ಶಿಕಾರಿಪುರ | ಒಳ ಮೀಸಲಾತಿ ಜಾರಿಗೆ ಬಂಜಾರ ಸಮುದಾಯದ ವಿರೋಧ: ಯಡಿಯೂರಪ್ಪರ ನಿವಾಸಕ್ಕೆ ಮುತ್ತಿಗೆ ಯತ್ನ, ಕಲ್ಲು ತೂರಾಟ

Update: 2023-03-27 09:57 GMT

ಶಿವಮೊಗ್ಗ, ಮಾ.27: ಪರಿಶಿಷ್ಟ ಸಮುದಾಯಗಳಲ್ಲಿ ಒಳ ಮೀಸಲಾತಿ ನೀಡಿಕೆಗೆ ಸಂಬಂಧಿಸಿದಂತೆ ನ್ಯಾಯಮೂರ್ತಿ ಸದಾಶಿವ ವರದಿಯನ್ನು ಕೇಂದ್ರಕ್ಕೆ ಶಿಫಾರಸು ಮಾಡುವ ಸರ್ಕಾರದ ನಿರ್ಧಾರ ವಿರೋಧಿಸಿ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪರ ನಿವಾಸಕ್ಕೆ ಬಂಜಾರ ಸಮಾಜದವರು ಮುತ್ತಿಗೆ ಹಾಕಲು ಯತ್ನಿಸಿ, ಮನೆಗೆ ಕಲ್ಲು ತೂರಾಟ ನಡೆಸಿದ್ದಾರೆ.

ಶಿಕಾರಿಪುರದ ಮಿನಿ ವಿಧಾನಸೌಧ, ಬಸ್ ನಿಲ್ದಾಣದ ಬಳಿ ಬಂಜಾರ ಸಮುದಾಯದ ಯುವಕರು ಪ್ರತಿಭಟನೆ ನಡೆಸಿದರು. ಸರಕಾರ, ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಘೋಷಣೆ ಕೂಗಿದರು. ಈ ವೇಳೆ ಪಟ್ಟಣದಲ್ಲಿ ಬಿಜೆಪಿ, ಪ್ರಧಾನಿ ಮೋದಿ, ಮುಖ್ಯಮಂತ್ರಿ ಬೊಮ್ಮಾಯಿ ಸೇರಿದಂತೆ ಬಿಜೆಪಿ ನಾಯಕರ ಬ್ಯಾನರ್, ಫ್ಲೆಕ್ಸ್‌ಗಳನ್ನು ಕಿತ್ತೊಗೆದಿದ್ದಾರೆ. ಟೈರ್‌, ಸೀರೆಗಳಿಗೆ ಬೆಂಕಿ ಹಚ್ಚಿ‌ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಪ್ರತಿಭಟನಾಕಾರರು ಅಂಬೇಡ್ಕರ್ ಸರ್ಕಲ್‌ನಿಂದ ತಾಲೂಕು ಕಚೇರಿಯವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿದರು.

ಶಿಕಾರಿಪುರದಲ್ಲಿ ಕೆಲವರು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಮನೆಗೆ ಮುತ್ತಿಗೆ ಹಾಕಲು ಯತ್ನಿಸಿದರು‌. ಈ ವೇಳೆ ಯಡಿಯೂರಪ್ಪ ಅವರ ಮನೆಯತ್ತ ಕಲ್ಲು ತೂರಾಟ ಮಾಡಲಾಗಿದೆ. ಕಲ್ಲು ತೂರಾಟದಿಂದ ಮನೆಯ ಕಿಟಕಿ ಗಾಜಿಗೆ ಹಾನಿಯಾಗಿದೆ. ಪೊಲೀಸರತ್ತಲೂ ಕಲ್ಲು ತೂರಾಟ ಮಾಡಲಾಗಿದೆ.

ಪ್ರತಿಭಟನಾಕಾರರನ್ನು ನಿಯಂತ್ರಿಸಲು ಪೊಲೀಸರು ಲಘು ಲಾಠಿ ಪ್ರಹಾರ ನಡೆಸಿದರು‌. ಘಟನೆಯಲ್ಲಿ ಪ್ರತಿಭಟನಾಕಾರರು ಮತ್ತು ಕೆಲವು ಪೊಲೀಸರು ಗಾಯಗೊಂಡಿದ್ದಾರೆ ಎಂದು ತಿಳಿದು ಬಂದಿದೆ.

ಸದ್ಯ ಶಿಕಾರಿಪುರದಲ್ಲಿ ಪರಿಸ್ಥಿತಿ ನಿಯಂತ್ರಣಕ್ಕೆ ಬಂದಿದೆ ಎಂದು ತಿಳಿದುಬಂದಿದೆ.

Similar News