ಓ ಮೆಣಸೇ...

Update: 2023-03-26 18:48 GMT

ರಾಜ್ಯದಲ್ಲಿ ಮತ್ತೊಮ್ಮೆ ಬಿಜೆಪಿ ಅಧಿಕಾರಕ್ಕೆ ಬಂದರೆ ಉರಿಗೌಡ- ನಂಜೇಗೌಡರ ಪ್ರತಿಮೆ ನಿರ್ಮಾಣ ಮಾಡುತ್ತೇವೆ- ಶೋಭಾ ಕರಂದ್ಲಾಜೆ, ಸಚಿವೆ
ಗೋಡ್ಸೆ, ಸಾವರ್ಕರ್ ಮೂರ್ತಿಗಳ ಜೊತೆ ನಿಲ್ಲಿಸುವುದಕ್ಕಾಗಿಯೇ?

ಆಡಳಿತ ನೇಮಕಾತಿಯಲ್ಲಿ ನ್ಯಾಯಮೂರ್ತಿಗಳು ಪಾಲ್ಗೊಳ್ಳಲು ಶುರು ಮಾಡಿದರೆ ನ್ಯಾಯ ನೀಡುವ ಕೆಲಸ ಯಾರು ಮಾಡುತ್ತಾರೆ- ಕಿರಣ್ ರಿಜುಜು, ಕೇಂದ್ರ ಸಚಿವ
ಅದನ್ನು ಮಾಡುವುದಕ್ಕೆ ಫುಡಾರಿಗಳಿದ್ದಾರಲ್ಲಾ!

ಮಾನವ-ವನ್ಯಜೀವಿ ಸಂಘರ್ಷ ತಡೆಗೆ ಸೂಕ್ತ ಯೋಜನೆ ರೂಪಿಸಲಾಗಿದೆ- ಬಸವರಾಜ ಬೊಮ್ಮಾಯಿ, ಸಿಎಂ
ಮಾನವರಿಗೆ ಪೌರರ ಸ್ಥಾನ ಮತ್ತು ವನ್ಯಜೀವಿಗಳಿಗೆ ಆಡಳಿತಗಾರರ ಸ್ಥಾನ ಎಂಬ ನಿಮ್ಮ ನೆಚ್ಚಿನ ಸೂತ್ರವನ್ನು ಜನ ಒಪ್ಪುವರೇ?

ಮುಂದಿನ ಲೋಕಸಭೆ ಚುನಾವಣೆಯಲ್ಲಿ ಎಡಿಎಂಕೆ ಜೊತೆ ಮೈತ್ರಿ ಮಾಡಿಕೊಂಡರೆ ಬಿಜೆಪಿ ತ್ಯಜಿಸುವೆ- ಕೆ.ಅಣ್ಣಾಮಲೈ, ತ.ನಾಡು ಬಿಜೆಪಿ ಅಧ್ಯಕ್ಷ
ತ್ಯಜಿಸಿ ಎಡಿಎಂಕೆ ಜೊತೆ ಸೇರುವುದಕ್ಕೆ ತಯಾರಿ ನಡೆದೆದಿದೆ ಅಂತಾರಲ್ಲಾ?

ಮೇಕ್ ಇನ್ ಇಂಡಿಯಾ ಪರಿಕಲ್ಪನೆ ಭಾರತೀಯರ ಮನೋಭಾವವನ್ನು ಬದಲಿಸಿದೆ- ಜೈಶಂಕರ್, ಕೇಂದ್ರ ಸಚಿವ
ಹೌದು. ಅವರೀಗ ಅದನ್ನು ಜೋಕ್ ಎಂದೇ ಪರಿಗಣಿಸುತ್ತಿದ್ದಾರೆ.

ಪ್ರಧಾನಿ ಮೋದಿ ಕೈಗೊಂಡ ಯಾವುದೇ ನಿರ್ಣಯಗಳು ಅನುಮಾನ ಮೂಡಿಸಲು ಸಾಧ್ಯವೇ ಇಲ್ಲ- ಭಗವಂತ ಖೂಬಾ, ಕೇಂದ್ರ ಸಚಿವ
ಅವರು, ನಿಸ್ಸಂದೇಹವಾಗಿಯೂ ವಿನಾಶಕಾರಿಯಾದ ನಿರ್ಣಯಗಳನ್ನು ಮಾತ್ರ ಕೈಗೊಂಡಿದ್ದಾರೆ ಎಂದು ನಿಮಗೆ ಅಷ್ಟು ಪಕ್ಕಾ ನಂಬಿಕೆಯೇ?

ಮುಂದಿನ ಚುನಾವಣೆಯಲ್ಲಿ ಬಿಜೆಪಿಯೇತರ ಸಮಾನ ಮನಸ್ಕರು ಒಂದಾದರೆ ಮಾತ್ರ ರಾಷ್ಟ್ರಕ್ಕೆ ಉಳಿಗಾಲ- ಮಣಿಶಂಕರ್ ಅಯ್ಯರ್, ಕಾಂಗ್ರೆಸ್ ಮುಖಂಡ
ಕಾಂಗ್ರೆಸ್‌ಗೂ ಬೇರೆ ಉಳಿಗಾಲ ಎಲ್ಲಿದೆ?

ಬ್ರಾಹ್ಮಣರು ಅವಕಾಶಗಳ ಸದ್ಬಳಕೆಗೆ ಸಜ್ಜಾಗಬೇಕು- ಪ್ರಹ್ಲಾದ್ ಜೋಶಿ, ಕೇಂದ್ರ ಸಚಿವ
ಬ್ರಾಹ್ಮಣ್ಯದ ನೇರ ಬಲಿಪಶುಗಳು ಬ್ರಾಹ್ಮಣ ಸರಕಾರ ಸ್ಥಾಪಿಸಿದ್ದಾರೆಂದ ಮೇಲೆ, ಇದಕ್ಕಿಂತ ದೊಡ್ಡ ಸದವಕಾಶ ಬೇರೇನಿದೆ?

ಪ್ರಜಾಪ್ರಭುತ್ವದಲ್ಲಿ ನಂಬಿಕೆ ಇಲ್ಲದವರಿಗೆ ಪ್ರಜಾಪ್ರಭುತ್ವದಲ್ಲಿ ಸ್ಥಾನವಿಲ್ಲ- ಜೆ.ಪಿ.ನಡ್ಡಾ, ಬಿಜೆಪಿ ಅಧ್ಯಕ್ಷ
ನೀವು ಸರ್ವಾಧಿಕಾರಿ ಸರಕಾರ ಸ್ಥಾಪಿಸಲು ಹೆಣಗುತ್ತಿರುವುದಕ್ಕೆ ಇದು ಕಾರಣವೇ?

ರಾಹುಲ್ ಗಾಂಧಿ ಪ್ರಧಾನಿ ಮೋದಿಗೆ ಸಮ ಆಗಲು ಸಾಧ್ಯವೇ ಇಲ್ಲ- ಯಡಿಯೂರಪ್ಪ, ಮಾಜಿ ಸಿಎಂ
ವಿದ್ಯಾವಂತ ವ್ಯಕ್ತಿಯೊಬ್ಬ ಅಜ್ಞಾನಿಯೊಬ್ಬನಿಗೆ ಸಾಟಿಯಾಗಲು ಹೇಗೆ ತಾನೇ ಸಾಧ್ಯ?

ಮಾಜಿ ಸಿಎಂ ಸಿದ್ದರಾಮಯ್ಯರಿಗೆ ಇಲ್ಲಿ ಯಾವುದೇ ಕ್ಷೇತ್ರ ಸುರಕ್ಷಿತವಲ್ಲ. ಅವರು ಪಾಕಿಸ್ತಾನ, ಅಫ್ಘಾನಿಸ್ತಾನ ಅಥವಾ ಬಾಂಗ್ಲಾದಲ್ಲಿ ಚುನಾವಣೆಗೆ ನಿಲ್ಲಲಿ- ಆರ್.ಅಶೋಕ್, ಸಚಿವ
ಹಿಂದೆ ಕೇವಲ ಪಾಕಿಸ್ತಾನವನ್ನು ಪ್ರನಿಧಿಸುತ್ತಿದ್ದ ನೀವು ಇದೀಗ ಮೂರು ದೇಶಗಳ ಪ್ರತಿನಿಧಿಯಾಗಿ ಬಿಟ್ಟಿದ್ದೀರಾ?

ಯಾರು ನಂಜುಕಾರುವರೋ ಅವರು ನಂಜೇಗೌಡ, ಉರಿಯುವವರು ಉರಿಗೌಡ- ಆಯನೂರು ಮಂಜುನಾಥ್, ವಿ.ಪ. ಸದಸ್ಯ ನಂಜುಕಾರುವವರು ನಂಜೇ ಭಟ್ಟ ಮತ್ತು ಉರಿಯುವವರು ಉರಿಭಟ್ಟ ಎಂದು ಕರೆಸಿಕೊಳ್ಳುವ ಸಾಧ್ಯತೆ ಎಂದಾದರೂ, ಎಲ್ಲಾದರೂ ಉಂಟೇ ?

ಕಸಾಪ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಸದಸ್ಯರು ಏರು ಧ್ವನಿಯಲ್ಲಿ ಮಾತನಾಡಿದರೆ ಕ್ರಮ ಕೈಗೊಳ್ಳಲಾಗುವುದು- ಮಹೇಶ್ ಜೋಶಿ, ಕಸಾಪ ಅಧ್ಯಕ್ಷ
ಏರು ಧ್ವನಿ ಎಂಬ ನಿರ್ಬಂಧವೇಕೆ? ಮಾತನಾಡಿದರೆ ಜೈಲಿಗೆ ಕಳಿಸುತ್ತೇವೆ ಎಂದು ಬಿಡಿ - ಜನರಿಗೆ ಈಗ ಅದೆಲ್ಲಾ ಅಭ್ಯಾಸವಾಗಿ ಬಿಟ್ಟಿದೆ.

ಅಲೋಪತಿಯಿಂದ ಕ್ಯಾನ್ಸರ್, ರಕ್ತದೊತ್ತಡ, ಸಕ್ಕರೆ ಕಾಯಿಲೆ ಗುಣಪಡಿಸಲು ಸಾಧ್ಯವಿಲ್ಲ. ಆಯುರ್ವೇದದಿಂದ ಸಾಧ್ಯವಿದೆ- ಬಾಬಾ ರಾಮ್ದೇವ್, ಯೋಗಗುರು
ನೀವು ಹೇಳುವಷ್ಟು ದೊಡ್ಡ ಮಟ್ಟದ ಸುಳ್ಳುಗಳನ್ನು ಹೇಳುವುದಕ್ಕಂತೂ ಅಲೋಪಥಿಯಲ್ಲಿ ಮಾತ್ರವಲ್ಲ ವೈಜ್ಞಾನಿಕವಾದ ಯಾವ ರಂಗದಲ್ಲೂ ಖಂಡಿತ ಅವಕಾಶವಿಲ್ಲ

ತಾಯಿಯ ಪಾಕೆಟ್ ಮನಿಯಿಂದ ರಾಹುಲ್ ಗಾಂಧಿ ಜೀವನ ಮಾಡುತ್ತಿದ್ದಾರೆ - ತೇಜಸ್ವಿ ಸೂರ್ಯ, ಸಂಸದ
ಅವರು ಕಾಂಟ್ರಾಕ್ಟರ್‌ಗಳಿಂದ ದೋಚಿದ ನಲ್ವತ್ತು ಶೇಕಡಾ ವನ್ನು ಅವಲಂಬಿಸಿಲ್ಲ ಎಂಬುದನ್ನು ನೀವೇ ಒಪ್ಪೊತ್ತಿರುವುದು ಒಳ್ಳೆಯ ಸಂಗತಿ.

ಕಸ್ತೂರಿ ರಂಗನ್ ವರದಿ ಜಾರಿಗೊಂಡರೆ ಮಲೆನಾಡಿನಲ್ಲಿ ರಕ್ತಪಾತವಾಗಲಿದೆ- ಆರಗ ಜ್ಞಾನೇಂದ್ರ, ಸಚಿವ
ರಕ್ತಪಾತ ಖಚಿತವಾಗಿದ್ದರೆ ನಿಮ್ಮ ಸರಕಾರ ಎಂದೋ ಅದನ್ನು ಜಾರಿಗೊಳಿಸಲು ಹೊರಟಿರುತ್ತಿತ್ತು.

ಹಾಸನದ ಟಿಕೆಟ್ ವಿಚಾರದಲ್ಲಿ ದೇವೇಗೌಡರ ತೀರ್ಮಾನವೇ ಅಂತಿಮ- ಎಚ್.ಡಿ.ರೇವಣ್ಣ, ಮಾಜಿ ಸಚಿವ
ಒಬ್ಬ ಮಾಜಿ ಪ್ರಧಾನಿಯನ್ನು ನೀವು ಈ ಮಟ್ಟಕ್ಕೆ ಇಳಿಸಬಾರದಿತ್ತು.

ಇನ್ನು ಒಂದೇ ವರ್ಷದಲ್ಲಿ ಅಯೋಧ್ಯೆ ವಿಶ್ವದ ಅತ್ಯಂತ ಸುಂದರ ನಗರವಾಗಿ ಮೂಡಿ ಬರಲಿದೆ- ಯೋಗಿ ಆದಿತ್ಯನಾಥ, ಉ.ಪ್ರ. ಸಿಎಂ
ಯಾವ ದೇಶದಲ್ಲಿ ನಿರ್ಮಿಸುತ್ತೀರಿ?

ಪ್ರಧಾನಿ ಮೋದಿ ಒಬ್ಬ ನಕಲಿ ವೈದ್ಯರಿದ್ದಂತೆ- ರಣದೀಪ್ ಸಿಂಗ್ ಸುರ್ಜೆವಾಲಾ, ಕಾಂಗ್ರೆಸ್ ಪ್ರ. ಕಾರ್ಯದರ್ಶಿ
ನಕಲಿ ವೈದ್ಯರಾಗಿ ವೈದ್ಯಕೀಯ ಕ್ಷೇತ್ರದಲ್ಲಿ ಮಾತ್ರ ವ್ಯವಹರಿಸಿದ್ದರೆ, ವಿನಾಶ ಕೂಡಾ ಅದೇ ಕ್ಷೇತ್ರಕ್ಕೆ ಮೀಸಲಾಗಿರುತ್ತಿತ್ತು.

ನಾನು ಕಾಂಗ್ರೆಸ್ ಸೇರುವ ವಿಚಾರ ಈಗ ಮುಗಿದ ಅಧ್ಯಾಯ- ವಿ.ಸೋಮಣ್ಣ, ಸಚಿವ
ಕಾಂಗ್ರೆಸ್ ಕೂದಲೆಳೆಯ ಅಂತರದಿಂದ ಪಾರು.

ನನಗೆ ಉರಿಗೌಡ, ನಂಜೇಗೌಡ ಯಾರೆಂದು ಗೊತ್ತಿಲ್ಲ, ಮಾಜಿ ಪ್ರಧಾನಿ ದೇವೇಗೌಡ ಗೊತ್ತು- ಡಾ.ಸುಧಾಕರ್, ಸಚಿವ
ಉರಿ ಮತ್ತು ನಂಜುಗಳಿಗೆ ನಿರ್ದಿಷ್ಟ ಜಾತಿ ಇಲ್ಲ.

ಕರ್ನಾಟಕ ವಿಧಾನಸಭೆ ಚುನಾವಣೆ ಈ ಬಾರಿ ದೇಶಕ್ಕೆ ದೊಡ್ಡ ಸಂದೇಶ ನೀಡಲಿದೆ-ಮಲ್ಲಿಕಾರ್ಜುನ ಖರ್ಗೆ, ಕಾಂಗ್ರೆಸ್ ಅಧ್ಯಕ್ಷ
ಕಾಂಗ್ರೆಸ್‌ಗೂ ಸಂದೇಶ ನೀಡುವ ಅಪಾಯ ಇದೆ.

ಪ್ರಧಾನಿ, ಬಿಜೆಪಿ, ಆರೆಸ್ಸೆಸ್ ಮತ್ತು ಪೊಲೀಸರಿಗೆ ನಾನು ಹೆದರುವುದಿಲ್ಲ- ರಾಹುಲ್ ಗಾಂಧಿ, ಕಾಂಗ್ರೆಸ್ ಮುಖಂಡ
ಕನಿಷ್ಠ ಕಾಂಗ್ರೆಸ್‌ನೊಳಗೆ ಇರುವ ಕೆಲವು ಆರೆಸ್ಸೆಸ್ ಮಂದಿಗಾದರೂ ಹೆದರಿ.

ಭಾವನಾತ್ಮಕ ವಿಚಾರ ಪ್ರಸ್ತಾವ ಮಾಡಿ ಬಿಜೆಪಿ ಪದೇ ಪದೇ ಜನರನ್ನು ದಾರಿ ತಪ್ಪಿಸುತ್ತಿದೆ- ಸಿದ್ದರಾಮಯ್ಯ, ಮಾಜಿ ಸಿಎಂ
ಬರಿಯ ಜನರನ್ನು ಮಾತ್ರ ಅಲ್ಲ, ಕೆಲವೊಮ್ಮೆ ಕಾಂಗ್ರೆಸ್ಸಿಗರನ್ನು ಕೂಡ.

ಮೂರನೇ ಬಾರಿ ಈ ರಾಜ್ಯದ ಸಿಎಂ ಆಗಬೇಕೆಂಬ ಅಧಿಕಾರದ ಆಸೆ ನನಗಿಲ್ಲ- ಕುಮಾರಸ್ವಾಮಿ, ಮಾಜಿ ಸಿಎಂ
ಮಗನನ್ನು ಮಾಡಬೇಕು ಎನ್ನುವ ಆಸೆ ಇರಬೇಕು.

2024ರ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ವಿರುದ್ಧ ಹೋರಾಡುವಲ್ಲಿ ಪ್ರಾದೇಶಿಕ ಪಕ್ಷಗಳೇ ಪ್ರಮುಖ ಪಾತ್ರ ವಹಿಸಲಿವೆ- ಅಖಿಲೇಶ್ ಯಾದವ್, ಎಸ್ಪಿ ಮುಖ್ಯಸ್ಥ
ಬಿಜೆಪಿಯಿಂದ ಖರೀದಿಯಾಗಿ ಇನ್ನೂ ಉಳಿದಿದ್ದರೆ ...

ಸಂವಿಧಾನವು ಸಂಸತ್ತಿನ ಮೂಲಕ ವಿಕಸನಗೊಳ್ಳಬೇಕೇ ಹೊರತು ಕಾರ್ಯಾಂಗದ ಮೂಲಕ ಅಲ್ಲ- ಜಗದೀಪ್ ಧನ್ಕರ್, ಉಪರಾಷ್ಟ್ರಪತಿ
ಸದ್ಯಕ್ಕೆ ಸಂಪತ್ತಿನ ಮೂಲಕ ಅದನ್ನು ಖರೀದಿಸುವ ಪ್ರಯತ್ನ ನಡೆಯುತ್ತಿದೆ

Similar News

ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ…
ಓ ಮೆಣಸೇ
ಓ ಮೆಣಸೇ...!
ಓ ಮೆಣಸೇ...
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...