ಬೇಲೂರು ರಥೋತ್ಸವದಲ್ಲಿ ಕುರಾನ್ ಪಠಣ; ಹಿಂದಿನ ಪದ್ಧತಿ ಮುಂದುವರಿಯುತ್ತದೆ: ಜಿಲ್ಲಾಧಿಕಾರಿ ಎಂ.ಎಸ್.ಅರ್ಚನಾ

Update: 2023-03-30 15:40 GMT

ಹಾಸನ: ಮಾ,30: ''ಐತಿಹಾಸಿಕ ಬೇಲೂರಿನ ಶ್ರೀ ಚನ್ನಕೇಶವ ರಥೋತ್ಸವದ ವೇಳೆ ಕುರಾನ್ ಪಠಣ ವಿಚಾರ ಹೊಸದಾಗಿ ಸೃಷ್ಟಿಯಾಗಿದ್ದಲ್ಲ'' ಎಂದು ಜಿಲ್ಲಾಧಿಕಾರಿ ಎಂ.ಎಸ್.ಅರ್ಚನಾ ಹೇಳಿದ್ದಾರೆ.

ಮಾ.28ರಂದು (ಮಂಗಳವಾರ) ಬೇಲೂರಿನ ಶ್ರೀ ಚನ್ನಕೇಶವ ರಥೋತ್ಸವದಲ್ಲಿ ಕುರಾನ್ ಪಠಣ ಮಾಡದಂತೆ ಸಂಘಪರಿವಾರದ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದು, ಈ ಬಗ್ಗೆ ಜಿಲ್ಲಾಧಿಕಾರಿ ಸ್ಪಷ್ಟನೆ ನೀಡಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಜಿಲ್ಲಾಧಿಕಾರಿ ಎಂ.ಎಸ್.ಅರ್ಚನಾ, '1929 ರಿಂದ ಈ ಪದ್ದತಿ ನಡೆಯುತ್ತಿದೆ. ರಥೋತ್ಸವ ಆಚರಣೆ ಪದ್ಧತಿಯಲ್ಲಿ ಅದು ಸೇರಿದೆ. ರಥೋತ್ಸವದ ದಿನ ಮೌಲ್ವಿಗಳು ಬಂದು ಮುಜ್ರೆ ಸರ್ವಿಸ್ ಅಂತಾ ಮಾಡುತ್ತಾರೆ ಅದು 1929 ರಿಂದ ನಡೆದುಕೊಂಡು ಬಂದಿದೆ' ಎಂದು ಸ್ಪಷ್ಟಪಡಿಸಿದರು. 

''ಈ ವರ್ಷ ಮತ್ತೆ ಪದತಿ ಬದಲಾಯಿಸಿ ಅಂತ ಕೇಳಿದ್ದಾರೆ. ಆದರೆ ದಿಢೀರ್ ಎಂದು ಬದಲಾವಣೆ ಮಾಡಲು ಆಗಲ್ಲ ಎಂಬ ಕಾರಣಕ್ಕೆ ಸುಮ್ಮನಿದ್ದೆವು. ನಿನ್ನೆ ಪ್ರತಿಭಟನೆ ಮಾಡಿದ್ದಾರೆ, ಆ ವೇಳೆ ಘೋಷಣೆ ಕೂಗಿದ ಯುವಕನನ್ನು ಪೊಲೀಸರು ವಶಕ್ಕೆ ಪಡೆದು ಪರಿಸ್ಥಿತಿ ನಿಯಂತ್ರಿಸಿದ್ದಾರೆ'' ಎಂದು ಹೇಳಿದರು.

ಇಷ್ಟು ವರ್ಷದಿಂದ ನಡೆದುಕೊಂಡು ಬಂದಿರುವ ಆಚರಣೆಯನ್ನು ನಮ್ಮ ಸ್ವಂತ ವಿವೇಚನೆಯಿಂದ ನಿಲ್ಲಿಸಲು ಬರಲ್ಲ. ಪರಿಸ್ಥಿತಿ ಬಗ್ಗೆ ಮುಜರಾಯಿ ಇಲಾಖೆಗೂ ತಿಳಿಸಿದ್ದೇವೆ. ಇದನ್ನು ಅಧ್ಯಯನ ಮಾಡಲು ಬಂದಿರುವ ಆಗಮ ಪಂಡಿತರು ರಿಪೋರ್ಟ್ ಕೊಟ್ಟ ನಂತರ ಚರ್ಚೆ ಮಾಡುತ್ತೇವೆ ಎಂದರು. ಅಲ್ಲೀವರೆಗೂ ಯಾವುದೇ ಬದಲಾವಣೆ ಇಲ್ಲ ಎಂದು ಸ್ಪಷ್ಟಪಡಿಸಿದರು.

ಇದೇ ವೇಳೆ ದೇವಾಲಯದ ಕಾರ್ಯನಿವಾರ್ಹಕ ಅಧಿಕಾರಿ ಮೇಲಧಿಕಾರಿಗಳ ಜೊತೆ ಚರ್ಚೆ ಮಾಡದೆ ಇಲ್ಲಸಲ್ಲದ ಹೇಳಿಕೆ ಕೊಟ್ಟಿದ್ದಾರೆ  ಎಂದರು.

''ಐದು ವರ್ಷಕ್ಕಿಂತ ಮುಂಚೆ ದೇವಸ್ಥಾನದ ಮೆಟ್ಟಿಲುಗಳ ಮೇಲೆ ನಿಂತು ಕುರಾನ್ ಪಠಣ ಮಾಡುವ ಪದ್ಧತಿ ಇತ್ತು.  ಅದನ್ನೇ ಮುಂದುವರಿಸುವಂತೆ ಸೂಚನೆ ಕೊಟ್ಟಿದ್ದೇವೆ. ಈ ಸಮಯದಲ್ಲಿ ನಾವೇ ಎಲ್ಲ ನಿರ್ಧಾರ ತೆಗೆದುಕೊಳ್ಳುಲು ಆಗಲ್ಲ'' ಎಂದು ತಿಳಿಸಿದರು.
 

Similar News