ಕೆಲವರ ಪ್ರಚೋದನೆಯಿಂದ ಶಿಕಾರಿಪುರದಲ್ಲಿ ಕಲ್ಲು ತೂರಾಟ, ಪೊಲೀಸರ ಮೇಲೆ ದಾಳಿ: ಆರಗ ಜ್ಞಾನೇಂದ್ರ

Update: 2023-03-28 06:49 GMT

ಶಿವಮೊಗ್ಗ, ಮಾ.28: ರೌಡಿ ಪಟ್ಟಿಯಲ್ಲಿರುವವರು, ಚುನಾವಣೆ ಸಂದರ್ಭ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಯತ್ನಿಸಿದ ಕೆಲವರ ಪ್ರಚೋದನೆಯಿಂದ ಶಿಕಾರಿಪುರದಲ್ಲಿ ಕಲ್ಲು ತೂರಾಟ, ಪೊಲೀಸರ ಮೇಲೆ ದಾಳಿಯಾಗಿದೆ. ಈ ಸಂಬಂಧ ಹಲವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ತಿಳಿಸಿದ್ದಾರೆ.

ಶಿಕಾರಿಪುರದ ಪ್ರವಾಸಿ ಮಂದಿರದಲ್ಲಿ ಸಂಸದ ಬಿ.ವೈ.ರಾಘವೇಂದ್ರ, ಜಿಲ್ಲಾ ರಕ್ಷಣಾಧಿಕಾರಿ ಮಿಥುನ್ ಕುಮಾರ್ ಸೇರಿದಂತೆ ಪ್ರಮುಖರೊಂದಿಗೆ ಚರ್ಚೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಅವರು ಮಾತನಾಡುತ್ತಿದ್ದರು.

ಯಾರೋ ಕೆಲವರು ತಪ್ಪು ತಿಳಿವಳಿಕೆಯಿಂದ ಪ್ರಚೋದನೆ ನೀಡಿದ್ದರಿಂದ ಘಟನೆ ಸಂಭವಿಸಿದೆ. ಯಡಿಯೂರಪ್ಪ ಮೊದಲಿಂದಲು ಬಂಜಾರ ಸಮುದಾಯದ ಅಭಿವೃದ್ಧಿಗೆ ಶ್ರಮಿಸಿದ್ದಾರೆ. ಅವರ ಮನೆ ಮೇಲೆ ದಾಳಿಯಾಗಿದೆ. ಹಾಗಿದ್ದೂ ಯಡಿಯೂರಪ್ಪ ತಮ್ಮ ಮನೆ ಮೇಲೆ ದಾಳಿ ಮಾಡಿದವರ ವಿರುದ್ಧ ಕ್ರಮ ಕೈಗೊಳ್ಳಬೇಡಿ. ನಾನು ಅವರೊಂದಿಗೆ ಮಾತನಾಡುತ್ತೇನೆ ಎಂದು ತಿಳಿಸಿದ್ದಾರೆ ಎಂದರು.

ಪೊಲೀಸರ ಮೇಲೆ ಹಲ್ಲೆಯಾಗಿದ್ದು ಮೆಗ್ಗಾನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸದ್ಯ ಪರಿಸ್ಥಿತಿ ನಿಯಂತ್ರಣಕ್ಕೆ ತರಲಾಗಿದೆ. ಯಾರೂ ಇದರಿಂದ ಪ್ರಚೋದಿತರಾಗುವುದು ಬೇಡ. ಮೀಸಲಾತಿ ವಿಚಾರದಲ್ಲಿ ರಾಜ್ಯ ಸರಕಾರ ಎಲ್ಲರಿಗೂ ಅನುಕೂಲ ಆಗುವಂತೆ ನೋಡಿಕೊಂಡಿದೆ. ಮುಖ್ಯಮಂತ್ರಿ ಅವರು ತೆರೆದ ಮನಸ್ಸಿನಲ್ಲಿದ್ದಾರೆ. ವಿದ್ಯಾವಂತರು ಕುಳಿತು ಚರ್ಚೆ ನಡೆಸಬಹುದು. ಕಾನೂನು ಕೈಗೆತ್ತಿಕೊಳ್ಳುವುದು ಒಳ್ಳೆಯದಲ್ಲ ಎಂದು ತಿಳಿಸಿದರು.

ಚುನಾವಣೆ ಸಂದರ್ಭ ಕೆಲವರು ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಯತ್ನಿಸಿದ್ದಾರೆ. ರಾಜಕೀಯ ಉದ್ದೇಶ ಇಟ್ಟುಕೊಂಡು ಅಮಾಯಕರನ್ನು ಪ್ರಚೋದಿಸಿದ್ದಾರೆ. ತಹಶೀಲ್ದಾರ್ ಅವರಿಗೆ ಮನವಿ ಕೊಡಲು ಎಲ್ಲರಿಗೂ ಸ್ವಾತಂತ್ರ್ಯವಿದೆ. ಆದರೆ ಕಲ್ಲು ಹೊಡೆಯುವುದು, ಪೊಲೀಸರ ಮೇಲೆ ದಾಳಿ ಸಹಿಸಲಾಗದು. ರೌಡಿ ಪಟ್ಟಿಯಲ್ಲಿರುವ ಕೆಲವರು ಕೂಡ ಅಲ್ಲಿದ್ದರು. ಹಾಗಾಗಿ ಕೆಲವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಸಂಸದ ಬಿ.ವೈ.ರಾಘವೇಂದ್ರ, ಎಸ್ಪಿ‌ ಮಿಥುನ್‌ ಕುಮಾರ್ ಉಪಸ್ಥಿತರಿದ್ದರು.

ಇದನ್ನೂ ಓದಿಅಮಿತ್ ಶಾ ರಾಜ್ಯ ಭೇಟಿ ವೇಳೆ ಭದ್ರತಾ ಲೋಪ: ಇಬ್ಬರು ವಿದ್ಯಾರ್ಥಿಗಳ ಬಂಧನ

Similar News