ಕನ್ನಡ ಭಾಷಾ ವಿಷಯ ಹೊರತುಪಡಿಸಿ ವಿದ್ಯಾರ್ಥಿಯೊಬ್ಬರಿಗೆ SSLC ಪರೀಕ್ಷೆಗೆ ಅವಕಾಶ ಕಲ್ಪಿಸಿದ ಹೈಕೋರ್ಟ್

Update: 2023-03-30 17:38 GMT

ಬೆಂಗಳೂರು, ಮಾ.30: ನಗರದ ಖಾಸಗಿ ಶಾಲೆಯ ವಿದ್ಯಾರ್ಥಿಯೊಬ್ಬರಿಗೆ ಕನ್ನಡ ಭಾಷಾ ವಿಷಯ ಹೊರತುಪಡಿಸಿ ಎಸೆಸೆಲ್ಸಿ ಪರೀಕ್ಷೆ ಬರೆಯಲು ಹೈಕೋರ್ಟ್ ಅನುಮತಿ ನೀಡಿದೆ.

ಕನ್ನಡ ಭಾಷಾ ವಿಷಯವನ್ನು ಹೊರತುಪಡಿಸಿ ಹಿಂದಿ, ಸಂಸ್ಕೃತ ಮತ್ತು ಇಂಗ್ಲೀಷ್ ಭಾಷಾ ವಿಷಯಗಳಲ್ಲಿ ಎಸೆಸೆಲ್ಸಿ ಪರೀಕ್ಷೆ ಬರೆಯಲು ಹೈಕೋರ್ಟ್‍ನ ಏಕಸದಸ್ಯ ಪೀಠ ಆದೇಶ ನೀಡಿತ್ತು. ಇದನ್ನು ಪ್ರಶ್ನಿಸಿ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿಯ ನಿರ್ದೇಶಕರು ದ್ವಿಸದಸ್ಯ ಪೀಠದಲ್ಲಿ ಮೇಲ್ಮನವಿ ಸಲ್ಲಿಸಿದ್ದರು.

ಈ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಪಿ.ಬಿ.ವರಾಳೆ ನೇತೃತ್ವದ ವಿಭಾಗೀಯ ನ್ಯಾಯಪೀಠ, ಏಕಸದಸ್ಯ ಪೀಠದ ಆದೇಶವನ್ನು ಎತ್ತಿ ಹಿಡಿದಿದ್ದು, ಅರ್ಜಿಯನ್ನು ವಜಾಗೊಳಿಸಿ ಆದೇಶಿಸಿದೆ. 

ವಿಚಾರಣೆ ವೇಳೆ ಮೇಲ್ಮನವಿದಾರರ ಪರ ವಕೀಲರು ವಾದ ಮಂಡಿಸಿ, ರಾಜ್ಯ ಸರಕಾರವು ಕನ್ನಡ ಭಾಷೆ ಕಲಿಕೆಯ ನಿಯಮಗಳು 2017ರಲ್ಲಿ ಪರಿಚಯಿಸಿದ್ದು, ಎಲ್ಲ ಶಾಲೆಗಳಲ್ಲಿ ಸಿಬಿಎಸ್‍ಸಿ ಮತ್ತು ಐಸಿಎಸ್‍ಸಿ ಪಠ್ಯಕ್ರಮಗಳಲ್ಲಿ ಕನ್ನಡವನ್ನು ಒಂದು ವಿಷಯವಾಗಿ ಕಡ್ಡಾಯವಾಗಿ ಕಲಿಸಬೇಕು ಎಂಬ ಆದೇಶವಿದೆ ಎಂದು ನ್ಯಾಯಪೀಠಕ್ಕೆ ವಿವರಿಸಿದರು. ಇದನ್ನು ತಿರಸ್ಕರಿಸಿದ ನ್ಯಾಯಪೀಠ ವಿದ್ಯಾರ್ಥಿಯ ನೆರವಿಗೆ ಧಾವಿಸಿದೆ.

ವಿದ್ಯಾರ್ಥಿಯು ಒಂದನೆ ತರಗತಿಯಿಂದ ಈವರೆಗೂ ಕನ್ನಡ ಭಾಷಾ ವಿಷಯವನ್ನು ಅಧ್ಯಯನವನ್ನೇ ಮಾಡಿಲ್ಲ. ಹೀಗಿರುವಾಗಿ ಕನ್ನಡ ಭಾಷಾ ವಿಷಯದಲ್ಲಿ ಪರೀಕ್ಷೆ ಬರೆಯಬೇಕು ಎಂದು ನಿರೀಕ್ಷಿಸುವುದು ಕೆಟ್ಟ ವರ್ತನೆಯಾಗಿದೆ. ಅಲ್ಲದೆ, ವಿದ್ಯಾರ್ಥಿಯ ಶೈಕ್ಷಣಿಕ ಭವಿಷ್ಯದ ಮೇಲೆ ಪರಿಣಾಮ ಬೀರಲಿದೆ. ಹೀಗಾಗಿ ಪರೀಕ್ಷೆಗೆ ಅವಕಾಶ ನೀಡುವಂತೆ ಸೂಚಿಸಿ ವಿಚಾರಣೆ ಮುಂದೂಡಿದೆ. 

Similar News