ಜೆಡಿಎಸ್ ಶಾಸಕ ಗೌರಿಶಂಕರ್ ಆಯ್ಕೆ ಅಸಿಂಧು; 1 ತಿಂಗಳು ಆದೇಶ ಅಮಾನತಿನಲ್ಲಿರಿಸಿದ ಹೈಕೋರ್ಟ್‌

ಚುನಾವಣಾ ಅಕ್ರಮ ಆರೋಪ

Update: 2023-03-30 13:12 GMT

ಬೆಂಗಳೂರು, ಮಾ.30: ಚುನಾವಣಾ ಅಕ್ರಮ ಎಸಗಿದ ಆರೋಪದ ಹಿನ್ನೆಲೆಯಲ್ಲಿ ತುಮಕೂರು ಗ್ರಾಮಾಂತರ ಜೆಡಿಎಸ್ ಶಾಸಕ ಗೌರಿಶಂಕರ್ ಆಯ್ಕೆಯನ್ನು ಗುರುವಾರ ಕರ್ನಾಟಕ ಹೈಕೋರ್ಟ್ ಅಸಿಂಧುಗೊಳಿಸಿದೆ. ಇದರ, ಬೆನ್ನಲ್ಲೇ ತನ್ನದೇ ಆದೇಶಕ್ಕೆ ಹೈಕೋರ್ಟ್ 30 ದಿನಗಳ ಕಾಲ ತಡೆ ನೀಡಿದೆ. 

ಗೌರಿಶಂಕರ್ ಆಯ್ಕೆಯನ್ನು ಅಸಿಂಧುಗೊಳಿಸಬೇಕು ಎಂದು ಕೋರಿ ಬಿಜೆಪಿಯ ಪರಾಜಿತ ಅಭ್ಯರ್ಥಿ ಬಿ.ಸುರೇಶ್‌ಗೌಡ ಸಲ್ಲಿಸಿದ್ದ ಚುನಾವಣಾ ತಕರಾರು ಅರ್ಜಿಯನ್ನು ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸುನಿಲ್ ದತ್ ಯಾದವ್ ಅವರಿದ್ದ ಏಕಸದಸ್ಯ ನ್ಯಾಯಪೀಠ, ಈ ಆದೇಶ ನೀಡಿದೆ. 

ಹೈಕೋರ್ಟ್ ಆದೇಶ ಪ್ರಶ್ನಿಸಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಲು ಅವಕಾಶ ನೀಡಬೇಕು ಎಂಬ ಗೌರಿ ಶಂಕರ್ ಅವರ ಮಧ್ಯಂತರ ಮನವಿಯನ್ನು ಇದೇ ಸಂದರ್ಭದಲ್ಲಿ ಪುರಸ್ಕರಿಸಿದ ಹೈಕೋರ್ಟ್ ಆದೇಶವನ್ನು ಒಂದು ತಿಂಗಳು ಅಮಾನತಿನಲ್ಲಿರಿಸಿದೆ.

ಗೌರಿ ಶಂಕರ್ ಆಯ್ಕೆಯನ್ನು ಪ್ರಜಾಪ್ರತಿನಿಧಿ ಕಾಯಿದೆಯ ಸೆಕ್ಷನ್ 101 (ಡಿ) ಅಡಿ ಅನೂರ್ಜಿತಗೊಳಿಸಲಾಗಿದೆ ಎಂದು ಪೀಠವು ಆದೇಶದಲ್ಲಿ ತಿಳಿಸಿದೆ. 

ಗೌರಿಶಂಕರ್ ಪರ ವಕೀಲ ಹೇಮಂತ್ ರಾಜ್ ಅವರು, ಕರ್ನಾಟಕ ವಿಧಾನಸಭೆಗೆ ಚುನಾವಣೆ ಘೋಷಣೆಯಾಗಿರುವುದರಿಂದ ಹೈಕೋರ್ಟ್ನ ಆದೇಶ ಪ್ರಶ್ನಿಸಿ ಸುಪ್ರೀಂಕೋರ್ಟ್ನಲ್ಲಿ ಮೇಲ್ಮನವಿ ಸಲ್ಲಿಸಲು ನಿರ್ಧರಿಸಲಾಗಿದೆ. ಪ್ರಜಾಪ್ರತಿನಿಧಿ ಕಾಯಿದೆಯ ಸೆಕ್ಷನ್ 116 (ಬಿ) ಅಡಿ ಆದೇಶಕ್ಕೆ ತಡೆ ನೀಡಲು ಹೈಕೋರ್ಟ್ಗೆ ಅಧಿಕಾರವಿದೆ ಎಂದು ಕೋರಿದರು.

ಇದಕ್ಕೆ ಆಕ್ಷೇಪಿಸಿದ ಸುರೇಶ್ ಗೌಡ ಪರ ಹಿರಿಯ ವಕೀಲೆ ನಳಿನಾ ಮಾಯೇಗೌಡ ಅವರು, ಅನರ್ಹತೆಯು ತಕ್ಷಣೆಗೆ ಜಾರಿಗೆ ಬರದಿರುವುದರಿಂದ ಗೌರಿ ಶಂಕರ್ ಚುನಾವಣೆಯಲ್ಲಿ ಸ್ಪರ್ಧಿಸಲು ಯಾವುದೇ ಸಮಸ್ಯೆಯಾಗುವುದಿಲ್ಲ. ಹೀಗಾಗಿ, ಅವರ ಕೋರಿಕೆಯನ್ನು ಪರಿಗಣಿಸಬಾರದು ಎಂದು ಮನವಿ ಮಾಡಿದರು.

ವಕೀಲರ ವಾದವನ್ನು ಆಲಿಸಿದ ನ್ಯಾಯಪೀಠವು ರಾಜ್ಯ ವಿಧಾನಸಭೆ ಚುನಾವಣೆ ಘೋಷಣೆಯಾಗಿದ್ದು, ಪ್ರತಿವಾದಿ ಗೌರಿ ಶಂಕರ್ ಚುನಾವಣೆಯಲ್ಲಿ ಸ್ಪರ್ಧಿಸಲು ಬಯಸಿದ್ದಾರೆ. ಹೀಗಾಗಿ, ಸುಪ್ರೀಂ ಕೋರ್ಟ್ನಲ್ಲಿ ಮೇಲ್ಮನವಿ ಸಲ್ಲಿಸಲು ಉದ್ದೇಶಿಸಿರುವುದರಿಂದ ಆದೇಶವನ್ನು ಅಮಾನತಿನಲ್ಲಿರಿಸಬೇಕು ಎಂದು ಕೋರಿ ಗೌರಿ ಶಂಕರ್ ಪರ ವಕೀಲ ಹೇಮಂತ್ ರಾಜ್ ಅವರು ಸಲ್ಲಿಸಿದ ಮಧ್ಯಂತರ ಅರ್ಜಿಯನ್ನು ಮಾನ್ಯ ಮಾಡಿ, ಆದೇಶವನ್ನು ಒಂದು ತಿಂಗಳು ಅಮಾನತಿನಲ್ಲಿರಿಸಲಾಗಿದೆ ಎಂದು ನ್ಯಾಯಾಲಯವು ಆದೇಶಿಸಿತು.

2018ರ ವಿಧಾನಸಭೆ ಚುನಾವಣೆಯಲ್ಲಿ ಗೌರಿ ಶಂಕರ್ ಅವರು 32 ಸಾವಿರ ವಯಸ್ಕರು ಮತ್ತು 16 ಸಾವಿರ ಮಕ್ಕಳಿಗೆ ನಕಲಿ ವಿಮಾ ಪಾಲಿಸಿಗಳನ್ನು ಅಕ್ರಮವಾಗಿ ಹಂಚಿಕೆ ಮಾಡಿ ಜಯ ಸಾಧಿಸಿದ್ದಾರೆ. ಇದು ಪ್ರಜಾ ಪ್ರತಿನಿಧಿ ಕಾಯಿದೆ ಸೆಕ್ಷನ್ 123ರ ಅಡಿ ಅಪರಾಧವಾಗಿದೆ. ಹೀಗಾಗಿ, ಗೌರಿ ಶಂಕರ್ ಆಯ್ಕೆಯನ್ನು ಅಸಿಂಧುಗೊಳಿಸಬೇಕು ಎಂದು ಕೋರಿ ಸುರೇಶ್‌ಗೌಡ ಅವರು 2018ರ ಜುಲೈನಲ್ಲಿ ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದ್ದರು. 

ಅನರ್ಹತೆ ಭೀತಿ: ಆಯ್ಕೆಯನ್ನು ಹೈಕೋರ್ಟ್ ಅನೂರ್ಜಿತಗೊಳಿರುವ ಕಾರಣ ಪ್ರಜಾಪ್ರತಿನಿಧಿ ಕಾಯ್ದೆ ಅನ್ವಯ ಗೌರಿಶಂಕರ್ ಅವರನ್ನು ಆರು ವರ್ಷಗಳ ಕಾಲ ಚುನಾವಣೆಗೆ ಸ್ಪರ್ಧಿಸದಂತೆ ಅನರ್ಹಗೊಳಿಸಬಹುದು. ಹೀಗಾಗಿ, ಈಗ ಗೌರಿಶಂಕರ್ ಮುಂದಿರುವ ಆಯ್ಕೆ ಎಂದರೆ 30 ದಿನಗಳ ಒಳಗಾಗಿ ಸುಪ್ರೀಂ ಕೋರ್ಟ್ ನಲ್ಲಿ ಮೇಲ್ಮನವಿ ಸಲ್ಲಿಸಬೇಕು. ಅಲ್ಲಿ ಹೈಕೋರ್ಟ್ ತೀರ್ಪಿಗೆ ತಡೆ ಪಡೆದರೆ ಮಾತ್ರ ಗೌರಿಶಂಕರ್ ಚುನಾವಣೆಗೆ ಸ್ಪರ್ಧಿಸಲು ಅವಕಾಶವಿದೆ ಎಂಬುದು ಕಾನೂನು ತಜ್ಞರ ಅಭಿಮತ.

Similar News