ಶಾಸಕ ಸ್ಥಾನಕ್ಕೆ ಜೆಡಿಎಸ್ ನ ಎ.ಟಿ.ರಾಮಸ್ವಾಮಿ ರಾಜೀನಾಮೆ

Update: 2023-03-31 16:21 GMT

ಬೆಂಗಳೂರು,ಮಾ.31: ಕಳೆದ ವಿಧಾನಸಭಾ ಚುನಾವಣೆಯಲ್ಲಿ ಅರಕಲಗೂಡು ಕ್ಷೇತ್ರದಲ್ಲಿ  ಜೆಡಿಎಸ್ ನಿಂದ ಸ್ಪರ್ಧಿಸಿ ಶಾಸಕನಾಗಿ ಆಯ್ಕೆಯಾಗಿದ್ದ  ಎ.ಟಿ ರಾಮಸ್ವಾಮಿ ಶಾಸಕ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ.

ಹಲವು ದಿನಗಳಿಂದ ಜೆಡಿಎಸ್ ನಿಂದ ದೂರ ಉಳಿದಿದ್ದ ಅವರು,  ಇಂದು ವಿಧಾನಸಭೆ ಕಾರ್ಯದರ್ಶಿ ವಿಶಾಲಾಕ್ಷಿ ಅವರಿಗೆ ಎ.ಟಿ ರಾಮಸ್ವಾಮಿ ರಾಜೀನಾಮೆ ಪತ್ರವನ್ನು ಸಲ್ಲಿಸಿದ್ದಾರೆ.

ಬಳಿಕ ಮಾತನಾಡಿದ ಅವರು 'ನಾನು ಶಾಸಕ ಸ್ಥಾನಕ್ಕೆ ಸಂತೋಷದಿಂದ ರಾಜಿನಾಮೆ ಸಲ್ಲಿಸಿದ್ದೇನೆ. ಇಷ್ಟು ದಿನ ಶಾಸಕನಾಗಿ ಕಾರ್ಯನಿರ್ವಹಿಸಲು ಅವಕಾಶ ಕಲ್ಪಿಸಿಕೊಟ್ಟ ಜೆಡಿಎಸ್ ಗೆ ಧನ್ಯವಾದಗಳು. ನಾನು ಅತ್ಯಂತ ಪ್ರಾಮಾಣಿಕವಾಗಿ ಕೆಲಸವನ್ನು ಮಾಡಿರುವ ತೃಪ್ತಿ ನನಗಿದೆ' ಎಂದರು.

'ನಾನು ಯಾವುದೇ ವೈಯಕಿಕ ಹಿತಾಸಕ್ತಿಯಿಂದ ರಾಜಕೀಯ ಮಾಡಿಲ್ಲ. ಶಾಸಕನಾಗಿದ್ದಾಗ ಜನಪರ ಕೆಲಸ ಮಾಡಿದ್ದೇನೆ.  ಜೆಡಿಎಸ್ ಬಿಡುವುದಾಗಿ ನಾನೂ ಎಲ್ಲೂ ಹೇಳಿಲ್ಲ, ಆದರೆ, ಜೆಡಿಎಸ್ ಮುಖಂಡರೇ ನನ್ನನ್ನು ಪಕ್ಷದಿಂದ ಹೊರ ಹಾಕಿದ್ದಾರೆ. ಭ್ರಷ್ಟಾಚಾರದ ವಿರುದ್ಧ ಧ್ವನಿ ಎತ್ತಿದ್ದೇ ನನಗೆ ಮುಳುವಾಯಿತು' ಎಂದಿದ್ದಾರೆ.

ಎ.ಟಿ ರಾಮಸ್ವಾಮಿ ಅವರು ಕಾಂಗ್ರೆಸ್ ಸೇರಲಿದ್ದಾರೆ ಎಂಬ ಸುದ್ದಿಗಳು ಹಲವು ದಿನಗಳಿಂದ ಹಬ್ಬಿತ್ತು. ಅಂತಿಮವಾಗಿ ಇಂದು ಶಾಸಕ ರಾಜೀನಾಮೆ ಸಲ್ಲಿಕೆ ಮಾಡಿದ್ದಾರೆ. 

ಬಿಜೆಪಿ ಸೇರ್ಪಡೆ?: ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿರುವ ಹಿರಿಯ ನಾಯಕ ಎ.ಟಿ.ರಾಮಸ್ವಾಮಿ ಅವರು ಬಿಜೆಪಿ ಸೇರ್ಪಡೆ ಸಾಧ್ಯತೆ ಇದೆ. ಈಗಾಗಲೇ ಪಕ್ಷದ ಹಿರಿಯ ನಾಯಕರ ಜೊತೆ ಚರ್ಚೆ ನಡೆಸಲಾಗಿದ್ದು, ಎ.ಟಿ.ರಾಮಸ್ವಾಮಿ ಅವರ ಸೇರ್ಪಡೆಗೆ ಪಕ್ಷದ ವರಿಷ್ಠರು ಹಸಿರು ನಿಶಾನೆ ತೋರಿದ್ದಾರೆ ಎಂದು ಗೊತ್ತಾಗಿದೆ.

ಜೆಡಿಎಸ್‍ನಿಂದ ದೂರವಾಗಿದ್ದ ರಾಮಸ್ವಾಮಿ, ಕಾಂಗ್ರೆಸ್ ಸೇರ್ಪಡೆಗೊಳ್ಳಲಿದ್ದಾರೆಂದು ಹೇಳಲಾಗಿತ್ತು. ಆದರೆ, ಅವರ ಸೇರ್ಪಡೆಗೆ ಸ್ಥಳೀಯರ ವಿರೋಧ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಬಿಜೆಪಿಗೆ ಸೇರ್ಪಡೆಗೆ ಮುಂದಾಗಿದ್ದು, ಅರಕಲಗೂಡು ಕ್ಷೇತ್ರದಿಂದ ವಿಧಾನಸಭೆ ಚುನಾವಣೆಯಲಿ ಬಿಜೆಪಿ ಹುರಿಯಾಳಾಗಿ ಅಖಾಡಕ್ಕೆ ಇಳಿಯಲಿದ್ದಾರೆಂದು ಹೇಳಲಾಗುತ್ತಿದೆ.

‘ಅರಕಲಗೂಡು ಕ್ಷೇತ್ರದಿಂದ ಆಯ್ಕೆಯಾಗಿದ್ದ ತಾನು ನನ್ನ ಶಾಸಕ ಸ್ಥಾನಕ್ಕೆ ಸಂತೋಷದಿಂದ ರಾಜೀನಾಮೆ ಸಲ್ಲಿಸಿದ್ದೇನೆ. ಇಷ್ಟು ದಿನ ಶಾಸಕನಾಗಿ ಕಾರ್ಯನಿರ್ವಹಿಸಲು ಅವಕಾಶಕೊಟ್ಟ ಜೆಡಿಎಸ್‍ಗೆ ಧನ್ಯವಾದಗಳು. ಅತ್ಯಂತ ಪ್ರಾಮಾಣಿಕವಾಗಿ ಕೆಲಸವನ್ನು ಮಾಡಿರುವ ತೃಪ್ತಿ ನನಗಿದೆ. ನಾನು ಯಾವುದೇ ವೈಯಕಿಕ ಹಿತಾಸಕ್ತಿಯಿಂದ ರಾಜಕೀಯ ಮಾಡಿಲ್ಲ. ಶಾಸಕನಾಗಿದ್ದ ವೇಳೆ ಜನಪರ ಕೆಲಸ ಮಾಡಿದ್ದೇನೆ. ಜೆಡಿಎಸ್ ಬಿಡುವುದಾಗಿ ನಾನೂ ಎಲ್ಲಿಯೂ ಹೇಳಿಲ್ಲ, ಆದರೆ, ಜೆಡಿಎಸ್ ಮುಖಂಡರೇ ನನ್ನನ್ನು ಪಕ್ಷದಿಂದ ಹೊರ ಹಾಕಿದ್ದಾರೆ. ಭ್ರಷ್ಟಾಚಾರದ ವಿರುದ್ಧ ಧ್ವನಿ ಎತ್ತಿದ್ದೇ ನನಗೆ ಮುಳುವಾಯಿತು'
-ಎ.ಟಿ.ರಾಮಸ್ವಾಮಿ, ಹಿರಿಯ ಮುಖಂಡ

Similar News