‘ಮೀಸಲಾತಿ ವರ್ಗೀಕರಣ’ ಕಾರ್ಯಸಾಧುವಲ್ಲ: ಪ್ರಕಾಶ್ ರಾಥೋಡ್

Update: 2023-03-28 18:04 GMT

ಬೆಂಗಳೂರು, ಮಾ.28: ಪರಿಶಿಷ್ಟ ಜಾತಿಯಲ್ಲಿರುವ ಸಮಾನ ಅವಕಾಶ ವಂಚಿತ ಶೋಷಿತ ತಳ ಸಮುದಾಯಗಳನ್ನು ಮರು ವರ್ಗಿಕರಿಸಲು ರಾಜ್ಯ ಸರಕಾರಕ್ಕೆ ಅಧಿಕಾರ ಇಲ್ಲ. ಆದರೂ ಬಿಜೆಪಿ ಸರಕಾರವು ಸಾಮಾಜಿಕ, ಶೈಕ್ಷಣಿಕ, ವೈಜ್ಞಾನಿಕ ಮಾನದಂಡಗಳ ಮೂಲಕ ಪರಿಗಣಿಸದೆ ಕೇವಲ ಜನಸಂಖ್ಯೆಯ ಆಧಾರದ ಮೇಲೆ ಪರಿಶಿಷ್ಟ ಜಾತಿಯ ಪಟ್ಟಿಯನ್ನು ಮರು ವರ್ಗೀಕರಿಸಿ ಮೇಲ್ನೋಟಕ್ಕೆ 5 ಗುಂಪುಗಳನ್ನಾಗಿ ಮಾಡುತ್ತಿರುವುದು ಕಾರ್ಯಸಾಧುವಲ್ಲ ಎಂದು ಕೆಪಿಸಿಸಿ ವಕ್ತಾರ ಪ್ರಕಾಶ್ ಕೆ. ರಾಥೋಡ್ ತಿಳಿಸಿದ್ದಾರೆ.

ಮಂಗಳವಾರ ಮಾಧ್ಯಮ ಪ್ರಕಟನೆ ನೀಡಿರುವ ಅವರು, ಮೀಸಲಾತಿಗೆ ಹಿಂದುಳುದಿರುವಿಕೆ ಮಾನದಂಡವಾದ ಮೇಲೆ ಒಳಮೀಸಲಾತಿಗೂ ಹಿಂದುಳಿದಿರುವಿಕೆಯೇ ಮಾನದಂಡವಾಗಬೇಕೆ ಹೊರತು ಜನಸಂಖ್ಯೆಯಲ್ಲ. ಆದ್ದರಿಂದ ಈ ವಗೀಕರಣ ಅಸಂವಿಧಾನಿಕ ಹಾಗೂ ಇ.ಎ.ಚಿನ್ನಯ್ಯ ವಿರುದ್ಧ ಆಂಧ್ರಪ್ರದೇಶ ಸುಪ್ರೀಂ ಕೋರ್ಟಿನ ತೀರ್ಪಿನ ವಿರುದ್ಧವಾಗಿದೆ. ಈ ಸರಕಾರದ ಸಂವಿಧಾನದ ವಿರೋಧಿ ನಡೆಯನ್ನು ಪರಿಶಿಷ್ಟ ಜಾತಿಯ 99 ಸಮುದಾಯಗಳ ಪರವಾಗಿ ಕರ್ನಾಟಕ ಮೀಸಲಾತಿ ಸಂರಕ್ಷಣಾ ಒಕ್ಕೂಟವು ಸ್ಪಷ್ಟವಾಗಿ ವಿರೋಧಿಸುತ್ತದೆ ಎಂದು ತಿಳಿಸಿದ್ದಾರೆ.

ನ್ಯಾ. ಸದಾಶಿವ ಆಯೋಗದ ವರದಿ ಆಧಾರಿತವಾದ ಅಸಂವಿಧಾನಿಕ ಒಳಮಿಸಲಾತಿ ಶಿಫಾರಸನ್ನು ತೀವ್ರವಾಗಿ ಖಂಡಿಸುತ್ತೇನೆ. ಸಂವಿಧಾನ ಅನುಚ್ಛೇದ 17ರಂತೆ ಈಗಾಗಲೇ ದೇಶದಾದ್ಯಂತ ಅಸ್ಪಶ್ಯತೆ ಆಚರಣೆ ನಿಷಿದ್ಧವಾಗಿದ್ದರೂ ಸರ್ಕಾರ ಸತ್ಯ ಹಾಗೂ ಅಸ್ಪೃಶ್ಯ ಎಂಬ ಪರಿಕಲ್ಪನೆ ಅಡಿ ಒಳ ವರ್ಗಿಕರಣ ಮಾಡುತ್ತಿರುವುದು ಸಂವಿಧಾನದ ಸಮಾನತೆಯ ಆಶಯಕ್ಕೆ ವಿರುದ್ಧವಾಗಿದೆ. ಈ ಬೆಳವಣಿಗೆಯು ದೇಶದಾದ್ಯಂತ ದಮನಿತ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಬುಡಕಟ್ಟುಗಳ ಐಕ್ಯತೆಯನ್ನು ನುಚ್ಚುನೂರು ಮಾಡಿ ಪರಿಶಿಷ್ಟರ ಒಗ್ಗಟ್ಟನ್ನು ತುಂಡರಿಸಿ, ಬಿಜೆಪಿ ಮತ್ತು ಆರ್.ಎಸ್.ಎಸ್ ದಲಿತರನ್ನು ಒಡೆದು ಆಳುವ ದಮನಕಾರಿ ನೀತಿಯನ್ನು ಅನುಸರಿಸುತ್ತಿವೆ ಎಂದು ಹೇಳಿದ್ದಾರೆ.

ಪ್ರಸ್ತುತ ಬಿಜೆಪಿ ಮುಖ್ಯಮಂತ್ರಿ ಸಮೇತ ಎಲ್ಲರೂ ಸಂವಿಧಾನ ವಿರೋಧಿ ನಿರ್ಣಯ ತೆಗೆದುಕೊಂಡಿದ್ದು, ಇದು ಖಂಡನೀಯ. ಮೀಸಲಾತಿ ವಿಚಾರದಲ್ಲಿ ಸಮುದಾಯಗಳಿಗೆ ಅನ್ಯಾಯವಾದರೂ ದನಿ ಎತ್ತದ ಬಿಜೆಪಿಯ ಲಂಬಾಣಿ, ಬೋವಿ ಸಮಾಜದ ಮಂತ್ರಿಗಳು ಹಾಗೂ ಶಾಸಕರು ಈ ಕೂಡಲೇ ರಾಜೀನಾಮೆ ಕೊಡಬೇಕೆಂದು ಎಂದು ಪ್ರಕಾಶ್ ಕೆ. ರಾಥೋಡ್ ಒತ್ತಾಯಿಸಿದ್ದಾರೆ.

Similar News