ಮೊದಲ ಬಾರಿಗೆ 80 ವರ್ಷ ಮೇಲ್ಪಟ್ಟವರು, ಅಂಗವಿಕಲರಿಗೆ ಮನೆಯಿಂದಲೇ ಮತದಾನ ಮಾಡುವ ಅವಕಾಶ: ಇಲ್ಲಿದೆ ಸಂಪೂರ್ಣ ಮಾಹಿತಿ

Update: 2023-03-29 08:10 GMT

ಹೊಸದಿಲ್ಲಿ: ಚುನಾವಣಾ ಆಯೋಗವು ಬುಧವಾರ ಕರ್ನಾಟಕ ವಿಧಾನಸಭಾ ಚುನಾವಣಾ ದಿನಾಂಕವನ್ನು ಘೋಷಿಸಿದೆ. ಈ ಕುರಿತು ದಿಲ್ಲಿಯ ವಿಜ್ಞಾನ ಭವದ ಪ್ಲೀನರಿ ಹಾಲ್‌ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಭಾರತದ ಚುನಾವಣಾ ಆಯುಕ್ತ ಅನೂಪ್‌ ಚಂದ್ರ ಪಾಂಡೆ, ಮುಖ್ಯ ಚುನಾವಣಾ ಆಯುಕ್ತ ರಾಜೀವ್‌ ಕುಮಾರ್‌ ಮತ್ತು ಇಸಿಐ ಅರುಣ್‌ ಗೋಯೆಲ್‌ ದಿನಾಂಕಗಳನ್ನು ಘೋಷಿಸಿದರು.

ವಿಧಾನಸಭಾ ಚುನಾವಣೆ ಮೇ 10 ರಂದು ನಡೆಯಲಿದ್ದರೆ ಮತ ಎಣಿಕೆ ಮೇ 13 ರಂದು ನಡೆಯಲಿದೆ. ಗಜೆಟ್‌ ಅಧಿಸೂಚನೆಯನ್ನು ಎಪ್ರಿಲ್‌ 13 ರಂದು ಹೊರಡಿಸಲಾಗುವುದು ಹಾಗೂ ನಾಮಪತ್ರ ಸಲ್ಲಿಕೆಗೆ ಎಪ್ರಿಲ್‌ 20 ಅಂತಿಮ ದಿನಾಂಕವಾಗಿದ್ದು, ನಾಮಪತ್ರ ಪರಿಶೀಲನೆ ಎಪ್ರಿಲ್‌ 21 ರಂದು ನಡೆದು ನಾಮಪತ್ರ ವಾಪಸ್‌ ಪಡೆಯಲು ಅಂತಿಮ ದಿನಾಂಕ ಎಪ್ರಿಲ್‌ 24 ಆಗಿದೆ. ಒಟ್ಟು 224 ವಿಧಾನಸಭಾ ಕ್ಷೇತ್ರಗಳಿಗೆ ಮತದಾನ ನಡೆಯಲಿದ್ದು ಆ ಪೈಕಿ 36 ಪರಿಶಿಷ್ಟ ಜಾತಿ ಹಾಗು 15 ಪರಿಶಿಷ್ಟ ವರ್ಗಗಳಿಗೆ ಮೀಸಲು ಕ್ಷೇತ್ರಗಳು. ಮೇ 15 ಕ್ಕೆ ಚುನಾವಣಾ ಪ್ರಕ್ರಿಯೆ ಕೊನೆಗೊಳ್ಳಲಿದೆ ಎಂದು ಚುನಾವಣಾ ಆಯೋಗ ತಿಳಿಸಿದೆ.

ಮುಖ್ಯ ಚುನಾವಣಾ ಆಯುಕ್ತರು ನೀಡಿದ ಮಾಹಿತಿಗಳು ಹೀಗಿವೆ:

►ಕರ್ನಾಟಕದಲ್ಲಿ ಮೊದಲ ಬಾರಿಯ ಮತದಾರರ ಸಂಖ್ಯೆ 2018-19 ಗೆ ಹೋಲಿಸಿದಾಗ 9.17 ಲಕ್ಷದಷ್ಟು ಏರಿಕೆಯಾಗಿದೆ.

►ರಾಜ್ಯದಲ್ಲಿ ಒಟ್ಟು 58,282 ಮತಗಟ್ಟೆಗಳಿರಲಿವೆ. ಪ್ರತಿ ಮತಗಟ್ಟೆಯಲ್ಲಿ ಸರಾಸರಿ ಮತದಾರರ ಸಂಖ್ಯೆ 883 ಆಗಿದೆ. ನಗರ ಪ್ರದೇಶಗಳಲ್ಲಿನ ಮತಗಟ್ಟೆಗಳ ಸಂಖ್ಯೆ 24,063 ಆಗಿದ್ದರೆ ಗ್ರಾಮೀಣ ಪ್ರದೇಶಗಳ ಮತಗಟ್ಟೆಗಳ ಸಂಖ್ಯೆ 34,219 ಆಗಿದೆ. 

►224 ಮತದಾನ ಕೇಂದ್ರಗಳಲ್ಲಿ ಅತ್ಯಂತ ಕಿರಿಯ ವಯಸ್ಸಿನ ಉದ್ಯೋಗಿಗಳಿಂದ ನಿರ್ವಹಿಸಲಾಗುತ್ತದೆ. ನೂರು ಮತಗಟ್ಟೆಗಳನ್ನು ಅಂಗ ವೈಕಲ್ಯವಿರುವ ಸಿಬ್ಬಂದಿಯೇ ನಿರ್ವಹಿಸಲಿದ್ದಾರೆ. 1300 ಕ್ಕೂ ಹೆಚ್ಚು ಮತಗಟ್ಟೆಗಳನ್ನು ಮಹಿಳೆಯರೇ ನಿರ್ವಹಿಸಲಿದ್ದಾರೆ. 240 ಪರಿಸರ ಸ್ನೇಹಿ ಮತಗಟ್ಟೆಗಳಿರುತ್ತವೆ.  

►ರಾಜ್ಯದಲ್ಲಿರುವ ಒಟ್ಟು ತೃತೀಯ ಲಿಂಗಿಗಳ ಜನಸಂಖ್ಯೆ 42,756 ಆಗಿದೆ ಎಂಬ ಮಾಹಿತಿಯನ್ನು ಚುನಾವಣಾ ಆಯೋಗ ನೀಡಿದೆ

►ಮೊದಲ ಬಾರಿಗೆ 80 ಕ್ಕಿಂತ ಮೇಲ್ಪಟ್ಟ ನಾಗರಿಕರು ಹಾಗೂ ಅಂಗವಿಕರಿಗೆ ಮನೆಗಳಿಂದಲೇ ಮತದಾನ ಮಾಡುವ ಅವಕಾಶ ದೊರೆಯಲಿದೆ ಎಂದು ಚುನಾವಣಾ ಆಯುಕ್ತರು ತಿಳಿಸಿದ್ದಾರೆ.

►ರಾಜ್ಯದಲ್ಲಿನ ಒಟ್ಟು ಮತದಾರರ ಸಂಖ್ಯೆ 5,21,73,579 ಆಗಿದೆ. ಪುರುಷ ಮತದಾರರ ಸಂಕ್ಯೆ 2,62,42,561 ಆಗಿದ್ದರೆ ಮಹಿಳಾ ಮತದಾರರ ಸಂಖ್ಯೆ 2,59,26,319 ಆಗಿದೆ. ತೃತೀಯ ಲಿಂಗಿ ಮತದಾರರ ಸಂಖ್ಯೆ 4,699 ಆಗಿದೆ. 

►80 ವರ್ಷಕ್ಕಿಂತ ಮೇಲ್ಪಟ್ಟ ಮತದಾರರ ಸಂಖ್ಯೆ 12.15 ಲಕ್ಷ, ಅಂಗವಿಕಲತೆ ಇರುವ ಮತದಾರರ ಸಂಕ್ಯೆ 5.55 ಲಕ್ಷಕ್ಕಿಂತ ಹೆಚ್ಚು ಆಗಿದೆ. ಮೊದಲ ಬಾರಿಯ ಮತದಾರರ (18-19 ವರ್ಷಗಳು) ಸಂಖ್ಯೆ ಮಾರ್ಚ್‌ 3, 2023 ರಲ್ಲಿದ್ದಂತೆ 9,17,241 ಆಗಿದೆ.

►ಜನವರಿ 2 ಹಾಗೂ ಎಪ್ರಿಲ್‌ 1, 2023 ನಡುವೆ 18 ವರ್ಷ ತುಂಬಿದ ಮತದಾರರ ಸಂಖ್ಯೆ 41,432 ಆಗಿದೆ.

2018ರಲ್ಲಿ ರಾಜ್ಯದಲ್ಲಿ 72.4% ಮತದಾನ ನಡೆದಿದ್ದು ಬೆಂಗಳೂರಿನಲ್ಲಿ ಕೇವಲ 50% ಸರಾಸರಿ ಮತದಾನ ನಡೆದಿತ್ತು. ಅದನ್ನು ಹೆಚ್ಚಿಸಲು ಇಂಡಿಯನ್ ಇನ್ಸ್ ಟಿಟ್ಯೂಟ್ ಆಫ್ ಸಯನ್ಸ್ ಜೊತೆಗೂಡಿ ಐಟಿ ಕ್ಷೇತ್ರದವರ ಸಹಕಾರ ಪಡೆದು ಎಲೆಕ್ ತಾನ್ ಎಂಬ ಅಭಿಯಾನ ನಡೆಸಲಾಗುತ್ತಿದೆ. ಯಾವುದೇ ಹಿಂಸಾಚಾರವಿಲ್ಲದೆ, ಎಲ್ಲಿಯೂ ಮರು ಮತದಾನ ನಡೆಯುವ ಪ್ರಮೇಯ ಬಾರದ ಹಾಗೆ ಚುನಾವಣೆ ನಡೆಸಲಾಗುವುದು ಎಂದು ಮುಖ್ಯ ಚುನಾವಣಾ ಆಯುಕ್ತರು ಹೇಳಿದ್ದಾರೆ.

ಈಗಿರುವ  15ನೇ ವಿಧಾನಸಭೆಯ ಅವಧಿ ಮೇ 24, 2023 ಕ್ಕೆ ಕೊನೆಗೊಳ್ಳಲಿದೆ. ಅದಕ್ಕೆ ಮೊದಲು ಹೊಸ ವಿಧಾನಸಭೆ ಅಸ್ತಿತ್ವಕ್ಕೆ ಬರುವಂತೆ ಇದೀಗ ಚುನಾವಣಾ ದಿನಾಂಕ ನಿಗದಿಯಾಗಿದೆ. 

ಹಾಲಿ ವಿಧಾನಸಭೆಯಲ್ಲಿ ಬಿಜೆಪಿಯ 119, ಕಾಂಗ್ರೆಸ್ ನ 69 ಹಾಗು ಜೆಡಿಎಸ್ ನ 31 ಶಾಸಕರಿದ್ದಾರೆ.  ಬಿಎಸ್ಪಿಯ ಒಬ್ಬ ಶಾಸಕ ಮಹೇಶ್  ಬಿಜೆಪಿ ಸೇರಿದ್ದರೂ ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಡದೇ ಇರುವುದರಿಂದ ಬಿಎಸ್ಪಿ ಶಾಸಕರಾಗಿ ಗುರುತಿಸಲ್ಪಡುತ್ತಾರೆ. ಇಬ್ಬರು ಪಕ್ಷೇತರ ಶಾಸಕರಾದ ಶರತ್ ಬಚ್ಚೇ ಗೌಡ ಹಾಗು ನಾಗೇಶ್  ಕಾಂಗ್ರೆಸ್ ಸೇರಿದ್ದರೂ ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಡದೇ ಇರುವುದರಿಂದ ಪಕ್ಷೇತರ ಶಾಸಕರಾಗಿಯೇ ಗುರುತಿಸಲ್ಪಡುತ್ತಾರೆ. 

ಕರ್ನಾಟಕ ವಿಧಾನಸಭೆಯಲ್ಲಿ ಬಹುಮತಕ್ಕೆ 113 ಸ್ಥಾನ ಇರಬೇಕು.   

Similar News