'ಕಲ್ಯಾಣ ರಾಜ್ಯ ಪ್ರಗತಿ' ಪಕ್ಷದ ಚಿಹ್ನೆ, ಚುನಾವಣಾ ಪ್ರಣಾಳಿಕೆ ಬಿಡುಗಡೆ ಮಾಡಿದ ಜನಾರ್ದನ ರೆಡ್ಡಿ

Update: 2023-03-27 17:49 GMT

ಬೆಂಗಳೂರು, ಮಾ. 27: ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ಚಿನ್ಹೆ ಹಾಗೂ ಚುನಾವಣಾ ಪ್ರಣಾಳಿಕೆಯನ್ನು ಮಾಜಿ ಸಚಿವ ಹಾಗೂ ‘ಕಲ್ಯಾಣ ರಾಜ್ಯ ಪ್ರಗತಿ ಪಕ್ಷ’ದ ಸಂಸ್ಥಾಪಕ ಅಧ್ಯಕ್ಷ ಗಾಲಿ ಜನಾರ್ದನ ರೆಡ್ಡಿ ಬಿಡುಗಡೆಗೊಳಿಸಿದರು.

ಸೋಮವಾರ ನಗರದ ಬಸವೇಶ್ವರ ವೃತ್ತದಲ್ಲಿರುವ ತಮ್ಮ ನಿವಾಸದಲ್ಲಿ ಕರೆಯಲಾಗಿದ್ದ ಸುದ್ದಿಗೋಷ್ಠಿಯಲ್ಲಿ ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ಚಿನ್ಹೆ ‘ಫುಟ್ಬಾಲ್’ ಹಾಗೂ ಕೃಷಿ, ಆರೋಗ್ಯ, ಶಿಕ್ಷಣ, ನೀರಾವರಿ ಸೇರಿದಂತೆ ವಿವಿಧ ವಲಯಗಳಲ್ಲಿ ಕೈಗೊಳ್ಳಲಿರುವ ಭರಸವಸೆಗಳನ್ನು ಒಳಗೊಂಡ ಪ್ರಣಾಳಿಕೆಯನ್ನು ಅವರು ಬಿಡುಗಡೆ ಮಾಡಿದರು.

ಕಲ್ಯಾಣ ರಾಜ್ಯ ಪ್ರಗತಿ ಪಕ್ಷವು ಯಾವುದೆ ಪಕ್ಷದೊಂದಿಗೆ ಚುನಾವಣಾ ಪೂರ್ವ ಮೈತ್ರಿ ಮಾಡಿಕೊಳ್ಳುವುದಿಲ್ಲ. ಬಿಜೆಪಿ ಸೇರಿದಂತೆ ಯಾವುದೆ ಪಕ್ಷದ ನಾಯಕರು ತಮ್ಮನ್ನು ಈ ವಿಚಾರದಲ್ಲಿ ಸಂಪರ್ಕ ಮಾಡಿಲ್ಲ. ಅಲ್ಲದೆ, ಆಂಧ್ರಪ್ರದೇಶ ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ ತಮ್ಮ ಪರವಾಗಿ ಚುನಾವಣಾ ಪ್ರಚಾರ ನಡೆಸುತ್ತಾರೆ ಅನ್ನೋದು ಸತ್ಯಕ್ಕೆ ದೂರವಾದದ್ದು ಎಂದು ಜನಾರ್ದನರೆಡ್ಡಿ ತಿಳಿಸಿದರು.

ಭರವಸೆಗಳು: ರೈತರಿಗೆ ನೆರವು ಒದಗಿಸಲು ‘ಬಸವೇಶ್ವರ ರೈತ ಭರವಸೆ’, ಬಡವರಿಗೆ ಆರೋಗ್ಯ ಸೇವೆ ಒದಗಿಸಲು ‘ಬಸವೇಶ್ವರ ಆರೋಗ್ಯ ಕವಚ’, ಗೃಹಿಣಿಯರು ಹಾಗೂ ಒಂಟಿ ಮಹಿಳೆಯರಿಗೆ ಮಾಸಿಕ 2500 ರೂ.ಆರ್ಥಿಕ ನೆರವು ಒದಗಿಸುವ ‘ರಾಣಿ ಚೆನ್ನಮ್ಮ ಅಭಯ ಹಸ್ತ’, ಎಸ್ಸಿ-ಎಸ್ಟಿಗಳ ಕಲ್ಯಾಣಕ್ಕಾಗಿ ‘ಮಹರ್ಷಿ ವಾಲ್ಮೀಕಿ-ಅಂಬೇಡ್ಕರ್ ಜನಸ್ನೇಹಿ ಯೋಜನೆಗಳು’.

ನಿರುದ್ಯೋಗಿ ಯುವಕರಿಗೆ ಮಾಸಿಕ 2500 ರೂ.ನಿರುದ್ಯೋಗ ಭತ್ತೆ ನೀಡುವ ‘ಸಂಗೊಳ್ಳಿ ರಾಯಣ್ಣ ಯುವ ಕಿರಣ’, ‘ಬಸವೇಶ್ವರ ಗೃಹ ಯೋಜನೆ’, ‘ಒನಕೆ ಓಬವ್ವ ಸ್ವಾಭಿಮಾನ ಯೋಜನೆ’, ‘ಬಸವೇಶ್ವರ ಶಿಕ್ಷಣ ಸುಧಾರಣೆ’, ‘ಬಸವೇಶ್ವರ ಜಲ ಯಜ್ಞ’, ‘ಬಸವೇಶ್ವರ ಆಸರೆ ಪಿಂಚಣಿ ಯೋಜನೆ’ ಹಾಗೂ ‘ಅಭಿವೃದ್ಧಿ ವಿಕೇಂದ್ರೀಕರಣ’ ಎಂಬ ಭರವಸೆಗಳನ್ನು ಚುನಾವಣಾ ಪ್ರಣಾಳಿಕೆಯಲ್ಲಿ ನೀಡಲಾಗಿದೆ.

ಪತ್ರಿಕಾಗೋಷ್ಠಿಯಲ್ಲಿ ಪಕ್ಷದ ಮಹಿಳಾ ಘಟಕದ ರಾಜ್ಯಾಧ್ಯಕ್ಷೆ ಸಿ.ಸಿ.ಹೇಮಲತಾ ಹಾಗೂ ಪಾವಗಡ ಅಭ್ಯರ್ಥಿ ನಾಗೇಂದ್ರ ಕುಮಾರ್, ಹಿರಿಯೂರು ಅಭ್ಯರ್ಥಿ ಮಹೇಶ್ ಉಪಸ್ಥಿತರಿದ್ದರು.

Similar News