ಅನುದಾನದ ಕೊರತೆ: ಅಲ್ಪಸಂಖ್ಯಾತರ ನಿರ್ದೇಶನಾಲಯದ ಹೊರಗುತ್ತಿಗೆ ಸಿಬ್ಬಂದಿಯ ಕೆಲಸ ಅತಂತ್ರ

Update: 2023-03-28 06:34 GMT

ಬೆಂಗಳೂರು, ಮಾ.28: ರಾಜ್ಯದಲ್ಲಿ ಅಲ್ಪಸಂಖ್ಯಾತ ಮುಸ್ಲಿಮ್ ಸಮುದಾಯಕ್ಕೆ ಹಿಂದುಳಿದ ವರ್ಗಗಳ ಪ್ರವರ್ಗ 2 ‘ಬಿ’ ಅಡಿಯಲ್ಲಿ ಕಲ್ಪಿಸಲಾಗಿದ್ದ ಶೇ.4ರಷ್ಟು ಮೀಸಲಾತಿಯನ್ನು ರದ್ದುಗೊಳಿಸಿರುವ ರಾಜ್ಯ ಸರಕಾರವು, ಅದರ ಬೆನ್ನಲ್ಲೆ ಅಲ್ಪಸಂಖ್ಯಾತರ ನಿರ್ದೇಶನಾಲಯದಲ್ಲಿ ಹೊರಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿರುವ ಸಿಬ್ಬಂದಿಗಳಿಗೆ ಕೆಲಸದಿಂದ ವಜಾಗೊಳಿಸಲು ಮುಂದಾಗಿದೆ.

ಅಲ್ಪಸಂಖ್ಯಾತರ ನಿರ್ದೇಶನಾಲಯದಲ್ಲಿ ಕಾರ್ಯನಿರ್ವಹಿಸುತ್ತಿರುವ ಹೊರಗುತ್ತಿಗೆ ಸಿಬ್ಬಂದಿಗಳಿಗೆ 2023-24ನೆ ಸಾಲಿನ ಬಜೆಟ್‍ನಲ್ಲಿ ಅನುದಾನ ಕೊಡದೆ ಇರುವುದರಿಂದ ಹಾಗೂ ಆರ್ಥಿಕ ಇಲಾಖೆಯಿಂದ ಅನುಮೋದನೆ ಪಡೆಯದ ಕಾರಣ, ಸುಮಾರು 66 ಹೊರಗುತ್ತಿಗೆ ಸಿಬ್ಬಂದಿಗಳಲ್ಲಿ ಕೇವಲ 19 ಸಿಬ್ಬಂದಿಗಳನ್ನು ಹೊರತುಪಡಿಸಿ ಉಳಿದ 40 ಹೊರಗುತ್ತಿಗೆ ಸಿಬ್ಬಂದಿಗಳನ್ನು ಎ.1ರಿಂದ ಅನ್ವಯವಾಗುವಂತೆ ಕೆಲಸದಿಂದ ವಜಾಗೊಳಿಸಲಾಗುತ್ತಿದೆ ಎಂಬ ಅಂಶ ಬೆಳಕಿಗೆ ಬಂದಿದೆ.

ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಅಲ್ಪಸಂಖ್ಯಾತರ ನಿರ್ದೇಶನಾಲಯದಲ್ಲಿ ಸುಮಾರು ವರ್ಷಗಳಿಂದ ಹೊರಗುತ್ತಿಗೆ ಆಧಾರದ ಮೇಲೆ ಸಿಬ್ಬಂದಿಗಳು ಕಾರ್ಯನಿರ್ವಹಿಸುತ್ತಾ ಬಂದಿದ್ದಾರೆ. ಅದರಂತೆ ಎಲ್ಲ ಯೋಜನೆಗಳು ಅಲ್ಪಸಂಖ್ಯಾತರಿಗೆ ತಲುಪಿಸುವಲ್ಲಿ ಮಹತ್ವದ ಪಾತ್ರವನ್ನು ವಹಿಸುತ್ತಿದ್ದಾರೆ. ಸಕಾಲದಲ್ಲಿ ಅರ್ಹ ಫಲಾನುಭವಿಗಳಿಗೆ ಯೋಜನೆಯ ಸದುಪಯೋಗ ಪಡೆಯಲು ಅನುವು ಆಗುವಂತೆ ಶ್ರಮಿಸುತ್ತಾ ಬಂದಿದ್ದಾರೆ.

ಆದರೆ, 2023-24ನೆ ಸಾಲಿನ ಬಜೆಟ್‍ನಲ್ಲಿ ಅಲ್ಪಸಂಖ್ಯಾತರ ನಿರ್ದೇಶನಾಲಯದ ಹೊರಗುತ್ತಿಗೆ ನೌಕರರ ವೇತನ ಪಾವತಿಸಲು ಅಗತ್ಯ ಅನುದಾನ ನೀಡಲಾಗಿಲ್ಲ ಹಾಗೂ ಆರ್ಥಿಕ ಇಲಾಖೆಯಿಂದ ಅನುಮತಿಯನ್ನು ಪಡೆಯಲಾಗಿಲ್ಲ. ಅನುದಾನದ ಕೊರತೆ ಇದೆ ಎಂಬ ನೆಪವನ್ನು ಮುಂದಿಟ್ಟುಕೊಂಡು ಸುಮಾರು 40 ಹೊರಗುತ್ತಿಗೆ ಸಿಬ್ಬಂದಿಗಳಿಗೆ ಸೇವೆಯಿಂದ ಕೈ ಬಿಡುವುದಾಗಿ ಮಾ.28ರಂದು ಅಲ್ಪಸಂಖ್ಯಾತರ ನಿರ್ದೇಶನಾಲಯದ ನಿರ್ದೇಶಕರು ಸಭೆ ನಡೆಸಿ ತಿಳಿಸಿದ್ದಾರೆ ಎಂದು ತಿಳಿದು ಬಂದಿದೆ.

ಇದರಿಂದಾಗಿ, ಈ ನೌಕರರ ಕುಟುಂಬಗಳು ಆರ್ಥಿಕ ಸಂಕಷ್ಟಕ್ಕೆ ಸಿಲುಕುವುದರ ಜೊತೆಗೆ ನಿರುದ್ಯೋಗಿಗಳಾಗಿ ಜೀವನೋಪಾಯಕ್ಕೆ ಕಷ್ಟಪಡುವಂತಾಗುತ್ತದೆ. ಈ ಇಲಾಖೆಗಳಲ್ಲಿ ಸಲ್ಲಿಸಿದ ಇಷ್ಟು ವರ್ಷಗಳ ಸೇವೆಯು ಇತರ ಖಾಸಗಿ ಕ್ಷೇತ್ರಗಳಲ್ಲಿ ಪರಿಗಣಿಸಲಾಗುವುದಿಲ್ಲ ಎಂಬ ಆತಂಕ ಹೊರಗುತ್ತಿಗೆ ಸಿಬ್ಬಂದಿಗೆ ಕಾಡುತ್ತಿದೆ.

ಅಲ್ಪಸಂಖ್ಯಾತರ ನಿರ್ದೇಶನಾಲಯದಲ್ಲಿ ವಿದ್ಯಾರ್ಥಿ ವೇತನ ವಿಭಾಗ, ಆಡಳಿತ ವಿಭಾಗ, ಅಭಿವೃದ್ಧಿ ವಿಭಾಗ, ಕ್ರೈಸ್ತ ಮತ್ತು ಜೈನ ಸಮುದಾಯಗಳ ಅಭಿವೃದ್ಧಿ ವಿಭಾಗ, ಇಂಜಿನಿಯರಿಂಗ್ ವಿಭಾಗ, ಮಾಹಿತಿ ತಂತ್ರಜ್ಞಾನ ಕೋಶ, ನಿರಂತರ ಸಹಾಯವಾಣಿ ಕೇಂದ್ರ ಇದೆ.

ಈ ಎಲ್ಲ ವಿಭಾಗಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಹೊರಗುತ್ತಿಗೆ ಸಿಬ್ಬಂದಿ ಇಡೀ ರಾಜ್ಯದ ಅಲ್ಪಸಂಖ್ಯಾತರ ಕಲ್ಯಾಣ ಕಚೇರಿಗಳು, ಜಿಲ್ಲಾ ಕಚೇರಿಗಳು, ತಾಲೂಕು ಕಚೇರಿಗಳು, ಮೌಲಾನ ಆಝಾದ್ ಮಾದರಿ ಶಾಲೆಗಳು, ಮೊರಾರ್ಜಿ ದೇಸಾಯಿ ವಸತಿ ಶಾಲೆಗಳು, ಡಾ.ಎ.ಪಿ.ಜೆ.ಅಬ್ದುಲ್ ಕಲಾಂ ಸಿಬಿಎಸ್‍ಇ ಶಾಲೆಗಳು, ವೃತ್ತಿನಿರತ ಮಹಿಳಾ ಹಾಸ್ಟೆಲ್‍ಗಳು, ಪಿಯು ಕಾಲೇಜುಗಳು, ಮೆಟ್ರಿಕ್ ಪೂರ್ವ ಮತ್ತು ಮೆಟ್ರಿಕ್ ನಂತರದ ಹಾಸ್ಟೆಲ್‍ಗಳು ಕಾಮಗಾರಿ ವಿಭಾಗಕ್ಕೆ ಸಂಬಂಧಿಸಿದಂತೆ ಪ್ರಧಾನಮಂತ್ರಿ ಜನ ವಿಕಾಸ ಕಾರ್ಯಕ್ರಮ ಯೋಜನೆಗಳು. ಈ ಎಲ್ಲ ಕಾರ್ಯಗಳು ಸಫಲಗೊಳಿಸುವಲ್ಲಿ ಹೊರಗುತ್ತಿಗೆ ಸಿಬ್ಬಂದಿಗಳು ಮಹತ್ವದ ಪಾತ್ರ ವಹಿಸುತ್ತಾರೆ.

ಜೂನಿಯರ್ ಪ್ರೋಗ್ರಾಮರ್ ಗಳು, ಸೀನಿಯರ್ ಪ್ರೋಗ್ರಾಮರ್‍ಗಳು, ಅಪ್ಲಿಕೇಷನ್ ಡೆವಲಪರ್, ಸೈಟ್ ಇಂಜಿನಿಯರ್ ಗಳು, ಡಿ ದರ್ಜೆ ನೌಕರರು, ವಾಹನಚಾಲಕರು, ಡೇಟಾ ಎಂಟ್ರಿ ಆಪರೇಟರ್ ಗಳು, ಇತರೆ ಸಿಬ್ಬಂದಿಗಳು ಹೊರ ಗುತ್ತಿಗೆ ಆಧಾರದಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ.

ಬೆಂಗಳೂರಿನಲ್ಲಿರುವ ಅಲ್ಪಸಂಖ್ಯಾತರ ನಿರ್ದೇಶನಾಲಯದ ಕೇಂದ್ರ ಕಚೇರಿ ಸೇರಿದಂತೆ ರಾಜ್ಯದ 30 ಜಿಲ್ಲೆಗಳಲ್ಲಿ 2649 ಮಂದಿ ಹೊರಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿದ್ದಾರೆ. ಮಾಸಿಕವಾಗಿ ಅವರಿಗೆ 4.36 ಕೋಟಿ ರೂ.ವೇತನ ಪಾವತಿಯಾಗುತ್ತದೆ. 2022-23ನೆ ಸಾಲಿನಲ್ಲ ಅಲ್ಪಸಂಖ್ಯಾತರ ನಿರ್ದೇಶನಾಲಯಕ್ಕೆ ವಿವಿಧ ಕಾರ್ಯಕ್ರಮಗಳಿಗಾಗಿ 9.77 ಕೋಟಿ ರೂ.ಗಳನ್ನು ಸರಕಾರ ಒದಗಿತ್ತು. ಆದರೆ, 2023-24ನೆ ಸಾಲಿನಲ್ಲಿ ಕೇವಲ 41.20 ಲಕ್ಷ ರೂ.ಗಳನ್ನು ಮಾತ್ರ ಒದಗಿಸಿದೆ ಎಂದು ತಿಳಿದು ಬಂದಿದೆ.

ಅದೇ ರೀತಿ ವಿವಿಧ ಸಮುದಾಯಗಳ ಅಭಿವೃದ್ಧಿ ಕಾರ್ಯಕ್ರಮಗಳಿಗಾಗಿ 2022-23ರಲ್ಲಿ 15 ಕೋಟಿ ರೂ.ಒದಗಿಸಿದ್ದರೆ, 2023-24ರಲ್ಲಿ 5 ಕೋಟಿ ರೂ.ಗಳನ್ನು ನೀಡಲಾಗಿದೆ. ಮದ್ರಸಾಗಳಲ್ಲಿ ಉತ್ತಮ ಗುಣಮಟ್ಟದ ಶಿಕ್ಷಣವನ್ನು ನೀಡಲು 2022-23ರಲ್ಲಿ 8 ಕೋಟಿ ರೂ.ಗಳ ಅನುದಾನ ನೀಡಿದ್ದರೆ, 2023-24ರಲ್ಲಿ ಇದನ್ನು 5 ಕೋಟಿ ರೂ.ಗಳಿಗೆ ಇಳಿಸಲಾಗಿದೆ.

ನಾಯಕರಿಂದ ಸಿಗದ ಸ್ಪಂದನೆ: ಅಲ್ಪಸಂಖ್ಯಾತರ ನಿರ್ದೇಶನಾಲಯದ ಹೊರಗುತ್ತಿಗೆ ನೌಕರರನ್ನು ಕೈಬಿಡದಂತೆ ರಾಜ್ಯ ಸರಕಾರಿ ಹೊರಗುತ್ತಿಗೆ-ಗುತ್ತಿಗೆ ನೌಕರರ ಕಲ್ಯಾಣ ಒಕ್ಕೂಟದ ನೇತೃತ್ವದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪರನ್ನು ಭೇಟಿ ಮಾಡಿ ಮನವಿ ಸಲ್ಲಿಸಲಾಗಿದೆ. ಆದರೂ, ಯಾವುದೆ ಪ್ರಯೋಜನವಾಗಿಲ್ಲ ಎಂದು ತಿಳಿದು ಬಂದಿದೆ.

ವಿರೋಧ ಪಕ್ಷದ ನಾಯಕರಾದ ಸಿದ್ದರಾಮಯ್ಯ, ಬಿ.ಕೆ.ಹರಿಪ್ರಸಾದ್, ಯು.ಟಿ.ಖಾದರ್, ವಿಧಾನಪರಿಷತ್ ಸದಸ್ಯ ನಸೀರ್ ಅಹ್ಮದ್ ಈ ಸಿಬ್ಬಂದಿ ಪರವಾಗಿ ಸರಕಾರದ ಗಮನ ಸೆಳೆಯಲು ಪ್ರಯತ್ನಿಸಿದರೂ ಆಡಳಿತ ವರ್ಗದಿಂದ ಯಾವುದೆ ಸ್ಪಂದನೆ ಸಿಕ್ಕಿಲ್ಲ.

ಅಲ್ಪಸಂಖ್ಯಾತರ ನಿರ್ದೇಶನಾಲಯದ ಕೆಲಸದಿಂದ ನಮ್ಮನ್ನು ಏಕಾಏಕಿ ಕೈ ಬಿಡುತ್ತಿರುವುದರಿಂದ ನಮ್ಮ ಕುಟುಂಬದ ಆರ್ಥಿಕ ಪರಿಸ್ಥಿತಿ ಮೇಲೆ ಪರಿಣಾಮ ಬೀರಲಿದೆ. ಕೇಂದ್ರ ಕಚೇರಿಯಲ್ಲೆ 40 ಸಿಬ್ಬಂದಿಗಳನ್ನು ಕೈ ಬಿಡುವುದಾಗಿ ತಿಳಿಸಿದ್ದಾರೆ. ಇಡೀ ರಾಜ್ಯದಲ್ಲಿ 2649 ಸಿಬ್ಬಂದಿಗಳು ಹೊರ ಗುತ್ತಿಗೆ ಆಧಾರದಲ್ಲಿ ಅಲ್ಪಸಂಖ್ಯಾತರ ನಿರ್ದೇಶನಾಲಯದಲ್ಲಿ ಕೆಲಸ ಮಾಡುತ್ತಿದ್ದಾರೆ. ಹಂತ ಹಂತವಾಗಿ ಈ ಎಲ್ಲ ಸಿಬ್ಬಂದಿಗಳನ್ನು ಕೈ ಬಿಡಲು ಚಿಂತನೆ ನಡೆಸಲಾಗುತ್ತಿದೆ ಎಂದು ಹೆಸರು ಹೇಳಲು ಇಚ್ಛಿಸದ ಹೊರಗುತ್ತಿಗೆ ಸಿಬ್ಬಂದಿಯೊಬ್ಬರು ತಮ್ಮ ಆತಂಕ ವ್ಯಕ್ತಪಡಿಸಿದರು.

Similar News