‘ರಾಹುಲ್ ಅನರ್ಹತೆ’ ಖಂಡಿಸಿ ಕಪ್ಪುಪಟ್ಟಿ ಧರಿಸಿ ಕಾಂಗ್ರೆಸ್ ಪ್ರತಿಭಟನೆ

Update: 2023-03-26 18:35 GMT

ಬೆಂಗಳೂರು: ಲೋಕಸಭೆ ಸದಸ್ಯತ್ವದಿಂದ ರಾಹುಲ್ ಗಾಂಧಿ ಅನರ್ಹಗೊಳಿಸಿರುವುದನ್ನು ಖಂಡಿಸಿ ನಗರದ ಫ್ರೀಡಂ ಪಾರ್ಕಿನಲ್ಲಿ ಕಾಂಗ್ರೆಸ್ ನಾಯಕರು ಕಪ್ಪು ಪಟ್ಟಿ ಧರಿಸಿ 'ಪ್ರಜಾಪ್ರಭುತ್ವ ವಿರೋಧಿ ಸರಕಾರ'ವೆಂದು ಘೋಷಣೆ ಕೂಗಿ ರವಿವಾರ ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು.

ಈ ವೇಳೆ ವಿಪಕ್ಷ ನಾಯಕ ಸಿದ್ದರಾಮಯ್ಯ ಮಾತನಾಡಿ, ‘ಕೇಂದ್ರದಲ್ಲಿರುವ ಮೋದಿ ಸರಕಾರ ಈ ದೇಶದ ಪ್ರಜಾಪ್ರಭುತ್ವಕ್ಕೆ ಆಘಾತ ನೀಡಿದೆ. ರಾಜಕೀಯ ದ್ವೇಷದಿಂದ ತರಾತುರಿಯಲ್ಲಿ ರಾಹುಲ್ ಗಾಂಧಿಯವರ ಸದಸ್ಯತ್ವ ಅನರ್ಹ ಮಾಡಲಾಗಿದೆ ಎಂದು ವಾಗ್ದಾಳಿ ನಡೆಸಿದರು.

‘ಇದು ಹಿಟ್ಲರ್ ಹಾಗೂ ಮುಸಲೋನಿ ಆಡಳಿತವಿರುವ ದೇಶವಲ್ಲ. ಪ್ರಧಾನಿ ಮೋದಿಯವರು ಪದೇ ಪದೇ ದೇಶ ಭಕ್ತಿ ಎನ್ನುತ್ತಾರೆ. ಅವರೇನು ದೇಶ ಭಕ್ತಿಯನ್ನು ಗುತ್ತಿಗೆ ತೆಗೆದುಕೊಂಡಿದ್ದಾರಾ, ಹಿಟ್ಲರ್, ಮುಸಲೋನಿಯ ಸಂತತಿಯವರಲ್ಲಿ ಯಾವ ದೇಶ ಭಕ್ತಿ ಇದೆ ಎಂದು ಸಿದ್ದರಾಮಯ್ಯ ಟೀಕಿಸಿದರು.

ಪ್ರಜಾಪ್ರಭುತ್ವ ಯಶಸ್ವಿಯಾಗಬೇಕಾದರೆ ಪ್ರಬಲವಾದ ವಿರೋಧ ಪಕ್ಷ ಇರಬೇಕು ಎಂದು ಜವಾಹರ್ ಲಾಲ್ ನೆಹರು ಹೇಳುತ್ತಿದ್ದರು. ಆದರೆ, ಇಂದು ಪ್ರಜಾಪ್ರಭುತ್ವವನ್ನು ದಮನ ಮಾಡುವ ಸಂಸ್ಕøತಿ ಎದುರಾಗುತ್ತಿದೆ. ಬಹಳ ಜನ ಮೋದಿಗಳು ಬ್ಯಾಂಕ್‍ನಲ್ಲಿ ಇರುವ ಜನರ ಹಣ ಲೂಟಿ ಮಾಡಿ ಲಂಡನ್‍ನಂತಹ ವಿದೇಶಕ್ಕೆ ಹೋಗಿದ್ದಾರೆ. ಇವರೆಲ್ಲ ಕಳ್ಳರು ಅನ್ನದೆ ಸಮಾಜ ಸುಧಾರಕರು, ಸಾಧು ಸಂತರು ಎಂದು ಕರೆಯಬೇಕಾ ಎಂದು ಪ್ರಶ್ನಿಸಿದರು.

ಸಂಸತ್ ಸೇರಿದಂತೆ ದೇಶ ವಿದೇಶಗಳಲ್ಲಿ ಅದಾನಿ-ಅಂಬಾನಿ ಹಾಗೂ ಮೋದಿಯ ಸಂಬಂಧದ ಕುರಿತು ಮಾತನಾಡಲು ಆರಂಭಿಸಿದ್ದು ಮೋದಿಗೆ ಭಯ ಹುಟ್ಟಿಸಿತು ಅದಕ್ಕೆ ಸದಸ್ಯತ್ವ ರದ್ದು ಮಾಡಿದ್ದಾರೆ. ವಿರೋಧ ಪಕ್ಷಗಳಜ ರಾಜಕೀಯದಲ್ಲಿ ಭಾಷಣ ಸಂದರ್ಭದಲ್ಲಿ ಆಡಳಿತ ವ್ಯವಸ್ಥೆ ತಪ್ಪುಗಳನ್ನು ಟೀಕಿಸುವುದು ಸಹಜ ಎಂದು ಅವರು ತಿಳಿಸಿದರು.
ಪ್ರತಿಭಟನೆಯಲ್ಲಿ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೆವಾಲಾ, ಮಾಜಿ ಸಚಿವ ದಿನೇಶ್ ಗುಂಡೂರಾವ್, ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹ್ಮದ್, ಶಾಸಕ ಝಮೀರ್ ಅಹಮ್ಮದ್ ಖಾನ್, ಪರಿಷತ್ ವಿಪಕ್ಷ ನಾಯಕ ಬಿ.ಕೆ ಹರಿಪ್ರಸಾದ್ ಸೇರಿದಂತೆ ಹಲವರು ಮುಖಂಡರು ಭಾಗವಹಿಸಿದ್ದರು.

Similar News