ಚಿಕ್ಕಮಗಳೂರು ಡಿಸಿ, ಎಸ್ಪಿ ವರ್ಗಾವಣೆಗೆ ಆಗ್ರಹಿಸಿ ಕೇಂದ್ರ ಚುನಾವಣಾ ಆಯುಕ್ತರಿಗೆ ಬಿ.ಕೆ.ಹರಿಪ್ರಸಾದ್ ಪತ್ರ

Update: 2023-03-29 17:55 GMT

ಚಿಕ್ಕಮಗಳೂರು, ಮಾ.29: ಜಿಲ್ಲೆಯಲ್ಲಿ ಮುಕ್ತ ಮತ್ತು ನಿಷ್ಪಕ್ಷಪಾತ ಚುನಾವಣೆ ನಡೆಸುವ ಸಲುವಾಗಿ ಜಿಲ್ಲೆಯಲ್ಲಿ ಸದ್ಯ ಕಾರ್ಯನಿರ್ವಹಿಸುತ್ತಿರುವ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಮತ್ತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯನ್ನು ಕೂಡಲೇ ವರ್ಗಾವಣೆ ಮಾಡಬೇಕೆಂದು ಒತ್ತಾಯಿಸಿ ವಿಧಾನಪರಿಷತ್ ವಿರೋಧ ಪಕ್ಷದ ನಾಯಕ ಬಿ.ಕೆ.ಹರಿಪ್ರಸಾದ್ ಅವರು ಕೇಂದ್ರ ಚುನಾವಣಾ ಆಯೋಗದ ಮುಖ್ಯ ಆಯುಕ್ತರಿಗೆ ದೂರು ಸಲ್ಲಿಸಿದ್ದಾರೆ.

ಬಿ.ಕೆ.ಹರಿಪ್ರಸಾದ್ ಈ ಸಂಬಂಧ ಕಳೆದ ಮಾ.10ರಂದು ಕೇಂದ್ರ ಚುನಾವಣಾ ಆಯೋಗದ ಆಯುಕ್ತರಿಗೆ ಬರೆದಿರುವ ದೂರಿನ ಪ್ರತಿ 'ವಾರ್ತಾಭಾರತಿಗೆ' ಲಭ್ಯವಾಗಿದ್ದು, ಚಿಕ್ಕಮಗಳೂರು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿಯಾಗಿರುವ ಕೆ.ಎನ್.ರಮೇಶ್ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯಾಗಿರುವ ಉಮಾ ಪ್ರಶಾಂತ್ ಅವರು ಆಡಳಿತ ಪಕ್ಷದ ಕೆಲ ರಾಜಕಾರಣಿಗಳು ಹಾಗೂ ಮುಖಂಡರೊಂದಿಗೆ ನಿಕಟ ಸಂಪರ್ಕ ಹೊಂದಿರುವ ಶಂಕೆ ಇದ್ದು, ಈ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಮುಕ್ತ ಹಾಗೂ ನಿಷ್ಪಕ್ಷಪಾತವಾದ ಚುನಾವಣೆ ನಡೆಯಲು ಸಾಧ್ಯವಿಲ್ಲ ಎಂಬ ಅನುಮಾನ ಕಾಡುತ್ತಿದೆ. ಈ ಹಿನ್ನೆಲೆಯಲ್ಲಿ ಇಬ್ಬರು ಅಧಿಕಾರಿಗಳನ್ನು ಕೂಡಲೇ ವರ್ಗಾವಣೆ ಮಾಡುವ ನಿಟ್ಟಿನಲ್ಲಿ ಚುನಾವಣಾ ಆಯೋಗ ಕ್ರಮವಹಿಸಬೇಕೆಂದು ಒತ್ತಾಯಿಸಿದ್ದಾರೆ.

ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಕೆ.ಎನ್.ರಮೇಶ್ ಅವರು ಬಿಜೆಪಿ ಪಕ್ಷದ ಕೆಲ ಮುಖಂಡರೊಂದಿಗೆ ಗುರುತಿಸಿಕೊಂಡಿದ್ದು, ಜಿಲ್ಲಾಧಿಕಾರಿ ರಮೇಶ್ ಅವರು ತಮ್ಮ ಪತ್ನಿಯನ್ನು ಬಿಜೆಪಿ ಪಕ್ಷದ ಕಾರ್ಯಕ್ರಮಗಳಲ್ಲಿ ಸಕ್ರೀಯವಾಗಿ ತೊಡಗಿಸಿಕೊಳ್ಳುವಲ್ಲಿ ಸಹಕಾರ ನೀಡಿರುವ ಬಗ್ಗೆ ವ್ಯಾಪಕ ದೂರುಗಳಿವೆ ಎಂದು ದೂರಿನಲ್ಲಿ ಉಲ್ಲೇಖಿಸಿರುವ ಬಿ.ಕೆ.ಹರಿಪ್ರಸಾದ್, ಜಿಲ್ಲೆಯಲ್ಲಿ ಈ ಬಾರಿ ನಡೆಯುವ ವಿಧಾನಸಭೆ ಚುನಾವಣೆ ಸಂದರ್ಭ ಈ ಅಧಿಕಾರಿಗಳು ಆಡಳಿತ ಪಕ್ಷದ ಪರವಾಗಿ ಕೆಲಸ ಮಾಡುವ ಆತಂಕ ಇರುವುದರಿಂದ ಕೂಡಲೇ ಡಿಸಿ ಹಾಗೂ ಎಸ್ಪಿ ಅವರನ್ನು ಕೂಡಲೇ ವರ್ಗಾವಣೆಗೆ ರಾಜ್ಯ ಸರಕಾರಕ್ಕೆ ನಿರ್ದೇಶನ ನೀಡಬೇಕೆಂದು ಅವರು ದೂರಿನಲ್ಲಿ ತಿಳಿಸಿದ್ದಾರೆ.

ಚಿಕ್ಕಮಗಳೂರು ಡಿಸಿ ಹಾಗೂ ಎಸ್ಪಿ ವಿರುದ್ಧ ಬಿ.ಕೆ.ಹರಿಪ್ರಸಾದ್ ಅವರು ನೀಡಿರುವ ದೂರಿನ ಬಗ್ಗೆ ಬುಧವಾರ ಬೆಂಗಳೂರಿನಲ್ಲಿ ಸುದ್ದಿಗಾರರು ರಾಜ್ಯದ ಮುಖ್ಯ ಚುನಾವಣಾಧಿಕಾರಿ ಮನೋಜ್ ಕುಮಾರ್ ಮೀನಾ ಅವರನ್ನು ಪ್ರಶ್ನಿಸಿದ್ದು, ಇದಕ್ಕೆ ಪ್ರತಿಕ್ರಿಯಿಸಿದ ಅವರು, ಬಿ.ಕೆ.ಹರಿಪ್ರಸಾದ್ ಅವರಿಂದ ದೂರು ಬಂದಿದೆ. ದೂರು ಬಂದಿರುವ ಅಧಿಕಾರಿಗಳಿಂದ ವಿವರಣೆ ಪಡೆಯಲಾಗುತ್ತಿದೆ. ತನಿಖೆ ಪೂರ್ಣ ಆಗಬೇಕೆಂದೇನಿಲ್ಲ, ಮೇಲ್ನೋಟಕ್ಕೆ ಆರೋಪದ ಬಗ್ಗೆ ಖಾತ್ರಿಯಾದಲ್ಲಿ ಕ್ರಮ ಆಗಲಿದೆ. ಜಿಲ್ಲಾಧಿಕಾರಿ, ಎಸ್ಪಿ ಸೇರಿದಂತೆ ಯಾವುದೇ ಅಧಿಕಾರಿಗಳು ರಾಜಕೀಯ ಪಕ್ಷಗಳಿಗೆ ಸಪೋರ್ಟ್ ಮಾಡುವಂತಿಲ್ಲ. ಇಂತಹ ದೂರು ಬಂದಲ್ಲಿ ಕಠಿಣ ಕ್ರಮ ಆಗಲಿದೆ ಎಂದು ತಿಳಿಸಿದ್ದಾರೆಂದು ತಿಳಿದು ಬಂದಿದೆ.

ಇದನ್ನೂ ಓದಿಮತ ಎಣಿಕೆಗೆ 2 ದಿನ ಬೇಕೆ ?: ನಟ ಉಪೇಂದ್ರ ಪ್ರಶ್ನೆ 

[ಬಿ.ಕೆ.ಹರಿಪ್ರಸಾದ್ ಚುನಾವಣಾ ಆಯೋಗದ ಆಯುಕ್ತರಿಗೆ ಬರೆದಿರುವ ದೂರಿನ ಪ್ರತಿ]

Similar News