ದಲಿತರ ಮೀಸಲಾತಿ ಶೇ.21ಕ್ಕೆ ಹೆಚ್ಚಳ ಮಾಡ್ತೀವಿ: ಶಾಸಕ ಯತ್ನಾಳ್

Update: 2023-03-26 18:33 GMT

ವಿಜಯಪುರ: ‘ಬಿಜೆಪಿಯಲ್ಲಿ ಯಾರು ಗೂಂಡಾ ನಾಯಕರಿಲ್ಲ, ಅದು ನಮ್ಮ ಸಂಸ್ಕೃತಿಯೂ ಅಲ್ಲ. ಮೀಸಲಾತಿ ವಿಚಾರದಲ್ಲಿ ಕಾಂಗ್ರೆಸ್ ಪಕ್ಷದ ನಾಯಕರು ಗೊಂದಲ ಸೃಷ್ಟಿ ಮಾಡುತ್ತಿದ್ದಾರೆ’ ಎಂದು ವಿಜಯಪುರ ನಗರ ಕ್ಷೇತ್ರದ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ರವಿವಾರ ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ‘ಹಿಂದುಳಿದ ವರ್ಗಗಳ ಪ್ರವರ್ಗ 2 ‘ಎ’ಅಡಿಯಲ್ಲಿ ಒಟ್ಟು102 ಜಾತಿಗಳಿವೆ. ಹೀಗಾಗಿ 3 ‘ಬಿ’ಯಲ್ಲಿದ್ದ ಮರಾಠ, ಜೈನ, ಲಿಂಗಾಯತ ಸೇರಿ ಹಲವು ಜಾತಿಗಳನ್ನು 2 ‘ಡಿ’ಗೆ ಸೇರ್ಪಡೆ ಮಾಡಲಾಗಿದೆ. ಎಲ್ಲ ಸಮುದಾಯಗಳಿಗೂ ಮೀಸಲಾತಿ ದೊರೆಯಲಿ ಎನ್ನುವ ಉದ್ದೇಶದಿಂದ ಮೀಸಲಾತಿ ಕಲ್ಪಿಸಲಾಗಿದೆ ಎಂದರು.

‘ಪ್ರಧಾನಿ ನರೇಂದ್ರ ಮೋದಿ ಮೀಸಲಾತಿ ಬಗ್ಗೆ ಆಸಕ್ತಿ ವಹಿಸಿ ಮುಖ್ಯಮಂತ್ರಿಗೆ ಸೂಚನೆ ನೀಡಿದ ಮೇಲೆ ಮೀಸಲಾತಿ ಪ್ರಕಟಗೊಂಡಿದೆ. ಸಾಮಾಜಿಕ ನ್ಯಾಯ ತತ್ವದಡಿ ಮೀಸಲಾತಿ ಕಲ್ಪಿಸಲಾಗಿದೆ. ಹೀಗಾಗಿ ಕಾಂಗ್ರೆಸ್ ಮುಖಂಡರು ಸೋಲಿನ ಭೀತಿಯಿಂದ ಹತಾಶೆಯಲ್ಲಿದ್ದಾರೆ. ಆದುದರಿಂದಲೇ ಸ್ವಾಮಿಜಿಗಳಿಗೆ ಬೆದರಿಕೆ ಹಾಕಲಾಗಿದೆ ಎಂದು ಸುಳ್ಳು ಹೇಳಲಾಗುತ್ತಿದೆ ಎಂದು ಟೀಕಿಸಿದರು.

ಮುಸ್ಲಿಮರು ಮೂರು ಕಡೆಗಳಲ್ಲಿ ಲಾಭ ಪಡೆಯುತ್ತಿದ್ದಾರೆ. ಒಂದೇ ಕಡೆಗೆ ಲಾಭ ಸಿಗಬೇಕು, ಮೀಸಲಾತಿ ಇವರೊಬ್ಬರಿಗಾಗಿಯೇ? ಎಂದು  ಪ್ರಶ್ನಿಸಿದ ಯತ್ನಾಳ್, ದಲಿತರಿಗೆ ಇನ್ನೂ ಶೇ.2ರಷ್ಟು ಮೀಸಲಾತಿ ಹೆಚ್ಚು ಮಾಡುತ್ತೀವಿ. ಇದೀಗ ಶೇ.17ರಷ್ಟಿರುವುದನ್ನು ಮುಂದಿನ ದಿನಗಳಲ್ಲಿ ಶೇ.21ಕ್ಕೆ ಹೆಚ್ಚಳ ಮಾಡುತ್ತೇವೆ ಎಂದು ಪ್ರಕಟಿಸಿದರು.

Similar News