ರಸ್ತೆಗಳಿಗೆ ನಟರ ಹೆಸರು: 'ಅಪ್ಪನನ್ನು ಮರೆತಿರುವುದು ಸಣ್ಣತನ‌' ಎಂದ ವಿಜೇತಾ ಅನಂತಕುಮಾರ್

ಪಕ್ಷಕ್ಕೆ ಆತ್ಮಾವಲೋಕನ ಅಗತ್ಯ ಎಂದ ದಿವಂಗತ ಬಿಜೆಪಿ ನಾಯಕನ ಪುತ್ರಿ

Update: 2023-03-28 14:43 GMT

ಬೆಂಗಳೂರು: ರಾಜ್ಯ ರಾಜಧಾನಿಯ ಪ್ರಮುಖ ರಸ್ತೆಗಳಿಗೆ ನಟರ ಹೆಸರುಗಳನ್ನು ಮರುನಾಮಕರಣ ಮಾಡುತ್ತಿರುವ ಬೆನ್ನಲ್ಲೇ, ಬಿಜೆಪಿ ಹಿರಿಯ ನಾಯಕ ದಿವಂಗತ ಅನಂತ್‌ ಕುಮಾರ್‌ ಪುತ್ರಿ ವಿಜೇತಾ ಅನಂತ್‌ ಕುಮಾರ್‌ ತಮ್ಮ ಅಸಮಾಧಾನ ಹೊರ ಹಾಕಿದ್ದಾರೆ. 

ತನ್ನ ಕೊನೆ ಉಸಿರುವವರೆಗೆ ಪಕ್ಷವನ್ನು ಕಟ್ಟಿ ಬೆಳೆಸಿದ ನನ್ನ ಅಪ್ಪನನ್ನು ಮರೆತಿರುವ ಬಿಜೆಪಿಗೆ ಆತ್ಮಾವಲೋಕನ ಅಗತ್ಯ ಎಂದು ವಿಜೇತಾ ಬಿಜೆಪಿಯನ್ನು ಟೀಕಿಸಿದ್ದಾರೆ. 

“ಅಪ್ಪ 1987ರಲ್ಲಿ ಅಧಿಕೃತವಾಗಿ ಬಿಜೆಪಿಯನ್ನು ಸೇರಿದರು, ತಮ್ಮ ಕೊನೆಯ ಉಸಿರು ಇರುವವರೆಗೂ ಬಿಜೆಪಿಗಾಗಿ ದುಡಿದರು. ಉದ್ಘಾಟನಾ ಕಾರ್ಯಕ್ರಮಗಳು, ರಸ್ತೆಗಳು, ರೈಲು ಮಾರ್ಗಗಳಲ್ಲಿ ಅವರ ಹೆಸರಿಡುವ ಮೂಲಕ ಅವರ ಕೊಡುಗೆಗಳನ್ನು ಗುರುತಿಸದಿರುವುದು (ಪಕ್ಷದ) ಕ್ಷುಲ್ಲಕ ನಡೆಯಾಗಿದೆ. ಅವರು ಲಕ್ಷಾಂತರ ಜನರ ಹೃದಯದಲ್ಲಿ ಜೀವಂತವಾಗಿದ್ದಾರೆ. ಅವರನ್ನು ಮರೆಯುತ್ತಿರುವ ಪಕ್ಷಕ್ಕೆ ಆತ್ಮಾವಲೋಕನ ಅಗತ್ಯ ಇದೆ” ಎಂದು ವಿಜೇತಾ ಅನಂತಕುಮಾರ್ ಟ್ವೀಟ್‌ ಮಾಡಿದ್ದಾರೆ.

ವಿಜೇತಾ ದಿನ ಪತ್ರಿಕೆಯೊಂದರ ವರದಿಯನ್ನು ಟ್ವಿಟರ್ ನಲ್ಲಿ ಹಂಚಿಕೊಂಡಿದ್ದು, ಆ ವರದಿಯಲ್ಲಿ ಬೆಂಗಳೂರಿನ ರಸ್ತೆಗಳಿಗೆ ಪುನೀತ್‌ ರಾಜ್‌ಕುಮಾರ್‌, ಅಂಬರೀಷ್‌ ಮತ್ತು ವಜ್ರಮುನಿಯವರ ಹೆಸರು ನಾಮಕರಣ ಮಾಡಿದ ಬಗ್ಗೆ ಉಲ್ಲೇಖಿಸಲಾಗಿದೆ. ಅನಂತಕುಮಾರ್‌ ರ ಹೆಸರನ್ನು ಸಣ್ಣ ರಸ್ತೆಗೆ ಇಡಲಾಗಿದೆ ಎಂಬ ಆಕ್ಷೇಪಗಳೂ ಆ ವರದಿಯಲ್ಲಿ ಇವೆ. 

ವಿಜೇತಾ ಟ್ವೀಟ್‌ ಗೆ ಪರ ವಿರೋಧ ಅಭಿಪ್ರಾಯಗಳು ವ್ಯಕ್ತವಾಗಿದ್ದು, ಅನಂತಕುಮಾರ್ ಅವರು ಬಲಾಢ್ಯ ಜಾತಿಗೆ ಸೇರಿದವರಾಗಿದ್ದರೆ ಅವರ ಹೆಸರನ್ನೂ ಬಿಜೆಪಿ ನೆನಪಿಸುತ್ತಿತ್ತು ಎಂದು ಟ್ವಿಟರ್‌ ಬಳಕೆದಾರರೊಬ್ಬರು ಪ್ರತಿಕ್ರಿಯಿಸಿದ್ದಾರೆ. 

ಇನ್ನು ಕೆಲವರು ಕನ್ನಡಿಗ ನಟರ ಹೆಸರನ್ನು ಎಳೆದು ತಂದಿರುವುದನ್ನು ಪ್ರಶ್ನಿಸಿದ್ದು,  ಯಾರ್ಯಾರೋ ಗೊತ್ತಿಲ್ಲದೇ ಇರುವವರ ಹೆಸರು ಇಡಬೇಕಾದರೆ ಏನು ತೊಂದ್ರೆ ಇಲ್ಲ ಕನ್ನಡಿಗರ ಹೆಸರು ಇಡಬೇಕಂದ್ರೆ ಕಷ್ಟ ಅಲ್ವಾ ಎಂದು ಪ್ರತಿಕ್ರಿಯಿಸಿದ್ದಾರೆ.

Similar News