ಕರ್ನಾಟಕ ವಿಧಾನಸಭಾ ಚುನಾವಣೆ: ಎಬಿಪಿ ಸಿ- ವೋಟರ್ ಸಮೀಕ್ಷೆಯಲ್ಲಿ ಕಾಂಗ್ರೆಸ್ ಗೆ ಸ್ಪಷ್ಟ ಬಹುಮತ

Update: 2023-03-29 16:25 GMT

ಹೊಸದಿಲ್ಲಿ: ರಾಜ್ಯ ವಿಧಾನಸಭಾ ಚುನಾವಣೆ ದಿನಾಂಕ ಘೋಷಿಸುತ್ತಿದ್ದಂತೆ ರಾಜಕೀಯ ಚಟುವಟಿಕೆಗಳು ಬಿರುಸುಗೊಂಡಿದೆ. ಸದ್ಯ ಹೊರ ಬಂದಿರುವ‌ ಎಬಿಪಿ- ಸಿವೋಟರ್ ಚುನಾವಣಾ ಸಮೀಕ್ಷೆ ಪ್ರಕಾರ ರಾಜ್ಯದಲ್ಲಿ ಕಾಂಗ್ರೆಸ್‌ ಸ್ಪಷ್ಟ ಬಹುಮತ ಪಡೆಯಲಿದೆ ಎಂದು ವರದಿಗಳು ತಿಳಿಸಿವೆ. 

ಬುಧವಾರ ABP-CVoter ತನ್ನ ಸಮೀಕ್ಷೆಯನ್ನು ಬಿಡುಗಡೆಗೊಳಿಸಿದ್ದು,  ಕಾಂಗ್ರೆಸ್‌ 115 ರಿಂದ 127 ಕ್ಷೇತ್ರಗಳನ್ನು ಗೆಲ್ಲುವ ಸಾಧ್ಯತೆ ಇದೆ ಎಂದು ಅಂದಾಜಿಸಿದೆ. ಆಡಳಿತರೂಢ ಬಿಜೆಪಿ ಪಕ್ಷಕ್ಕೆ ಕೇವಲ 68 ರಿಂದ 80 ಸೀಟುಗಳನ್ನಷ್ಟೇ ಗೆಲ್ಲಲಿದೆ ಎಂದು ಸಮೀಕ್ಷೆ ಹೇಳಿದ್ದು. 23 ರಿಂದ 35 ಸೀಟುಗಳನ್ನು ಜೆಡಿಎಸ್ ಗೆಲ್ಲಲಿದೆ ಎಂದು ನಿರೀಕ್ಷಿಸಲಾಗಿದೆ.

ಮುಂಬರುವ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಬಿಜೆಪಿಗೆ ಕರ್ನಾಟಕ ವಿಧಾನಸಭೆ ಚುನಾವಣೆ ಬಹುಮುಖ್ಯವಾಗಲಿದ್ದು, ಈ ಚುನಾವಣೆಯಲ್ಲಿ ಸೋತರೆ ದಕ್ಷಿಣ ಭಾರತದಲ್ಲಿರುವ ಹೆಬ್ಬಾಗಿಲನ್ನು ಬಿಜೆಪಿಗೆ ಮುಚ್ಚಿದಂತಾಗುತ್ತದೆ.

 ಪ್ರಸ್ತುತ ಬಿಜೆಪಿ ರಾಜ್ಯ ಸರ್ಕಾರದ ಕಾರ್ಯಕ್ಷಮತೆಗೆ 50.5 ಪ್ರತಿಶತದಷ್ಟು ಜನರು 'ಕಳಪೆ' ಎಂದು ಹೇಳಿದ್ದಾರೆ. ಕೇವಲ 27.7 ಪ್ರತಿಶತ ಜನರಷ್ಟೇ ಸರ್ಕಾರದ ಸಾಧನೆಯನ್ನು ಮೆಚ್ಚಿಕೊಂಡಿದ್ದಾರೆ ಎಂದು ಸಮೀಕ್ಷೆ ಹೇಳಿದೆ.

ಸಮೀಕ್ಷೆಯ ಭಾಗವಾದ ಜನರಲ್ಲಿ ಶೇಕಡಾ 57.1 ರಷ್ಟು ಜನರು ಬಿಜೆಪಿ ನೇತೃತ್ವದ ರಾಜ್ಯ ಸರ್ಕಾರದ ಮೇಲೆ ಅಸಮಾಧಾನ ಹೊಂದಿದ್ದು, ಅದನ್ನು ಬದಲಾಯಿಸಲು ಬಯಸುವುದಾಗಿ ಹೇಳಿದ್ದಾರೆ.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಕಾರ್ಯವೈಖರಿಗೆ ಶೇ 46.9ರಷ್ಟು ಜನರು ‘ಕಳಪೆ’ ಎಂದು ರೇಟಿಂಗ್ ನೀಡಿದ್ದು, ಕೇವಲ ಶೇ 26.8ರಷ್ಟು ಮಂದಿ ಮಾತ್ರ ಒಳ್ಳೆಯ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. ಅದಾಗ್ಯೂ, ಪ್ರಧಾನಿ ನರೇಂದ್ರ ಮೋದಿ ಅವರ ಕಾರ್ಯಕ್ಷಮತೆ ಬಗ್ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ ಎಂದು ಸಮೀಕ್ಷೆ ಹೇಳಿದೆ.

ಲಿಂಗಾಯತರಿಗೆ ಅಲ್ಪಸಂಖ್ಯಾತ ಸ್ಥಾನಮಾನ ಮತ್ತು ಹಿಜಾಬ್ ವಿವಾದದಂತಹ ಸಮಸ್ಯೆಗಳು ಮಹತ್ವದ ಪಾತ್ರವನ್ನು ವಹಿಸುತ್ತವೆ ಎಂದು ಶೇ 30.38 ಜನರು ಹೇಳಿದ್ದಾರೆ. ಇದಲ್ಲದೆ, “ಧಾರ್ಮಿಕ ಧ್ರುವೀಕರಣ” ಕೂಡಾ ಮುಂಬರುವ ಅಸೆಂಬ್ಲಿ ಚುನಾವಣೆ ಮೇಲೆ ಗಮನಾರ್ಹ ಪರಿಣಾಮ ಬೀರಲಿದೆ ಎಂದು 24.6 ಪ್ರತಿಶತದಷ್ಟು ಜನರು ನಂಬಿದ್ದಾರೆ.

ಇನ್ನು ಮುಂದಿನ ಸಿಎಂ ಯಾರಾಗಬೇಕೆಂಬ ಪ್ರಶ್ನೆಗೆ 39.1 ಶೇ ಜನರು ಸಿದ್ದರಾಮಯ್ಯ ಆಗಬೇಕೆಂದು ಉತ್ತರಿಸಿದ್ದಾರೆ.  31.1 ಶೇ ಜನರು ಬಸವರಾಜ್‌ ಬೊಮ್ಮಾಯಿ ಮುಖ್ಯಮಂತ್ರಿ ಆಗಬೇಕೆಂದು ಬಯಸಿದರೆ, 21.4 ಶೇ ಜನರು ಹೆಚ್‌ ಡಿ ಕುಮಾರಸ್ವಾಮಿ ಸಿಎಂ ಆದರೆ ಒಳ್ಳೆಯದು ಎಂದಿದ್ದಾರೆ. ಕೇವಲ  3.2  ಶೇ ಜನರಷ್ಟೇ ಡಿಕೆಶಿ ಮುಖ್ಯಮಂತ್ರಿ ಆಗಬೇಕೆಂದು ಬಯಸಿದ್ದಾರೆ ಎಂದು ಸಮೀಕ್ಷೆ ಹೇಳಿದೆ.

Similar News