ಜಲ ಸಾಕ್ಷರತೆ, ಜಾಗೃತಿಗೆ ಆಂದೋಲನ ಅಗತ್ಯ

Update: 2023-03-30 19:30 GMT

ಕುಡಿಯುವ ನೀರಿನ ಕೊರತೆಗೆ ಮುಖ್ಯ ಕಾರಣ- ಮಾಲಿನ್ಯ ಮತ್ತು ಮಳೆಯಲ್ಲಿನ ವ್ಯತ್ಯಯ. ರಾಜ್ಯದ ನದಿಗಳ ನೀರು ನೇರವಾಗಿ ಕುಡಿಯುವುದು ಒತ್ತಟ್ಟಿಗಿರಲಿ; ಸ್ನಾನಕ್ಕೂ ಯೋಗ್ಯವಾಗಿಲ್ಲ ಎಂದು ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ನವೆಂಬರ್ 2022ರ ರಾಷ್ಟ್ರೀಯ ನೀರಿನ ಗುಣಮಟ್ಟ ಯೋಜನೆಯಡಿಯ ವರದಿ ಹೇಳುತ್ತದೆ. ಕೃಷ್ಣಾ, ಕಾವೇರಿ, ತುಂಗಾ, ಭದ್ರಾ, ಕಬಿನಿ, ಶಿಂಷಾ, ಮಲಪ್ರಭಾ, ಘಟಪ್ರಭಾ, ಭೀಮಾ, ಹೇಮಾವತಿ, ನೇತ್ರಾವತಿ, ಯಗಚಿ, ಕಾರಂಜಾ ಸೇರಿದಂತೆ ರಾಜ್ಯದ ಯಾವುದೇ ನದಿಯ ನೀರನ್ನು ಸಂಸ್ಕರಿಸದೆ ಕುಡಿಯುವಂತಿಲ್ಲ ಎನ್ನುತ್ತದೆ ವರದಿ.



ಈ ವರ್ಷ ಬೇಸಿಗೆ ಇನ್ನಷ್ಟು ಉಗ್ರವಾಗಿದೆ. ಕಾಡಿನ ಬೆಂಕಿ, ಉಷ್ಣ ಅಲೆಗಳು ಹಾಗೂ ನೀರಿನ ಕೊರತೆಯಿಂದ ಭೂಮಿ-ಜನ-ವನ್ಯಜೀವಿಗಳು ಬಳಲಿವೆ. ಇನ್ನೊಂದು ಜಲ ದಿನ(ಮಾರ್ಚ್ 22) ಆಚರಣೆಯಾಗಿದೆ. ಜಗತ್ತಿನ ನೀರಿನ ದಾಹ ಹೆಚ್ಚುತ್ತ ಸಾಗಿದೆ. ಅದಕ್ಕಿಂತ ವೇಗವಾಗಿ ದುರ್ಬಳಕೆ ಮತ್ತು ಮಲಿನಗೊಳಿಸುವಿಕೆ ನಡೆಯುತ್ತಿದೆ. ವಿಶ್ವಸಂಸ್ಥೆ 'ನಾವು ಈಗ ಕೆಂಪು ವಲಯದಲ್ಲಿದ್ದೇವೆ' ಎಂದಿದ್ದು, 50 ವರ್ಷಗಳ ಬಳಿಕ ಶುದ್ಧ ನೀರು ಕುರಿತ ಸಮಾವೇಶವೊಂದು ಇತ್ತೀಚೆಗೆ ನ್ಯೂಯಾರ್ಕ್‌ನಲ್ಲಿ ತಜಿಕಿಸ್ತಾನ್ ಮತ್ತು ನೆದರ್‌ಲ್ಯಾಂಡ್ಸ್ ಸರಕಾರಗಳ ಆಶ್ರಯದಲ್ಲಿ ನಡೆದಿದೆ(ಮಾರ್ಚ್ 22, 23 ಮತ್ತು 24). ನೀರಿಗೆ ಸಂಬಂಧಿಸಿದ ಆಶ್ವಾಸನೆಗಳು ಎಷ್ಟು ಕಾರ್ಯಗತಗೊಂಡಿವೆ, ನೀರಿನ ನಿರ್ವಹಣೆ ಕಾರ್ಯನೀತಿ ಮತ್ತು ಆಚರಣೆಗಳಲ್ಲಿ ಸ್ಥಿತ್ಯಂತರವನ್ನು ತರುವುದು ಹೇಗೆ ಮತ್ತು ಜಲ ಕ್ರಿಯಾ ದಶಕ(2018-2028)ದ ಮಧ್ಯಂತರ ಅವಲೋಕನದ ಉದ್ದೇಶವಿದ್ದ ಸಮಾವೇಶದಲ್ಲಿ 193 ದೇಶಗಳ 2,000 ಮಂದಿ ಪಾಲ್ಗೊಂಡಿದ್ದರು. ವಿಶ್ವಸಂಸ್ಥೆ ಪ್ರಕಾರ, 2030ರಲ್ಲಿ ನೀರಿನ ಬೇಡಿಕೆ ಪೂರೈಕೆಗಿಂತ ಶೇ.40ರಷ್ಟು ಹೆಚ್ಚಲಿದೆ. ಹವಾಮಾನ ಬದಲಾವಣೆಯ ಮೊದಲ ಪರಿಣಾಮ ನೀರಿನ ರೂಪದಲ್ಲಿ ಕಾಣಿಸಿಕೊಳ್ಳುತ್ತದೆ. ಜಗತ್ತಿನಲ್ಲಿ ಮೂರು ರೀತಿಯ ನೀರಿನ ಸಮಸ್ಯೆ ಇದೆ-ಅತಿ ಹೆಚ್ಚು, ಅತಿ ಕಡಿಮೆ ಅಥವಾ ಅತಿ ಮಲಿನ. ಸ್ಟಾಕ್‌ಹೋಮ್ ಅಂತರ್‌ರಾಷ್ಟ್ರೀಯ ಜಲ ಇನ್‌ಸ್ಟಿಟ್ಯೂಟ್ ಪ್ರಕಾರ, ಜಲ ಸಾಕ್ಷರತೆ ಹೆಚ್ಚಿದೆ. ಕಳೆದ ಎರಡು ದಶಕದಲ್ಲಿ ನಡೆದ ಹೂಡಿಕೆಯಿಂದಾಗಿ ನೀರಿನ ಲಭ್ಯತೆ ಹೆಚ್ಚಳಗೊಂಡಿದೆ. ಆದರೆ, ಕೋವಿಡ್ ಸಂಕಷ್ಟದ ವೇಳೆ 2020ರಲ್ಲಿ 200 ಕೋಟಿ ಮಂದಿಗೆ ಸುರಕ್ಷಿತ ಕುಡಿಯುವ ನೀರು ಲಭಿಸಲಿಲ್ಲ ಮತ್ತು 77 ಕೋಟಿ ಕುಡಿಯುವ ನೀರಿನ ಸೇವೆಗಳನ್ನು ಬಳಸಲಿಲ್ಲ. ಗ್ರಾಮೀಣ ಪ್ರದೇಶದಲ್ಲಿ ಕಡಿಮೆ ಮಂದಿಗೆ ಶುದ್ಧ ನೀರು ಲಭಿಸಿತು ಮತ್ತು ಜಗತ್ತಿನ ಅರ್ಧದಷ್ಟು ಮಂದಿ(3.6 ಶತಕೋಟಿ) ತ್ಯಾಜ್ಯ ನಿರ್ವಹಣೆ ಸಮಸ್ಯೆ ಹಾಗೂ 49 ಕೋಟಿ ಮಂದಿ ಬಯಲು ಶೌಚಾಲಯವನ್ನು ಬಳಸಬೇಕಾಗಿ ಬಂತು.

ಶುದ್ಧ ಮತ್ತು ಸುಸ್ಥಿರ ಜಲಮೂಲಗಳಿಗೆ ಪ್ರವೇಶಾವಕಾಶ ಕೂಡ ಅಸಮಾನ ವಾಗಿದೆ. 200 ಕೋಟಿ ಮಂದಿ ತೀವ್ರ ನೀರಿನ ಕೊರತೆ ಅನುಭವಿಸುತ್ತಿರುವ ದೇಶಗಳಲ್ಲಿ ಇದ್ದಾರೆ. ಊಹಿಸಿದಂತೆ, ಇವೆಲ್ಲವೂ ಬಡ ದೇಶಗಳು. ಕೊರತೆ ಮತ್ತು ಮಾಲಿನ್ಯ ಹೆಚ್ಚಿದಂತೆ ನೀರು ದುಬಾರಿಯಾಗುತ್ತ ಹೋಗುತ್ತದೆ. ಸ್ಪರ್ಧೆ ಮತ್ತು ಸಂಘರ್ಷ ಹೆಚ್ಚುತ್ತದೆ. ಜಗತ್ತಿನ ಶೇ.50ರಷ್ಟು ನಗರಗಳು ಮತ್ತು ಶೇ.75ರಷ್ಟು ನೀರಾವರಿ ಪ್ರದೇಶಗಳು ನೀರಿನ ಆವರ್ತನ ಕೊರತೆಗೆ ಸಿಲುಕಿವೆ. ನೀರಿನ ಲಭ್ಯತೆ, ಗುಣಮಟ್ಟ ಮತ್ತು ಪ್ರಮಾಣವನ್ನು ಪ್ರಭಾವಿಸುವ ಅಂಶಗಳೆಂದರೆ, ಹವಾಮಾನ ಬದಲಾವಣೆ, ಸುಸ್ಥಿರವಲ್ಲದ ಮಾನವ ಚಟುವಟಿಕೆ ಹಾಗೂ ಅಸಮರ್ಪಕ ಪರಿಸರ ನಿರ್ವಹಣೆ. ಹವಾಮಾನ ಬದಲಾವಣೆಗೆ ಗಡಿಗಳ ಅಡೆತಡೆಯಿಲ್ಲ. ಜಗತ್ತಿನಲ್ಲಿ ಲಭ್ಯವಿರುವ ಶುದ್ಧ ನೀರಿನ ಶೇ.60ರಷ್ಟು ಮೂಲಗಳು 153 ದೇಶಗಳ ಗಡಿಗಳ ನಡುವೆ ಹಂಚಿಹೋಗಿವೆ. ಹೀಗಾಗಿ ನೀರಿನ ಕೊರತೆಯ ಸಮಸ್ಯೆಗೆ ಅಂತರ್‌ರಾಷ್ಟ್ರೀಯ ಆಯಾಮವಿದೆ. ಹವಾಮಾನ ಬದಲಾವಣೆಗೆ ಹೊಂದಿಕೊಳ್ಳುವಿಕೆ ಮತ್ತು ಅವಘಡ ಕಡಿತಗೊಳಿಸುವಿಕೆಗೆ ಆದ್ಯತೆ ನೀಡಬೇಕಾಗುತ್ತದೆ.

ದೇಶ-ರಾಜ್ಯದ ಸಮಸ್ಯೆ:
ಜಗತ್ತಿನಲ್ಲಿ ಲಭ್ಯವಿರುವ ನೀರಿನಲ್ಲಿ ಶೇ.4ರಷ್ಟು ಭಾರತದಲ್ಲಿದೆ. ಆದ್ದರಿಂದ, ಜಲಸಮೃದ್ಧಿ ಇರಬೇಕಿತ್ತು. ತದ್ವಿರುದ್ಧವಾಗಿ ಶೇ.30ರಷ್ಟು ಹಳ್ಳಿಗಳಲ್ಲಿ ನೀರಿನ ತೀವ್ರ ಕೊರತೆಯಿದೆ ಎನ್ನುತ್ತಾರೆ ಸಾಮಾಜಿಕ ಕಾರ್ಯಕರ್ತ, ಸ್ಟಾಕ್‌ಹೋಂ ಇನ್‌ಸ್ಟಿಟ್ಯೂಟ್‌ನ ಜಲ ಪ್ರಶಸ್ತಿ ಪುರಸ್ಕೃತ ರಾಜೇಂದ್ರ ಸಿಂಗ್. ''1951ರಲ್ಲಿ ಮೊದಲ ಪಂಚವಾರ್ಷಿಕ ಯೋಜನೆ ಅವಧಿಯಲ್ಲಿ ದೇಶದ ಶೇ.1ರಷ್ಟು ಹಳ್ಳಿ(297)ಗಳಲ್ಲಿ ನೀರಿನ ಕೊರತೆ ಇತ್ತು. ಈಗ ಸಂಖ್ಯೆ 87,000ಕ್ಕೆ ಹೆಚ್ಚಳಗೊಂಡಿದೆ. ಈ ಮೊದಲು ಪಶ್ಚಿಮ ಬಂಗಾಳ, ಒಡಿಶಾ ಮತ್ತು ಬಿಹಾರಕ್ಕೆ ಸೀಮಿತವಾಗಿದ್ದ ಕೊರತೆ, ಈಗ ದೇಶದೆಲ್ಲೆಡೆ ವ್ಯಾಪಿಸಿದೆ. ನೀರು ವಾಣಿಜ್ಯೀಕರಣಗೊಂಡಿದೆ. ಬದಲಾಗಿ ಸಮುದಾಯೀಕರಣ ಆಗಬೇಕು. ನೀರಿನ ನಿರ್ವಹಣೆಯ ಸಮುದಾಯ ಆಧರಿತ ವಿಕೇಂದ್ರೀಕರಣ ಇದಕ್ಕಿರುವ ಏಕೈಕ ಪರಿಹಾರ. ಜಲಸಾಕ್ಷರತೆಗೆ ಆಂದೋಲನ ನಡೆಯಬೇಕು'' ಎನ್ನುತ್ತಾರೆ.

ಕುಡಿಯುವ ನೀರಿನ ಕೊರತೆಗೆ ಮುಖ್ಯ ಕಾರಣ- ಮಾಲಿನ್ಯ ಮತ್ತು ಮಳೆಯಲ್ಲಿನ ವ್ಯತ್ಯಯ. ರಾಜ್ಯದ ನದಿಗಳ ನೀರು ನೇರವಾಗಿ ಕುಡಿಯುವುದು ಒತ್ತಟ್ಟಿಗಿರಲಿ; ಸ್ನಾನಕ್ಕೂ ಯೋಗ್ಯವಾಗಿಲ್ಲ ಎಂದು ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ನವೆಂಬರ್ 2022ರ ರಾಷ್ಟ್ರೀಯ ನೀರಿನ ಗುಣಮಟ್ಟ ಯೋಜನೆ ಯಡಿಯ ವರದಿ ಹೇಳುತ್ತದೆ. ಕೃಷ್ಣಾ, ಕಾವೇರಿ, ತುಂಗಾ, ಭದ್ರಾ, ಕಬಿನಿ, ಶಿಂಷಾ, ಮಲಪ್ರಭಾ, ಘಟಪ್ರಭಾ, ಭೀಮಾ, ಹೇಮಾವತಿ, ನೇತ್ರಾವತಿ, ಯಗಚಿ, ಕಾರಂಜಾ ಸೇರಿದಂತೆ ರಾಜ್ಯದ ಯಾವುದೇ ನದಿಯ ನೀರನ್ನು ಸಂಸ್ಕರಿಸದೆ ಕುಡಿಯುವಂತಿಲ್ಲ ಎನ್ನುತ್ತದೆ ವರದಿ. ಮಂಡಳಿಯು 17 ನದಿಗಳಲ್ಲಿ ನಾನಾ ಕಡೆ 103 ತಪಾಸಣೆ ಕೇಂದ್ರಗಳನ್ನು ಸ್ಥಾಪಿಸಿದೆ. ನೀರನ್ನು 5 ವರ್ಗಗಳಲ್ಲಿ ವಿಂಗಡಿಸಲಾಗಿದೆ-ಸಂಸ್ಕರಿಸಿ ಬಳಸಬಹುದು, ಸ್ನಾನಕ್ಕೆ ಯೋಗ್ಯ, ಸೋಂಕು ನಿವಾರಿಸಿ ಸಂಸ್ಕರಿಸಿ ಬಳಸಬಹುದು, ವನ್ಯಜೀವಿಗಳು ಕುಡಿಯಬಹುದು/ಮೀನುಗಾರಿಕೆಗೆ ಬಳಸಬಹುದು ಮತ್ತು ಲೋಹಯುಕ್ತ, ನೀರಾವರಿ/ಕೈಗಾರಿಕೆಗಳಲ್ಲಿ ಬಳಸಬಹುದು.

ಕೆರೆಗಳ ನೀರಿನ ಸ್ಥಿತಿಯೂ ಇದೇ ರೀತಿ ಇದೆ. ಬೆಂಗಳೂರಿನ 106 ಕೆರೆಗಳಲ್ಲಿ 66ರ ನೀರು ವನ್ಯಜೀವಿಗಳು ಕುಡಿಯಲು/ಮೀನುಗಾರಿಕೆಗೆ ಯೋಗ್ಯವಾಗಿದೆ. ಉಳಿದವು ಕೈಗಾರಿಕೆಗಳ ತ್ಯಾಜ್ಯ ಲೋಹ/ಒಳಚರಂಡಿ ತ್ಯಾಜ್ಯದಿಂದ ತುಂಬಿಕೊಂಡಿವೆ. ಎ,ಬಿ,ಸಿ ವರ್ಗದಲ್ಲಿ ಒಂದೇ ಒಂದು ಕೆರೆ ಇಲ್ಲ. ಡಿ ವರ್ಗದಲ್ಲಿ 66 ಮತ್ತು ಇ ವರ್ಗದಲ್ಲಿ 40 ಕೆರೆಗಳು ಇವೆ. ಇತರ ಜಿಲ್ಲೆಗಳ 69 ಕೆರೆಗಳಲ್ಲಿ ಕೂಡ ಎ ವರ್ಗದ ಒಂದೇ ಒಂದು ಕೆರೆ ಇಲ್ಲ. ಭರಪೂರ ಯೋಜನೆಗಳು, ಫಲಿತಾಂಶ ಶೂನ್ಯ:
ನದಿ- ಜಲಮೂಲಗಳ ಶುದ್ಧೀಕರಣಕ್ಕೆ ಸರಕಾರಗಳು ಏನೂ ಮಾಡುತ್ತಿಲ್ಲವೇ? ಮಾಡುತ್ತಿವೆ. ಒಕ್ಕೂಟ ಸರಕಾರ ಮಾರ್ಚ್ 2022ರಲ್ಲಿ ಕಾವೇರಿ ಸೇರಿದಂತೆ ದೇಶದ ಪ್ರಮುಖ 13 ನದಿ(ಜೇಲಂ, ಚೀನಾಬ್, ಸಟ್ಲೆಜ್, ರಾವಿ, ಬಿಯಾಸ್, ಯಮುನಾ, ಬ್ರಹ್ಮಪುತ್ರ, ಲೂನಿ, ನರ್ಮದಾ, ಗೋದಾವರಿ, ಮಹಾನದಿ ಮತ್ತು ಕೃಷ್ಣ)ಗಳ ಪುನರುಜ್ಜೀವನಕ್ಕೆ 19,300 ಕೋಟಿ ರೂ. ವೆಚ್ಚದ ಯೋಜನೆಯನ್ನು ಘೋಷಿಸಿತು. ಈ ನದಿಗಳು ಹಿಮಾಲಯ ಮತ್ತು ಪರ್ಯಾಯ ದ್ವೀಪದ 1.89 ದಶಲಕ್ಷ ಚದರ ಕಿ.ಮೀ. ಪ್ರದೇಶದಲ್ಲಿ ವ್ಯಾಪಿಸಿದ್ದು, ಇದು ದೇಶದ ಒಟ್ಟು ಭೂಪ್ರದೇಶದ ಶೇ.57. ಇದೊಂದು ಹಳೆಯ ಬಾಟಲಿಯಲ್ಲಿ ಹೊಸ ಮದ್ಯದಂಥ ಯೋಜನೆ ಎಂದು ಟೀಕೆಗೊಳಪಟ್ಟಿತು. ಜೂನ್ 2014ರಲ್ಲಿ ಆರಂಭಗೊಂಡ 20,500 ಕೋಟಿ ರೂ. ವೆಚ್ಚದ 'ನಮಾಮಿ ಗಂಗೆ' ಗಂಗಾ ನದಿಯ ಪುನರುಜ್ಜೀವನ, ಸಂರಕ್ಷಣೆ ಹಾಗೂ ಮಾಲಿನ್ಯದ ಪರಿಣಾಮಕಾರಿ ನಿಯಂತ್ರಣ ಉದ್ದೇಶದ ಯೋಜನೆ. ಇಂಥ ಭರ್ಜರಿ ಯೋಜನೆಗಳ ನಡುವೆಯೂ ನಮ್ಮ ನದಿಗಳೇಕೆ ಕೊಳೆತು ನಾರುತ್ತಿವೆ? ಇಷ್ಟೆಲ್ಲ ದುಡ್ಡು ಯಾವ ಸಮುದ್ರದ ಪಾಲಾಗುತ್ತಿದೆ?

ನದಿಗಳ ನೀರಿನಲ್ಲಿ ಲೋಹಗಳ ಜೊತೆಗೆ ಕೋಲಿಫಾರಂ ಬ್ಯಾಕ್ಟೀರಿಯಾ ತುಂಬಿ ತುಳುಕುತ್ತಿದೆ. ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ(ಸಿಪಿಸಿಬಿ) ಸೆಪ್ಟಂಬರ್ 2020ರಲ್ಲಿ ನದಿ ಮಾಲಿನ್ಯ ಕುರಿತು ಮಾಹಿತಿ ಬಹಿರಂಗಗೊಳಿಸಿತು. ಆನಂತರ ರಾಷ್ಟ್ರೀಯ ಹಸಿರು ನ್ಯಾಯಾಧಿಕರಣ ಸುಮೋಟೋ ಪ್ರಕರಣ ದಾಖಲಿಸಿಕೊಂಡು, ಫೆಬ್ರವರಿ 2021ರಲ್ಲಿ ನದಿಗಳ ಪುನರುಜ್ಜೀವನಕ್ಕೆ ಕೇಂದ್ರೀಯ ಸಮಿತಿಯೊಂದನ್ನು ನೇಮಿಸಿತು. ಎರಡು ವರ್ಷಗಳ ಬಳಿಕವೂ ರಾಜ್ಯದ ಎಲ್ಲ ನಗರಗಳಲ್ಲಿ ತ್ಯಾಜ್ಯ ಸಂಸ್ಕರಣೆ ಘಟಕ(ಎಸ್‌ಟಿಪಿ)ಗಳು ಸ್ಥಾಪನೆಯಾಗಿಲ್ಲ ಮತ್ತು ಸ್ಥಾಪನೆಯಾದ ಘಟಕಗಳು ಸಂಪೂರ್ಣ ಸಾಮರ್ಥ್ಯದಿಂದ ಕೆಲಸ ಮಾಡುತ್ತಿಲ್ಲ. ಇದರಿಂದ ಚರಂಡಿಗಳ ಮೂಲಕ ಮಲ-ಮೂತ್ರ-ಕಲ್ಮಷ-ಕೈಗಾರಿಕಾ ತ್ಯಾಜ್ಯಗಳು ನದಿಗಳನ್ನು ಸೇರುತ್ತಿವೆ. ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ ಪ್ರಕಾರ, 100 ಮಿಲಿಲೀಟರ್ ನೀರಿನಲ್ಲಿ 5,000 ಅಥವಾ ಅದಕ್ಕಿಂತ ಕಡಿಮೆ ಕೋಲಿಫಾರಂ ಇರಬೇಕು.

ಆದರೆ, ಶಿಂಷಾ(54,000), ಅರ್ಕಾವತಿ(24,000), ಕಾಗಿಣಾ(16,000), ತುಂಗಭದ್ರಾ(10,800), ಭೀಮಾ(9,200) ಕೋಲಿಫಾರಂ ಇವೆ. 17 ನದಿಗಳ ಅಕ್ಕಪಕ್ಕದಲ್ಲಿ ದಿನವೊಂದಕ್ಕೆ ಅಂದಾಜು 884 ದಶಲಕ್ಷ ಲೀಟರ್(ಎಂಎಲ್‌ಡಿ) ತ್ಯಾಜ್ಯ ಉತ್ಪತ್ತಿಯಾಗುತ್ತಿದ್ದು, ಇದರಲ್ಲಿ 536 ಎಂಎಲ್‌ಡಿ ಮಾತ್ರ ಸಂಸ್ಕರಣೆಯಾಗುತ್ತಿದೆ. ಸ್ಥಾಪನೆಯಾದ ಘಟಕಗಳ ಸಾಮರ್ಥ್ಯ 822 ಎಂಎಲ್‌ಡಿ. ಈ ಘಟಕಗಳ ಸಾಮರ್ಥ್ಯ-ಕ್ಷಮತೆಯ ಮೌಲ್ಯಮಾಪನ ನಡೆಯಬೇಕಿದೆ. ದ್ರವ ತ್ಯಾಜ್ಯದೊಟ್ಟಿಗೆ ಘನ ತ್ಯಾಜ್ಯ ಕೂಡ ಸಮರ್ಪಕವಾಗಿ ನಿರ್ವಹಣೆ ಆಗುತ್ತಿಲ್ಲ. ಅಲಸೂರು ಕೆರೆಯ ಮಾಲಿನ್ಯಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ಹಸಿರು ನ್ಯಾಯಾಧಿಕರಣದ ಮದ್ರಾಸ್ ಪೀಠಕ್ಕೆ ಸಿಪಿಸಿಬಿ ಜನವರಿ 2022ರಲ್ಲಿ ಸಲ್ಲಿಸಿದ ಪ್ರಮಾಣಪತ್ರದಲ್ಲಿ, ರಾಜ್ಯದಲ್ಲಿ ದಿನವೊಂದಕ್ಕೆ 11,085 ಟನ್ ಘನ ತ್ಯಾಜ್ಯ ಸೃಷ್ಟಿಯಾಗುತ್ತಿದ್ದು, ಇದರಲ್ಲಿ 6,817 ಟನ್(ಶೇ.61.5) ಸಂಸ್ಕರಣೆಯಾಗುತ್ತಿದೆ. 1,250 ಟನ್ ತ್ಯಾಜ್ಯವನ್ನು ಭೂಭರ್ತಿ ಸ್ಥಳಗಳಿಗೆ ತುಂಬಲಾಗುತ್ತಿದೆ ಎಂದು ಹೇಳಿತ್ತು. ಪರಿಸ್ಥಿತಿ ಈಗಲೂ ಬದಲಾಗಿಲ್ಲ. ಸಂಸ್ಕರಣೆಯಾಗದ ಕಸವನ್ನು ರಸ್ತೆ ಬದಿ, ಖಾಲಿ ನಿವೇಶನ, ಹೊಲ-ಗದ್ದೆ, ಕೆರೆ ಸೇರಿದಂತೆ ಎಲ್ಲೆಂದರಲ್ಲಿ ಎಸೆಯಲಾಗುತ್ತಿದ್ದು, ಮಳೆ ಬಂದಾಗ ವಿಷ ವಸ್ತುಗಳು ಅಂತರ್ಜಲ ಹಾಗೂ ಭೂಮಿಯೊಳಗೆ ಸೇರಿಕೊಳ್ಳುತ್ತಿವೆ. ಬಾಗಲಕೋಟೆ, ಗದಗ, ಕಲಬುರಗಿ, ತುಮಕೂರು, ರಾಮದುರ್ಗ ಮತ್ತಿತರ ನಗರಗಳಲ್ಲಿ ಎಸ್‌ಟಿಪಿ/ಒಳಚರಂಡಿ ಕಾಮಗಾರಿ ನಡೆಯುತ್ತಿದ್ದು, ಸಂಪೂರ್ಣಗೊಂಡ ಬಳಿಕ ನೀರಿನ ಗುಣಮಟ್ಟ ಸುಧಾರಿಸಲಿದೆ ಎನ್ನುವುದು ಕೆಎಸ್‌ಪಿಸಿಬಿ ಸಮಜಾಯಿಷಿ.

ನಮಾಮಿ ಗಂಗೆಯಂಥ ಹಲವು ಹತ್ತು ಯೋಜನೆಗಳ ಬಳಿಕವೂ ಶುದ್ಧ ನೀರು ಜನರಿಗೆ ಲಭ್ಯವಾಗುತ್ತಿಲ್ಲವೇಕೆ? ನೀರು ಕುರಿತ ಪಾರಂಪರಿಕ ಜ್ಞಾನದ ಪ್ರಸರಣದ ಜೊತೆಗೆ, ನೀರಿನ ಮೂಲಗಳ ಸಂರಕ್ಷಣೆ ಮತ್ತು ಜಲಜಾಗೃತಿ/ಸಾಕ್ಷರತೆಯ ಅಗತ್ಯವಿದೆ ನಿಜ. ಕೆರೆಗಳ ಸರಪಳಿಯೇ ಇದ್ದ ಕೋಲಾರ ಜಿಲ್ಲೆಯ ಸ್ಥಿತಿ ಚಿಂತಾಜನಕ ಆಗಿರುವುದೇಕೆ ಎಂದು ಪ್ರಶ್ನಿಸಬೇಕಿದೆ. ಕೋಲಾರ-ಚಿಕ್ಕಬಳ್ಳಾಪುರದ ಕೆರೆಗಳಿಗೆ ಕೋರಮಂಗಲ-ಚಳ್ಳಘಟ್ಟ ಕಣಿವೆ ಯೋಜನೆ ಮೂಲಕ ಬೆಂಗಳೂರಿನ ಸಂಸ್ಕರಿತ ತ್ಯಾಜ್ಯ ನೀರನ್ನು ತುಂಬಲಾಗುತ್ತಿದೆ. ಇದು ಅಂತರ್ಜಲವನ್ನು ಕಲುಷಿತಗೊಳಿಸುತ್ತಿದ್ದು, ಕೃಷಿಗೆ ಹಾನಿಯುಂಟು ಮಾಡುತ್ತಿದೆ. ತರಕಾರಿ-ಹೂವು ಕೃಷಿಯನ್ನು ಆಧರಿಸಿರುವ ಜೋಡಿ ಜಿಲ್ಲೆಗಳ ಶ್ರಮಜೀವಿ ಕೃಷಿಕರು ಏನು ಮಾಡಬೇಕು? ಕೋಲಾರ ಜಿಲ್ಲೆಯ ಏಳು ಪ್ರಮುಖ ಕೆರೆಗಳ ಪುನರುಜ್ಜೀವನಕ್ಕೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಸಿಎಸ್‌ಆರ್ ಅಡಿ 2022ರಲ್ಲಿ 4.26 ಕೋಟಿ ರೂ. ನೀಡಿತ್ತು. ಇದರಿಂದ ಏನಾದರೂ ಪ್ರಯೋಜನವಾಯಿತೇ? ಆರ್ಥಿಕ ಅಸಮಾನತೆ ತೀವ್ರವಾಗಿರುವಲ್ಲಿ ನೀರಿನ ಕೊರತೆ, ಪರಿಸರ ಮಾಲಿನ್ಯದಿಂದ ಕೆಳ ಹಂತದ ಜನ ತೀವ್ರ ಸಂಕಷ್ಟಕ್ಕೆ ಸಿಲುಕುತ್ತಾರೆ ಎನ್ನುವುದು ವಾಸ್ತವ.

ಕೆರೆಗಳು ಸಾಂಪ್ರದಾಯಿಕ ಜ್ಞಾನದ ಫಲವಾಗಿದ್ದು, ಕಂದಾಯ ಇಲಾಖೆಯಡಿ 33,000ಕ್ಕೂ ಅಧಿಕ ಕೆರೆಗಳಿವೆ. ಇವುಗಳ ಹೆಚ್ಚಿನವುಗಳ ಸ್ಥಿತಿಗತಿ ದಾರುಣವಾಗಿದೆ. ಕೆರೆಗಳೆಲ್ಲ ನಿವೇಶನ ಇಲ್ಲವೇ ಕಸದ ಗುಡ್ಡೆಗಳಾಗಿರುವ ಸಂದರ್ಭದಲ್ಲೇ 679 ಕೋಟಿ ರೂ. ವೆಚ್ಚದ 'ಅಮೃತ ಸರೋವರ' ಮಿಷನ್ ಅಡಿ ಕೆರೆಗಳ ನಿರ್ಮಾಣ/ಪುನರುಜ್ಜೀವನ ನಡೆಯುತ್ತಿದೆ. ಕಾರ್ಯಕ್ರಮದ ಆಶಯ ಎಂದಿನಂತೆ ಬಹಳ ಸುಂದರವಾಗಿದೆ. ಕಂದಾಯ ದಾಖಲೆಗಳಲ್ಲಿ ನಶಿಸಿಹೋಗಿದೆ ಎಂದು ಉಲ್ಲೇಖಗೊಂಡಿದ್ದ ಪ್ರದೇಶಗಳಲ್ಲಿ 644 ಹೊಸ ಕೆರೆಗಳನ್ನು ನಿರ್ಮಿಸಲಾಗಿದೆ ಮತ್ತು 1,963 ಕೆರೆಗಳನ್ನು ಪುನರುಜ್ಜೀವನಗೊಳಿಸಲಾಗಿದೆ. ಆಗಸ್ಟ್ 2023ರೊಳಗೆ ಪುನರುಜ್ಜೀವನ ಕಾಮಗಾರಿ ಅಂತ್ಯಗೊಳ್ಳಬೇಕಿದೆ. ಪುನರುಜ್ಜೀವನ/ನಿರ್ಮಾಣ ಅಂತ್ಯಗೊಂಡ ಬಳಿಕ ಕೆರೆಗಳ ನಿರ್ವಹಣೆಯನ್ನು ಬಳಕೆದಾರರ ಸಂಘಕ್ಕೆ ನೀಡಲಾಗುತ್ತದೆ ಎಂದು ಇಲಾಖೆ ಹೇಳುತ್ತದೆ. ರಾಜೇಂದ್ರ ಸಿಂಗ್ ಹೇಳುವ 'ಸಮುದಾಯೀಕರಣ' ಇದೇ. ಆದರೆ, ಕಾಮಗಾರಿಯ ಗುಣಮಟ್ಟ ಉತ್ತಮವಾಗಿದೆಯೇ ಮತ್ತು ಜನ ಕೆರೆಗಳನ್ನು ಉಳಿಸಿಕೊಳ್ಳುತ್ತಾರೆಯೇ ಎಂಬುದರ ಮೇಲೆ ಈ ಯೋಜನೆಯ ಯಶಸ್ಸು ನಿಂತಿದೆ.

ಜಲಸಾಕ್ಷರತೆಗೆ ಆಂದೋಲನ:
ಸಾಮುದಾಯಿಕ ಜವಾಬ್ದಾರಿ ಅತಿ ಕಡಿಮೆ ಇರುವಲ್ಲಿ ಜಾಗೃತಿ ಮೂಡಿಸಲು ಆಂದೋಲನವೇ ನಡೆಯಬೇಕಾಗುತ್ತದೆ. ಬೆಂಗಳೂರಿನಲ್ಲಿ ಕಾರುಗಳನ್ನು ಕೊಳವೆ ಮೂಲಕ ನೀರು ಚಿಮ್ಮಿಸುತ್ತ ತೊಳೆಯುವುದು ಸಾಮಾನ್ಯ ದೃಶ್ಯ. ತೊರೆಕಾಡನೂರಿನಿಂದ 100 ಕಿ.ಮೀ. ಪ್ರಯಾಣ ಬೆಳೆಸಿ, ಸಂಸ್ಕರಣೆಗೊಂಡ ಶುದ್ಧ ನೀರು ನಮ್ಮ ಮನೆ ಮುಟ್ಟಲು ಅಪಾರ ಹಣ/ಮಾನವ ಶ್ರಮ ವೆಚ್ಚವಾಗುತ್ತದೆ. ನಗರಕ್ಕೆ ಪ್ರತಿದಿನ 1,450 ಎಂಎಲ್‌ಡಿ ನೀರು ಅಗತ್ಯವಿದ್ದು, ಶೇ.80ನ್ನು ಕಾವೇರಿ ಪೂರೈಸುತ್ತಿದೆ. ವಾರ್ಷಿಕ ಬೇಡಿಕೆ 24 ಟಿಎಂಸಿ. ತಲಾವಾರು ಬಳಕೆ ಪ್ರಮಾಣ 150-200 ಲೀಟರ್ ಇದೆ. ಬೇಡಿಕೆ-ಪೂರೈಕೆ ನಡುವೆ ಕಂದರವಿದ್ದು, ನಾಗರಿಕರು ಮಿತವ್ಯಯ/ಮಳೆ ನೀರು ಸಂಗ್ರಹಿಸಿ ಬಳಸಿದಲ್ಲಿ ಪರಿಸ್ಥಿತಿ ನಿಭಾಯಿಸಬಹುದು. ಇನ್ನೊಂದು ಮುಖ್ಯ ಸಮಸ್ಯೆ- ನೀರಿನ ಸೋರಿಕೆ. ವಾಹನ ದಟ್ಟಣೆಯಿಂದ ಕೊಳವೆಗಳಿಗೆ ಹಾನಿಯಾಗುವುದು, ನಲ್ಲಿಯಲ್ಲಿ ಸೋರುವಿಕೆಯಿಂದ ಶೇ.29ರಷ್ಟು ನೀರು ವ್ಯರ್ಥವಾಗುತ್ತಿದೆ. ಕೇಂದ್ರ ಸಾರ್ವಜನಿಕ ಆರೋಗ್ಯ ಮತ್ತು ಪರಿಸರ ಇಂಜಿನಿಯರಿಂಗ್ ಸಂಸ್ಥೆ ಪ್ರಕಾರ, ಲೆಕ್ಕಕ್ಕೆ ಸಿಗದ ನೀರಿನ ಪ್ರಮಾಣ ಶೇ.15 ಇರಬೇಕು. ಹಳೆಯ ಕೊಳವೆಗಳ ಬದಲಾವಣೆ ವೆಚ್ಚದಾಯಕ ಮತ್ತು ಹೆಚ್ಚು ಕಾಲ ತೆಗೆದುಕೊಳ್ಳುತ್ತದೆ.

ವಿಶ್ವ ಜಲ ಅಭಿವೃದ್ಧಿ ವರದಿ 2022ರ ಪ್ರಕಾರ, ಶೇ.97ರಷ್ಟು ಕುಡಿಯುವ ನೀರು ಬರುವುದು ಅಂತರ್ಜಲ ಮೂಲಗಳಿಂದ. ಜಗತ್ತಿನ ನಗರಗಳ ಅರ್ಧದಷ್ಟು ಮಂದಿ ತಮ್ಮ ದೈನಂದಿನ ಅಗತ್ಯಗಳಿಗೆ ಅಂತರ್ಜಲವನ್ನು ಆಧರಿಸಿದ್ದಾರೆ. ಆಹಾರ ಸುರಕ್ಷೆಗೂ ನೀರು ಅಗತ್ಯ. ಆಫ್ರಿಕಾ ಖಂಡದಲ್ಲಿ ಸತತ ಆರನೇ ಬಾರಿ ಮಳೆ ವಿಫಲ ವಾಗಿದೆ. ರಾಜಸ್ಥಾನ ಹೊರತುಪಡಿಸಿದರೆ ಕರ್ನಾಟಕ ಬರಕ್ಕೆ ಸಿಲುಕುವ ಸಾಧ್ಯತೆ ಹೆಚ್ಚು ಇರುವ ರಾಜ್ಯ. ಇವೆಲ್ಲವೂ ಸುತ್ತಿಬಳಸಿ ನಮ್ಮ-ನಿಮ್ಮ ಬುಡಕ್ಕೆ ಬರುತ್ತವೆ.

ಮೇಲೆ ಉಲ್ಲೇಖಿಸಿದ ಸಮಾವೇಶ ಹೇಳಿದ್ದೂ ಇದನ್ನೇ: ಬಳಕೆಯಲ್ಲಿ ಇಲ್ಲದಿರುವಾಗ ವಿದ್ಯುತ್-ಉಪಕರಣಗಳನ್ನು ಆರಿಸಿ; ಜಲಸಂರಕ್ಷಣೆಗೆ ಅನುದಾನ ನೀಡಬೇಕೆಂದು ಜನಪ್ರತಿನಿಧಿಗಳ ಮೇಲೆ ಒತ್ತಡ ಹೇರಿ; ಸ್ಥಳೀಯ/ಆಯಾ ಋತುಮಾನದಲ್ಲಿ ಲಭ್ಯವಿರುವ ಆಹಾರ ಸೇವಿಸಿ; ಸಾಮಾಜಿಕ ಮಾಧ್ಯಮಗಳ ಮೂಲಕ ಜಲ ಜಾಗೃತಿ ಮೂಡಿಸಿ; ವಸ್ತುಗಳ ಖರೀದಿ ವೇಳೆ ಸೂಕ್ಷ್ಮತೆ ಇರಲಿ-ಒಂದು ಜೊತೆ ಜೀನ್ಸ್ ಉತ್ಪಾದನೆಗೆ 10,000 ಲೀಟರ್ ನೀರು ಬೇಕಾಗುತ್ತದೆ. ಇದು ವ್ಯಕ್ತಿಯೊಬ್ಬನಿಗೆ 10 ವರ್ಷಕ್ಕೆ ಸಾಕು; ಶೌಚಾಲಯ, ನೀರು ಮತ್ತು ಮುಟ್ಟು ಕುರಿತ ಮೂಢನಂಬಿಕೆಗಳನ್ನು ತೊಲಗಿಸಿ; ಚರಂಡಿಯಲ್ಲಿ ಆಹಾರ ತ್ಯಾಜ್ಯ/ಔಷಧ/ ಸ್ಯಾನಿಟರಿ ಪ್ಯಾಡ್ ತುಂಬಬೇಡಿ.....ಇದ್ಯಾವುದೂ ರಾಕೆಟ್ ವಿಜ್ಞಾನ ಅಲ್ಲ. ಮನಸ್ಸು ಮಾಡಬೇಕಷ್ಟೆ !