಂತೆ ಮಾಡಿದೆ. ನಾರ್ಫೆಲ್ ಅವರು ಭವಿಷ್ಯದಲ್ಲಿ ಬೇರೆ ಬೇರೆ ಕಡೆಗಳಲ್ಲಿ ಹಿಮನದಿಗಳನ್ನು ನಿರ್ಮಿಸಲು ಬಯಸಿದ್ದಾರೆ. ಲಾಹೋಲ್, ಸ್ಪಿತಿ, ಝಾಂಗ್ಸ್ಕರ್, ಮುಂತಾದ ಪ್ರದೇಶಗಳಲ್ಲಿ ಹಿಮನದಿ ನಿರ್ಮಿಸಲು ಯೋಜಿಸಿದ್ದಾರೆ. ಇದಕ್ಕೆ ಹಣದ ಕೊರತೆಯು ಸವಾಲಾಗಿ ಬರುತ್ತದೆ ಎಂಬುದನ್ನೂ ಮನಗಂಡಿದ್ದಾರೆ. ಅದಕ್ಕಾಗಿ ಸಮುದಾಯದ ಸಹಕಾರವನ್ನು ಬಯಸುತ್ತಿದ್ದಾರೆ. ಪ್ರಸಕ್ತ ಸಂದರ್ಭದಲ್ಲಿ ಒಂದು ಮಧ್ಯಮ ಗಾತ್ರದ ಹಿಮನದಿ ನಿರ್ಮಾಣಕ್ಕೆ 15 ಲಕ್ಷ ರೂ. ವೆಚ್ಚವಾಗುತ್ತಿದೆ. ಇದು ಸದ್ಯಕ್ಕೆ ವೆಚ್ಚದಾಯಕ ಎನಿಸಿದರೂ ಅದರಿಂದ ಬರುವ ಲಾಭ ಅಪರಿಮಿತ ಎನ್ನುತ್ತಾರೆ ನಾರ್ಫೆಲ್. ‘‘ನಾವು ಏನನ್ನು ಬಿತ್ತುತ್ತೇವೆಯೋ ಅದನ್ನೇ ಪಡೆಯುತ್ತೇವೆ. ಇದು ಹಿಮನದಿಗಳ ವಿಷಯದಲ್ಲಿ ತುಂಬಾ ವಾಸ್ತವವಾದ ಮಾತು ಆಗಿದೆ. ದೃಢ ಸಂಕಲ್ಪಮತ್ತು ಸಮರ್ಪಣೆ ಇದ್ದರೆ ಜಗತ್ತಿನಲ್ಲಿ ಅಸಾಧ್ಯವಾದುದು ಯಾವುದೂ ಇಲ್ಲ ಎನ್ನುವುದರಲ್ಲಿ ಎರಡು ಮಾತಿಲ್ಲ. ಅದನ್ನೇ ನಾನು ನಂಬುತ್ತೇನೆ’’ ಎಂದು ನಾರ್ಫೆಲ್ ಹೇಳುತ್ತಾರೆ.

ಅವರ ಸರಳವಾದ ಕಲ್ಪನೆಯು ಪ್ರಪಂಚದಾದ್ಯಂತ ಮೆಚ್ಚುಗೆಯನ್ನು ಪಡೆದಿದೆ ಮತ್ತು ಪ್ರಕೃತಿಯನ್ನು ಕದಡಲು ಮನುಷ್ಯನೇ ಕಾರಣವಾದರೆ, ಅದನ್ನು ಉಳಿಸುವ ಸಾಮರ್ಥ್ಯವೂ ಇದೆ ಎಂದು ಅವರು ಸಾಬೀತುಪಡಿಸಿದ್ದಾರೆ. ನೀರನ್ನು ನಿಲ್ಲಿಸುವ ಮತ್ತು ಅದನ್ನು ಸದ್ಬಳಕೆ ಮಾಡಿಕೊಳ್ಳುವ ಇಂತಹ ಪ್ರಯತ್ನಗಳು ಅಲ್ಲಲ್ಲಿ ನಡೆಯಲಿ, ಆ ಮೂಲಕ ನೀರಿನ ಸಮಸ್ಯೆಗೆ ಪರ್ಯಾಯ ಮಾರ್ಗಗಳು ದೊರೆಯುವಂತಾಗಲಿ

Similar News