ಚುನಾವಣೆಯನ್ನು ಪ್ರಾಮಾಣಿಕವಾಗಿ ಎದುರಿಸುವುದೇ ಕಷ್ಟವಾಗಿದೆ: ಸಿದ್ದರಾಮಯ್ಯ

Update: 2023-03-29 18:21 GMT

ಮೈಸೂರು,ಮಾ.29: ಪ್ರಸ್ತುತ ರಾಜಕಾರಣದಲ್ಲಿ ಪ್ರಮಾಣಿಕರಾಗಿರುವುದೇ ಕಷ್ಟವಾಗಿದೆ.  ಇಂದಿನ ಚುನಾವಣಾ ವ್ಯವಸ್ಥೆಯೇ ಅಕ್ರಮಗೊಂಡಿದೆ. ಚುನಾವಣೆಯನ್ನು ಪ್ರಾಮಾಣಿಕವಾಗಿ ಎದುರಿಸುವುದೇ ಕಷ್ಟವಾಗಿದೆ. ಚುನಾವಣಾ ವ್ಯವಸ್ಥೆ ಭ್ರಷ್ಟಗೊಂಡಿದ್ದರೆ ಅದಕ್ಕೆ ರಾಜಕಾರಣಿಗಳೇ ಕಾರಣ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅಭಿಪ್ರಾಯಿಸಿದರು.

ನಗರದ ರಾಮಕೃಷ್ಣನಗರದಲ್ಲಿರುವ ರಮಾಗೋವಿಂದ ರಂಗಮಂದಿರದಲ್ಲಿ ಬುಧವಾರ ಕನ್ನಡ ವಿಕಾಸ ಶೈಕ್ಷಣಿಕ ಸಾಮಾಜಿಕ ಸಾಂಸ್ಕೃತಿಕ ಸಂಸ್ಥೆ ವತಿಯಿಂದ ಹಿರಿಯ ಸಮಾಜವಾದಿ ಪ.ಮಲ್ಲೇಶ್ ಸ್ಮರಣಾರ್ಥ ವಿಚಾರ ಸಂಕಿರಣ ಉದ್ಘಾಟಿಸಿ ಅವರು ಮಾತನಾಡಿದರು.

ಸದ್ಯದ ರಾಜಕಾರಣದಲ್ಲಿ ಪ್ರಮಾಣಿಕರಾಗಿರುವುದೇ ಕಷ್ಟವಾಗಿದೆ. ಮತದಾರರು ಪ್ರಮಾಣಿಕವಾಗಿದ್ದರೂ ರಾಜಕಾರಣಿಗಳು ಬಿಡುವುದು ಕಷ್ಟವಾಗಿದೆ. ಮತದಾರರು ಎಷ್ಟೇ ಭರವಸೆ ಕೊಟ್ಟರು ಚುನಾವಣೆ ಗೆಲ್ಲಲು ನಾವು ಪ್ರಮಾಣಿಕವಾಗಿರುವುದು ಕಷ್ಟವಾಗಿದೆ ಎಂದು ಹೇಳಿದರು.

ನಾನು ಮೊದಲ ಬಾರಿಗೆ ತಾಲ್ಲೂಕು ಪಂಚಾಯಿತಿ ಚುನಾಣೆಗೆ ಸ್ಪರ್ಧೆ ಮಾಡಿದಾಗ 3 ಸಾವಿರ ರೂ. ಖರ್ಚು ಮಾಡಿದ್ದೆ. ನಂತರ ವಿಧಾನಸಭೆ ಚುನಾವಣೆಗೆ ಸ್ಪರ್ಧೆಮಾಡಿದಾಗ 65 ಸಾವಿರ ರೂ. ಖರ್ಚು ಮಾಡಿದ್ದೆ. ಅದರಲ್ಲಿ ನಮ್ಮ ಊರಿನವರು ಹತ್ತು ಸಾವಿರ ರೂ. ನೀಡಿದರೆ ಜಾರ್ಜ್ ಫರ್ನಾಂಡೀಸ್ ಅವರು ಹತ್ತು ಸಾವಿರ ರೂ. ನೀಡಿದ್ದರು. ಇನ್ನು ಉಳಿದ 45 ಸಾವಿರ ರೂ.ಗಳನ್ನು ಪ್ರಚಾರದ ವೇಳೆ ಜನರೇ ನೀಡಿದ್ದರು. ಆದರೆ ಇಂದಿನ ವ್ಯವಸ್ಥೆಯೇ ಬದಲಾಗಿದ್ದು, ಪ್ರಾಮಾಣಿಕವಾಗಿ ಚುನಾವಣೆ ಎದುರಿಸುವುದೇ ಕಷ್ಟವಾಗಿದೆ. ಇದಕ್ಕೆಲ್ಲಾ ಕಾರಣ ರಾಜಕಾರಣಿಗಳೇ ಎಂದು ಹೇಳಿದರು.

ನನ್ನ ಮೊದಲನೇ ಮತ್ತು  ಎರಡನೇ ಚುನಾವಣೆಯಲ್ಲಿ ಹಿರಿಯ ಸಮಾಜವಾದಿ ಪ.ಮಲ್ಲೇಶ್ ಅವರೇ ನೇತೃತ್ವ ವಹಿಸಿಕೊಂಡಿದ್ದರು.  ಎರಡನೇ ಬಾರಿ ಸ್ಪರ್ಧೆ ಮಾಡಿದಾಗ ಅವರಿಗೆ 3.5 ಲಕ್ಷ ರೂ. ನೀಡಿದ್ದೆ. ಚುನಾವಣಾ ಖರ್ಚನ್ನೆಲ್ಲಾ ನೋಡಿಕೊಂಡು ನಂತರ 1.75 ಲಕ್ಷ ರೂ.ಗಳನ್ನು ಅವರು ನನಗೆ ವಾಪಸ್ ನೀಡಲು ಬಂದರು. ಆಗ ನಾನು ಬೇಡ ನಿಮ್ಮ ಬಳಿಯೇ ಇಟ್ಟುಕೊಳ್ಳೀ ಎಂದೆ. ಆದರೆ ಅವರು ಅದನ್ನು ತಮ್ಮ ಬಳಿ ಇಟ್ಟುಕೊಳ್ಳದೆ ನನಗೊಂದು ಸೈಟ್ ಕೊಡಿಸಿ 3.5 ಲಕ್ಷ ರೂ. ನಲ್ಲಿ ಮನೆಯನ್ನೇ ಕಟ್ಟಿಸಿಕೊಟ್ಟರು ಎಂದು ಸ್ಮರಿಸಿಕೊಂಡರು.

ಪ್ರೊ.ನಂಜುಂಡಸ್ವಾಮಿ ಪ.ಮಲ್ಲೇಶ್, ತೇಜಸ್ವಿ, ಪ್ರೊ.ರಾಮದಾಸ್, ಶ್ರೀರಾಮ್ ಅವರ ಸ್ನೇಹ ನನಗಾಗದಿದ್ದರೆ ನಾನು ರಾಜಕಾರಣಕ್ಕೆ ಬರುತ್ತಿರಲಿಲ್ಲ. ಪ್ರತಿ ದಿನ ನಾವು ಪ.ಮಲ್ಲೇಶ್ ಅವರ ಮಯೂರ ಪ್ರೆಸ್‍ನಲ್ಲಿ ಜೊತೆ ಸೇರುತ್ತಿದ್ದೆವು. ಆಗ ಅಂಬೇಡ್ಕರ್, ಗಾಂಧಿ, ಲೋಹಿಯಾ ಅವರ ವಿಚಾರಗಳನ್ನು ಹೇಳಿ ನಮಗೆ ಸೈದ್ಧಾಂತಿಕವಾಗಿ ಶಕ್ತಿ ತುಂಬಿದರು ಎಂದು ಹೇಳಿದರು.

ಪ.ಮಲ್ಲೇಶ್ ಮಾನವೀಯ ಮನುಷ್ಯತ್ವ ಉಳ್ಳ ವ್ಯಕ್ತಿಯಾಗಿದ್ದರು. ಸದಾ ಕಾಲ ಅವರು ಸಮಾಜಮುಖಿಯಾಗಿ ಚಿಂತಿಸುತ್ತಿದ್ದರು. ಅವರು ಅಧಿಕಾರ ಹಣಕ್ಕಾಗಿ ಆಸೆ ಪಟ್ಟವರಲ್ಲ, ಅವರು ವೀರಶೈವ ಲಿಂಗಾಯಿತ ಸಮುದಾಯದಲ್ಲಿ ಹುಟ್ಟಿದ್ದರೂ ಎಂದು ಜಾತಿ ಮಾಡಿದವರಲ್ಲ ಎಂದು ನೆನಪು ಮಾಡಿಕೊಂಡರು.

ನಮ್ಮ ತಂದೆ ನನ್ನನ್ನು ವೈದ್ಯರನ್ನಾಗಿ ಮಾಡಬೇಕು ಎಂದುಕೊಂಡಿದ್ದರು. ಆದರೆ ನಾನು ವಕೀಲನಾಗಿ ರಾಜಕೀಯಕ್ಕೆ ಬಂದೆ. ನನಗೆ ಈ ಎಲ್ಲಾ ಸಮಾಜವಾದಿ ಚಿಂತಕರ ಪರಿಚಯವಾಗದಿದ್ದರೆ ರಾಜಕೀಯಕ್ಕೆ ಬರುತ್ತಿರಲಿಲ್ಲ. ಇವರ ಸಂಪರ್ಕ ಸಿಕ್ಕಿ ನಾನು ರಾಜಕಾರಣಕ್ಕೆ ಬಂದಿದ್ದರಿಂದಲೇ ಇಂದು ರಾಜ್ಯದ ಮುಖ್ಯಮಂತ್ರಿಯಾಗಿ ಆಡಳಿತ ನಡೆಸಿದ್ದೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಮಾಜಿ ಸಚಿವ ಡಾ.ಎಚ್.ಸಿ.ಮಹದೇವಪ್ಪ, ಶಾಸಕ ಡಾ.ಯತೀಂದ್ರ ಸಿದ್ಧರಾಮಯ್ಯ, ಪ.ಮಲ್ಲೇಶ್ ಅವರ ಪುತ್ರಿ ಸವಿತಾ ಪಿ.ಮಲ್ಲೇಶ್, ಪ್ರೊ.ಎಚ್.ಜಿ.ಕೃಷ್ಣಪ್ಪ, ಹಿರಿಯ ಪತ್ರಕರ್ತರುಗಳಾದ ಡಿ.ಉಮಾಪತಿ, ದಿನೇಶ್ ಅಮೀನ್‍ಮಟ್ಟು, ಶೀಲಾ ಆರ್, ವಿಧಾನಪರಿಷತ್ ಸದಸ್ಯ ಡಾ.ಡಿ.ತಿಮ್ಮಯ್ಯ, ಸ.ರ.ಸುದರ್ಶನ, ಪದ್ಮ ಶ್ರೀರಾಮ್, ನಾ.ದಿವಾಕರ್ ಉಪಸ್ಥಿತರಿದ್ದರು.

''ಪ.ಮಲ್ಲೇಶ್ ಸಮಾಜವಾದಿ ಹೋರಾಟದ ಕೊನೆಯ ಕೊಂಡಿ, ಅವರ ಹೋರಾಟ ಇಂದಿನ ಯುವಕರಿಗೆ ಸ್ಪೂರ್ತಿ. ಆದರೆ ಮೈಸೂರಿನಲ್ಲಿ ಯಾರೋ ಅಡ್ನಾಡಿಯೊಬ್ಬ ಇಂದಿಗೂ ಅವರ ಬಗ್ಗೆ ನಿಂದಿಸುವ ಹಂಗಿಸುವ ಕೆಲಸ ಮಾಡುತ್ತಿದ್ದಾರೆ. ಅದಕ್ಕೆಲ್ಲಾ ಮೈಸೂರಿನ ಜನತೆ ಅವಕಾಶ ಮಾಡಿಕೊಡಬಾರದು. ಇದು ಸಿದ್ಧಾಂತವನ್ನು ಅಡಗಿಸುವ ಕೆಲಸ''

 -ದಿನೇಶ್ ಅಮೀನ್‍ಮಟ್ಟು, ಹಿರಿಯ ಪತ್ರಕರ್ತ.

Similar News