ಬೇಲೂರಿನ ಚೆನ್ನಕೇಶವ ರಥೋತ್ಸವದ ವೇಳೆ ಕುರಾನ್ ಪಠಣ ವಿರೋಧಿಸಿ ಸಂಘಪರಿವಾರ ಕಾರ್ಯಕರ್ತರಿಂದ ಪ್ರತಿಭಟನೆ

'ಕುರಾನ್ ಝಿಂದಾಬಾದ್’ ಘೋಷಣೆ ಕೂಗಿದ ಯುವಕ ಪೊಲೀಸ್ ವಶಕ್ಕೆ ► ವಿವಿಧ ಸಂಘಟನೆಗಳಿಂದ 'ಸೌಹಾರ್ದ ಕಾಲ್ನಡಿಗೆ ಜಾಥಾ' ನಡೆಸಲು ತೀರ್ಮಾನ

Update: 2023-03-28 11:22 GMT

ಬೇಲೂರು: ಮಾ,28: ಶ್ರೀ ಚನ್ನಕೇಶವ ದೇವಾಲಯ ರಥೋತ್ಸವ ಸಂದರ್ಭದಲ್ಲಿ ಕುರಾನ್ ಪಠಣ ಮಾಡುವ ಸಂಪ್ರದಾಯಕ್ಕೆ ಸಂಬಂಧಪಟ್ಟಂತೆ ಪರ- ವಿರೋಧದ ಘಟನೆ ನಡೆದಿದೆ. ಒಂದು ಕಡೆ ಕುರಾನ್ ಪಠಣ ಮಾಡಬಾರದು ಎಂದು ಸಂಘಪರಿವಾರ ಕಾರ್ಯಕರ್ತರು ಪತಿಭಟನೆ ನಡೆಸಿದರೆ, ಈ ಸಂದರ್ಭದಲ್ಲಿ ಯುವಕನೋರ್ವ ಕುರಾನ್ ಝಿಂದಾಬಾದ್ ಎಂದು ಘೋಷಣೆ ಕೂಗಿದ್ದಾನೆ.

ಇನ್ನು ಸಂಘಪರಿವಾರ ಕಾರ್ಯಕರ್ತರ ಈ ಧೋರಣೆ ವಿರುದ್ಧ ವಿವಿಧ ಸಂಘಟನೆಯ ಪ್ರಮುಖರು ಪ್ರವಾಸಿ ಮಂದಿರದಲ್ಲಿ ಸಭೆ ನಡೆಸಿ ಗುರುವಾರ ಸೌಹಾರ್ದ ಕಾಲುನಡೆಗೆ ನಡೆಸಲು ಮುಂದಾಗಿವೆ.

ಬೇಲೂರಿನಲ್ಲಿ ಏಪ್ರಿಲ್ 4 ರಂದು ಚನ್ನಕೇಶವ ರಥೋತ್ಸವ ನಡೆಯಲಿದ್ದು, ಈ ವೇಳೆ ಬೇಲೂರಿನ ಚನ್ನಕೇಶವ ರಥೋತ್ಸವ ವೇಳೆ ಕುರ್’ಆನ್ ಪಠಣ ಮಾಡದಂತೆ ಆಗ್ರಹಿಸಿ ವಿಶ್ವ ಹಿಂದೂ ಪರಿಷತ್ ಮತ್ತು ಬಜರಂಗ ದಳದ ಕಾರ್ಯಕರ್ತರು ಮಂಗಳವಾರ ಪ್ರತಿಭಟನೆ ನಡೆಸಿದರು. ಪ್ರತಿಭಟನೆ ಪಟ್ಟಣದ ಪ್ರಮುಖ ಬೀದಿಯಲ್ಲಿ ಹಿಂದೂ ಜಾಗೃತಿ ಸಮಿತಿ ಪ್ರಮುಖ ಸಂತೋಷ್ ಕೆಂಚಾಂಭ ನೇತೃತ್ವದಲ್ಲಿ  ನಡೆಯುತ್ತಿದ್ದು ಪ್ರತಿಭಟನೆ ಯಲ್ಲಿ ಕುರಾನಿಗೆ ಸಂಬಂಧಿಸಿದಂತೆ ಬಜರಂಗದಳದ ಮುಖಂಡರೊಬ್ಬ ಮಾತನಾಡುತ್ತಿದ್ದ ಸಂದರ್ಭದಲ್ಲಿ ಈ ವೇಳೆ ದಾರಿಯಲ್ಲಿ ಸಾಗುತ್ತಿದ್ದ ಯುವಕನೋರ್ವ ಕುರ್’ಆನ್ ಝಿಂದಾಬಾದ್ ಎಂದು ಘೋಷಣೆ ಕೂಗಿದ್ದಾನೆ‌.  ಇದರಿಂದಾಗಿ ಸಂಘಪರಿವಾರ ಕಾರ್ಯಕರ್ತರು ಮತ್ತು ಯುವಕನ ನಡುವೆ ವಾಗ್ವಾದ ನಡೆದಿದ್ದು, ಯುವಕನ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ.

ತಕ್ಷಣ ಪೊಲೀಸರು ಪರಿಸ್ಥಿತಿ ನಿಯಂತ್ರಿಸಲು ಲಾಠಿಚಾರ್ಜ್ ಮಾಡಿ. ನಂತರ ಘೋಷಣೆ ಕೂಗಿದ ಯುವಕನನ್ನು ವಶಕ್ಕೆ ಪಡೆದಿದ್ದಾರೆನ್ನಲಾಗಿದೆ.

► ಸೌಹಾರ್ದ ಕಾಲ್ನಡಿಗೆ ಜಾಥಾ  ನಡೆಸಲು ತೀರ್ಮಾನ

ಘಟನೆ ಹಿನ್ನೆಲೆ ಪಟ್ಟಣದ ಪ್ರವಾಸಿ ಮಂದಿರದಲ್ಲಿ ವಿವಿಧ ಸಂಘಟನೆಗಳ ಮುಖಂಡರು ಸಭೆ ನಡೆಸಿ ಸ್ವಾತಂತ್ರ್ಯ ಪೂರ್ವದಿಂದಲೂ ನಡೆದುಕೊಂಡು ಬರುತ್ತಿರುವ ಸಂಪ್ರದಾಯವನ್ನು ಕಡೆಗಣಿಸಿ ವಿರೋಧಿಸುತ್ತಿರುವುದನ್ನು ಖಂಡಿಸಿದರು. ಗುರುವಾರ ಸೌಹಾರ್ದ ಕಾಲು ನಡಿಗೆ ಜಾಥಾವನ್ನು ನಡೆಸಲು ತೀರ್ಮಾನಿಸಿದ್ದಾರೆ.

Similar News