ದ್ವೇಷದ ರಾಜಕಾರಣ ಮೂಲಕ ಬಿಜೆಪಿಯಿಂದ ಮೀಸಲಾತಿ ಗೊಂದಲ ಸೃಷ್ಟಿ: ಶಾಸಕ ಶಾಮನೂರು ಶಿವಶಂಕರಪ್ಪ

Update: 2023-03-27 15:59 GMT

ದಾವಣಗೆರೆ : ರಾಜ್ಯದ ಬಿಜೆಪಿ ಸರ್ಕಾರ ದ್ವೇಷದ ರಾಜಕಾರಣ ಮಾಡುತ್ತಿದ್ದು ಈ ಮೂಲಕ ಮೀಸಲಾತಿ ಗೊಂದಲ ಸೃಷ್ಟಿ ಮಾಡಿದೆ ಎಂದು ಮಾಜಿ ಸಚಿವರು, ಶಾಸಕ ಡಾ ಶಾಮನೂರು ಶಿವಶಂಕರಪ್ಪನವರು ದೂರಿದ್ದಾರೆ.

ಈ ಹಿಂದೆ ಅಲ್ಪಸಂಖ್ಯಾತ ಸಮುದಾಯದವರಿಗೆ ಕಾಂಗ್ರೆಸ್ ಸರ್ಕಾರ ಶೇ.4 ರಷ್ಟು ಮೀಸಲಾತಿಯನ್ನು ನೀಡಿದ್ದು, ಅದನ್ನು ಹಿಂಪಡೆದು ಆರ್ಥಿಕ ಹಿಂದುಳಿದವರಿಗೆ ನೀಡುವ ಮೀಸಲಾತಿಯಲ್ಲಿ ನೀಡಲಾಗುವುದು ಎಂಬುದು ಕೇವಲ ಕಣ್ಣೋರೆಸುವ ತಂತ್ರವಾಗಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ಪರಿಶಿಷ್ಟ ಜಾತಿಯವರೆಗೆ ಇನ್ನು ಶೇ.15ರಿಂದ 17ಕ್ಕೆ ಮೀಸಲಾತಿ ಹೆಚ್ಚಿಸಿಲ್ಲ. ಆದರೂ ಒಳ ಮೀಸಲಾತಿ ಹೆಸರಿನಲ್ಲಿ ಅವರಿಗೂ ದ್ರೋಹ ಬಗೆಯಲಾಗಿದೆ. ಈ ಹಿಂದಿನಿಂದಲೂ ವೀರಶೈವ- ಲಿಂಗಾಯಿತರಿಗೆ 2 ಎ ಮೀಸಲಾತಿ ನೀಡಬೇಕು ಎಂಬ ಬೇಡಿಕೆ ಇದ್ದರೂ ಸಹ ಮತ್ತೊಮ್ಮೆ ಕಣ್ಣೋರೆಸುವ ತಂತ್ರ ಮಾಡಿರುವ ಬಿಜೆಪಿ ಮೀಸಲಾತಿ ಶೇಕಡ 50ರಷ್ಟು ಮೀರಬಾರದು ಎಂಬುದನ್ನೇ ಬಂಡವಾಳವಾಗಿ ಇಟ್ಟುಕೊಂಡು ಜಾತಿ ಜಾತಿ ಮಧ್ಯೆ ಮೀಸಲಾತಿ ಗೊಂದಲವನ್ನು ಸೃಷ್ಟಿಸಿ ದ್ವೇಷ ಮೂಡಿಸುತ್ತಿದೆ ಎಂದು ಆರೋಪಿಸಿದ್ದಾರೆ .

ಈ ಕುರಿತಂತೆ ರಾಜ್ಯ ನಾಯಕರುಗಳೊಂದಿಗೆ ಚರ್ಚೆ ನಡೆಸಲಾಗಿದ್ದು, ಮೀಸಲಾತಿ ಗೊಂದಲ ಬಗ್ಗೆ ನ್ಯಾಯಕ್ಕಾಗಿ ನ್ಯಾಯಾಲಯದ ಮೊರೆ ಹೋಗಲಾಗುವುದು ಎಂದು ತಿಳಿಸಿದ್ದಾರೆ.

Similar News