ಅಡ್ಡಂಡ ಕಾರ್ಯಪ್ಪ ವಾರದೊಳಗೆ ಕ್ಷಮೆ ಕೇಳದಿದ್ದರೆ ಮಾನನಷ್ಟ ಮೊಕದ್ದಮ್ಮೆ ಹೂಡುತ್ತೇವೆ: ಬಡಗಲಪುರ ನಾಗೇಂದ್ರ

Update: 2023-03-27 16:54 GMT

ಮೈಸೂರು,ಮಾ.27: ಹಿರಿಯ ಸಮಾಜವಾದಿ ಹೋರಾಟಗಾರ ಪ.ಮಲ್ಲೇಶ್  ಅವರ ಕುರಿತು ಅಪಹಾಸ್ಯವಾಗಿ ಮಾತಾಡಿರುವ ರಂಗಾಯಣ ನಿರ್ದೇಶಕ ಅಡ್ಡಂಡ ಕಾರ್ಯಪ್ಪ ವಾರದೊಳಗೆ ಸಾರ್ವಜನಿಕವಾಗಿ ಕ್ಷಮೆ ಕೇಳಬೇಕು. ಇಲ್ಲದಿದ್ದರೆ ಮಾನನಷ್ಟ ಮೊಕದ್ದಮೆ ಹೂಡುವುದಾಗಿ ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯಾಧ್ಯಕ್ಷ ಬಡಗಲಪುರ ನಾಗೇಂದ್ರ ಎಚ್ಚರಿಕೆ ನೀಡಿದ್ದಾರೆ. 

ನಗರದ ಜಲದರ್ಶಿನಿ ಅತಿಥಿಗೃಹದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ.ಮಲ್ಲೇಶ್ ಅವರು ಮರಣದ ಬಳಿಕವೂ ಕೇವಲವಾಗಿ ಮಾತಾಡಿರುವ ಅಡ್ಡಂಡ ಕಾರ್ಯಪ್ಪ ಸಂಸ್ಕೃತಿಹೀನ ವ್ಯಕ್ತಿತ್ವದವರು. ವಿಕೃತವಾದ ಆಲೋಚನೆ ಮತ್ತು ಸಮಾಜ ಒಡೆಯುವ ನೀತಿಯವರು ಎಂದು ಟೀಕಿಸಿದರು. 

ವ್ಯಕ್ತಿ ಮೃತಪಟ್ಟ ಮೇಲೆ ಆತನ ವ್ಯಕ್ತಿತ್ವಕ್ಕೆ ಧಕ್ಕೆಯಾಗುವಂತಿದ್ದರೆ ಈ ದೇಶದ ಕಾನೂನಿನಲ್ಲಿ ಮಾನನಷ್ಟ ಮೊಕದ್ದಮೆ ಹೂಡುವುದಕ್ಕೆ ಅವಕಾಶವಿದೆ. ವಾರದೊಳಗೆ ಅವರು ಕ್ಷಮೆ ಕೇಳದಿದ್ದರೆ ಸಾಮಾಜಿಕ ಹಿತಚಿಂತನೆಯ ದೃಷ್ಟಿಯಿಂದ ಮಾನನಷ್ಟ ಪ್ರಕರಣ ದಾಖಲಿಸಲಿದ್ದೇವೆ. ಅಹಿಂಸಾತ್ಮಕ ಹೋರಾಟ ಮಾಡುತ್ತೇವೆ ಎಂದರು. 

ಮೈಸೂರಿಗೆ ಸಾಂಸ್ಕೃತಿಕವಾಗಿ ಸಾಹಿತ್ಯಕವಾಗಿ ಗೌರವವಿದೆ. ನಾಲ್ವಡಿ ಕೃಷ್ಣರಾಜ ಒಡೆಯರ್, ಕುವೆಂಪು, ಸಾಹುಕಾರ್ ಚೆನ್ನಯ್ಯ, ಯಶೋಧರ ದಾಸಪ್ಪ, ಪ್ರೊ.ನಂಜುಂಡಸ್ವಾಮಿ ಪ್ರೇರಕ ಶಕ್ತಿಯಾಗಿದ್ದಾರೆ. ಈ ಪರಂಪರೆಗೆ ಧಕ್ಕೆ ತರುತ್ತಿರುವ ಅಡ್ಡಂಡ ಕಾರ್ಯಪ್ಪ ಅವರನ್ನು ರಂಗಾಯಣದಿಂದ ಎತ್ತಂಗಡಿ ಮಾಡಬೇಕೆಂದು ಆಗ್ರಹಿಸಿದರು. 

ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ ಸಂಸತ್ ಸದಸ್ಯ ಸ್ಥಾನ ಅನರ್ಹ ಕಾನೂನಿನ ಪ್ರಕಾರವೇ ಸಮರ್ಥನೀಯವಲ್ಲ. ಪ್ರಜಾಪ್ರಭುತ್ವದ ಅಂತಃಸತ್ವವನ್ನು ಅಡಗಿಸುವ ತೀರ್ಮಾನ. ಇದರ ವಿರುದ್ಧ ದೇಶದಲ್ಲಿ ದೊಡ್ಡಮಟ್ಟದಲ್ಲಿ ಚರ್ಚೆಯಾಗಬೇಕು ಎಂದು ನುಡಿದರು. 

ಕೆಳಗಿನ ನ್ಯಾಯಾಲಯಗಳು ತೀರ್ಪು ಅಂತಿಮವಲ್ಲ. ಮುಂದಿನ ಕೋರ್ಟ್‍ಗಳಲ್ಲಿ ಅದನ್ನು ಪ್ರಶ್ನೆ ಮಾಡಬೇಕು. ಹಾಗೆಯೇ ಯಾವುದೇ ಕ್ರಮಗಳು ಪಾರದರ್ಶಕ ಮತ್ತು ಜನ ಒಪ್ಪುವಂತಿರಬೇಕು. ತೀರ್ಪಿಗೂ ಮುನ್ನ ನ್ಯಾಯಾಧೀಶರು ವ್ಯಕ್ತಿಯ ನಡತೆ, ಸಮಾಜದ ನಡತೆ, ಆ ಮಾತುಗಳು ಹಿಂದಿನ ಉದ್ದೇಶ ಏನಿತ್ತು? ಪರಿಶೀಲನೆ ಮಾಡುತ್ತಾರೆ. ಈ ಪ್ರಕರಣಗಳಲ್ಲಿ ಆ ಪ್ರಕ್ರಿಯೆ ನಡೆದಿಲ್ಲ ಎಂದರು. 

ಮಾನನಷ್ಟ ಪ್ರಕರಣಗಳಲ್ಲಿ 1 ಲಕ್ಷದಲ್ಲಿ 5 ಜನರಿಗೆ ಶಿಕ್ಷೆಯಾದರೆ ಹೆಚ್ಚು. ಮಾತಿಗೆಲ್ಲ ಪ್ರಕರಣ ದಾಖಲಿಸುವಂತಿದ್ದರೆ ಲಂಕೇಶ್, ಎ.ಕೆ.ಸುಬ್ಬಯ್ಯ, ಪ್ರೊ.ನಂಜುಂಡಸ್ವಾಮಿ ಸಾವಿರ ಸಲ ಜೈಲಿಗೆ ಹೋಗಬೇಕಿತ್ತು. ರಾಹುಲ್ ಅಭಿವ್ಯಕ್ತಿ ದಮನ ಮುಂದೆ ನಮ್ಮೆಲ್ಲರಿಗೂ ಆಗಬಹುದು ಎಂದು ಆತಂಕ ವ್ಯಕ್ತಪಡಿಸಿದರು. 

ಮೀಸಲಾತಿ ಹಂಚಿಕೆ ವಿಚಾರವಾಗಿ ಪ್ರತಿಕ್ರಿಯಿಸಿದ ಬಡಗಲಪುರ ನಾಗೇಂದ್ರ ಅವರು, ಒಬ್ಬರ ಮೀಸಲಾತಿಯನ್ನು ಕಿತ್ತು ಇನ್ನೊಬ್ಬರಿಗೆ ಕೊಡುವುದು ನ್ಯಾಯವಲ್ಲ. ಸಾಮಾಜಿಕ ನ್ಯಾಯಕ್ಕೆ ವಿರುದ್ಧವಾದದ್ದು ಎಂದರು. 

ಮೀಸಲಾತಿ ಸಾಂವಿಧಾನಿಕ ಹಕ್ಕು. ಬೇರೆ ಬೇತೆ ಸಮಾಜಗಳು ಮೀಸಲಾತಿ ಕೇಳುವುದರಲ್ಲಿ ತಪ್ಪಿಲ್ಲ. ಸಾಮಾಜಿಕವಾಗಿ ಶೈಕ್ಷಣಿಕವಾಗಿ ಹಿಂದುಳಿದಿರುವ ಸಮಾಜಕ್ಕೆ ಮೀಸಲಾತಿ ಕೊಡಬೇಕು. ಜನಸಂಖ್ಯಗೆ ಅನುಗುಣವಾಗಿ ಮೀಸಲಾತಿ ಕೊಡುವಂತೆ ಮೊದಲಿಂದಲೂ ಒತ್ತಾಯ ಮಾಡುತ್ತಿದ್ದೇವೆ ಎಂದು ಅಭಿಪ್ರಾಯಪಟ್ಟರು. 

ಕರ್ನಾಟಕ ಸರ್ವೋದಯ ಪಕ್ಷದ ಪ್ರಧಾನ ಕಾರ್ಯದರ್ಶಿ ಪ್ರಸನ್ನ ಎನ್.ಗೌಡ, ರೈತ ಸಂಘದ ಪ್ರಧಾನ ಕಾರ್ಯದರ್ಶಿ ಹೊಸಕೋಟೆ ಬಸವರಾಜು, ಮುಖಂಡರಾದ ನೇತ್ರಾವತಿ, ಮಹೇಶ್ ಮಂಡಕಳ್ಳಿ, ಪಿ.ಮರಂಕಯ್ಯ, ರಾಘವೇಂದ್ರ ಹಾಜರಿದ್ದರು. 

ಅಡ್ಡಂಡ ಕಾರ್ಯಪ್ಪ ನಾನು ಹೇಳುವುದೇ ಸತ್ಯ. ಅದನ್ನು ಎಲ್ಲರೂ ಒಪ್ಪಬೇಕೆಂದು ಒತ್ತಾಯಿಸುವುದು ದಾಷ್ಟ್ಯತನ. ಇವರ ಮೇಲೆ ಸರ್ಕಾರಕ್ಕೆ ಹಿಡಿತವಿಲ್ಲ ಅನಿಸುತ್ತದೆ. ಇವರಿಗೆ ಬುದ್ಧಿ ಕಲಿಸುವ ಅಗತ್ಯವಿದೆ. 

 -ಪ್ರಸನ್ನ ಎನ್.ಗೌಡ, ರೈತ ಸಂಘದ ಮುಖಂಡ.

Similar News