ಒಬ್ಬರ ಹಕ್ಕನ್ನು ಮತ್ತೊಬ್ಬರಿಗೆ ಕೊಡುವ ಮೂಲಕ ಬಿಜೆಪಿ ಸರಕಾರದಿಂದ ದ್ವೇಷ ಬಿತ್ತುವ ಕೆಲಸ: ಡಿ.ಕೆ. ಶಿವಕುಮಾರ್

Update: 2023-03-26 16:05 GMT

ಬೆಂಗಳೂರು: ಅಲ್ಪಸಂಖ್ಯಾತರಿಗೆ ನೀಡಲಾಗಿದ್ದ ಶೇ.4ರಷ್ಟು ಮೀಸಲಾತಿಯನ್ನು ಕಿತ್ತು ಪಂಚಮಸಾಲಿ ಹಾಗೂ ಒಕ್ಕಲಿಗ ಸಮುದಾಯಕ್ಕೆ ನೀಡಲು ನಿರ್ಧರಿಸಲಾಗಿದ್ದು, ಬಿಜೆಪಿ (BJP) ಸರಕಾರ ಒಬ್ಬರ ಹಕ್ಕುಗಳನ್ನು ಕಿತ್ತು ಮತ್ತೊಬ್ಬರಿಗೆ ಕೊಡುವ ಮೂಲಕ ಜನಾಂಗಗಳ ನಡುವೆ ದ್ವೇಷ ಸೃಷ್ಟಿಸುವ ಪ್ರಯತ್ನ ಮಾಡುತ್ತಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಆರೋಪಿಸಿದ್ದಾರೆ.

ರವಿವಾರ ಕೆಪಿಸಿಸಿ ಕಚೇರಿಯಲ್ಲಿ ನಡೆದ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಪರಿಶಿಷ್ಟರು, ಒಕ್ಕಲಿಗರು, ಲಿಂಗಾಯಿತ ಪಂಚಮಸಾಲಿ, ಅಲ್ಪಸಂಖ್ಯಾತರಿಗೆ ಮೀಸಲಾತಿ ವಿಷಯದಲ್ಲಿ ರಾಜ್ಯ ಸರಕಾರ ವಂಚನೆ ಮಾಡುತ್ತಿದೆ. ಮೀಸಲಾತಿಯೇನು ಭಿಕ್ಷೆಯಲ್ಲ, ಒಕ್ಕಲಿಗ ಹಾಗೂ ಲಿಂಗಾಯಿತ ಸಮುದಾಯ ಭಿಕ್ಷೆ ಬೇಡುತ್ತಿಲ್ಲ ಎಂದು ಕಿಡಿಕಾರಿದರು.

ನಮಗೆ ಯಾರ ಮೇಲೂ ದ್ವೇಷವಿಲ್ಲ, ಎಲ್ಲರಿಗೂ ಅವರ ಜನಸಂಖ್ಯೆಗೆ ಅನುಗುಣವಾಗಿ ಹಕ್ಕುಗಳು ಸಿಗಬೇಕು. ಮಹಾರಾಷ್ಟ್ರ, ದಿಲ್ಲಿ, ಆಂಧ್ರ ಪ್ರದೇಶದಲ್ಲಿ ಮೀಸಲಾತಿ ವಿಷಯದಲ್ಲಿ ನ್ಯಾಯಾಲಯ ಏನು ತೀರ್ಪು ಬಂದಿದೆ ಎಂಬುದು ಕಣ್ಣ ಮುಂದೆಯೇ ಇದೆ. ಅದನ್ನು ಕಾನೂನು ವಿಭಾಗ ನೋಡದೆ ಏನು ಮಾಡುತ್ತಿದೆ ಎಂದು ಪ್ರಶ್ನಿಸಿದರು.

ಮೀಸಲಾತಿ ಪರಿಷ್ಕರಣೆಯ ಕುರಿತು ಸಚಿವ ಸಂಪುಟದಲ್ಲಿ ತೆಗೆದುಕೊಂಡ ನಿರ್ಣಯಗಳನ್ನು ಒಪ್ಪಿಕೊಳ್ಳುವಂತೆ ಬಸವ ಜಯಮೃತ್ಯಂಜಯಸ್ವಾಮಿ ಹಾಗೂ ನಿರ್ಮಲಾನಂದ ಸ್ವಾಮೀಜಿಗಳಿಗೆ 25ಕ್ಕೂ ಹೆಚ್ಚು ಬಾರಿ ಕರೆ ಮಾಡಿ ಬೇಡಿಕೊಂಡು, ಬೆದರಿಸಿದ್ದಾರೆ ಎಂದು ಅವರು ಹೇಳಿದರು.

ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರಲಿದ್ದು, ಬಿಜೆಪಿಯವರು ಮಾಡಿರುವ ಅವೈಜ್ಞಾನಿಕ ನಿರ್ಧಾರಗಳನ್ನು ರದ್ದು ಮಾಡುತ್ತೇವೆ. ಮೀಸಲಾತಿಯನ್ನು ಹಂಚಿಕೊಳ್ಳಲು ಇದು ಯಾರ ಮನೆಯ ಆಸ್ತಿಯೂ ಅಲ್ಲ, ಅಲ್ಪಸಂಖ್ಯಾತರೇನು ನಮ್ಮವರಲ್ಲವೇ ಅವರ ಸಂವಿಧಾನ ಬದ್ಧ ಹಕ್ಕನ್ನು ಕಸಿದುಕೊಂಡಿದ್ದೇಕೆ, ಇಂತಹ ದ್ವೇಷದ ರಾಜಕಾರಣ ಏಕೆ ಮಾಡಲಾಗುತ್ತಿದೆ ಎಂದು ಪ್ರಶ್ನಿಸಿದರು.

ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್‍ಸಿಂಗ್ ಸುರ್ಜೇವಾಲ ಮಾತನಾಡಿ, ಮಹಾಭಾರತದಲ್ಲಿ ಶಕುನಿಯಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ರಾಜ್ಯದಲ್ಲಿ ಜನರಿಗೆ ವಂಚನೆ ಮಾಡುತ್ತಿದ್ದಾರೆ. ಗೊಂದಲದ ನಿರ್ಧಾರಗಳ ಮುಖಾಂತರ ಜನರನ್ನು ಮೂರ್ಖರನ್ನಾಗಿ ಮಾಡಲಾಗುತ್ತಿದೆ. ಬೊಮ್ಮಾಯಿ ಅವರ 420 ಸರಕಾರ ಮೀಸಲಾತಿ ವಿಷಯದಲ್ಲಿ ಲಿಂಗಾಯಿತ, ಒಕ್ಕಲಿಗ, ಅಲ್ಪಸಂಖ್ಯಾತ ಹಾಗೂ ಪರಿಶಿಷ್ಟರನ್ನು ದುರುದ್ದೇಶದಿಂದ ವಂಚಿಸುತ್ತಿದೆ ಎಂದು ಕಿಡಿಕಾರಿದರು.

ಸ್ವತಂತ್ರ್ಯ ಭಾರತದ 75 ವರ್ಷದಲ್ಲಿ ಯಾವುದೇ ರಾಜ್ಯ ಸರಕಾರ 90 ದಿನದಲ್ಲಿ ಮೂರು ಬಾರಿ ಮೀಸಲಾತಿಯನ್ನು ಬದಲಾವಣೆ, ಪರಿಷ್ಕರಣೆ ಮಾಡಿಲ್ಲ. ಕರ್ನಾಟಕದಲ್ಲಿ ಬಿಜೆಪಿ ಸರಕಾರ ಆ ಕೆಲಸ ಮಾಡಿದೆ, ಒಂದೊಂದು ಜಾತಿಯನ್ನು ಮತ್ತೊಂದು ಜಾತಿ ವಿರುದ್ಧ ಎತ್ತಿ ಕಟ್ಟಲಾಗುತ್ತಿದೆ. ಬಿಜೆಪಿಯ ಭಾರತೀಯ ಜನತಾ ಪಕ್ಷ ಎಂಬ ಹೆಸರನ್ನು ಬಿಟ್ರಯಲ್ ಜನತಾ ಪಾರ್ಟಿ ಎಂದು ಬದಲಾವಣೆ ಮಾಡುವುದು ಸೂಕ್ತವಾಗಿದೆ. ತನ್ನ ಭ್ರಷ್ಟಚಾರವನ್ನು ಮರೆ ಮಾಚಲು ಮೀಸಲಾತಿ ವಿಷಯದಲ್ಲಿ ಪರಸ್ಪರ ದ್ವೇಷ ಹಾಗೂ ವೈರತ್ವ ಸೃಷ್ಟಿಸುವ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಆರೋಪಿಸಿದ್ದಾರೆ.

ರಾಹುಲ್‍ಗಾಂಧಿ ಭಾರತ್ ಜೋಡೋ ಯಾತ್ರೆಯಲ್ಲಿ ವಿಷಯ ಪ್ರಸ್ತಾಪಿಸುವವರೆಗೂ ನ್ಯಾಯಮೂರ್ತಿ ನಾಗಮೋಹನ್‍ದಾಸ್ ವರದಿಯನ್ನು ನಾಲ್ಕು ವರ್ಷದಿಂದ ಜಾರಿ ಮಾಡಲಿಲ್ಲ. ವಿಧಾನ ಮಂಡಲದ ಕೊನೆಯ ಅಧಿವೇಶನದಲ್ಲಿ ಪರಿಶಿಷ್ಟರ ಮೀಸಲಾತಿಯನ್ನು ಹೆಚ್ಚಿಸಲಾಗಿದೆ ಎಂದರು.

2022ರ ಡಿಸೆಂಬರ್ 26ರಂದು ನಿರ್ಣಯ ಕೈಗೊಂಡು ಪರಿಶಿಷ್ಟ ಜಾತಿ ಮೀಸಲಾತಿಯನ್ನು ಶೇ.15ರಿಂದ 17ಕ್ಕೆ, ಪರಿಶಿಷ್ಟ ಪಂಗಡದ ಮೀಸಲಾತಿಯನ್ನು ಶೇ.3ರಿಂದ 7ಕ್ಕೆ ಹೆಚ್ಚಿಸಲಾಗಿದೆ. ಮೀಸಲು ಪ್ರಮಾಣ ಶೇ.50ರ ಮಿತಿ ಗಡಿದಾಟಬಾರದು ಎಂಬ ಸುಪ್ರೀಂಕೋರ್ಟ್ ತೀರ್ಪನ್ನು ಉಲ್ಲಂಘಿಸಲಾಗಿದೆ. ಮೀಸಲಾತಿ ಹೆಚ್ಚಳ ಮಾಡಿದರೆ ಅದನ್ನು ಸಂವಿಧಾನದ 9ನೆ ಪರಿಚ್ಛೇಧಕ್ಕೆ ಸೇರಿಸಿದಾಗ ಮಾತ್ರ ಊರ್ಜಿತವಾಗುತ್ತದೆ, ರಾಜ್ಯ ಸರಕಾರ 3 ತಿಂಗಳಿನಿಂದ ಈ ನಿಟ್ಟಿನಲ್ಲಿ ಕೇಂದ್ರಕ್ಕೆ ಶಿಫಾರಸ್ಸು ಮಾಡಲಿಲ್ಲ ಎಂದು ಹೇಳಿದರು.

ಚುನಾವಣೆಗೆ ಹೋಗುವ ನಾಲ್ಕೈದು ದಿನಗಳ ಮೊದಲು ಮಾ.24ರಂದು ಸಂಪುಟ ಸಭೆಯಲ್ಲಿ ಎಲ್ಲ ಮೀಸಲಾತಿಯನ್ನು ಪರಿಷ್ಕರಿಸಲಾಗಿದ್ದು, ಇದೊಂದು ಲಜ್ಜೆಗೆಟ್ಟ ನಿರ್ಧಾರ. ಪಂಚಮಸಾಲಿ ಹಾಗೂ ಇತರ ಲಿಂಗಾಯಿತ ಸಮುದಾಯಗಳು ಶೇ.15ರಷ್ಟು ಮೀಸಲಾತಿಗೆ ಬೇಡಿಕೆ ಸಲ್ಲಿಸಿದ್ದವು, ಶೇ.2ರಷ್ಟು ಮಾತ್ರ ಹೆಚ್ಚಿಸಲಾಗಿದೆ. ಇನ್ನು ಅಲ್ಪಸಂಖ್ಯಾತರನ್ನು ಮೀಸಲಾತಿಯಿಂದ ಹೊರಗಿಡಲಾಗಿದೆ. ಪರಿಶಿಷ್ಠರ ಮೀಸಲು ಪರಿಷ್ಕರಣೆಯೂ ಗೊಂದಲಕಾರಿಯಾಗಿದೆ. ಉದ್ದೇಶಪೂರ್ವಕವಾಗಿಯೇ ಗೊಂದಲ ಸೃಷ್ಟಿಸಿ ಕನ್ನಡಿಗರ ಜಾಣ್ಮೆಯನ್ನು ಅಪಮಾನ ಮಾಡುವ ಯತ್ನ ಮಾಡಲಾಗುತ್ತಿದೆ ಎಂದರು.

ಮುಸ್ಲಿಮರನ್ನು ಇಡಬ್ಲ್ಯೂಎಸ್ ಖೋಟಾಗೆ ಸ್ಥಳಾಂತರಿಸುವುದಾಗಿ ಹೇಳಲಾಗಿದೆ, ಇಡಬ್ಲ್ಯೂಎಸ್ ಸಂಪೂರ್ಣವಾಗಿ ಆರ್ಥಿಕತೆ ಆಧಾರದ ಮೇಲೆ ನೀಡುವುದಾಗಿದೆ, ಸುಪ್ರೀಂಕೋರ್ಟ್ ತೀರ್ಪಿನ ಆಧಾರದಲ್ಲಿ ಅದಕ್ಕೆ ಬೇರೆಯವರು ಸೇರ್ಪಡೆಯಾಗಲು ಸಾಧ್ಯವಿಲ್ಲ. ಬಿಜೆಪಿ ಸರಕಾರ ಜನರನ್ನು ದಿಕ್ಕು ತಪ್ಪಿಸುವ ಯತ್ನ ಮಾತ್ರ ಮಾಡಿದೆ ಎಂದು ಕಿಡಿಕಾರಿದರು.

 ‘ಸಿ.ಟಿ.ರವಿಗೆ ಸೋಲಿನ ಭೀತಿ ಎದುರಾಗಿದೆ. ಹೀಗಾಗಿ ಮತಿಭ್ರಮಣೆಯಾಗಿ ಮಾನಸಿಕ ಸ್ಥಿಮಿತ ಕಳೆದುಕೊಂಡಿದ್ದಾರೆ. ಅವರನ್ನು ನಿಮ್ಹಾನ್ಸ್ ಅಥವಾ ಬೇರೆ ಮಾನಸಿಕ ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ಕೊಡಿಸಬೇಕಿದೆ. ಕುಕ್ಕರ್ ಬಾಂಬ್ ಸ್ಫೋಟ ಪ್ರಕರಣದ ಹೇಳಿಕೆ ಸಂಬಂಧ ‘ಸಿಎಂ, ಆರೋಗ್ಯ ಸಚಿವರು ಹಾಗೂ ಬಿಜೆಪಿ ನಾಯಕರು ಕೂಡಲೇ ರವಿ ಅವರನ್ನು ಆಸ್ಪತ್ರೆಗೆ ಸೇರಿಸಲಿ ಎಂದು ಸಲಹೆ ನೀಡುತ್ತೇನೆ. ಅವರ ವಿರುದ್ಧ ಮಾನನಷ್ಟ ಮೊಕದ್ದಮೆ ಪ್ರಕರಣ ಹೂಡುವ ಬಗ್ಗೆ ಪರಿಶೀಲನೆ ನಡೆಸುತ್ತೇನೆ. ಈ ಹಿಂದೆ ಬಿಜೆಪಿಯ ಮತ್ತೊಬ್ಬ ಮೆಂಟಲ್ ಗಿರಾಕಿ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಿದ್ದೆ. ಆದರ ವಿಚಾರಣೆ ನಡೆಯುತ್ತಿದೆ. ಆದರೆ, ಬೇರೆ ಪ್ರಕರಣಗಳಲ್ಲಿ ಆತುರವಾಗಿ ಶಿಕ್ಷೆ ಪ್ರಕಟವಾಗುತ್ತದೆ. ಹೀಗಾಗಿ ಎಲ್ಲ ದಾಖಲೆಗಳನ್ನು ಪರಿಶೀಲಿಸಿ ಮುಂದಿನ ತೀರ್ಮಾನ ಕೈಗೊಳ್ಳುತ್ತೇನೆ’
-ಡಿ.ಕೆ.ಶಿವಕುಮಾರ್, ಕೆಪಿಸಿಸಿ ಅಧ್ಯಕ್ಷ

Similar News