ಬಿಜೆಪಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಬಂಧನ

Update: 2023-03-27 14:26 GMT

ಬೆಂಗಳೂರು, ಮಾ.27: ನಿರೀಕ್ಷಣಾ ಜಾಮೀನು ಅರ್ಜಿಯನ್ನು ಕರ್ನಾಟಕ ಹೈಕೋರ್ಟ್ ಏಕಸದಸ್ಯ ಪೀಠ ವಜಾಗೊಳಿಸಿದ ಬೆನ್ನಲ್ಲೇ ಲಂಚ ಪ್ರಕರಣದ ಪ್ರಮುಖ ಆರೋಪಿಯಾಗಿರುವ ಚನ್ನಗಿರಿ ಕ್ಷೇತ್ರದ ಬಿಜೆಪಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಅವರನ್ನು ತುಮಕೂರು ಬಳಿ ಲೋಕಾಯುಕ್ತ ಪೊಲೀಸರು ಸೋಮವಾರ ರಾತ್ರಿ ಬಂಧಿಸಿರುವುದು ವರದಿಯಾಗಿದೆ. 

ಪ್ರಕರಣ ಸಂಬಂಧ ನಿರೀಕ್ಷಣಾ ಜಾಮೀನು ಕೋರಿ ಮಾಡಾಳ್ ವಿರೂಪಾಕ್ಷಪ್ಪ ಅವರು ಅರ್ಜಿ ಸಲ್ಲಿಸಿದ್ದರು. ಇಂದು (ಸೋಮವಾರ) ವಿಚಾರಣೆ ನಡೆಸಿದ ನ್ಯಾಯಮೂರ್ತಿ ಕೆ.ನಟರಾಜನ್ ಅವರಿದ್ದ ನ್ಯಾಯಪೀಠವು ಸೋಮವಾರ ಜಾಮೀನು ಅರ್ಜಿಯನ್ನು ವಜಾಗೊಳಿಸಿ ಅಂತಿಮ ಆದೇಶ ಹೊರಡಿಸಿದೆ. 

ವಿರೂಪಾಕ್ಷಪ್ಪ ಅವರನ್ನು ಬಂಧಿಸುವುದಕ್ಕಾಗಿ ಲೋಕಾಯುಕ್ತ ಪೊಲೀಸರ ತಂಡ ಅವರ ನಿವಾಸಕ್ಕೆ ತೆರಳಿತ್ತು. ಆದರೆ, ಅಷ್ಟರಲ್ಲೇ ಅವರು ಬೆಂಗಳೂರಿಗೆ ಕಾರಿನಲ್ಲಿ ತೆರಳಿದ್ದಾರೆ ಎನ್ನಲಾಗಿತ್ತು. ಇದೀಗ ಚೆನ್ನಗಿರಿಯಿಂದ ಬೆಂಗಳೂರು ಕಡೆ ತೆರಳುತ್ತಿದ್ದಾಗ  ತುಮಕೂರಿನ ಕ್ಯಾತಸಂದ್ರ ಟೋಲ್‌ ಬಳಿ ಲೋಕಾಯುಕ್ತ ಅಧಿಕಾರಿಗಳು ಅವರನ್ನು ಬಂಧಿಸಿದ್ದಾರೆ ಎಂದು ತಿಳಿದು ಬಂದಿದೆ. 

ಮಾಡಾಳ್ ವಿರೂಪಾಕ್ಷಪ್ಪ ಅವರು ಕರ್ನಾಟಕ ಸಾಬೂನು ಮತ್ತು ಮಾರ್ಜಕ ನಿಗಮದ ಅಧ್ಯಕ್ಷರಾಗಿದ್ದರು. ಅವರ ಪುತ್ರ ಬಿಡಬ್ಲ್ಯೂಎಸ್‌ಎಸ್‌ಬಿಯಲ್ಲಿ ಚೀಫ್ ಅಕೌಂಟೆಂಟ್ ಆಗಿದ್ದು, ತಂದೆಯ ನಿಗಮದಲ್ಲಿ ಟೆಂಡರ್‌ ನೀಡಲು ಹಣ ಪಡೆಯುತ್ತಿದ್ದ ಆರೋಪಕ್ಕೆ ಸಂಬಂಧಿಸಿ ಖಚಿತ ಮಾಹಿತಿ ಆಧರಿಸಿ ದಾಳಿ ಮಾಡಿದ ಲೋಕಾಯುಕ್ತ ಪೊಲೀಸರು 6 ಕೋಟಿ ರೂ. ನಗದು ಹಣದೊಂದಿಗೆ ಮಾಡಾಳ್ ಪ್ರಶಾಂತ್‌ನನ್ನು ಬಂಧಿಸಿದ್ದರು.  

ಇದನ್ನೂ ಓದಿ: ಮಾಡಾಳ್ ವಿರೂಪಾಕ್ಷಪ್ಪ ನಿರೀಕ್ಷಣಾ ಜಾಮೀನು ಅರ್ಜಿ ವಜಾ ಮಾಡಿದ ಹೈಕೋರ್ಟ್‌: ಶಾಸಕರಿಗೆ ಬಂಧನ ಭೀತಿ

Similar News