60 ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿದ ಎಎಪಿ

ಹೊಸ ಪಕ್ಷದಿಂದ ಹೊಸ ಮುಖಗಳಿಗೆ ಅವಕಾಶ: ಪೃಥ್ವಿ ರೆಡ್ಡಿ

Update: 2023-03-31 12:41 GMT

ಬೆಂಗಳೂರು: ರಾಜ್ಯದಲ್ಲಿ ನಡೆದ ಸಮೀಕ್ಷೆಯಲ್ಲಿ ಶೇ.46 ಜನರು ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಬದಲು ಹೊಸ ಪಕ್ಷ ಬೇಕು ಎಂದು ಅಭಿಪ್ರಾಯಪಟ್ಟಿದ್ದಾರೆ. ನಾವು ಹೊಸ ಪಕ್ಷ ಮಾತ್ರವಲ್ಲದೇ ಹೊಸ ಮುಖಗಳನ್ನು ರಾಜಕೀಯಕ್ಕೆ ಕರೆತಂದು ಜನರಿಗೆ ಆಯ್ಕೆ ನೀಡಿದ್ದೇವೆ ಎಂದು ಪಕ್ಷದ ರಾಜ್ಯಾಧ್ಯಕ್ಷ ಪೃಥ್ವಿ ರೆಡ್ಡಿ ಅಭಿಪ್ರಾಯಪಟ್ಟರು.

ಶುಕ್ರವಾರ ಪಕ್ಷದ ಕಚೇರಿಯಲ್ಲಿ ಮುಂಬರುವ ರಾಜ್ಯ ವಿಧಾನಸಭಾ ಚುನಾವಣೆಗೆ 60 ಅಭ್ಯರ್ಥಿಗಳ ಎರಡನೆ ಪಟ್ಟಿಯನ್ನು ಬಿಡುಗಡೆ ಮಾಡಿ ಮಾತನಾಡಿದ ಅವರು, ಬೇರೆಲ್ಲ ಪಕ್ಷಗಳಿಗಿಂತ ಮೊದಲೇ ನಾವು ಮೊದಲ ಪಟ್ಟಿಯನ್ನು ಬಿಡುಗಡೆ ಮಾಡಿದ್ದೆವು. ನಂತರ ಪ್ರಣಾಳಿಕೆಯನ್ನೂ ಬಿಡುಗಡೆ ಮಾಡಿದ್ದೆವು. ಈಗ 60 ಅಭ್ಯರ್ಥಿಗಳ ಎರಡನೆ ಪಟ್ಟಿಯನ್ನೂ ಬಿಡುಗಡೆ ಮಾಡಿದ್ದೇವೆ. ಬೇರೆಲ್ಲ ಪಕ್ಷಗಳಿಗಿಂತ ನಾವು ಮುಂದಿದ್ದೇವೆ ಎಂಬುದನ್ನು ಇದು ಸೂಚಿಸುತ್ತದೆ ಎಂದರು. 

ಎಎಪಿ ಜನಸಾಮಾನ್ಯರಿಗೆ ಅವಕಾಶ ನೀಡುತ್ತಿದ್ದು, ಮೊದಲ ಪಟ್ಟಿಯಂತೆ ಎರಡನೆ ಪಟ್ಟಿಯಲ್ಲಿಯೂ ಅಭ್ಯರ್ಥಿಗಳ ಸರಾಸರಿ ವಯಸ್ಸು 45 ದಾಟಿಲ್ಲ. ಎರಡು ಪಟ್ಟಿಯಲ್ಲಿ ಒಟ್ಟು 14 ರೈತರಿಗೆ, 11 ಮಹಿಳೆಯರಿಗೆ, 18 ವಕೀಲರು, 6 ವೈದ್ಯರು, 23 ಇಂಜಿನಿಯರ್‍ಗಳು ಹಾಗೂ 4 ಐಟಿ ವೃತ್ತಿಪರರು ಹಾಗೂ ಐದು ಮಂದಿ ಡಾಕ್ಟರೇಟ್ ಪಡೆದವರು ಇದ್ದಾರೆ. 29 ಜನರ ಸ್ನಾತಕೋತ್ತರ ಪದವೀಧರರು, 68 ಪದವೀಧರರು, 6 ಎಂಬಿಎ ಪದವೀಧರರನ್ನು ಈ ಎರಡು ಪಟ್ಟಿಗಳು ಒಳಗೊಂಡಿವೆ ಎಂದು ಹೇಳಿದರು.

ಬಿಎಂಟಿಸಿ ಮಾಜಿ ಕಂಡಕ್ಟರ್‍ಗೆ ಕೂಡ ನಾವು ಟಿಕೆಟ್ ಕೊಡುತ್ತಿದ್ದು, ಇದು ರಾಜ್ಯದ ರಾಜಕೀಯ ಇತಿಹಾಸದಲ್ಲೇ ಮಹತ್ವದ ಬೆಳವಣಿಗೆಯಾಗಿದೆ. ಎರಡನೇ ಪಟ್ಟಿಯ 60 ಅಭ್ಯರ್ಥಿಗಳಲ್ಲಿ 59 ಅಭ್ಯರ್ಥಿಗಳು ಇದೇ ಮೊದಲ ಬಾರಿ ಚುನಾವಣೆಗೆ ಸ್ಪರ್ಧಿಸುತ್ತಿದ್ದಾರೆ ಎಂದು ಅವರು ಹೇಳಿದರು.  

ಪಂಜಾಬ್ ಚುನಾವಣೆಯಲ್ಲಿ ಅಲ್ಲಿನ ಆಗಿನ ಮುಖ್ಯಮಂತ್ರಿಯನ್ನು ಮೊಬೈಲ್ ಶಾಪ್‍ನಲ್ಲಿ ಕೆಲಸ ಮಾಡುವವರೊಬ್ಬರು ಸೋಲಿಸಿದ್ದರು. ನಾವು ಅದರಿಂದ ಸ್ಫೂರ್ತಿ ಪಡೆದಿದ್ದು, ಇಲ್ಲಿಯೂ ಅಂತಹ ಮ್ಯಾಜಿಕ್‍ಗಳು ನಡೆಯುವ ನಿರೀಕ್ಷೆಯಿದೆ ಎಂದು ಹೇಳಿದರು.

Similar News