2B ಮೀಸಲಾತಿ ರದ್ದುಪಡಿಸಿದ ರಾಜ್ಯ ಸರಕಾರ: ಮುಸ್ಲಿಮ್ ಮುಖಂಡರಿಂದ ಖಂಡನೆ

Update: 2023-03-27 09:31 GMT

ಹುಬ್ಬಳ್ಳಿ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದ ರಾಜ್ಯ ಸರ್ಕಾರ, ಏಕಾಏಕಿ ಮುಸ್ಲಿಂ ಸಮುದಾಯದ ಶೇ.4 ರ ಮೀಸಲಾತಿ ಕಿತ್ತುಕೊಂಡಿರುವುದು ಖಂಡನೀಯ ಎಂದು ಮುಸ್ಲಿಂ ಮೀಸಲಾತಿ ಹೋರಾಟ ಸಮಿತಿ ಅಧ್ಯಕ್ಷ ಮುಸ್ತಫಾ ಕುನ್ನಿಭಾವಿ ಹೇಳಿದರು.

ನಗರದಲ್ಲಿ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಯಾವ ಆಧಾರದ ಮೇಲೆ ಮೀಸಲಾತಿ ಕಿತ್ತುಕೊಂಡಿದ್ದಾರೆ ಎಂಬುದನ್ನು ಸ್ಪಷ್ಟ ಪಡಿಸಬೇಕು ಎಂದು ಒತ್ತಾಯಿಸಿದರು. ಮೈಸೂರು ಮಹಾರಾಜರು ನೇಮಿಸಿದ ಲೆಸ್ಲಿ ಮಿಲ್ಲರ್ ಆಯೋಗದ ವರದಿಯಿಂದ ಹಿಡಿದು ಡಾ. ನಾಗನಗೌಡ ಸಮಿತಿ, ಹಾವನೂರ ಆಯೋಗ, ವೆಂಕಟಸ್ವಾಮಿ ಆಯೋಗ, ಚಿನ್ನಪ್ಪರೆಡ್ಡಿ ಆಯೋಗದ ವರದಿಗಳು ಮುಸ್ಲಿಂ ಸಮುದಾಯ ಆರ್ಥಿಕವಾಗಿ ಹಿಂದುಳಿದ ಸಮುದಾಯ ಎಂದು ವರದಿ ಕೊಟ್ಟಿವೆ. ಆದರೆ, ರಾಜ್ಯ ಸರ್ಕಾರ ನಮ್ಮ ಸಮುದಾಯದ ಮೀಸಲಾತಿ ಕಿತ್ತುಕೊಂಡಿರುವುದು ನಮಗೆ ನೋವು ಕೊಟ್ಟಿದೆ ಎಂದರು.

ಯಾವುದೋ ಒಂದು ಸಮುದಾಯದ ಮನವೊಲಿಕೆಗಾಗಿ ಮತ್ತೊಂದು ಸಮುದಾಯದ ಮೀಸಲಾತಿ ಕಿತ್ತುಕೊಳ್ಳುವುದು ಎಷ್ಟರ ಮಟ್ಟಿಗೆ ಸರಿ ಎಂದು ಪ್ರಶ್ನಿಸಿದ ಮುಸ್ತಫಾ, ನಾವು ಮೀಸಲಾತಿ ಕೊಂಡಿರುವುದನ್ನು ಖಂಡಿಸಿ ಶಾಂತಯುತವಾಗಿ ಪ್ರತಿಭಟನೆ ನಡೆಸುತ್ತೇವೆ. ಪಂಚಮಸಾಲಿ ಪೀಠದ ಜಯ ಮೃತ್ಯುಂಜಯ ಸ್ವಾಮೀಜಿ ಮತ್ತು ಹರಿಹರ ಪೀಠದ ವಚನಾನಂದ ಸ್ವಾಮೀಜಿಗಳು ಮುಸ್ಲಿಂ ಸಮುದಾಯದ ಮೀಸಲಾತಿಯನ್ನು ತಮ್ಮ ಸಮುದಾಯಕ್ಕೆ ನೀಡಿದ್ದು ಇದನ್ನು ತಾವು ತಿರಸ್ಕರಿಸಬೇಕು ಎಂದು ಆಗ್ರಹಿಸಿದರು.

'ಮುಂದಿನ ವಾರ ಉಭಯಶ್ರೀಗಳನ್ನು ಭೇಟಿ ಮಾಡಿ ಕೇಳಿಕೊಳ್ಳುತ್ತೇವೆ. ಮುಸ್ಲಿಂ ಸಮುದಾಯದ ಮಕ್ಕಳನ್ನು ಕರೆದುಕೊಂಡು ಹೋಗಿ ಶ್ರೀಗಳ ಮಡಿಲಿಗೆ ಹೋಗುತ್ತೇವೆ. ಪತ್ರ ಚಳವಳಿ ಮಾಡುತ್ತೇವೆ. ರಂಜಾನ್ ಮುಗಿದ ಬಳಿಕ ರಾಜ್ಯದ ಕೂಡಲಸಂಗಮ ಹಾಗೂ ನಿರ್ಮಲಾನಂದ ಸ್ವಾಮೀಜಿಗಳ ಮಠದಿಂದ ಮೀಸಲಾತಿಗಾಗಿ ರಥಯಾತ್ರೆ ಹಮ್ಮಿಕೊಳ್ಳುಲಿದ್ದೇವೆ. ಮುಖ್ಯಮಂತ್ರಿ ಬೊಮ್ಮಾಯಿಯವರೇ ನೀವು ವಿಷ ಕೊಟ್ಟರು, ಅದನ್ನುಅಮೃತ ಎಂದು ಸೇವಿಸುವ ಮುಗ್ದ ಸಮಾಜ ನಮ್ಮದು. ನಮ್ಮ ಮೀಸಲಾತಿ ತೆಗೆಯುವಾಗ ಯಾವುದಾದರೂ ಅಧ್ಯಯನ ನಡೆಸಿದ್ರಾ ಎಂಬುದನ್ನು ಸ್ಪಷ್ಟಪಡಿಸಬೇಕು' ಎಂದು ಹೇಳಿದರು. 

- ಮುಸ್ತಪಾ ಕುನ್ನಿಬಾವಿ, ಮುಸ್ಲಿಂ ಮೀಸಲಾತಿ ಹೋರಾಟ ಸಮಿತಿ ಅಧ್ಯಕ್ಷ

Similar News