ಸಚಿವ ನಾರಾಯಣಗೌಡ ಭಾವಚಿತ್ರ ಇರುವ ಬ್ಯಾಗ್‍ಗಳ ವಶ: ಇಬ್ಬರ ವಿರುದ್ಧ ಎಫ್‍ಐಆರ್

Update: 2023-03-29 13:24 GMT

ಮಂಡ್ಯ, ಮಾ.29: ಬೆಂಗಳೂರಿನ ಚಾಮರಾಜಪೇಟೆ ಪೊಲೀಸ್ ಠಾಣೆ ವ್ಯಾಪ್ತಿಯ ಬ್ಯಾಗ್ ತಯಾರಿಕೆ ಕಾರ್ಖಾನೆಯಲ್ಲಿ ಪತ್ತೆಯಾಗಿದ್ದ ಸಚಿವ ಕೆ.ಸಿ.ನಾರಾಯಣಗೌಡ ಭಾವಚಿತ್ರ ಮತ್ತು ಬಿಜೆಪಿ ಚಿಹ್ನೆ ಇರುವ 4 ಸಾವಿರ ಬ್ಯಾಗ್‍ಗಳ ವಶಪಡಿಸಿಕೊಂಡಿರುವ ಪ್ರಕರಣ ಸಂಬಂಧ ಮಾ.27 ರಂದು ಇಬ್ಬರ ಮೇಲೆ ಚಾಮರಾಜಪೇಟೆ ಪೊಲೀಸ್ ಠಾಣೆಯಲ್ಲಿ ಎಫ್‍ಐಆರ್ ದಾಖಲಾಗಿದೆ.

ಚಾಮರಾಜಪೇಟೆ ವಿಧಾನಸಭಾ ಕ್ಷೇತ್ರದ ಎಂಸಿಸಿ ತಂಡದ ನೋಡಲ್ ಅಧಿಕಾರಿ ಎಂ.ಎಸ್.ಉಮೇಶ್ ಅವರು ನೀಡಿರುವ ದೂರಿನ ಹಿನ್ನೆಲೆಯಲ್ಲಿ ಮಂಡ್ಯ ಜಿಲ್ಲೆ ಕೆ.ಆರ್.ಪೇಟೆ ಮಂಡಲದ ಬಿಜೆಪಿ ಅಧ್ಯಕ್ಷರು ಎನ್ನಲಾದ ಗಂಗಾಧರ್ ಮತ್ತು ಬ್ಯಾಗ್ ಫ್ಯಾಕ್ಟರಿ ಮಾಲಕ ಆಂಥೋಣಿ ಪ್ರಸಾದ್ ವಿರುದ್ಧ ಪ್ರಕರಣ ದಾಖಲಾಗಿದೆ ಎಂದು ವರದಿಯಾಗಿದೆ.

ಚಾಮರಾಜಪೇಟೆ ಲೀಲಾವತಿ ಆಸ್ಪತ್ರೆ ಬಳಿ ಇರುವ ಯೂನಿಕ್ಸ್ ಪ್ರಾಡಕ್ಟ್ ಹೆಸರಿನ ಬ್ಯಾಗ್ ಫ್ಯಾಕ್ಟರಿಯಲ್ಲಿ ತೆರಿಗೆ ಪಾವತಿಸದೆ ಬ್ಯಾಗ್‍ಗಳನ್ನು ಸಂಗ್ರಹಿಸಲಾಗಿದೆ ಎಂಬುದಾಗಿ ದೂರು ಬಂದ ಹಿನ್ನೆಲೆಯಲ್ಲಿ ತಪಾಸಣೆ ನಡೆಸಿದಾಗ ನಾರಾಯಣಗೌಡರ ಭಾವಚಿತ್ರ, ಬಿಜೆಪಿ ಚಿಹ್ನೆ ಇರುವ ಬ್ಯಾಗ್‍ಗಳು ಪತ್ತೆಯಾಗಿದ್ದು, ಅವುಗಳನ್ನು ಚುನಾವಣಾ ಅಧಿಕಾರಿಗಳು ವಶಕ್ಕೆ ಪಡೆದಿದ್ದರು.

ಕೆ.ಆರ್.ಪೇಟೆ ಬಿಜೆಪಿ ಮಂಡಲದ ಬಿಜೆಪಿ ಅಧ್ಯಕ್ಷರೆಂದು ಹೇಳಿಕೊಂಡು ಗಂಗಾಧರ್ ಎಂಬುವರು ಸುಮಾರು 4 ಸಾವಿರ ಬ್ಯಾಗ್‍ಗಳಿಗೆ ಆರ್ಡರ್ ಕೊಟ್ಟಿದ್ದು, ಅವುಗಳನ್ನು ತಯಾರಿಸಿ ಇಡಲಾಗಿತ್ತು ಎಂದು ಫ್ಯಾಕ್ಟರಿ ಮಾಲಕ ಆಂಥೋಣಿ ಪ್ರಸಾದ್ ವಿಚಾರಣೆ ವೇಳೆ ತಿಳಿಸಿದ್ದಾರೆ ಎನ್ನಲಾಗಿದೆ. 

Similar News