×
Ad

ನಂದಿನಿ ಮೊಸರಿನ ಪೊಟ್ಟಣದ ಮೇಲೆ ‘ದಹಿ’ ಮುದ್ರಣಕ್ಕೆ ವಿರೋಧ: ರೂಪೇಶ್ ರಾಜಣ್ಣ ಕಿಡಿ

Update: 2023-03-29 19:48 IST

ಬೆಂಗಳೂರು, ಮಾ. 29: ‘ಮೊನ್ನೆ ಕರ್ನಾಟಕ ಹಾಲು ಉತ್ಪಾದಕರ ಮಹಾಮಂಡಳ(ಕೆಎಂಎಫ್)ಕ್ಕೆ ಭೇಟಿ ಕೊಟ್ಟಾಗ ನಂದಿನಿ ಮೊಸರಿನ ಪೊಟ್ಟಣದ ಮೇಲೆ ‘ದಹಿ’ ಎಂದು ಹಿಂದಿಯಲ್ಲಿ ಮುದ್ರಣವಾಗಿ ಬಂದರೆ ಸಾವಿರಾರು ಕನ್ನಡಿಗರು ಕನ್ನಡ ಶಾಲುಗಳೊಂದಿಗೆ ಕೆಎಂಎಫ್ ಮುಂದೆ ಪ್ರತಿಭಟನೆ ಮಾಡಲಿದ್ದಾರೆ ಎಂದು ವ್ಯವಸ್ಥಾಪಕರಿಗೆ ಹೇಳಿದ್ದೇವೆ. ಖಂಡಿತ ಮಾಡೋಲ್ಲ ಅನ್ನೋ ಭರವಸೆ ಕೊಟ್ಟಿದ್ದಾರೆ. ಕನ್ನಡಿಗರು ಹಿಂದಿ ಹೇರಿಕೆ ಸಹಿಸುವುದಿಲ್ಲ’ ಎಂದು ಕನ್ನಡಪರ ಹೋರಾಟಗಾರ ರೂಪೇಶ್ ರಾಜಣ್ಣ ಎಚ್ಚರಿಕೆ ನೀಡಿದ್ದಾರೆ.

ಬುಧವಾರ ಸರಣಿ ಟ್ವೀಟ್ ಮಾಡಿರುವ ಅವರು, ‘ಹಿಂದಿ ಹೇರಿಕೆ ಸಹಿಸೋಲ್ಲ. ಇಂದು ಕೆಎಂಎಫ್ ಕಚೇರಿಗೆ ಭೇಟಿ ಕೊಟ್ಟಾಗ ಕಂಡದ್ದು ಕಡ್ಡಾಯವಾಗಿ ‘ದಹಿ’ ಎಂದು ಬಳಸಲೇಬೇಕೆಂಬ ಆದೇಶವಾಗಿದೆ. ಇಂದು ದಹಿ, ನಾಳೆ ನಂದಿನಿ ದೂದ್, ಪಾನಿ ಅಂದುಕೊಂಡು ಎಲ್ಲದಕ್ಕೂ ಹಿಂದಿ ಕಡ್ಡಾಯ ಮಾಡಿ ಕಡೆಗೆ ಕನ್ನಡವನ್ನೆ ಇಲ್ಲವಾಗಿಸುವ ಹುನ್ನಾರ. ಮೆಟ್ರೋ ಹಿಂದಿ ಹೇರಿಕೆ ತಡೆದ ಹಾಗೆ ನಂದಿನಿ ಮೇಲಿನ ಹಿಂದಿ ಹೇರಿಕೆ ತಡೆಯಬೇಕಿದೆ’ ಎಂದು ಹೇಳಿದ್ದಾರೆ.

‘ಇದು ಬೇಕಂತಲೇ ಮಾಡ್ತಿರೋದಾ? ನಂದಿನಿ ನಿಧಾನವಾಗಿ ಯಾಕೋ ಕನ್ನಡ ಮರೆಯುತ್ತಿದ್ದಾರೆ. ಒಂದು ಕಡೆ ತಮ್ಮ ಉತ್ಪನ್ನಗಳನ್ನು ಹಿಂದಿಯ ಹೆಸರಿನಲ್ಲಿ ಹಾಕುತ್ತಿರೋದು. ಇನ್ನೊಂದು ಕಡೆ ಪೊಟ್ಟಣಗಳ ಮೇಲೆ ಕನ್ನಡಕ್ಕೆ ಯಾವುದೋ ಮೂಲೆ ಕನ್ನಡಮಯ ಆಗಿದ್ದ ನಂದಿನಿ ಇದ್ಯಾಕೆ ಈ ರೀತಿ ಆಗ್ತಿದೆ. ಈಗ ನಂದಿನಿ ಒಳಗೆ ಇರೋರು ಕನ್ನಡಿಗರಾ ಇಲ್ಲ ವಲಸಿಗರಾ? ಎಂದು ಅವರು ಪ್ರಶ್ನಿಸಿದ್ದಾರೆ.

‘ಜೆಡಿಎಸ್ ನಾಯಕ ಕುಮಾರಸ್ವಾಮಿಗೆ ಹಾಕಿದ ಹಾರ ನೋಡಿ ಖುಷಿಯಾಯ್ತು. ನಂದಿನಿ ಉಳಿಸಿ ಅಭಿಯಾನಕ್ಕೆ ಬೆಂಬಲಿಸಿದ ಕನ್ನಡಿಗರಿಗೆ ಅಭಿನಂದನೆಗಳು. ಕನ್ನಡ ಜಾಗೃತಿ, ಈ ನೆಲದ ಅಸ್ಮಿತೆಯ ಜಾಗೃತಿ ಯಾವ ರೂಪದಲ್ಲಿದ್ರೂ ಅದು ಈ ನಾಡಿಗೆ ಒಳಿತು. ಕುಮಾರಸ್ವಾಮಿಗೆ ‘ಗುಜರಾತಿಗಳಿಂದ ಕನ್ನಡಿಗರ ಕೆಎಂಎಫ್ ಉಳಿಸಿ’ ಮನವಿ ಹಾರ ಹಾಕಿದ್ದಾರೆ’

-ರೂಪೇಶ್ ರಾಜಣ್ಣ ಕನ್ನಡಪರ ಹೋರಾಟಗಾರ

Similar News