ಮುಸ್ಲಿಂ ಸಮುದಾಯದ 2B ಮೀಸಲಾತಿ ಮರುಸ್ಥಾಪಿಸದಿದ್ದರೆ ಕಾನೂನು ಹೋರಾಟಕ್ಕೆ ಸಜ್ಜು: ಡಾ.ಸಿ.ಎಸ್. ದ್ವಾರಕಾನಾಥ್

Update: 2023-03-31 13:54 GMT

ಬೆಂಗಳೂರು: ‘ಹಿಂದುಳಿದ ವರ್ಗಗಳ ಆಯೋಗದ ಶಿಫಾರಸ್ಸು ಇಲ್ಲದೆ ಮುಸ್ಲಿಂ ಸಮುದಾಯಕ್ಕೆ ಪ್ರವರ್ಗ 2B ಅಡಿಯಲ್ಲಿ ನೀಡಲಾಗುತ್ತಿದ್ದ ಶೇ.4ರಷ್ಟು ಮೀಸಲಾತಿಯನ್ನು ರದ್ದುಪಡಿಸಿರುವ ರಾಜ್ಯ ಸರಕಾರದ ಕ್ರಮ ಅಸಂವಿಧಾನಿಕವಾದದ್ದು’ ಎಂದು ಹಿಂದುಳಿದ ವರ್ಗಗಳ ಶಾಶ್ವತ ಆಯೋಗದ ಮಾಜಿ ಅಧ್ಯಕ್ಷ ಡಾ.ಸಿ.ಎನ್. ದ್ವಾರಕನಾಥ್ ತಿಳಿಸಿದ್ದಾರೆ.

ಶುಕ್ರವಾರ ಪ್ರೆಸ್‍ಕ್ಲಬ್‍ನಲ್ಲಿ ಕರ್ನಾಟಕ ರಾಜ್ಯ ಮುಸ್ಲಿಂ ಜನಾಂಗದ ಜಾಗೃತಿ ವೇದಿಕೆ ಏರ್ಪಡಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮುಸ್ಲಿಮರಿಗೆ ನೀಡಲಾಗುತ್ತಿದ್ದ ಮೀಸಲಾತಿಯನ್ನು ಮರುಸ್ಥಾಪಿಸಬೇಕು. ಅಲ್ಲದೆ, 2ಸಿ ಮತ್ತು 2ಡಿಯಲ್ಲಿ ಒಕ್ಕಲಿಗ ಹಾಗೂ ಲಿಂಗಾಯತರಿಗೆ ನೀಡಿರುವಂತೆ ಮುಸ್ಲಿಮರಿಗೂ ಹೆಚ್ಚುವರಿ ಮೀಸಲಾತಿ ಕಲ್ಪಿಸಬೇಕು. ಇಲ್ಲದಿದ್ದರೆ ಕಾನೂನಾತ್ಮಕ ಹೋರಾಟಕ್ಕೆ ಸಜ್ಜಾಗುತ್ತೇವೆ ಎಂದು ಎಚ್ಚರಿಸಿದರು.

ಮುಸ್ಲಿಮ್ ಜನಾಂಗಕ್ಕೆ ಪ್ರವರ್ಗ 2ಬಿ ನಲ್ಲಿ ಚಾಲ್ತಿಯಿದ್ದ ಮೀಸಲಾತಿಯನ್ನು ರಾಜ್ಯ ಸರಕಾರವು ಅವೈಜ್ಞಾನಿಕವಾಗಿ ಹಾಗೂ ಏಕಪಕ್ಷೀಯ ನಿರ್ಧಾರದಿಂದ ರದ್ದುಪಡಿಸಿದ್ದು ಖಂಡನೀಯ. ಧರ್ಮದ ಆಧಾರದ ಮೇಲೆ ಮೀಸಲಾತಿಯನ್ನು ನೀಡಲು ನಿಯಮಗಳಲ್ಲಿ ಅವಕಾಶವಿಲ್ಲವೆಂದು ಆಂಧ್ರಪ್ರದೇಶ ಹೈಕೋರ್ಟ್ ಮೀಸಲಾತಿಯನ್ನು ರದ್ದುಪಡಿಸಿರುವುದನ್ನೆ ಆಧಾರವಾಗಿ ಇಟ್ಟುಕೊಂಡಿರುವುದಾಗಿ ಅಧಿಸೂಚನೆಯಲ್ಲಿ ಉಲ್ಲೇಖಿಸಿದ್ದಾರೆ ಎಂದು ಅವರು ಹೇಳಿದರು.

ಈ ಕುರಿತಂತೆ ಸುಪ್ರೀಂಕೋರ್ಟ್‍ನಲ್ಲಿ ಪ್ರಕರಣ ಇನ್ನೂ ಇತ್ಯರ್ಥವಾಗಿಲ್ಲ. ಆದುದರಿಂದ, ಪರಿಷ್ಕರಿಸಿದ ಮೀಸಲಾತಿ ಆದೇಶ ಅಸಿಂಧುವಾಗುವುದರಲ್ಲಿ ಸಂದೇಹವಿಲ್ಲ. ಸಾಮಾಜಿಕವಾಗಿ, ಶೈಕ್ಷಣಿಕವಾಗಿ ಹಿಂದುಳಿದಿರುವ ಕಾರಣಕ್ಕೆ 1916ನೆ ಸಾಲಿನಿಂದಲೂ ಹತ್ತಾರು ಯೋಜನೆಗಳು ವಿವಿಧ ಜಾತಿ ಜನಾಂಗಗಳಿಗೆ ಹಿಂದುಳಿದ, ಅತಿ ಹಿಂದುಳಿದ ವರ್ಗಗಳೆಂದು ಪರಿಗಣಿಸಿಸಲಾಗಿದೆ ಎಂದು ದ್ವಾರಕನಾಥ್ ತಿಳಿಸಿದರು.

ಅದರಂತೆ, ಪರಿಶಿಷ್ಟ ಜಾತಿಗೆ ಶೇ.15, ಪರಿಶಿಷ್ಟ ಪಂಗಡಕ್ಕೆ ಶೇ.3, ಪ್ರವರ್ಗ-1ಕ್ಕೆ ಶೇ.4, ಪ್ರವರ್ಗ-2ಎ ಶೇ.15, ಪ್ರವರ್ಗ-2ಬಿ ಶೇ.4, ಪ್ರವರ್ಗ 3ಎ ಶೇ.4, ಪ್ರವರ್ಗ 3ಬಿ ಶೇ.5ರಷ್ಟು ಈ ರೀತಿಯಾಗಿ ಮೀಸಲಾತಿ ಸೌಲಭ್ಯವನ್ನು ನೀಡಲಾಗಿತ್ತು ಎಂದು ದ್ವಾರಕನಾಥ್ ಮಾಹಿತಿ ನೀಡಿದರು.

ಪ್ರಧಾನಮಂತ್ರಿ ಹೇಳಿರುವ ಹಾಗೆ ‘ಸಬ್ ಕಾ ಸಾಥ್, ಸಬ್ ಕಾ ವಿಕಾಸ್’ ಅರ್ಥಾತ್ ‘ಎಲ್ಲರಿಗೂ ಸಮಬಾಳು ಸಮಪಾಲು’ ಎನ್ನುವ ಸಿದ್ಧಾಂತದ ಅಡಿಯಲ್ಲಿ ದೇಶದಲ್ಲಿ ಸಹ ಬಾಳ್ವೆ, ಸೋದರತೆ, ಐಕ್ಯತೆ ಮತ್ತು ಶಾಂತಿ ಮಂತ್ರದಿಂದ ಬದುಕುವುದನ್ನು ಈ ಹಿಂದೆಯೇ ನಮ್ಮ ದೇಶದ ಸಿದ್ಧರು, ಶರಣರು, ದಾಸರು, ಸೂಫಿಗಳು, ಋಷಿಮುನಿಗಳು ಹೇಳಿಕೊಟ್ಟಿದ್ದಾರೆ. ಇಂತಹದರಲ್ಲಿ ಪ್ರಸಕ್ತ ಸರಕಾರಗಳು ಜಾತಿ-ಜಾತಿಗಳ ನಡುವೆ, ಧರ್ಮ-ಧರ್ಮಗಳ ನಡುವೆ ಜನರಲ್ಲಿ ವೈಷಮ್ಯವನ್ನು ಹುಟ್ಟು ಹಾಕಿದ್ದು, ಗೊಂದಲಗಳನ್ನು ಉಂಟು ಮಾಡುತ್ತಿವೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.

ಕರ್ನಾಟಕ ರಾಜ್ಯ ಮುಸ್ಲಿಂ ಜನಾಂಗದ ಜಾಗೃತಿ ವೇದಿಕೆಯ ಅಧ್ಯಕ್ಷ ಡಾ.ಗುಲ್ಷಾದ್ ಅಹ್ಮದ್ ಬಿ.ಝೆಡ್. ಮಾತನಾಡಿ, ಮುಸ್ಲಿಮ್ ಜನಾಂಗ ಸಾಮಾಜಿಕವಾಗಿ ಹಾಗೂ ಶೈಕ್ಷಣಿಕವಾಗಿ ಹಿಂದುಳಿದಿರುವುದರಿಂದ ಜನಾಂಗದ ಜೀವನ ಶೈಲಿಯನ್ನು ಕಾಲಕಾಲಕ್ಕೆ ಅಧ್ಯಯನ ಮಾಡಿ ಆಯೋಗಗಳು ಸರಕಾರಕ್ಕೆ ವರದಿಯನ್ನು ನೀಡುತ್ತಾ ಬಂದಿದೆ. ಆದರೆ, ಸರಕಾರ ಆಯೋಗಗಳ ವರದಿಗಳನ್ನು ಬದಿಗಿಟ್ಟು ರಾಜಕೀಯ ದುರುದ್ದೇಶದಿಂದ ಮುಸ್ಲಿಮ್ ಜನಾಂಗದ ಮೀಸಲಾತಿಯನ್ನು ಕಿತ್ತು ಒಕ್ಕಲಿಗ ಮತ್ತು ಲಿಂಗಾಯತ ಜನಾಂಗಕ್ಕೆ ನೀಡಿರುವುದು ನ್ಯಾಯ ಸಮ್ಮತವಲ್ಲ ಎಂದರು.

ಆದಾಗ್ಯೂ ಒಕ್ಕಲಿಗ ಹಾಗೂ ಲಿಂಗಾಯತರಿಗೆ ಮೀಸಲಾತಿ ಹೆಚ್ಚಿಸಿರುವುದರ ಬಗ್ಗೆ ನಮ್ಮ ತಕಾರರು, ಅಭ್ಯಂತರವೂ ಇಲ್ಲ ಎಂದ ಅವರು, ಜನಸಂಖ್ಯೆ ಮತ್ತು ಸ್ಥಿತಿಗತಿಗಳ ಆಧಾರದ ಮೇಲೆ ನಮಗೆ ಇದ್ದಂತಹ ಪ್ರವರ್ಗ 2ಬಿ ಮೀಸಲಾತಿಯನ್ನು ಪುನರ್ ಸ್ಥಾಪಿಸುವ ಮೂಲಕ ಸರಕಾರವು ಸಂವಿಧಾನಾತ್ಮಕವಾಗಿ ನಮ್ಮ ಹಕ್ಕನ್ನು ನಮಗೆ ನೀಡಬೇಕು ಎಂದು ಅವರು ಒತ್ತಾಯಿಸಿದರು.

ಯಾವುದೇ ಪ್ರವರ್ಗಗಳಲ್ಲಿ ಮೀಸಲಾತಿಯನ್ನು ಹೊಂದಿರದೆ ಇರುವ ಮೇಲ್ಜಾತಿಯ ಬ್ರಾಹ್ಮಣರು, ವೈಶ್ಯ, ಸಿಖ್ಖರು, ಜೈನರು, ಪಾರ್ಸಿ ಜನಾಂಗದವರು ಬಹುತೇಕವಾಗಿ ಮುಂದುವರೆದ ಜನಾಂಗವಾಗಿದ್ದು, ಇವರುಗಳಲ್ಲಿ ಆರ್ಥಿಕ ದುರ್ಬಲರಿಗೆ ವಾರ್ಷಿಕ 8 ಲಕ್ಷ ಆದಾಯ ಮಿತಿ ಇರುವವರಿಗೆ ಶೇ10ರಷ್ಟು ಮೀಸಲಾತಿ ಸೌಲಭ್ಯವನ್ನು ಮಾ.27ರಂದು ಹೊರಡಿಸಿರುವ ಆದೇಶದಲ್ಲಿ ಕಲ್ಪಿಸಲಾಗಿದೆ ಎಂದು ಅವರು ಹೇಳಿದರು.

ಈ ಕುರಿತು ನಮ್ಮ ಆಕ್ಷೇಪಣೆ ಇಲ್ಲ. ಬದಲಾಗಿ ಈ ಜನಾಂಗದವರ ಜೊತೆ ಶೈಕ್ಷಣಿಕ ಮತ್ತು ಉದ್ಯೋಗ ಪಡೆಯಲು ಶತ ಶತಮಾನಗಳಿಂದಲೂ ಹಿಂದುಳಿದ ಮುಸ್ಲಿಮ್ ಜನಾಂಗವು ಪ್ರಾಯೋಗಿಕವಾಗಿ ಯಾವುದೆ ರೀತಿಯಾಗಿ ಪೈಪೋಟಿ ಮಾಡಿ ಸೌಲಭ್ಯಗಳನ್ನು ಪಡೆಯುವುದು ಸಾಧ್ಯವಿರದ ಸಂಗತಿ ಎಂದು ಗುಲ್ಶಾದ್ ಅಹಮದ್ ತಿಳಿಸಿದರು. ಪತ್ರಿಕಾಗೋಷ್ಠಿಯಲ್ಲಿ ನಿವೃತ್ತ ಕೆಎಎಸ್ ಅಧಿಕಾರಿ ಉಬೇದುಲ್ಲಾ ಖಾನ್, ವೇದಿಕೆಯ ಸದಸ್ಯ ದಾದಾಪೀರ್ ಸೇರಿದಂತೆ ಇತರರು ಇದ್ದರು.

Similar News