2B ಮೀಸಲಾತಿ ರದ್ದುಗೊಳಿಸಿದ ಕರ್ನಾಟಕ ಸರ್ಕಾರದ ನಿಲುವನ್ನು ಸಮರ್ಥಿಸಿದ ಕೇಂದ್ರ ಗೃಹ ಸಚಿವ ಅಮಿತ್ ಶಾ

"ಧರ್ಮದ ಆಧಾರದಲ್ಲಿ ಮೀಸಲಾತಿ ಒದಗಿಸುವುದು ಸಂವಿಧಾನದ ಪ್ರಕಾರ ಅಸಿಂಧು"

Update: 2023-03-26 14:10 GMT

ಬೀದರ್/ರಾಯಚೂರು: ಇತರೆ ಹಿಂದುಳಿದ ವರ್ಗಗಳ ಪ್ರವರ್ಗ 2(B) ಅಡಿ ಮುಸ್ಲಿಮರಿಗೆ ಒದಗಿಸುತ್ತಿದ್ದ ಶೇ. 4 ಮೀಸಲಾತಿಯನ್ನು ರದ್ದುಗೊಳಿಸುವ ಕರ್ನಾಟಕ ಸರ್ಕಾರದ ಕ್ರಮವನ್ನು ಶ್ಲಾಘಿಸಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ (Amit Shah), ಧರ್ಮದ ಆಧಾರದಲ್ಲಿ ಮೀಸಲಾತಿ ಒದಗಿಸುವುದು ಸಂವಿಧಾನದ ಪ್ರಕಾರ ಅಸಿಂಧು ಎಂದು ಸಮರ್ಥಿಸಿದ್ದಾರೆ.

ಬೀದರ್ ಜಿಲ್ಲೆಯ ಗೊರಟ ಗ್ರಾಮ ಹಾಗೂ ರಾಯಚೂರು ಜಿಲ್ಲೆಯ ಗಬ್ಬೂರಿನಲ್ಲಿ ಸಾರ್ವಜನಿಕ ಸಮಾವೇಶವನ್ನುದ್ದೇಶಿಸಿ ಮಾತನಾಡಿದ ಅವರು, ಕಾಂಗ್ರೆಸ್ ತನ್ನ ಮತ ಬ್ಯಾಂಕ್ ರಾಜಕೀಯಕ್ಕಾಗಿ ಮುಸ್ಲಿಮರಿಗೆ ಶೇ. 4ರಷ್ಟು ಮೀಸಲಾತಿ ಒದಗಿಸಿತ್ತು ಎಂದು ಟೀಕಿಸಿದ್ದಾರೆ.

ಪರಿಶಿಷ್ಟ ಜಾತಿ ಸಮುದಾಯದವರಿಗೆ ಒಳ ಮೀಸಲಾತಿ ಪರಿಚಯಿಸುವ ಮೂಲಕ ಅಲ್ಲಿನ ಸಮುದಾಯಗಳಿಗಾಗುತ್ತಿದ್ದ ಅನ್ಯಾಯವನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸರಿಪಡಿಸಿದ್ದಾರೆ ಎಂದೂ ಅವರು ಹೇಳಿದ್ದಾರೆ.

ಪ್ರವರ್ಗ 2(B) ಮಿಸಲಾತಿಯು ಸಂಪೂರ್ಣವಾಗಿ ಮುಸ್ಲಿಂ ಸಮುದಾಯಕ್ಕೆ ಮೀಸಲಾಗಿತ್ತು. ಬಿಜೆಪಿ ಸರ್ಕಾರವು ಅದನ್ನು ರದ್ದುಪಡಿಸಿ, ರಾಜ್ಯದ ಎರಡು ಬಲಿಷ್ಠ ಸಮುದಾಯಗಳಾದ ಒಕ್ಕಲಿಗ ಸಮುದಾಯಕ್ಕೆ  2(C) ಪ್ರವರ್ಗದಲ್ಲಿ ಹಾಗೂ ಲಿಂಗಾಯತ ಸಮುದಾಯಕ್ಕೆ ಪ್ರವರ್ಗ 2(D)ಯಲ್ಲಿ ಸಮಾನವಾಗಿ ಹಂಚಲಾಗಿದೆ ಎಂದೂ ಅಮಿತ್ ಶಾ ಹೇಳಿದ್ದಾರೆ.

ಪ್ರವರ್ಗ 2(B) ರದ್ದಾಗಿರುವುದರಿಂದ ಒಕ್ಕಲಿಗರ ಮೀಸಲಾತಿ ಪ್ರಮಾಣ ಶೇ. ನಾಲ್ಕರಿಂದ ಆರಕ್ಕೆ ಏರಿಕೆಯಾಗಿದ್ದರೆ, ಲಿಂಗಾಯತರ ಮೀಸಲಾತಿ ಪ್ರಮಾಣ ಶೇ. ಐದರಿಂದ ಏಳಕ್ಕೆ ಏರಿಕೆಯಾಗಿದೆ ಎಂದು ತಿಳಿಸಿದ್ದಾರೆ.

ಮುಸ್ಲಿಂ ಮೀಸಲಾತಿ ರದ್ದುಗೊಳಿಸುವ ನಿರ್ಣಯವನ್ನು ಬಲವಾಗಿ ಸಮರ್ಥಿಸಿಕೊಂಡ ಅಮಿತ್ ಶಾ, "ನಮಗೆ ತುಷ್ಟೀಕರಣದಲ್ಲಿ ನಂಬಿಕೆ ಇಲ್ಲ. ಹೀಗಾಗಿ ಮೀಸಲಾತಿಯನ್ನು ಬದಲಿಸಲು ನಿರ್ಧರಿಸಿದೆವು" ಎಂದು ಹೇಳಿದ್ದಾರೆ.

ಬಿಜೆಪಿಯು ಅಲ್ಪಸಂಖ್ಯಾತರಿಗೆ ನೀಡಲಾಗಿದ್ದ ಶೇ. ನಾಲ್ಕು ಮೀಸಲಾತಿಯನ್ನು ರದ್ದುಗೊಳಿಸಿದೆ ಮತ್ತು ಒಕ್ಕಲಿಗ ಹಾಗೂ ಲಿಂಗಾಯತ ಸಮುದಾಯಗಳಿಗೆ ತಲಾ ಶೇ. ಎರಡು ಮೀಸಲಾತಿ ಹಂಚಲಾಗಿದೆ ಎಂದು ತಿಳಿಸಿದ್ದಾರೆ.

ಅಲ್ಪಸಂಖ್ಯಾತರಿಗೆ ಮೀಸಲಾತಿ ನೀಡುವುದು ಸಾಂವಿಧಾನಿಕವಾಗಿ ಸಿಂಧುವಲ್ಲ. ಧರ್ಮದ ಆಧಾರದಲ್ಲಿ ಮೀಸಲಾತಿ ನೀಡಲು ಸಂವಿಧಾನದಲ್ಲಿ ಯಾವುದೇ ಅವಕಾಶವಿಲ್ಲ. ಕಾಂಗ್ರೆಸ್ ಸರ್ಕಾರವು ತುಷ್ಟೀಕರಣಕ್ಕಾಗಿ ಇದನ್ನು ಮಾಡಿದ್ದು, ಅಲ್ಪಸಂಖ್ಯಾತರಿಗೆ ಮೀಸಲಾತಿ ಒದಗಿಸಿದೆ ಎಂದು ಅವರು ಕಿಡಿ ಕಾರಿದ್ದಾರೆ.

ಇದನ್ನೂ ಓದಿ: ಮೋದಿ ಅಂದರೆ ಭ್ರಷ್ಟಾಚಾರ ಎಂದಿದ್ದ ಬಿಜೆಪಿ ನಾಯಕಿ ಖುಷ್ಬೂ ಟ್ವೀಟ್‌ ವೈರಲ್

Similar News