ವಾರ್ತಾಭಾರತಿಯನ್ನು ಖರೀದಿಸಿ ಸರಿಮಾಡುತ್ತೇನೆ ಎಂದ ಸಂಸದ ಪ್ರತಾಪ ಸಿಂಹ: ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ

Update: 2023-03-26 17:15 GMT

ಮೈಸೂರು: ‘ವಾರ್ತಾಭಾರತಿಯನ್ನು ಖರೀದಿಸಿ ಸರಿಪಡಿಸುತ್ತೇನೆ’’ ಎಂಬ ಸಂಸದ ಪ್ರತಾಪ ಸಿಂಹ ಹೇಳಿಕೆ ತೀವ್ರ ಟೀಕೆಗೆ ಕಾರಣವಾಗಿದೆ.

ನಗರದ ಬಿಜೆಪಿ ಕಚೇರಿಯಲ್ಲಿ ರವಿವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡುವ ವೇಳೆ ಚಾಮುಂಡೇಶ್ವರಿ ಕ್ಷೇತ್ರದಿಂದ ನಿಮ್ಮನ್ನು ಅಭ್ಯರ್ಥಿಯಾಗಿಸಬೇಕು ಎನ್ನುವ ಚರ್ಚೆ ನಡೆಯುತ್ತಿದೆಯಲ್ಲ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ‘‘ವಾರ್ತಾಭಾರತಿ ಪೂರ್ವಾಗ್ರಹ ಪೀಡಿತವಾಗಿ ಬರೆಯುತ್ತಿರುತ್ತದೆ. ನಾನು ರಾಜಕಾರಣಕ್ಕೆ ಬಂದಿದ್ದರೂ ಪತ್ರಿಕೋದ್ಯಮದ ವ್ಯಾಮೋಹ ಹೋಗಿಲ್ಲ. ಹಾಗಾಗಿ ಮುಂದೊಂದು ದಿನ ವಾರ್ತಾಭಾರತಿಯನ್ನು ಖರೀದಿಸಿ ಸರಿಪಡಿಸುತ್ತೇನೆ’’ ಎಂದು ಹೇಳಿದರು.

ಪ್ರತಾಪ ಸಿಂಹ ಅವರ ಹೇಳಿಕೆಗೆ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ಪ್ರತಿಕ್ರಿಯೆಗಳು ವ್ಯಕ್ತವಾಗಿವೆ. ಹಲವರು ಅವರ ಹೇಳಿಕೆಯನ್ನು ಖಂಡಿಸಿದ್ದರೆ, ಇನ್ನು ಹಲವರು  ‘‘ವಾರ್ತಾಭಾರತಿ ಓದುಗರ ಶಕ್ತಿಯಿಂದ ಮುನ್ನಡೆಯುತ್ತಿರುವ ಪತ್ರಿಕೆ. ಓದುಗ ಶಕ್ತಿಯನ್ನು ನಿಮ್ಮಿಂದ ಖರೀದಿಸಲು ಸಾಧ್ಯವಿಲ್ಲ’’ ಎಂದು ಪ್ರತಿಕ್ರಿಯಿಸಿದ್ದಾರೆ.

"ಬಿಜೆಪಿ ಮಾಧ್ಯಮಗಳನ್ನ ಖರೀದಿಸಿ ,ತಮ್ಮ ಅಣತಿಯಂತೆ ಇಟ್ಟುಕೊಂಡಿರುವುದು ಸಂಸದ ಒಪ್ಪಿಕೊಂಡಿದ್ದಾರೆ" ಎಂದು ಒಬ್ಬರು ಪ್ರತಿಕ್ರಿಯಿಸಿದ್ದರೆ, ಮತ್ತೊಬ್ಬರು "ಸರಿ ಮಾಡ್ತೀನಿ ಅಂದರೆ ಬಾಲ ನರೇಂದ್ರನ‌ ಸಾಹಸಗಥೆಗಳನ್ನು ಪ್ರಕಟಿಸುವುದಾ" ಎಂದು ವ್ಯಂಗ್ಯವಾಡಿದ್ದಾರೆ. ‘‘ಸಂಸದರ ಹತಾಶೆಯನ್ನು ಇದು ವ್ಯಕ್ತಪಡಿಸುತ್ತದೆ’’ ಎಂದು ಕೆಲವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.  

‘ಸಂಸದರಿಗೆ ಇದು ಶೋಭೆಯಲ್ಲ’’ ಎಂದು ಇನ್ನೋರ್ವ ಓದುಗ ತಮ್ಮ ಆಕ್ಷೇಪ ವ್ಯಕ್ತಪಡಿಸಿದ್ದಾರೆ.  

Full View

Similar News