ನನ್ನ ವಿರುದ್ಧ ವಿಜಯೇಂದ್ರ ಬದಲಿಗೆ ಬಿಎಸ್‍ವೈ ಸ್ಪರ್ಧಿಸಿದರೂ ಸ್ವಾಗತ: ಸಿದ್ದರಾಮಯ್ಯ

Update: 2023-03-30 14:08 GMT

ಬೆಂಗಳೂರು, ಮಾ. 30: ‘ಮೈಸೂರಿನ ವರುಣಾ ವಿಧಾನಸಭಾ ಕ್ಷೇತ್ರದಲ್ಲಿ ತನ್ನ ವಿರುದ್ಧ ಸ್ಪರ್ಧಿಸಲು ಯಾರೇ ಬಂದರೂ ಸ್ವಾಗತಿಸುತ್ತೇನೆ’ ಎಂದು ಕಾಂಗ್ರೆಸ್ ಅಭ್ಯರ್ಥಿಯೂ ಆಗಿರುವ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ತಿಳಿಸಿದ್ದಾರೆ.

ಗುರುವಾರ ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ‘ಚುನಾವಣೆಯಲ್ಲಿ ಎದುರಾಳಿಗಳು ಯಾರು ಎಂದು ನಾನು ಯೋಚನೆಯೇ ಮಾಡಿಲ್ಲ. ಜನರು ಆಶೀರ್ವಾದ ಮಾಡುತ್ತಾರೆ ಎಂಬ ವಿಶ್ವಾಸವಿದೆ. ವಿಜಯೇಂದ್ರ ಬದಲಿಗೆ ಯಡಿಯೂರಪ್ಪನವರೇ ಬಂದು ನಿಲ್ಲಲಿ. ಯಾರೇ ಬಂದರೂ ಅವರನ್ನು ಎದುರಿಸಲು ಸಿದ್ಧನಿದ್ದೇನೆ’ ಎಂದು ಸ್ಪಷ್ಟಪಡಿಸಿದರು.

‘ಈ ಚುನಾವಣೆಯಲ್ಲಿ ಬಿಜೆಪಿ 60 ಸ್ಥಾನಗಳನ್ನು ದಾಟುವುದಿಲ್ಲ. ಯಾವುದೇ ರಾಜಕೀಯ ಪಕ್ಷದಿಂದ ನಮಗೆ ಯಾವುದೇ ಬೆದರಿಕೆ ಇಲ್ಲ. ಈ ಚುನಾವಣೆಯಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರಲಿದೆ ಎಂದು ಭವರಸೆ ವ್ಯಕ್ತಪಡಿಸಿದ ಸಿದ್ದರಾಮಯ್ಯ, ‘ಮೈತ್ರಿಯ ಬಗ್ಗೆ ನಾವು ಯಾರನ್ನೂ ಕರೆದಿಲ್ಲ, ನಮ್ಮೊಂದಿಗೆ ಬರುವಂತೆಯೂ ಹೇಳಿಲ್ಲ, ಕರ್ನಾಟಕದ ಜನತೆ ಕಾಂಗ್ರೆಸ್‍ಗೆ ಮತ ಹಾಕಲು ನಿರ್ಧರಿಸಿದ್ದು, ನಮ್ಮ ಸರಕಾರ ಸಂಪೂರ್ಣ ಬಹುಮತದೊಂದಿಗೆ ರಚನೆಯಾಗಲಿದೆ’ ಎಂದು ನುಡಿದರು.

ಜನ ಬಯಸಿದ್ದಾರೆ: ‘ಭ್ರಷ್ಟಾಚಾರ ತೊಲಗಿಸಿ, ಜನಪರ ಆಡಳಿತ ನೀಡಲು, ನುಡಿದಂತೆ ನಡೆಯಲು ಕಾಂಗ್ರೆಸ್ ಪಕ್ಷದಿಂದ ಸಾಧ್ಯ ಎಂದು ಜನರಿಗೆ ಅರಿವಾಗಿದ್ದು, ಜನ ಬದಲಾವಣೆ ಬಯಸಿದ್ದಾರೆ. ನನ್ನ ಪ್ರಕಾರ ನೂರಕ್ಕೆ 100ರಷ್ಟು ಕಾಂಗ್ರೆಸ್ ಅಧಿಕಾರಕ್ಕೆ ಬರಲಿದೆ. ಜನ ಕಾಂಗ್ರೆಸ್ ಪಕ್ಷಕ್ಕೆ ಆಶೀರ್ವಾದ ಮಾಡಲಿದ್ದಾರೆ ಎಂಬ ನಂಬಿಕೆ ಇದೆ’ ಎಂದು ಸಿದ್ದರಾಮಯ್ಯ ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಹೇಳಿದರು.

‘ಎಸ್.ಆರ್.ಶ್ರೀನಿವಾಸ್ (ವಾಸು) ಸ್ವಾಭಿಮಾನಿ ರಾಜಕಾರಣಿ. ಅವರು ಯಾವುದೇ ಪಕ್ಷದಲ್ಲಿದ್ದರು ಬಹಳ ನಿಷ್ಠೆಯಿಂದ ಆ ಪಕ್ಷ ಕಟ್ಟುವ ಕೆಲಸ ಮಾಡುತ್ತಾರೆ. ನಾನು ಜೆಡಿಎಸ್ ರಾಜ್ಯಾಧ್ಯಕ್ಷನಾಗಿದ್ದ ವೇಳೆ ಅವರು ಪಕ್ಷ ಸೇರಿದ್ದರು. ನಂತರ ಜೆಡಿಎಸ್‍ನಲ್ಲಿ ನಿಷ್ಠಾವಂತರಾಗಿ 3 ಬಾರಿ ಶಾಸಕರಾಗಿ ಒಂದು ಬಾರಿ ಸ್ವತಂತ್ರ್ಯವಾಗಿ ಶಾಸಕರಾಗಿ, ಸಚಿವರಾಗಿ ಕೆಲಸ ಮಾಡಿದ್ದಾರೆ. ಅವರು ಪಕ್ಷಕ್ಕೆ ಸೇರ್ಪಡೆಯಾಗಿರುವುದರಿಂದ ತುಮಕೂರು ಜಿಲ್ಲೆಯಲ್ಲಿ ಕಾಂಗ್ರೆಸ್‍ಗೆ ಶಕ್ತಿ ಬಂದಿದೆ’ ಎಂದು ಹೇಳಿದರು.

ಜೆಡಿಎಸ್‍ನಿಂದ ಅವರನ್ನು ಬಲವಂತವಾಗಿ ಆಚೆ ದಬ್ಬಿದ್ದಾರೆ. ಜೆಡಿಎಸ್‍ನಲ್ಲಿ ದೇವೇಗೌಡರು, ಕುಮಾರಸ್ವಾಮಿ ಅವರು ಹೇಳಿದಂತೆ ಕೇಳಬೇಕು. ಅಲ್ಲಿ ಸ್ವತಂತ್ರಯವಾಗಿ ಯಾರಾದರೂ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರೆ, ಅವರು ಆ ಪಕ್ಷದಲ್ಲಿ ಇರಲು ಸಾಧ್ಯವಿಲ್ಲ. ಅವರ ಕುಟುಂಬದಲ್ಲಿ ತೆಗೆದುಕೊಳ್ಳುವ ತೀರ್ಮಾನವೇ ಅಂತಿಮ. ಅದರ ವಿರುದ್ಧ ಮಾತನಾಡಿದರೆ ಅವರನ್ನು ಉಳಿಯಲು ಬಿಡುವುದಿಲ್ಲ. ನನಗೂ ಅದೇ ರೀತಿ ಆಗಿತ್ತು, ವಾಸುಗೂ ಅದೇ ಆಗಿದೆ ಎಂದು ಸಿದ್ದರಾಮಯ್ಯ ನುಡಿದರು.

‘ಜೆಡಿಎಸ್ ಎಂದಿಗೂ ಸ್ವಂತ ಶಕ್ತಿ ಮೇಲೆ ಅಧಿಕಾರಕ್ಕೆ ಬರುವುದಿಲ್ಲ. ಬಿಜೆಪಿ ಮತ್ತೆ ಅಧಿಕಾರಕ್ಕೆ ಬಂದರೆ ರಾಜ್ಯ ನಾಶವಾಗಲಿದೆ ಎಂದು ಜನರಿಗೆ ಅರ್ಥವಾಗಿದೆ. ಹೀಗಾಗಿ ಕಾಂಗ್ರೆಸ್ ಪಕ್ಷ ಮಾತ್ರ ಸ್ವಂತ ಬಲದ ಮೇಲೆ ಅಧಿಕಾರಕ್ಕೆ ಬರಲಿದೆ. ಇತ್ತೀಚಿನ ಸಮೀಕ್ಷೆಗಳನ್ನು ನೀವು ನೋಡಿದ್ದೀರಿ. ರಾಜ್ಯದ ವಾತಾವರಣ ನೋಡಿದರೂ ಕಾಂಗ್ರೆಸ್ ಈ ಬಾರಿ ಅಧಿಕಾರಕ್ಕೆ ಬರಲಿದೆ ಎಂದು ಸ್ಪಷ್ಟ’

-ಸಿದ್ದರಾಮಯ್ಯ ವಿಪಕ್ಷ ನಾಯಕ

Similar News