ವಿಜಯೇಂದ್ರ ಸ್ಪರ್ಧೆ ವಿಚಾರದಲ್ಲಿ ಬಿಎಸ್‌ವೈಗೆ ಬಿಜೆಪಿ ಬ್ಲ್ಯಾಕ್‌ಮೇಲ್: ರಮೇಶ್ ಬಾಬು ಆರೋಪ

Update: 2023-03-31 13:35 GMT

ಬೆಂಗಳೂರು: ವರುಣಾದಲ್ಲಿ ಸಿದ್ದರಾಮಯ್ಯ ವಿರುದ್ಧ ಬಿವೈ ವಿಜಯೇಂದ್ರರನ್ನು ನಿಲ್ಲಿಸುವಂತೆ ಬಿಎಸ್‌ ಯಡಿಯೂರಪ್ಪ ಅವರಿಗೆ ಬಿಜೆಪಿ ಬ್ಲ್ಯಾಕ್‌ಮೇಲ್‌  ಮಾಡುತ್ತಿದೆ ಎಂದು ಕಾಂಗ್ರೆಸ್‌ ವಕ್ತಾರ ರಮೇಶ್‌ ಬಾಬು ಗಂಭೀರ ಆರೋಪ ಮಾಡಿದ್ದಾರೆ. 

ಯಡಿಯೂರಪ್ಪ ಅವರನ್ನು ಬ್ಲ್ಯಾಕ್‌ಮೇಲ್‌ ಮಾಡುವ ಪ್ರಯತ್ನ  ಬಿಜೆಪಿ ಮುಂದುವರಿಸಿದ್ದು, ನಿನ್ನೆ ಅವರ ಮೇಲೆ ಒತ್ತಡ ಹಾಕಿ ಅವರ ಪುತ್ರ ವಿಜಯೇಂದ್ರ ಅವರನ್ನು ವರುಣಾದಲ್ಲಿ ನಿಲ್ಲಿಸಲು ಒತ್ತಾಯಿಸಲಾಗಿತ್ತು ಎಂದು ಅವರು ಹೇಳಿದ್ದಾರೆ. 

“ಯಡಿಯೂರಪ್ಪ ಅವರನ್ನು ಬಳಸಿಕೊಂಡು ವಿಜಯೇಂದ್ರರನ್ನು ವ್ಯವಸ್ಥಿತವಾಗಿ ಮೂಲೆಗುಂಪು ಮಾಡಲು ಬಿಜೆಪಿ ಮುಂದಾಗಿದೆ. ಯಡಿಯೂರಪ್ಪ ಅವರು ವಿಜಯೇಂದ್ರರನ್ನು ಎಂಎಲ್ ಸಿ ಮಾಡಿ ರಾಜ್ಯ ಸಂಪುಟದಲ್ಲಿ ಹಾಗೂ ರಾಘವೇಂದ್ರರನ್ನು ಕೇಂದ್ರ ಸಂಪುಟದಲ್ಲಿ ಸೇರಿಸುವಂತೆ ಬಿಜೆಪಿ ನಾಯಕರಿಗೆ ತಿಳಿಸಿದರೂ ಇದುವರೆಗೂ ಯಾವುದೂ ಸಾಧ್ಯವಾಗಿಲ್ಲ. ವಿಜಯೇಂದ್ರ ಮೇಲೆ ಐದಾರೂ ಐಡಿ ಹಾಗೂ ಐಟಿ ಪ್ರಕರಣಗಳು ಬಾಕಿ ಇವೆ. ಇವುಗಳನ್ನು ಮುಂದಿಟ್ಟುಕೊಂಡು ಸಿದ್ದರಾಮಯ್ಯ ಅವರ ವಿರುದ್ಧ ವಿಜಯೇಂದ್ರರನ್ನು ಸ್ಪರ್ಧಿಸಲು ಒತ್ತಾಯಿಸುತ್ತಿದ್ದಾರೆ” ಎಂದು ರಮೇಶ್‌ ಬಾಬು ಆರೋಪಿಸಿದ್ದಾರೆ.

“ಯಡಿಯೂರಪ್ಪ ಅವರು ಆರು ತಿಂಗಳ ಮುನ್ನವೇ ಶಿಕಾರಿಪುರದಲ್ಲಿ ವಿಜಯೇಂದ್ರಗೆ ಟಿಕೆಟ್ ನೀಡುವುದಾಗಿ ಹೇಳಿದ್ದರು. ಆದರೆ ಈಗ ವರುಣಾದಲ್ಲಿ ಸ್ಪರ್ಧಿಸುವ ಬಗ್ಗೆ ಒತ್ತಡ ಹಾಕುತ್ತಿದ್ದಾರೆ. ಇನ್ನು ಬಿಜೆಪಿ ಅಭ್ಯರ್ಥಿ ಪಟ್ಟಿ ಇನ್ನು ಬಿಡುಗಡೆ ಮಾಡಿಲ್ಲ. ತಮ್ಮ ಪುತ್ರನಿಗೆ ಶಿಕಾರಿಪುರದಲ್ಲಿ ಟಿಕೆಟ್ ಸಿಗುವ ಆತಂಕ ಯಡಿಯೂರಪ್ಪ ಅವರಿಗೆ ಇದೆ.“ ಎಂದು ಬಾಬು ಹೇಳಿದ್ದಾರೆ.
 
ವರುಣಾದಲ್ಲಿ ವಿಜಯೇಂದ್ರ ನಿಲ್ಲಬೇಕೆಂಬ ಒತ್ತಡ ಇದೆ ಎಂದು ಸಿಎಂ ಬೊಮ್ಮಾಯಿ ಕೂಡಾ ಸ್ಪಷ್ಟ ಪಡಿಸಿದ್ದರು. ಬೆಂಗಳೂರಿನಲ್ಲಿ ಮಾತನಾಡಿದ್ದ ಅವರು, 'ಸಿದ್ದರಾಮಯ್ಯ ವಿರುದ್ಧ ವರುಣಾ ಕ್ಷೇತ್ರದಲ್ಲಿ ನಾವು ಕಠಿಣ ಹೋರಾಟ ನಡೆಸುತ್ತೇವೆ. ಸಿದ್ದರಾಮಯ್ಯ ವಿರುದ್ಧ ವಿಜಯೇಂದ್ರ ಸ್ಪರ್ಧಿಸಬೇಕು ಎಂಬುದು ಸಾರ್ವಜನಿಕರ ಆಗ್ರಹವಾಗಿದೆ. ಆದರೆ, ಅಂತಿಮ ನಿರ್ಧಾರವನ್ನು ಯಡಿಯೂರಪ್ಪ ಮತ್ತು ಸಂಸದೀಯ ಮಂಡಳಿ ತೆಗೆದುಕೊಳ್ಳುತ್ತದೆ' ಎಂದು ಬೊಮ್ಮಾಯಿ ಹೇಳಿಕೆ ನೀಡಿದ್ದರು.

ವರುಣಾದಲ್ಲಿ ವಿಜಯೇಂದ್ರ ಸ್ಪರ್ಧಿಸುತ್ತಾರೆಂಬ ಗೊಂದಲಗಳು ಇರುವ ನಡುವೆ ರಮೇಶ್‌ ಬಾಬು ಈ ಆರೋಪ ಹೊರಿಸಿದ್ದರು. ಅದಾಗ್ಯೂ ಅದರ ಬಳಿಕ ಮೈಸೂರಿನಲ್ಲಿ ಮಾತನಾಡಿದ್ದ ಬಿಎಸ್‌ ವೈ, ವಿಜಯೇಂದ್ರ ಶಿಕಾರಿಪುರದಿಂದಲೇ ಸ್ಪರ್ಧಿಸಲು ಹೇಳುತ್ತೇನೆ ಎಂದು ಸ್ಪಷ್ಟಪಡಿಸಿದ್ದಾರೆ. 

“ವರುಣದಲ್ಲಿ ವಿಜಯೇಂದ್ರ ಸ್ಪರ್ಧಿಸಬೇಕೆಂದು ಒತ್ತಡ ಇದೆ. ಆದರೆ ವರುಣಾ ಕ್ಷೇತ್ರದಲ್ಲಿ ವಿಜಯೇಂದ್ರ ಸ್ಪರ್ಧೆ ಮಾಡುವುದಿಲ್ಲ. ನನ್ನ ಕ್ಷೇತ್ರ ಶಿಕಾರಿಪುರದಲ್ಲೇ ಸ್ಪರ್ಧಿಸಬೇಕು ಎಂದು ಸೂಚಿಸಿದ್ದೇನೆ. ವರುಣಾ ಕ್ಷೇತ್ರದಲ್ಲಿ ವಿಜಯೇಂದ್ರ ಸ್ಪರ್ಧೆ ಮಾಡುವ ಪ್ರಶ್ನೆಯೇ ಇಲ್ಲ” ಎಂದು ಬಿಎಸ್‌ವೈ ಸ್ಪಷ್ಟಪಡಿಸಿದ್ದಾರೆ.

Similar News