ಗುಂಡ್ಲುಪೇಟೆ | ಬಿಳಿಕಲ್ಲು ಗುಡ್ಡ ಕುಸಿತ ಪ್ರಕರಣ: ವರ್ಷದ ಬಳಿಕ ಆರೋಪಿಗಳ ಬಂಧನ

Update: 2023-03-29 14:09 GMT

ಚಾಮರಾಜನಗರ: ಕಳೆದ ವರ್ಷ ಸಂಭವಿಸಿದ್ದ ಗುಂಡ್ಲುಪೇಟೆ ತಾಲೂಕಿನ ಮಡಹಳ್ಳಿ ಗುಡ್ಡ ಕುಸಿತ ಪ್ರಕರಣದ ಪ್ರಮುಖ ಆರೋಪಿಗಳನ್ನು ವರ್ಷದ ಬಳಿಕ ಪೊಲೀಸರು ಬಂಧಿಸಿದ್ದಾರೆ. 

ಉಪಗುತ್ತಿಗೆ ಪಡೆದು ಕ್ವಾರಿ ನಡೆಸುತ್ತಿದ್ದ ಮಹಮ್ಮದ್ ಹಕೀಮ್ ಹಾಗೂ ಮಹಮ್ಮದ್ ಹಿಲಾಲ್ ಬಂಧಿತರು ಎಂದು ಪೊಲೀಸರು ತಿಳಿಸಿದ್ದಾರೆ.

ಕಳೆದ ಒಂದು ವರ್ಷದಿಂದಲೂ ಹಕೀಂ‌ ಪೊಲೀಸರ ಕೈಗೆ ಸಿಗದೇ ತಲೆಮರೆಸಿಕೊಂಡಿದ್ದ. ವಿಶೇಷ ತಂಡ ಕಾರ್ಯಾಚರಣೆ ನಡೆಸಿ ಕೇರಳದ ಗುರುವಾಯೂರಿನಲ್ಲಿದ್ದ ಈತ ಹಾಗೂ ಗುಂಡ್ಲುಪೇಟೆ ಪಟ್ಟಣದಲ್ಲಿದ್ದ ಹಿಲಾಲ್‌ನ​ನ್ನು ಗುಂಡ್ಲುಪೇಟೆ ಪೊಲೀಸರು ಬಂಧಿಸಿ ಮಂಗಳವಾರ ರಾತ್ರಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

ಕಳೆದ ವರ್ಷ ಮಾರ್ಚ್ 4 ರಂದು ಗುಂಡ್ಲುಪೇಟೆ ತಾಲೂಕಿನ ಮಡಹಳ್ಳಿ ಗ್ರಾಮದ ಗುಮ್ಮಕಲ್ಲು ಗುಡ್ಡದ ಕಲ್ಲುಕ್ವಾರಿ ಕುಸಿದು ಉತ್ತರ ಪ್ರದೇಶ ಮೂಲದ ಬಬ್ಲು, ಮೀರಜ್ ಹಾಗೂ ಸರ್ಫರಾಜ್ ಎಂಬ ಕಾರ್ಮಿಕರು ಕಲ್ಲಿನಡಿ ಸಿಲುಕಿ ಮೃತಪಟ್ಟಿದ್ದರು. 

ಅವೈಜ್ಞಾನಿಕವಾಗಿ ಕ್ವಾರಿ ನಡೆಸಿರುವುದು ದುರಂತಕ್ಕೆ ಕಾರಣ ಎಂಬುದು ಪೊಲೀಸ್​ ತನಿಖೆಯಿಂದ ಗೊತ್ತಾಗಿತ್ತು.

Similar News