ರಾಜೀವ್ ಗಾಂಧಿ ಆರೋಗ್ಯ ವಿವಿಗೆ ಕೆಂಗಲ್ ಹನುಮಂತಯ್ಯ ಹೆಸರು: ಮುಖ್ಯಮಂತ್ರಿ ಬೊಮ್ಮಾಯಿ

Update: 2023-03-27 16:31 GMT

ಬೆಂಗಳೂರು, ಮಾ.27: ರಾಜೀವ್ ಗಾಂಧಿ ಆರೋಗ್ಯ ವಿಶ್ವವಿದ್ಯಾಲಯಕ್ಕೆ ಮಾಜಿ ಮುಖ್ಯ ಮಂತ್ರಿ ಕೆಂಗಲ್ ಹನುಮಂತಯ್ಯ ಅವರ ಹೆಸರು ಇಡಲಾಗುವುದು ಎಂದು  ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

ಸೋಮವಾರ ರಾಮನಗರ ವಿಧಾನಸಭಾ ಕ್ಷೇತ್ರದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ ಹಾಗೂ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದ ಅವರು, ರಾಜೀವ್ ಗಾಂಧಿ ಆರೋಗ್ಯ ವಿವಿಯಿಂದ  ಇಲ್ಲಿ ಒಂದು ಸಾವಿರ ಹಾಸಿಗೆಗಳ ಸಾಮರ್ಥ್ಯದ  ಆಸ್ಪತ್ರೆ ಬರಲಿದೆ. ರಾಮನಗರದ ಬಡವರ ಚಿಕಿತ್ಸೆಗೆ ದೊಡ್ಡ ಸಂಸ್ಥೆಯಾಗಲಿದೆ. ಸಂಶೋಧನೆಗಳು ದೊಡ್ಡ ಪ್ರಮಾಣದಲ್ಲಿ ಆಗಲಿದೆ. ದೇಶದಲ್ಲಿಯೇ ದೊಡ್ಡ ಆರೋಗ್ಯ ಕೇಂದ್ರವಾಗಲಿದೆ ಎಂದರು.

ರಾಜೀವ್ ಗಾಂಧಿ ವಿಶ್ವವಿದ್ಯಾಲಯ ಆಗಬೇಕೆಂದು ಕಳೆದ 16 ವರ್ಷಗಳಿಂದ ಪ್ರಯತ್ನ ನಡೆದಿದೆ. ಹಲವಾರು ತಿರುವುಗಳನ್ನು ಕಂಡು ಸ್ವಂತ ಕಟ್ಟಡ ಬಗ್ಗೆ ಸಂಶಯ ಉಂಟಾಗುವ ಮಟ್ಟಕ್ಕೆ ತಲುಪಿ, ಗೊಂದಲದ ಗೂಡಾಗಿತ್ತು. ಇಲ್ಲಿ ವಿಶ್ವವಿದ್ಯಾಲಯ ಕಟ್ಟಲೇಬೇಕೆಂದು  ಸರಕಾರ ಸಮಸ್ಯೆಗೆ ಪರಿಹಾರವನ್ನು ಒದಗಿಸಿದೆ. ಕನ್ನಡ ನಾಡು ಸಮಗ್ರವಾಗಿ ಅಭಿವೃದ್ಧಿಯಾಗಲು ಪ್ರಾದೇಶಿಕವಾಗಿಯೂ ಅಭಿವೃದ್ಧಿ ಯಾಗಬೇಕು ಎಂದು ಬಸವರಾಜ ಬೊಮ್ಮಾಯಿ ಹೇಳಿದರು.

ಬಿಡದಿ, ಮಾಗಡಿಯನ್ನು ಬೆಂಗಳೂರಿಗೆ ಮೆಟ್ರೋ ಮೂಲಕ ಜೋಡಿಸಬೇಕು. ಇಂಟಿಗ್ರೇಟೆಡ್ ಟೌನ್ ಶಿಪ್ ಕೆಲಸ ಈ ವರ್ಷ ಪ್ರಾರಂಭವಾಗಲಿದೆ. ಬಿಡದಿ ಹಾಗೂ ಮಾಗಡಿಯವರೆಗೆ  ಮೆಟ್ರೋ ವಿಸ್ತರಿಸಿ ರಾಮನಗರವನ್ನು ಬೆಂಗಳೂರಿಗೆ ಜೋಡಿಸಬೇಕು ಎಂದು ಅವರು ತಿಳಿಸಿದರು.

ಬೆಂಗಳೂರು ಮೈಸೂರು ಎಕ್ಸ್ ಪ್ರೆಸ್ ರಸ್ತೆ ಆರ್ಥಿಕ ಅಭಿವೃದ್ಧಿಯ ಸಂಕೇತ. ಇದೊಂದು ರಾಷ್ಟ್ರೀಯ ಆಸ್ತಿಯಾಗಿದೆ. ರಾಮನಗರ ಹೊಸ ಜಿಲ್ಲೆಯಾಗಿದ್ದು ಇಲ್ಲಿ ವೈದ್ಯಕೀಯ ಕಾಲೇಜು, ಆಸ್ಪತ್ರೆ ಮತ್ತು ವಿಶ್ವವಿದ್ಯಾಲಯ ಆದರೆ ಸಾರ್ಥಕವಾಗುತ್ತದೆ. ಎಲ್ಲ ತಾಲೂಕುಗಳು ಅಭಿವೃದ್ಧಿಯಾಗುತ್ತವೆ. ನೀರಾವರಿ ಅಭಿವೃದ್ಧಿ, ಕುಡಿಯುವ ನೀರಿನ ಯೋಜನೆಗಳನ್ನು ಹಮ್ಮಿಕೊಂಡಿದೆ ಎಂದು ಮುಖ್ಯಮಂತ್ರಿ ಹೇಳಿದರು.

ಬೃಹತ್ ರೇಷ್ಮೆ ಮಾರುಕಟ್ಟೆಗೆ ಅಡಿಗಲ್ಲು: ರಾಮನಗರಕ್ಕೆ 180 ಕೋಟಿ ರೂ.ಗಳ ವೆಚ್ಚದ ಹೈಟೆಕ್ ರೇಷ್ಮೆ ಮಾರುಕಟ್ಟೆಗೆ ಅಡಿಗಲ್ಲು ಹಾಕಲಾಗಿದೆ. ಇಷ್ಟು ಬೃಹತ್ ರೇಷ್ಮೆ ಮಾರುಕಟ್ಟೆ ರಾಜ್ಯದಲ್ಲಿ ಎಲ್ಲೂ ಇಲ್ಲ. ರೇಷ್ಮೆ ಬೆಳೆಗಾರರಿಗೆ ಮಾರುಕಟ್ಟೆ ನಿಯಂತ್ರಣ ರೈತರ ಕೈಗೆ ಬರಲಿದೆ. ಮಾವಿನ ಸಂಸ್ಕರಾಣಾ ಘಟಕಗಳಿಗೆ ಚಾಲನೆ ನೀಡಲಾಗಿದ್ದು, 160 ಕೋಟಿ ರೂ. ಮೊತ್ತದ ಹೊಸ ಕಾಮಗಾರಿಯನ್ನು ಪ್ರಾರಂಭ ಮಾಡಲಾಗಿದೆ ಎಂದು ಅವರು ಹೇಳಿದರು. 

605 ಕೋಟಿ ರೂ.ಗಳ ಯೋಜನೆಗೆ ಸರಕಾರ ಅನುದಾನ ನೀಡಿ ಪ್ರಾರಂಭಿಸಿದೆ. ಈ ಭಾಗದ ಈ ಸಂದರ್ಭದಲ್ಲಿ ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್.ಅಶ್ವತ್ಥ ನಾರಾಯಣ, ಸಚಿವರಾದ ಕೆ.ಸಿ.ನಾರಾಯಣಗೌಡ, ಡಾ.ಕೆ.ಸುಧಾಕರ್, ವಿಧಾನಪರಿಷತ್ ಸದಸ್ಯರಾದ ವೈ.ಎ.ನಾರಾಯಣಸ್ವಾಮಿ, ಸಿ.ಪಿ.ಯೋಗೇಶ್ವರ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Similar News